×
Ad

ಮಹಿಳೆಯ ಆತ್ಮಹತ್ಯೆ: ರಾಜಸ್ಥಾನ ಶಾಸಕನ ವಿರುದ್ಧದ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್

Update: 2025-02-22 21:33 IST

ಸಾಂದರ್ಭಿಕ ಚಿತ್ರ

ಜೈಪುರ: 2022ರ ಮಾರ್ಚ್‌ನಲ್ಲಿ ನಡೆದ ಮಹಿಳೆಯೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿ ಬಿಜೆಪಿ ಶಾಸಕ ಜಿತೇಂದ್ರ ಗೊತ್ವಾಲ್ ಮತ್ತು ಇತರರ ವಿರುದ್ಧ ದೋಷಾರೋಪ ಹೊರಿಸುವ ಕೆಳ ನ್ಯಾಯಾಲಯವೊಂದರ ಆದೇಶವನ್ನು ರಾಜಸ್ಥಾನ ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸವಾಯಿ ಮಾದೋಪುರ ಜಿಲ್ಲೆಯ ಖಂದರ್ ಕ್ಷೇತ್ರದ ಶಾಸಕ ಗೊತ್ವಾಲ್‌ರನ್ನು 2022 ಮಾರ್ಚ್ 31ರಂದು ಬಂಧಿಸಲಾಗಿತ್ತು. ಅದೇ ವರ್ಷದ ಮೇ 18ರಂದು ಅವರನ್ನು ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.

2022 ಮಾರ್ಚ್ 28ರಂದು ನಡೆದ ಗರ್ಭಿಣಿ ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆ ಮಹಿಳೆಗೆ ದೌಸ ಜಿಲ್ಲೆಯ ಲಲ್ಸೋಟ್ ಎಂಬಲ್ಲಿರುವ ಆನಂದ್ ಆಸ್ಪತ್ರೆಯಲ್ಲಿ ಡಾ. ಅರ್ಚನಾ ಶರ್ಮ ಎಂಬವರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಆ ಮಹಿಳೆ ಮೃತಪಟ್ಟರು. ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ ಎಂದು ಆರೋಪಿಸಿದ ಕುಟುಂಬ ಸದಸ್ಯರು, ಶವವನ್ನು ಆಸ್ಪತ್ರೆಯ ದ್ವಾರದಲ್ಲಿರಿಸಿದರು. ಪರಿಹಾರ ನೀಡಬೇಕು ಮತ್ತು ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು. ಪೊಲೀಸರು ಅದೇ ದಿನ ಕೊಲೆ ಮೊಕದ್ದಮೆ ದಾಖಲಿಸಿದರು. ಮಾರನೇ ದಿನ, ಡಾ. ಅರ್ಚನಾ ಶರ್ಮಾ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಇದಕ್ಕೆ ಸಂಬಂಧಿಸಿ ಸ್ಥಳೀಯರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಶಾಸಕ ಗೊತ್ವಾಲ್‌ ರ ಒತ್ತಾಯದಂತೆ 3 ಲಕ್ಷ ರೂ. ಪರಿಹಾರ ನೀಡಲು ವೈದ್ಯರ ಕುಟುಂಬ ಒಪ್ಪಿತ್ತು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ. ಶಾಸಕ ಗೊತ್ವಾಲ್ ಸೇರಿದಂತೆ ಹಲವರ ವಿರುದ್ಧ ವಿಚಾರಣಾ ನ್ಯಾಯಾಲಯವು ದೋಷಾರೋಪ ಹೊರಿಸಿತ್ತು.

ಇದನ್ನು ಪ್ರಶಿಸಿ ಗೊತ್ವಾಲ್ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News