×
Ad

ಛತ್ತೀಸ್‌ಗಡ: ನಾಯಿ ಕಲುಷಿತಗೊಳಿಸಿದ್ದ ಮಧ್ಯಾಹ್ನದೂಟ ಸೇವಿಸಿದ್ದ ವಿದ್ಯಾರ್ಥಿಗಳಿಗೆ ತಲಾ 25,000 ರೂ.ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2025-08-21 18:56 IST

ಸಾಂದರ್ಭಿಕ ಚಿತ್ರ 

ರಾಯಪುರ: ನಾಯಿಯು ಕಲುಷಿತಗೊಳಿಸಿದ್ದ ಮಧ್ಯಾಹ್ನದೂಟವನ್ನು ಸೇವಿಸಿದ್ದ ಬಲೋದಾಬಜಾರ್-ಭಟಪಾರಾ ಜಿಲ್ಲೆಯ ಮಾಧ್ಯಮಿಕ ಶಾಲೆಯೊಂದರ 84 ವಿದ್ಯಾರ್ಥಿಗಳಿಗೆ ತಲಾ 25,000 ರೂ.ಪರಿಹಾರ ಪಾವತಿಸುವಂತೆ ಛತ್ತೀಸ್‌ಗಡ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ಮೂರು ಬಾರಿ ಆ್ಯಂಟಿ-ರೇಬಿಸ್ ಚಿಕಿತ್ಸೆಯನ್ನು ಪಡೆದಿದ್ದು ಆರೋಗ್ಯವಾಗಿದ್ದಾರೆ ಮತ್ತು ಶಾಲೆಗೆ ನಿಯಮಿತವಾಗಿ ಹಾಜರಾಗುತ್ತಿದ್ದಾರೆ ಎಂದು ರಾಜ್ಯವು ವಾದಿಸಿದ್ದರೂ ಸರಕಾರದ ನಿರ್ಲಕ್ಷ್ಯವನ್ನು ಬೆಟ್ಟು ಮಾಡಿದ ಮುಖ್ಯ ನ್ಯಾಯಾಧೀಶ ರಮೇಶ್ ಸಿನ್ಹಾ ಮತ್ತು ವಿಭುದತ್ತ ಗುರು ಅವರ ಪೀಠವು ಒಂದು ತಿಂಗಳೊಳಗೆ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ.

ಘಟನೆಯನ್ನು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ಪರಿಗಣಿಸಿದ್ದ ಉಚ್ಚ ನ್ಯಾಯಾಲಯವು ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

ಲಚ್ಚನ್‌ಪುರ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಜು.28ರಂದು ಈ ಘಟನೆ ನಡೆದಿದ್ದು,ಸ್ವಸಹಾಯ ಗುಂಪೊಂದು ಮಧ್ಯಾಹ್ನದೂಟವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿತ್ತು.

ಸರಕಾರದ ವಿಚಾರಣಾ ವರದಿಯ ಪ್ರಕಾರ ತಮ್ಮ ಆಹಾರವನ್ನು ನಾಯಿಯು ಕಲುಷಿತಗೊಳಿಸಿದ್ದನ್ನು ಗಮನಿಸಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಕಲುಷಿತ ಆಹಾರವನ್ನು ಪೂರೈಸದಂತೆ ಶಿಕ್ಷಕರು ಸೂಚಿಸಿದ್ದರೂ ಸ್ವಸಹಾಯ ಸಂಘದ ಸದಸ್ಯರು ಅದನ್ನು ಕಡೆಗಣಿಸಿ ವಿದ್ಯಾರ್ಥಿಗಳಿಗೆ ಬಡಿಸಿದ್ದರು.

ಮಧ್ಯಾಹ್ನದೂಟ ತಯಾರಿಸುವ ಕೆಲಸದಿಂದ ಸ್ವಸಹಾಯ ಗುಂಪಿನ ಸದಸ್ಯರನ್ನು ವಜಾಗೊಳಿಸಿರುವ ಅಧಿಕಾರಿಗಳು ಅವರು ಭವಿಷ್ಯದಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆಯುವುದನ್ನು ನಿರ್ಬಂಧಿಸಿದ್ದಾರೆ. ಆ.6ರಂದು ಉಸ್ತುವಾರಿ ಪ್ರಾಂಶುಪಾಲರು,ಕ್ಲಸ್ಟರ್ ಪ್ರಾಂಶುಪಾಲರು ಮತ್ತು ಶಿಕ್ಷಕರು ಸೇರಿದಂತೆ ಶಾಲೆಯ ಹಲವಾರು ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಘಟನೆಯ ಬಳಿಕ ಜಿಲ್ಲಾಧಿಕಾರಿಗಳು ಮಧ್ಯಾಹ್ನದೂಟದ ತಯಾರಿಕೆ ಮತ್ತು ವಿತರಣೆಗಾಗಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹೊಸ ನಿರ್ದೇಶನಗಳನ್ನು ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News