ಹಿಮಾಚಲ ಪ್ರದೇಶ: ಇಂಜಿನಿಯರ್ ನಿಗೂಢ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಿದ ಹೈಕೋರ್ಟ್
ವಿಮಲ್ ನೇಗಿ PC: x.com/TheNewsRadar1
ಶಿಮ್ಲಾ: ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವಿನ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾದ ಹಿಮಾಚಲ ಪ್ರದೇಶ ವಿದ್ಯುತ್ ನಿಗಮದ ಎಂಜಿನಿಯರ್ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಹೈಕೋರ್ಟ್ ಸಿಬಿಐಗೆ ಒಪ್ಪಿಸಿದೆ.
ಮಾರ್ಚ್ 10ರಂದು ನಿಗೂಢವಾಗಿ ಕಣ್ಮರೆಯಾಗಿದ್ದ ವಿಮಲ್ ನೇಗಿ ಮೃತದೇಹ ಮಾರ್ಚ್ 18ರಂದು ಬಿಲಾಸಪುರ ಜಿಲ್ಲೆಯ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ತಮ್ಮ ಪತಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು ಎಂದು ನೇಗಿ ಪತ್ನಿ ಆಪಾದಿಸಿದ್ದರು. ಈ ನಿಗೂಢ ಸಾವಿನ ಪ್ರಕರಣ ರಾಜ್ಯದಲ್ಲಿ ರಾಜಕೀಯ ಕೋಲಹಲಕ್ಕೆ ಕಾರಣವಾಗಿತ್ತು ಹಾಗೂ ಈ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಬಿಜೆಪಿ ಆಪಾದಿಸಿತ್ತು. ಹಿಮಾಚಲ ಪೊಲೀಸರ ನಡುವೆಯೇ ಮುಸುಕಿನ ಗುದ್ದಾಟಕ್ಕೂ ಇದು ಕಾರಣವಾಗಿತ್ತು.
ನಿರ್ಲಕ್ಷ್ಯ ಮತ್ತು ಪ್ರಕರಣ ಮುಚ್ಚಿಹಾಕಲಾಗುತ್ತಿದೆ ಎಂದು ಆಪಾದಿಸಿ ಎಚ್ ಪಿಪಿಸಿಎಲ್ ಕಚೇರಿ ಮುಂದೆ ನೇಗಿ ಕುಟುಂಬ ಮೃತದೇಹವನ್ನು ಇಟ್ಟುಕೊಂಡೇ ಪ್ರತಿಭಟನೆ ನಡೆಸಿತ್ತು. ಎಚ್ ಪಿಪಿಸಿಎಲ್ ನಿರ್ದೇಶಕ ದೇಶರಾಜ್ ಹಾಗೂ ಎಂಡಿ ಹರಿಕೇಶ್ ಮೀನಾ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿತ್ತು. ಆದರೆ ಇದೀಗ ಹೈಕೋರ್ಟ್, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ನೇಗಿ ಸಾವಿನ ತನಿಖೆಯ ವಿಚಾರಣೆಯ ವಿಧಾನದ ಬಗೆಗಿನ ಸ್ಥಿತಿಗತಿ ವರದಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತೀವ್ರ ಕಳವಳ ವ್ಯಕ್ತಪಡಿಸಿದ್ದನ್ನು ಹೈಕೋರ್ಟ್ ಉಲ್ಲೇಖಿಸಿದೆ.
ನೇಗಿ ಪತ್ನಿ ಕಿರಣ್ ನೇಗಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಗೋಯಲ್ ಅವರು, ಹಿಮಾಚಲ ಪ್ರದೇಶ ಕೇಡರ್ ನ ಯಾವ ಅಧಿಕಾರಿ ಕೂಡಾ ತನಿಖೆ ನಡೆಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಆರು ತಿಂಗಳಿನಿಂದ ಮೇಲಧಿಕಾರಿಗಳು ಪತಿಗೆ ಕಿರುಕುಳ ನೀಡುತ್ತಿದ್ದರು ಎಂದು ಕಿರಣ್ ನೇಗಿ ಆಪಾದಿಸಿದ್ದರು. ಅಸ್ವಸ್ಥರಾಗಿದ್ದ ಸಂದರ್ಭದಲ್ಲಿ ಕೂಡಾ ತಡರಾತ್ರಿ ವರೆಗೆ ಕೆಲಸ ಮಾಡುವಂತೆ ಬಲವಂತಪಡಿಸಲಾಗಿತ್ತು ಎಂದು ದೂರಿದ್ದರು.