×
Ad

"ನನ್ನ ದೇಶ ಭಾರತಕ್ಕೆ ಸೇವೆ ಸಲ್ಲಿಸಲೆಂದೇ ಜನಿಸಿದ್ದೇನೆ": ಪಾಕಿಸ್ತಾನಕ್ಕೆ ಗಡಿಪಾರಿಗೆ ಹೈಕೋರ್ಟ್ ತಡೆಯ ಬಳಿಕ ಹೆಡ್‌ಕಾನ್‌ಸ್ಟೇಬಲ್ ಹೇಳಿಕೆ

Update: 2025-05-03 21:32 IST

ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯ | PC : NDTV 

ಜಮ್ಮು: ಜಮ್ಮುಕಾಶ್ಮೀರ ಪೋಲಿಸ್ ಇಲಾಖೆಯಲ್ಲಿ ಮತ್ತು ನನ್ನ ದೇಶ ಭಾರತಕ್ಕೆ ಸೇವೆ ಸಲ್ಲಿಸಲೆಂದೇ ಜನಿಸಿದ್ದೇನೆ; ಇದು ಹೆಡ್ ಕಾನ್‌ಸ್ಟೇಬಲ್ ಇಫ್ತಿಕಾರ್ ಅಲಿ(45) ಶನಿವಾರ ಭಾವೋದ್ವೇಗದಿಂದ ಹೇಳಿದ ಮಾತು. ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯದ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ಅವರು ಮತ್ತು ಅವರ ಎಂಟು ಒಡಹುಟ್ಟಿದವರು ಪಾಕಿಸ್ತಾನಕ್ಕೆ ಗಡಿಪಾರಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ಪೂಂಛ್ ಜಿಲ್ಲೆಯ ನಿಯಂತ್ರಣ ರೇಖೆ ಬಳಿಯ ಮೆಂಧಾರ್ ಉಪವಿಭಾಗದ ನಿವಾಸಿಯಾಗಿರುವ ಅಲಿ ಪಾಲಿಗೆ ಸಮವಸ್ತ್ರ ತನ್ನ ಉದ್ಯೋಗಕ್ಕಿಂತ ಹೆಚ್ಚಿನದಾಗಿದೆ. ತನ್ನ ಜೀವನದ ಸುಮಾರು ಅರ್ಧದಷ್ಟನ್ನು ಪೋಲಿಸ್ ಪಡೆಯಲ್ಲಿ ಕಳೆದಿರುವ ಅವರು ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ ಹಾಗೂ ತನ್ನ ಧೈರ್ಯ ಮತ್ತು ಕರ್ತವ್ಯದತ್ತ ಅಚಲ ಬದ್ಧತೆಗಾಗಿ ಹಲವಾರು ಪ್ರಶಂಸೆಗಳನ್ನು ಗಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಬಾಯ್ತುಂಬ ಕೊಂಡಾಡಿದ ಅಲಿ, ನಾನು ಮತ್ತು ತನ್ನ ಒಡಹುಟ್ಟಿದವರು ಪಾಕಿಸ್ತಾನವು ಅತಿಕ್ರಮಿಸಿಕೊಂಡಿರುವ ಜಮ್ಮುಕಾಶ್ಮೀರದ ಭಾಗಕ್ಕೆ ಸೇರಿದವರೆಂಬ ನೆಪದಲ್ಲಿ ಶತ್ರು ರಾಷ್ಟ್ರಕ್ಕೆ ತಮ್ಮ ಹಸ್ತಾಂತರಕ್ಕೆ ದೇಶದ ಉನ್ನತ ನಾಯಕತ್ವವು ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ತನಗಿತ್ತು ಎಂದರು.

ಮಂಗಳವಾರ ಮತ್ತು ಬುಧವಾರ ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಪೋಲಿಸರು ಪಂಜಾಬಿಗೆ ಕರೆದೊಯ್ದಿದ್ದ ಹೆಚ್ಚಿನವರು ಪಾಕ್ ಆಕ್ರಮಿತ ಕಾಶ್ಮೀರದವರು ಸೇರಿದಂತೆ ಎರಡು ಡಝನ್‌ಗೂ ಅಧಿಕ ಜನರಲ್ಲಿ ಅಲಿ ಹಾಗೂ ಅವರ ಸೋದರರು ಮತ್ತು ಸೋದರಿಯರು ಸೇರಿದ್ದರು.

ಆದರೆ ತಾವು ಪಾಕಿಸ್ತಾನಿ ಪ್ರಜೆಗಳಲ್ಲ ಮತ್ತು ತಲೆಮಾರುಗಳಿಂದಲೂ ಸಲ್ವಾ ಗ್ರಾಮದಲ್ಲಿ ನೆಲೆಸಿದ್ದೇವೆ ಎಂದು ಮೊರೆಯಿಟ್ಟು ಅಲಿ ಮತ್ತು ಅವರ ಒಡಹುಟ್ಟಿದವರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ಜಮ್ಮುಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯವು ಅವರ ಗಡಿಪಾರಿಗೆ ತಡೆಯಾಜ್ಞೆ ನೀಡಿದ ಬಳಿಕ ಅವರನ್ನು ಅವರ ಸ್ವಗ್ರಾಮಕ್ಕೆ ಮರಳಿ ಕರೆತರಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News