ಭಾರತ-ಪಾಕಿಸ್ತಾನ ಸಂಘರ್ಷ ಶಮನ: ಟ್ರಂಪ್ ಹೇಳಿಕೆ ಕುರಿತು ಪ್ರಧಾನಿ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್
ನರೇಂದ್ರ ಮೋದಿ , ಜೈರಾಮ್ ರಮೇಶ್ | PTI
ಹೊಸದಿಲ್ಲಿ: ಉಭಯ ದೇಶಗಳ ನಡುವಿನ ಅಮೆರಿಕ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆಯೊಡ್ಡಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಶಮನಗೊಳಿಸಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಾಳಿರುವ ಮೌನವನ್ನು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, "ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷವನ್ನು ತಾನು ಶಮನಗೊಳಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ 59 ದಿನಗಳಲ್ಲಿ ಕನಿಷ್ಠ 21 ಬಾರಿ ಹೇಳಿಕೆ ನೀಡಿದ್ದಾರೆ. ಈ ಸಂಘರ್ಷವೂ ಅಣ್ವಸ್ತ್ರ ಸಮರಕ್ಕೆ ತಿರುಗುವ ಭೀತಿ ಎದುರಾಗಿತ್ತು ಎಂದೂ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದವು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ" ಎಂಬುದರತ್ತ ಬೊಟ್ಟು ಮಾಡಿದ್ದಾರೆ.
ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯುದ್ಧವನ್ನು ತಕ್ಷಣವೇ ನಿಲ್ಲಿಸಿ ಅಥವಾ ಅಮೆರಿಕದ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಸಿದ್ಧರಾಗಿ ಎಂಬುದು ಡೊನಾಲ್ಡ್ ಟ್ರಂಪ್‌ರ ಆದೇಶವಾಗಿದ್ದಂತಿದೆ ಎಂದೂ ಅವರು ಹೇಳಿದ್ದಾರೆ.
"ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕ ಶೀಘ್ರದಲ್ಲೇ ವ್ಯಾಪಾರ ಒಪ್ಪಂದವನ್ನು ಪ್ರಕಟಿಸಲಿದೆ" ಎಂದು ಘೋಷಿಸುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್‌ರಿಂದ ಈ ಹೇಳಿಕೆ ಹೊರ ಬಿದ್ದಿದೆ. ಘನಶ್ಯಾಮ್ ತಿವಾರಿ ಬಣ್ಣಿಸಿದಂತೆ ಬಿಜೆಪಿಯ ಟ್ರಂಪ್ ಕಾರ್ಡ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಮೌನ ಮುರಿಯುವುದು ಯಾವಾಗ?" ಎಂದು ಅವರು ಛೇಡಿಸಿದ್ದಾರೆ.
ಇದಕ್ಕೂ ಮುನ್ನ, ವಾಷಿಂಗ್ಟನ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, "ನಾವು ಹಲವು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಈ ಪೈಕಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಬಹುದಾಗಿದ್ದ ಬಹು ದೊಡ್ಡ ಯುದ್ಧವನ್ನು ಶಮನಗೊಳಿಸಿದ್ದೇವೆ. ಉಭಯ ದೇಶಗಳ ನಡುವಿನ ವ್ಯಾಪಾರ ಸ್ಥಗಿತಗೊಳಿಸುವ ಬೆದರಿಕೆಯೊಡ್ಡಿ ನಾವು ಆ ಸಂಘರ್ಷವನ್ನು ಅಂತ್ಯಗೊಳಿಸಿದ್ದೇವೆ" ಎಂದು ಹೇಳಿದ್ದರು.