ದೇಶವ್ಯಾಪಿ ವಿಮಾನ ರದ್ದತಿ ವಿವಾದದ ಬಳಿಕ ಇಂಡಿಗೋ ಸಿಇಒ ರಾಜೀನಾಮೆ
Photo Credit: PTI
ಹೊಸದಿಲ್ಲಿ: ಕಳೆದ ಮೂರು ತಿಂಗಳ ಹಿಂದೆ ದೇಶವ್ಯಾಪಿ ವಿಮಾನ ಸೇವೆಗಳಲ್ಲಿ ಉಂಟಾದ ಅಡಚಣೆಗಳು ಮತ್ತು ವ್ಯಾಪಕ ವಿಮಾನ ರದ್ದತಿಯ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಎಲ್ಬರ್ಸ್ ಅವರು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವಿಮಾನಯಾನ ಸಂಸ್ಥೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಇಂಡಿಗೋ ಸಂಸ್ಥೆಯ ಸಂಸ್ಥಾಪಕ ರಾಹುಲ್ ಭಾಟಿಯಾ ಅವರು ಮಧ್ಯಂತರವಾಗಿ ಸಂಸ್ಥೆಯ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸಲ್ಲಿಸಲಾದ ರಾಜೀನಾಮೆ ಪತ್ರದ ಪ್ರತಿಯಲ್ಲಿ, ‘ನಮ್ಮ ನಡುವಿನ ಸಂಭಾಷಣೆಯ ಪ್ರಕಾರ, ವೈಯಕ್ತಿಕ ಕಾರಣಗಳಿಂದಾಗಿ ಇಂದಿನಿಂದ ಜಾರಿಗೆ ಬರುವಂತೆ ಇಂಡಿಗೋ ಸಿಇಒ ಹುದ್ದೆಗೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ನೋಟಿಸ್ ಅವಧಿಯನ್ನು ಮನ್ನಾ ಮಾಡುವಂತೆ ವಿನಂತಿಸುತ್ತೇನೆ’ ಎಂದು ಎಲ್ಬರ್ಸ್ ತಿಳಿಸಿದ್ದಾರೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಇಂಡಿಗೋ ಸಂಸ್ಥೆ 5,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿತ್ತು. ಇದರಿಂದ ಸುಮಾರು ಆರು ಲಕ್ಷ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ದೇಶವ್ಯಾಪಿ ಇಂಡಿಗೋ ವಿಮಾನ ಸೇವೆಯಲ್ಲಿ ಉಂಟಾದ ಕಾರ್ಯಾಚರಣಾ ಅಡಚಣೆಗಳ ಕಾರಣ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು.