ಕೇರಳ | ಕಾಂಗ್ರೆಸ್ ಕಾರ್ಯಕರ್ತನಿಗೆ ಪೋಲಿಸರಿಂದ ಥಳಿತದ ವೀಡಿಯೊ ವೈರಲ್; ಭಾರೀ ವಿವಾದ
PC : thehindu.com
ತಿರುವನಂತಪುರ,ಸೆ.5: 2023, ಎಪ್ರಿಲ್ ನಲ್ಲಿ ಕೇರಳದ ತ್ರಿಶೂರು ಜಿಲ್ಲೆಯ ಕುನ್ನಕುಳಂ ಪೋಲಿಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ತೋರಿಸಿರುವ ಸಿಸಿಟಿವಿ ವೀಡಿಯೊವೊಂದು ಈಗ ಬಹಿರಂಗಗೊಂಡಿದ್ದು, ಇದು ರಾಜ್ಯದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.
ಪ್ರತಿಪಕ್ಷಗಳು ತಕ್ಷಣ ಈ ಘಟನೆಯನ್ನು ಖಂಡಿಸಿದ್ದರೆ ಸರಕಾರವು ಮೌನವು ಇನ್ನಷ್ಟು ಟೀಕೆಗೆ ಗುರಿಯಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಕುರಿತು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎಗ್ಗಿಲ್ಲದ ಪೋಲಿಸ್ ದೌರ್ಜನ್ಯವನ್ನು ಖಂಡಿಸಿರುವ ಅವರು, ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಪ್ರಶ್ನಿಸಿದ್ದಾರೆ.
‘ಕುನ್ನಂಕುಳಂ ಠಾಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತ ವಿ.ಎಸ್.ಸುಜಿತ್ ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡುತ್ತಿರುವ ಭಯಾನಕ ಸಿಸಿಟಿವಿ ದೃಶ್ಯಾವಳಿಯನ್ನು ಕಂಡು ಆಘಾತವಾಗಿದೆ. ಇದು ನಮ್ಮ ಪೋಲಿಸ್ ಠಾಣೆಗಳು ಚಿತ್ರಹಿಂಸೆ ನೀಡುವ ಸ್ಥಳಗಳಾಗುತ್ತಿವೆ ಎಂಬ ಕ್ರೂರ ಸತ್ಯವನ್ನು ನೆನಪಿಸುತ್ತಿದೆ. ಇದು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ನಮ್ಮ ವ್ಯವಸ್ಥೆಯಲ್ಲಿನ ಆಳವಾದ ಅಸ್ವಸ್ಥತೆಯ ಲಕ್ಷಣವಾಗಿದೆ. ಗೃಹಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರಕಾರವನ್ನು ಹೊಣೆಯಾಗಿಸಬೇಕಿದೆ. ಇದಕ್ಕೆ ಕಾರಣರಾದ ಪೋಲಿಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಮಾತ್ರವಲ್ಲ,ಅ ವರನ್ನು ಸೇವೆಯಿಂದ ವಜಾಗೊಳಿಸಬೇಕು ಮತ್ತು ಕಾನೂನಿನ ವಿಚಾರಣೆಗೆ ಒಳಪಡಿಸಬೇಕು. ಇದು ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದ್ದು, ಕೇರಳದ ಆತ್ಮಸಾಕ್ಷಿಗೆ ಕಳಂಕವಾಗಿದೆ ’ಎಂದು ತರೂರ್ ಕಿಡಿಕಾರಿದ್ದಾರೆ.
ಈ ವಿಷಯದ ಬಗ್ಗೆ ರಾಜ್ಯ ಸರಕಾರವು ಇನ್ನೂ ಔಪಚಾರಿಕ ಹೇಳಿಕೆ ನೀಡಿಲ್ಲವಾದರೂ ತ್ರಿಶೂರು ವಲಯ ಡಿಐಜಿ ಎಸ್.ಹರಿಶಂಕರ್ ಅವರು ಎರಡು ವರ್ಷಗಳ ಹಿಂದೆಯೇ ಇಲಾಖಾ ವಿಚಾರಣೆಯನ್ನು ನಡೆಸಲಾಗಿದೆ ಮತ್ತು ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ದೃಢಪಡಿಸಿದರು.
ತಪ್ಪಿತಸ್ಥ ಅಧಿಕಾರಿಗಳಿಗೆ ವೇತನ ಬಡ್ತಿಯನ್ನು ಎರಡು ವರ್ಷಗಳ ಕಾಲ ನಿಲ್ಲಿಸಲಾಗಿದೆ ಮತ್ತು ಇಲಾಖಾ ವಿಚಾರಣೆಯನ್ನು ಪುನರಾರಂಭಿಸುವ ಸಾಧ್ಯತೆಯಿಲ್ಲ ಎಂದರು.
ಡಿಐಜಿಯ ಸಮಜಾಯಿಷಿಯನ್ನು ತಿರಸ್ಕರಿಸಿರುವ ಪ್ರತಿಪಕ್ಷಗಳು ಇದು ಅಪರಾಧದ ಗಂಭೀರತೆಯನ್ನು ತಗ್ಗಿಸುವ ಮತ್ತು ಆರೋಪಿಗಳನ್ನು ರಕ್ಷಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿವೆ.
ಮುಖ್ಯಮಂತ್ರಿಗಳು ಸಮವಸ್ತ್ರದಲ್ಲಿರುವ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ವಿ.ಡಿ.ಸತೀಶನ್ ಮತ್ತು ಇತರ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.