ಬಿಹಾರ | ಮೂಕ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ವ್ಯಕ್ತಿಯ ತಲೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು
ಸಾಂದರ್ಭಿಕ ಚಿತ್ರ
ಮುಝಫರ್‌ಪುರ, ಮಾ. 8: ಬಿಹಾರದ ಮುಝಪ್ಫರ್‌ಪುರ ಜಿಲ್ಲೆಯಲ್ಲಿ ಮೂಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವರಿಗೆ ಗ್ರಾಮಸ್ಥರು ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿದ್ದಾರೆ.
ಆತನಿಗೆ 5001 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದೀಗ ಪೊಲೀಸರ ಗಮನಕ್ಕೆ ಬಂದಿದೆ.
ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಅದೇ ಗ್ರಾಮದ ಮೂಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಘಟನೆಯ ಬಗ್ಗೆ ಮಹಿಳೆಯ ಕುಟುಂಬ ಹಾಗೂ ಗ್ರಾಮಸ್ಥರಿಗೆ ತಿಳಿಸಿದಾಗ ಆವರು ಆತನನ್ನು ಸೆರೆ ಹಿಡಿದ್ದಾರೆ.
ಸ್ಪಲ್ಪ ಸಮಯದ ನಂತರ ಆತನಿಗೆ ಶಿಕ್ಷೆ ನಿರ್ಧರಿಸಲು ಗ್ರಾಮ ಸಭೆಯನ್ನು ಕರೆದಿದ್ದಾರೆ. ಗ್ರಾಮ ಸಭೆ ಆರೋಪಿಗೆ 5,001 ರೂ. ದಂಡ ವಿಧಿಸಿದೆ. ಅನಂತರ ಗ್ರಾಮಸ್ಥರು ಆತನ ತಲೆ ಬೋಳಿಸಿದ್ದಾರೆ. ಆತನ ಹಣೆಗೆ ಕಪ್ಪು ಗುರುತು ಮಾಡಿದ್ದಾರೆ. ಬಳಿಕ ಗ್ರಾಮದಲ್ಲಿ ಸಾರ್ವಜನಿಕ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ವೈರಲ್ ಆಗಿರುವ ವೀಡಿಯೊ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ವ-1 ಡಿಎಸ್‌ಪಿ ಅಲಯ್ ವಾಟ್ಸ್, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವನ್ನು ಪೊಲೀಸರು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆರೋಪ ಸತ್ಯವೆಂದು ಕಂಡು ಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.