ಜಾತಿ ಗಣತಿಯನ್ನು ಡಿಕೆಶಿಯೂ ವಿರೋಧಿಸುತ್ತಾರೆ, ಬಿಜೆಪಿಯೂ ವಿರೋಧಿಸುತ್ತೆ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ / ಡಿ.ಕೆ. ಶಿವಕುಮಾರ್ (Photo: PTI)
ಹೊಸದಿಲ್ಲಿ: ಕರ್ನಾಟಕದ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪರಸ್ಪರ ವಿರುದ್ಧದ ನಿಲುವು ಹೊಂದಿದ್ದಾರೆಂಬ ವರದಿಗಳ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ರಾಜ್ಯಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
ಶಿವಕುಮಾರ್ ಮತ್ತು ಬಿಜೆಪಿ ಸಹ ಜಾತಿ ಗಣತಿ ವರದಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಿದ ಖರ್ಗೆ “ಅವರೂ ವಿರೋಧಿಸುತ್ತಿದ್ದಾರೆ, ನೀವೂ ಸಹ ವಿರೋಧಿಸುತ್ತಿದ್ದೀರಿ, ಈ ವಿಚಾರದಲ್ಲಿ ನೀವಿಬ್ಬರೂ ಒಂದೇ. ಇದು ಜಾತಿಯ ಸ್ವರೂಪ. ಮೇಲ್ಜಾತಿ ಜನರು ಆಂತರಿಕವಾಗಿ ಒಂದಾಗುತ್ತಾರೆ,” ಎಂದು ಖರ್ಗೆ ಹೇಳಿದರು.
ಜಾತಿ ಗಣತಿ ವರದಿ ಕುರಿತಂತೆ ಕರ್ನಾಟಕ ಸರ್ಕಾರದಲ್ಲಿರುವ ಭಿನ್ನಾಭಿಪ್ರಾಯಗಳ ಕುರಿತಂತೆ ಬಿಜೆಪಿ ಸದಸ್ಯರು ಖರ್ಗೆ ಅವರ ಅಭಿಪ್ರಾಯ ಕೇಳಿದಾಗ ಅವರು ಮೇಲಿನಂತೆ ಹೇಳಿದರು.
ಜಮ್ಮು ಕಾಶ್ಮೀರ ಕುರಿತಾದ ಎರಡು ಮಸೂದೆಗಳ ಕುರಿತ ಚರ್ಚೆಯ ವೇಳೆ ಹಿರಿಯ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಪ್ರತಿಕ್ರಿಯಿಸಿ, “ಇತರ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಪಕ್ಷ ತೋರಿಸುವ ಪ್ರೀತಿ ಒಂದು ನಾಟಕವಾಗಿದೆ,” ಎಂದರಲ್ಲದೆ ಜಾತಿ ಗಣತಿ ಕುರಿತು ಡಿ ಕೆ ಶಿವಕುಮಾರ್ ಅವರ ನಿಲುವಿನ ಉದಾಹರಣೆ ನೀಡಿದರು.
“ನಿಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಯಾವಾಗ ಬಹಿರಂಗಪಡಿಸಲಿದೆ ಎಂದು ಖರ್ಗೆ ನಮಗೆ ಹೇಳಬೇಕು. ವರದಿಯನ್ನು ಬಹಿರಂಗಗೊಳಿಸುವುದನ್ನು ವಿರೋಧಿಸಿದ ಮನವಿಗೆ ಉಪಮುಖ್ಯಮಂತ್ರಿ ಸಹಿ ಹಾಕಿದ್ದಾರೆ,” ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.
ಇದಕ್ಕೆ ದನಿಗೂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿಗಳ ಸಹಿತ ಕಾಂಗ್ರೆಸ್ ಶಾಸಕರು ಮತ್ತು ವೀರಶೈವ ಮಹಾಸಭಾ ನಾಯಕರೂ ವರದಿಗೆ ವಿರುದ್ಧವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಖರ್ಗೆ ಮೇಲಿನಂತೆ ಹೇಳಿದರು.