Madhya Pradesh | ಕಲುಷಿತ ಆಹಾರ ಸೇವಿಸಿ 200 ಗಿಳಿಗಳ ಸಾವು
ಸಾಂದರ್ಭಿಕ ಚಿತ್ರ | Photo Credit : freepik
ಖರ್ಗೋನ್, ಜ. 2: ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ನರ್ಮದಾ ನದಿಯ ದಡದಲ್ಲಿ ಕಲುಷಿತ ಆಹಾರ ಸೇವನೆಯಿಂದಾಗಿ ಕನಿಷ್ಠ 200 ಗಿಳಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಬದ್ವಾ ಪ್ರದೇಶದಲ್ಲಿ ನದಿ ದಡದಲ್ಲಿನ ನೀರನ್ನು ಸಾಗಿಸುವ ಕಾಲುವೆಯ ಬಳಿ ಕಳೆದ ನಾಲ್ಕು ದಿನಗಳಲ್ಲಿ ಮೃತ ಗಿಳಿಗಳು ಪತ್ತೆಯಾಗಿವೆ. ಶಂಕಿತ ಹಕ್ಕಿ ಜ್ವರದಿಂದ ಅವು ಮೃತಪಟ್ಟಿವೆ ಎಂಬ ಊಹಾಪೋಹವನ್ನು ಮರಣೋತ್ತರ ಪರೀಕ್ಷೆ ವರದಿ ತಳ್ಳಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಗಿಳಿಗಳು ಜೀವಂತವಾಗಿದ್ದರೂ, ಆಹಾರದಲ್ಲಿದ್ದ ವಿಷತ್ವದ ತೀವ್ರತೆಯಿಂದಾಗಿ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ವಿಷಾದ ವ್ಯಕ್ತಪಡಿಸಿದರು.
ಹಕ್ಕಿ ಜ್ವರದ ಶಂಕೆಯಿಂದಾಗಿ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಪಶುವೈದ್ಯಕೀಯ ಪರೀಕ್ಷೆಗಳಲ್ಲಿ ಸೋಂಕಿನ ಯಾವುದೇ ಕುರುಹು ಕಂಡುಬಂದಿಲ್ಲ.
ಈ ಕಾಲುವೆಯ ಬಳಿ ಹಕ್ಕಿಗಳಿಗೆ ಆಹಾರ ನೀಡುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿಷೇಧಿಸಿದ್ದು, ಆದೇಶದ ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೃತ ಗಿಳಿಗಳ ವಿಸೆರಾ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಕಲುಷಿತ ಹಾಗೂ ಅಸಮರ್ಪಕ ಆಹಾರ ಸೇವನೆಯಿಂದ ಈ ಸಾವುಗಳು ಸಂಭವಿಸಿವೆ. ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ ಬಳಿಕ ಕಳೆದ ನಾಲ್ಕು ದಿನಗಳಿಂದ ಪಶುವೈದ್ಯಕೀಯ, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ತಂಡಗಳು ಈ ಪ್ರದೇಶದ ಮೇಲೆ ನಿಗಾ ಇರಿಸಿವೆ.
ಗಿಳಿಗಳಲ್ಲಿ ಕಲುಷಿತ ಆಹಾರ ಸೇವನೆಯ ಲಕ್ಷಣಗಳು ಪತ್ತೆಯಾಗಿವೆ. ಆದರೆ ಹಕ್ಕಿ ಜ್ವರದ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯೆ ಡಾ. ಮನೀಷಾ ಚೌಹಾಣ್ ತಿಳಿಸಿದ್ದಾರೆ.
ಜನಸಾಮಾನ್ಯರು ಅನಾಯಾಸವಾಗಿ ಹಕ್ಕಿಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕವಾಗುವ ಆಹಾರವನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಮೃತ ಗಿಳಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಸಾವುಗಳು ಅಸಮರ್ಪಕ ಆಹಾರ ಸೇವನೆಯಿಂದ ಸಂಭವಿಸಿರುವುದು ಕಂಡುಬರುತ್ತದೆ ಎಂದು ಪಶುವೈದ್ಯಕೀಯ ವಿಸ್ತರಣಾಧಿಕಾರಿ ಡಾ. ಸುರೇಶ್ ಬಘೇಲ್ ಹೇಳಿದ್ದಾರೆ. ಕೀಟನಾಶಕ ಸಿಂಪಡಿಸಿದ ಹೊಲಗಳಲ್ಲಿ ಬೆಳೆದ ಧಾನ್ಯಗಳು ಹಾಗೂ ನರ್ಮದಾ ನದಿ ನೀರಿನ ಸೇವನೆ ಸಾವುಗಳಿಗೆ ಕಾರಣವಾಗಿರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಲುವೆಗೆ ಭೇಟಿ ನೀಡುವ ಸಂದರ್ಶಕರು ಬೇಯಿಸಿದ ಆಹಾರ ಅಥವಾ ಉಳಿದ ಆಹಾರವನ್ನು ನೀಡುವುದು ಹಕ್ಕಿಗಳಿಗೆ ಮಾರಣಾಂತಿಕವಾಗುತ್ತದೆ ಎಂದೂ ಅವರು ಎಚ್ಚರಿಸಿದರು.