×
Ad

ಹರಿಯಾಣದಲ್ಲಿ 1,500 ಕೋಟಿ ರೂ.ಗಳ ವರ್ಕ್ ಸ್ಲಿಪ್ ‘ಹಗರಣ’ ಬಯಲಾಗಿದ್ದು ಹೇಗೆ?

Update: 2026-01-02 22:42 IST

 ಅನಿಲ್ ವಿಜ್ | Photo Credit : PTI  

ಹರಿಯಾಣ ಕಾರ್ಮಿಕ ಸಚಿವ ಅನಿಲ್ ವಿಜ್ ಅವರು ಸ್ವತಃ ಮುಖ್ಯಸ್ಥರಾಗಿರುವ ಇಲಾಖೆಯೊಳಗೆ 1,500 ಕೋಟಿ ರೂ.ಗಳ ಬೃಹತ್ ಹಗರಣವೊಂದು ನಡೆದಿದೆ. ಆಪಾದಿತ ಹಗರಣವು ನಿರ್ಮಾಣ ಕಾರ್ಮಿಕರ ಕೆಲಸದ ರಸೀದಿಗಳು (Work Slip) ಮತ್ತು ನೋಂದಣಿ ಪ್ರಮಾಣಪತ್ರಗಳು, ಈ ದುರ್ಬಲ ಕಾರ್ಮಿಕ ಗುಂಪಿನ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಕೇಂದ್ರ ದಾಖಲೆಗಳನ್ನು ಒಳಗೊಂಡಿದೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಗುರುವಾರ ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.

ಆಪಾದಿತ ಹಗರಣ ಹೇಗೆ ಬಯಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು, ಮೊದಲಿಗೆ ಕೆಲಸದ ರಸೀದಿಗಳು ಮತ್ತು ನೋಂದಣಿ ಪ್ರಮಾಣಪತ್ರಗಳು ಕಾರ್ಮಿಕರಿಗೆ ಯಾವ ರೀತಿಯ ಪ್ರಯೋಜನ ನೀಡುತ್ತವೆ ಎಂಬುದನ್ನು ನೋಡೋಣ.

►ನಿರ್ಮಾಣ ಕಾರ್ಮಿಕರಿಗೆ ಕೆಲಸದ ರಸೀದಿಗಳು ಮತ್ತು ನೋಂದಣಿ ಪ್ರಮಾಣಪತ್ರಗಳು ಏಕೆ ಮುಖ್ಯ?

ಭಾರತದಲ್ಲಿ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ಅಸಂಘಟಿತ ಕಾರ್ಮಿಕ ವರ್ಗದವರಾಗಿದ್ದಾರೆ. ಇವರು ಕೆಲಸದ ಭದ್ರತೆಯನ್ನು ಹೊಂದಿರುವುದಿಲ್ಲ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಶಾಸನಬದ್ಧ ಸಂಸ್ಥೆಯಾಗಿದ್ದು, ಅವರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ನಿರ್ವಹಿಸುತ್ತದೆ.

ಈ ಯೋಜನೆಗಳಿಗೆ ಅರ್ಹರಾಗಲು, ಒಬ್ಬ ವ್ಯಕ್ತಿ ಮೊದಲು ಕಲ್ಯಾಣ ಮಂಡಳಿಯಲ್ಲಿ ನಿರ್ಮಾಣ ಕಾರ್ಮಿಕನಾಗಿ ನೋಂದಾಯಿಸಿಕೊಳ್ಳಬೇಕು. ಆನಂತರ ವರ್ಷಕ್ಕೆ ಅಥವಾ ತಿಂಗಳಿಗೆ ಕೆಲಸದ ರಸೀದಿಯನ್ನು ಪಡೆಯಬೇಕು. ಇದು ಆ ಕಾರ್ಮಿಕರು ಕನಿಷ್ಠ ನಿರ್ದಿಷ್ಟ ಅವಧಿಗೆ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಪ್ರಮಾಣೀಕರಿಸುತ್ತದೆ. ಈ ಕನಿಷ್ಠ ಅವಧಿ ಸಾಮಾನ್ಯವಾಗಿ ವರ್ಷಕ್ಕೆ 90 ದಿನಗಳು.

ನೋಂದಣಿ ಪ್ರಮಾಣಪತ್ರವು ಒಬ್ಬ ವ್ಯಕ್ತಿಯನ್ನು ನಿರ್ಮಾಣ ಕಾರ್ಮಿಕ ಎಂದು ಗುರುತಿಸುತ್ತದೆ. ಆದರೆ ಕೆಲಸದ ರಸೀದಿ ಅವರು ಕನಿಷ್ಠ ಕೆಲಸದ ಅವಶ್ಯಕತೆಯನ್ನು ಪೂರೈಸಿದ್ದಾರೆ ಎಂಬುದಕ್ಕೆ ಸಾಕ್ಷಿ. ಆರ್ಥಿಕ ಬೆಂಬಲ, ಪಿಂಚಣಿ ಮತ್ತು ಶಿಕ್ಷಣ ಸಹಾಯದಂತಹ ಪ್ರಯೋಜನಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ.

ಸರಳವಾಗಿ ಹೇಳುವುದಾದರೆ, ಕೆಲಸದ ರಸೀದಿಗಳು ಮತ್ತು ಗುರುತಿನ ದಾಖಲೆಗಳು ನಿರ್ಮಾಣ ಕಾರ್ಮಿಕರಿಗೆ ರಾಜ್ಯನಿಧಿಯ ಪ್ರಯೋಜನಗಳನ್ನು ಸಕ್ರಿಯಗೊಳಿಸುವ ಸಾಧನಗಳಾಗಿವೆ. ಕಾರ್ಮಿಕರನ್ನು ಆರ್ಥಿಕ ಅಭದ್ರತೆಯಿಂದ ರಕ್ಷಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

► ಕೆಲಸದ ರಸೀದಿಗಳನ್ನು ಹೇಗೆ ನೀಡಲಾಗುತ್ತದೆ?

ಅಧಿಕೃತ ನಿಯಮಗಳ ಅಡಿಯಲ್ಲಿ, ಒಬ್ಬ ಕೆಲಸಗಾರನು ಗುರುತಿನ ಪುರಾವೆ, ವಯಸ್ಸು ಹಾಗೂ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವುದರ ಪುರಾವೆಯೊಂದಿಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ನೋಂದಾಯಿಸಿದ ನಂತರ, ಅವರು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಉದ್ಯೋಗದಾತರ ಪ್ರಮಾಣಪತ್ರಗಳಂತಹ ಪುರಾವೆಗಳನ್ನು ಒದಗಿಸಬೇಕು.

ಇದರ ಆಧಾರದಲ್ಲಿ, ಮಂಡಳಿ ಆ ವರ್ಷಕ್ಕೆ ಅಗತ್ಯವಿರುವ ಕನಿಷ್ಠ ನಿರ್ಮಾಣ ಕಾರ್ಮಿಕ ದಿನಗಳನ್ನು (90 ದಿನಗಳು) ಪೂರ್ಣಗೊಳಿಸಲಾಗಿದೆ ಎಂದು ಸೂಚಿಸುವ ಕೆಲಸದ ರಸೀದಿಯನ್ನು ಸಾಮಾನ್ಯವಾಗಿ ಡಿಜಿಟಲ್ ರೂಪದಲ್ಲಿ ನೀಡುತ್ತದೆ. ಅನೇಕ ಜಿಲ್ಲೆಗಳಲ್ಲಿ ಈ ಕೆಲಸದ ರಸೀದಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಲಾಗುತ್ತದೆ. ಪ್ರಮಾಣೀಕರಣಕ್ಕೂ ಮುನ್ನ ಸ್ಥಳ ಪರಿಶೀಲನೆ ಸೇರಿದಂತೆ ಭೌತಿಕ ಪುರಾವೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು.

►ಹರಿಯಾಣದಲ್ಲಿ ಹಗರಣ ಬೆಳಕಿಗೆ ಬಂದಿದ್ದು ಹೇಗೆ?

ಕಾರ್ಮಿಕ ಸಚಿವ ವಿಜ್ ಅವರ ಪ್ರಕಾರ, ಸುಮಾರು ನಾಲ್ಕು ತಿಂಗಳ ಹಿಂದೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೆಲಸದ ರಸೀದಿಗಳಲ್ಲಿ ಅಕ್ರಮಗಳನ್ನು ಗಮನಿಸಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಮಿಕರ ಕೆಲಸದ ರಸೀದಿಗಳನ್ನು ಒಬ್ಬನೇ ಅಧಿಕಾರಿ ಭೌತಿಕವಾಗಿ ಪರಿಶೀಲಿಸಿದ್ದಾನೆ ಎಂಬುದು ಪತ್ತೆಯಾಯಿತು.

ಅಚ್ಚರಿಯ ಸಂಗತಿಯೆಂದರೆ, ಊಹಿಸಲೂ ಸಾಧ್ಯವಾಗದಷ್ಟು ಕಡಿಮೆ ಸಮಯದಲ್ಲಿ ಈ ಪರಿಶೀಲನೆ ನಡೆದಿದೆ. ಉದಾಹರಣೆಗೆ, ಒಂದು ಪ್ರಕರಣದಲ್ಲಿ ಒಬ್ಬ ಉದ್ಯೋಗಿ ಒಂದೇ ದಿನದಲ್ಲಿ 2,646 ರಸೀದಿಗಳನ್ನು ಪರಿಶೀಲಿಸಿದ್ದಾನೆ. ಅವುಗಳಲ್ಲಿ ಭೌತಿಕ ಸ್ಥಳ ಪರಿಶೀಲನೆಗಳೂ ಸೇರಿವೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಯಿತು. ಇದರಿಂದ ವ್ಯಾಪಕ ಅಕ್ರಮಗಳು ಬಹಿರಂಗಗೊಂಡವು.

ನಂತರ ಪ್ರತಿ ಜಿಲ್ಲೆಯಲ್ಲಿ ಬಹುಸದಸ್ಯ ಸಮಿತಿಗಳಿಂದ ಮನೆ-ಮನೆಗೆ ಭೌತಿಕ ಪರಿಶೀಲನೆ ನಡೆಸುವಂತೆ ಇಲಾಖೆಯು ಆದೇಶಿಸಿತು. 13 ಜಿಲ್ಲೆಗಳಲ್ಲಿ ನಾಲ್ಕು ತಿಂಗಳು ನಡೆದ ಪರಿಶೀಲನೆಯಲ್ಲಿ, ಆಗಸ್ಟ್ 2023 ರಿಂದ ಮಾರ್ಚ್ 2025ರ ನಡುವೆ ನೀಡಲಾದ ಒಟ್ಟು 5,99,758 ಕೆಲಸದ ರಸೀದಿಗಳಲ್ಲಿ ಕೇವಲ 53,249 ಮಾತ್ರ ಮಾನ್ಯವಾಗಿವೆ.

ಅದೇ ರೀತಿ, 2,21,517 “ನೋಂದಾಯಿತ ನಿರ್ಮಾಣ ಕಾರ್ಮಿಕರಲ್ಲಿ” ಕೇವಲ 14,240 ಜನ ಮಾತ್ರ ಕಾನೂನುಬದ್ಧ ಕಾರ್ಮಿಕರು ಎಂಬುದು ಕಂಡುಬಂದಿದೆ. ಅನೇಕ ಸಂದರ್ಭಗಳಲ್ಲಿ ಇಡೀ ಹಳ್ಳಿಗಳನ್ನು ನಕಲಿ ಗುರುತಿನ ಚೀಟಿಗಳೊಂದಿಗೆ ನೋಂದಾಯಿಸಿರುವುದು ಪತ್ತೆಯಾಗಿದ್ದು, ಇಲ್ಲಿ ಹಲವರು ನಿರ್ಮಾಣ ಕೆಲಸದಲ್ಲೇ ತೊಡಗಿಸಿಕೊಳ್ಳದೆ ಕೆಲಸದ ರಸೀದಿಗಳನ್ನು ಪಡೆದಿದ್ದಾರೆ.

►ಸರ್ಕಾರದ ಪ್ರತಿಕ್ರಿಯೆ ಏನು?

ಅನಿಲ್ ವಿಜ್ ಅವರು ಇದನ್ನು ಭಾರಿ ಹಗರಣವೆಂದು ಬಣ್ಣಿಸಿದ್ದು, ಸುಮಾರು 1,500 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ. ಒಬ್ಬ ಉದ್ಯೋಗಿ ಸಾವಿರಾರು ಕೆಲಸದ ರಸೀದಿಗಳಿಗೆ ಸಹಿ ಹಾಕಿರುವುದು ಕಂಡುಬಂದಿದ್ದು, ಇದು ಕಾನೂನುಬದ್ಧ ಪರಿಶೀಲನೆಯ ಗತಿಗಿಂತ ಅಸಾಧ್ಯ ವೇಗದಲ್ಲಿದೆ ಎಂದು ಹೇಳಿದ್ದಾರೆ.

ಅನರ್ಹ ವ್ಯಕ್ತಿಗಳು ತಮಗೆ ಯಾವುದೇ ಹಕ್ಕಿಲ್ಲದ ಪ್ರಯೋಜನಗಳನ್ನು ಪಡೆಯುತ್ತಿರುವುದು ಲೂಟಿಗಿಂತ ಕಡಿಮೆಯಲ್ಲ ಎಂದು ಹೇಳಿದ ಅವರು, ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಗುರುವಾರ ಮುಖ್ಯಮಂತ್ರಿ ಸೈನಿ ಅವರು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ, ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಬಾಕಿ ಉಳಿದ ಒಂಭತ್ತು ಜಿಲ್ಲೆಗಳನ್ನೂ ಸೇರಿಸಿ ಎಲ್ಲಾ ಜಿಲ್ಲೆಗಳಿಂದ ವರದಿಗಳನ್ನು ಸಂಗ್ರಹಿಸಬೇಕು ಎಂದು ನಿರ್ದೇಶಿಸಿದ್ದಾರೆ.

► ನೋಂದಾಯಿತ ನಿರ್ಮಾಣ ಕಾರ್ಮಿಕರು ಯಾವೆಲ್ಲ ಪ್ರಯೋಜನಗಳಿಗೆ ಅರ್ಹರು?

ಹರಿಯಾಣದಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಗಳು ಮಾತೃತ್ವ ಭತ್ಯೆಯಿಂದ ಶೈಕ್ಷಣಿಕ ನೆರವಿನವರೆಗೆ ವ್ಯಾಪಕ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ. ಮಹಿಳಾ ಕಾರ್ಮಿಕರು ಹಾಗೂ ಕುಟುಂಬದ ಮಹಿಳಾ ಸದಸ್ಯರ ವಿವಾಹಕ್ಕೆ ಸರ್ಕಾರ ಹಣಕಾಸಿನ ನೆರವು ನೀಡುತ್ತದೆ.

ಮಾತೃತ್ವ ಭತ್ಯೆ 36,000 ರೂ., ಪಿತೃತ್ವ ಭತ್ಯೆ 21,000 ರೂ., ಮಕ್ಕಳಿಗೆ ವಾರ್ಷಿಕವಾಗಿ 8,000 ರೂ.ವಿನಿಂದ 20,000 ರೂ. ವರೆಗೆ ಶೈಕ್ಷಣಿಕ ನೆರವು, 10 ಮತ್ತು 12ನೇ ತರಗತಿಯಲ್ಲಿ 60%–90% ಅಂಕ ಪಡೆದವರಿಗೆ 21,000 ರಿಂದ ರೂ. 51,000 ವರೆಗೆ ವಿದ್ಯಾರ್ಥಿವೇತನ, ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಸಂಪೂರ್ಣ ಶುಲ್ಕ ಮರುಪಾವತಿ ಹಾಗೂ ವಸತಿ ನೆರವು (ರೂ. 1.2 ಲಕ್ಷವರೆಗೆ) ಲಭ್ಯ.

ವಿದ್ಯುತ್ ಸ್ಕೂಟರ್ ಖರೀದಿಗೆ ಹೆಣ್ಣುಮಕ್ಕಳಿಗೆ 50,000 ರೂ., ಲ್ಯಾಪ್‌ಟಾಪ್ ಅನುದಾನ 49,000 ರೂ., ಸೈಕಲ್ ಖರೀದಿಗೆ 5,000 ರೂ., ಉಪಕರಣ ಅನುದಾನ 8,000 ರೂ., ಹೊಲಿಗೆ ಯಂತ್ರಕ್ಕೆ 4,500 ರೂ. ಅನುದಾನ ನೀಡಲಾಗುತ್ತದೆ.

ಮದುವೆ ನೆರವು (ಕನ್ಯಾದಾನ ಯೋಜನೆ) ಅಡಿಯಲ್ಲಿ ನೋಂದಾಯಿತ ಕಾರ್ಮಿಕರ ಮೂರು ಹೆಣ್ಣುಮಕ್ಕಳ ಮದುವೆಗೆ ತಲಾ 1,01,000 ರೂ., ಮಹಿಳಾ ಕಾರ್ಮಿಕರ ವಿವಾಹಕ್ಕೆ 50,000 ರೂ., ದೀರ್ಘಕಾಲದ ಕಾಯಿಲೆ ಚಿಕಿತ್ಸೆಗೆ 1 ಲಕ್ಷ ರೂ., ಅಂಗವೈಕಲ್ಯಕ್ಕೆ 1.5 ರಿಂದ 3 ಲಕ್ಷ ರೂ., ವೃದ್ಧಾಪ್ಯ ಪಿಂಚಣಿ 3,500 ರೂ. ವಿಧವಾ ಪಿಂಚಣಿ 3,000 ರೂ.

ಕೆಲಸದ ಸ್ಥಳದಲ್ಲಿ ಆಕಸ್ಮಿಕ ಮರಣಕ್ಕೆ 5,15,000 ರೂ.ಪರಿಹಾರ, ಮನೆ ಖರೀದಿ ಅಥವಾ ನಿರ್ಮಾಣಕ್ಕೆ 2 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಹಾಗೂ ನೋಂದಣಿ ಪ್ರೋತ್ಸಾಹವಾಗಿ 1,100 ರೂ. ಸಹ ಲಭ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News