×
Ad

ಪಾಕ್ ಪರ ಬೇಹುಗಾರಿಕೆ ಆರೋಪ: ರಾಜಸ್ಥಾನ ನಿವಾಸಿ ಮಂಗತ್ ಸಿಂಗ್ ಬಂಧನ

Update: 2025-10-11 20:10 IST

Photo : indiatoday

ಜೈಪುರ,ಅ.11: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗಾಗಿ ಗೂಢಚರ್ಯೆ ನಡೆಸಿದ ಆರೋಪದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗತ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ಆತನನ್ನು ಶನಿವಾರ ಜೈಪುರದ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

ಗೋವಿಂದ್ಗಢದ ನಿವಾಸಿಯಾದ ಸಿಂಗ್ ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನದ ಮಹಿಳಾ ಹ್ಯಾಂಡ್ಲರ್ ಒಬ್ಬಳ ಜೊತೆ ಸಂಪರ್ಕದಲ್ಲಿದ್ದನು. ಆತ ಭಾರತೀಯ ಸೇನೆಗೆ ಸಂಬಂಧಿಸಿದ ಚಲನವಲನಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಆಕೆಗೆ ರವಾನಿಸುತ್ತಿದ್ದನೆಂದು ಪೊಲೀಸ್ ಅಧಿಕಾರಿಗಳು ಆಪಾದಿಸಿದ್ದಾರೆ.

ಆರೋಪಿ ಮಂಗತ್ ಸಿಂಗ್ ಮಹಿಳಾ ಹ್ಯಾಂಡ್ಲರ್ ದೂರವಾಣಿ ಸಂಖ್ಯೆಗಳನ್ನು ಇಶಾ ಶರ್ಮಾ ಹಾಗೂ ಇಶಾ ಬಾಸ್ ಎಂಬ ಹೆಸರುಗಳಲ್ಲಿ ತನ್ನ ಮೊಬೈಲ್ ಫೋನ್ ನಲ್ಲಿ ಸೇವ್ ಮಾಡಿಟ್ಟಿದ್ದ. ಆತ ವಿಶೇಷವಾಗಿ ಕಂಟೋನ್ಮೆಂಟ್ ಹಾಗೂ ಅಂಬಾಲ ಕಂಟೋನ್ಮೆಂಟ್ ಪ್ರದೇಶಗಳಲ್ಲಿನ ಸಂಬಂಧಿಸಿದ ಸೇನೆ ಹಾಗೂ ಬಿಎಸ್‌ಎಫ್ ನ ಚಲನವಲನಗಳ ಹಲವಾರು ಛಾಯಾಚಿತ್ರಗಳನ್ನು ಹಾಗೂ ವೀಡಿಯೊಗಳನ್ನು ಶೇರ್ ಮಾಡಿದ್ದನೆಂದು ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.

ತಾನು ನೀಡುವ ಮಾಹಿತಿಗೆ ಪ್ರತಿಯಾಗಿ ಪಾಕಿಸ್ತಾನದಿಂದ 10 ಸಾವಿರ ರೂ.ಗೂ ಅಧಿಕಮೊತ್ತದ ಹಣವನ್ನು ಹಲವಾರು ಬಾರಿ ಪಡೆದಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ. ಆತನ ಮೊಬೈಲ್ ಫೋನ್‌ ನಲ್ಲಿ ಸಂಕೇತನಾಮದ ಸಂದೇಶಗಳು ಸೇರಿದಂತೆ ಸೂಕ್ಷ್ಮ ಮಾಹಿತಿಗಳ ವಿನಿಮಯದ ದಾಖಲೆಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರ ವಿಶ್ವಾಸವನ್ನು ಗಳಿಸಲು ಆತ ಧಾರ್ಮಿಕ ಸಭೆಗಳನ್ನು ಬಳಸಿಕೊಳ್ಳುತ್ತಿದ್ದನು ಊನ್ನಲಾಗಿದೆ. ಈ ಸಲ ಆತ ಹಲವಾರು ಬಾರಿ ಸೇನೆ ಹಾಗೂ ಬಿಎಸ್ಎಫ್ ಅಧಿಕಾರಿಗಳ ಜೊತೆ ಸಂಪರ್ಕಕ್ಕೆ ಬಂದಿದ್ದನೆಂದು ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ. ಮಂಗತ್ ಸಿಂಗ್ ನ ಜೊತೆ ಒಡನಾಟ ಹೊಂದಿರುವ ಇತರ ವ್ಯಕ್ತಿಗಳನ್ನು ಪ್ರಶ್ನಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ.

ರಾಜಸ್ಥಾನ ಪೊಲೀಸರ ಬೇಹುಗಾರಿಕಾ ದಳವು ಮಂಗತ್ ಸಿಂಗ್ ನನ್ನು ವಶಕ್ಕೆ ತೆಗೆದುಕೊಂಡಿದೆ. ಬೇಹುಗಾರಿಕಾ ಏಜೆನ್ಸಿಗಳ ವಿಚಾರಣೆಯ ಬಳಿಕ ಆತನನ್ನು ಶುಕ್ರವಾರ ಅಧಿಕೃತ ಗೋಪ್ಯಗಳ ಕಾಯ್ದೆಯಡಿ ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News