×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ | ಈಡಿಯಿಂದ ಅನಿಲ್ ಅಂಬಾನಿ ಸಹಾಯಕನ ಬಂಧನ

Update: 2025-10-16 21:39 IST

ಅಶೋಕ್ ಕುಮಾರ್ ಪಾಲ್‌ , ಅನಿಲ್ ಅಂಬಾನಿ | Photo Credit : PTI

ಹೊಸದಿಲ್ಲಿ, ಅ. 16: 68 ಕೋಟಿ ರೂಪಾಯಿ ನಕಲಿ ಬ್ಯಾಂಕ್ ಗ್ಯಾರಂಟಿ ಆರೋಪಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಿಲಯನ್ಸ್ ಪವರ್ ಲಿಮಿಟೆಡ್‌ನ ಕಾರ್ಯಕಾರಿ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಕುಮಾರ್ ಪಾಲ್‌ ನನ್ನು ಜಾರಿ ನಿರ್ದೇಶನಾಲಯ (ಈಡಿ) ಬಂಧಿಸಿದೆ.

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹವನ್ನು ಬೆಚ್ಚಿ ಬೀಳಿಸಿದ್ದ ಹಾಗೂ ಈ ವಾರ ಅದರ ಶೇರುಗಳ ಕುಸಿತಕ್ಕೆ ಕಾರಣವಾದ ಆರ್ಥಿಕ ತನಿಖೆಗೆ ಈ ಬಂಧನ ಸಂಬಂಧಿಸಿದೆ.

ಪಾಲ್ ಅನ್ನು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಶುಕ್ರವಾರ ರಾತ್ರಿ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅನಂತರ ಅವರನ್ನು ದಿಲ್ಲಿಯಲ್ಲಿರುವ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರಿಗೆ 2 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಮುಂದಿನ ಬಂಧನದ ಕುರಿತು ನ್ಯಾಯಾಲಯ ಅಕ್ಟೋಬರ್ 18ರಂದು ತನ್ನ ನಿರ್ಧಾರ ಪ್ರಕಟಿಸಲಿದೆ.

ದಿಲ್ಲಿ ಪೊಲೀಸ್‌ ನ ಆರ್ಥಿಕ ಅಪರಾಧಗಳ ಘಟಕ (ಇಒಡಬ್ಲ್ಯು) ಕಳೆದ ನವೆಂಬರ್‌ ನಲ್ಲಿ ದಾಖಲಿಸಿದ ಎಫ್‌ಐಆರ್‌ನ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ.

ಸರಕಾರಿ ಕಂಪೆನಿಯಾದ ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾ (ಎಸ್‌ಇಸಿಐ)ದಿಂದ ಬ್ಯಾಟರಿ ಶೇಖರಣಾ ಟೆಂಡರ್ ಪಡೆಯಲು ರಿಲಯನ್ಸ್ ಪವರ್ಸ್‌ನ ಅಂಗಸಂಸ್ಥೆ ನಕಲಿ ಬ್ಯಾಂಕ್ ಗ್ಯಾರಂಟಿಯನ್ನು ಸಲ್ಲಿಸಿದೆ ಎಂದು ಎಫ್‌ಐಆರ್ ಹೇಳಿದೆ.

ಮನಿಲಾದ ಫಸ್ಟ್‌ ರ್ಯಾಂಡ್ ಬ್ಯಾಂಕ್‌ನಿಂದ ಬಂದಿದೆ ಎಂದು ಹೇಳಲಾದ ಗ್ಯಾರಂಟಿ ನಕಲಿ. ಯಾಕೆಂದರೆ ಪಿಲಿಪ್ಪೈನ್‌ನಲ್ಲಿ ಈ ಬ್ಯಾಂಕ್‌ನ ಯಾವುದೇ ಶಾಖೆ ಇಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಎಸ್‌ಇಸಿಐಗೆ ಸಲ್ಲಿಸಲಾದ ದಾಖಲೆಗಳನ್ನು ಅನುಮೋದಿಸಲು ಅವರು ಸಹಾಯ ಮಾಡಿದ್ದಾರೆ. ಈ ದಾಖಲೆಗಳನ್ನು ಟೆಲಿಗ್ರಾಂ ಹಾಗೂ ವ್ಯಾಟ್ಸ್‌ಆ್ಯಪ್‌ನಂತಹ ಸಾಮಾನ್ಯ ವಾಹಿನಿಗಳ ಮೂಲಕ ಸಲ್ಲಿಸಲಾಗಿದೆ. ಈ ಮೂಲಕ ಕಂಪೆನಿ ಮಾದರಿ ಕಾರ್ಯ ವಿಧಾನಗಳನ್ನು ಅನುಸರಿಸದೆ ದಾಖಲೆಗಳನ್ನು ಸಲ್ಲಿಸಿದೆ ಹಾಗೂ ಅನುಮೋದನೆ ನೀಡಿದೆ ಎಂದು ಜಾರಿ ನಿರ್ದೇಶನಾಲಯ ಅಭಿಪ್ರಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News