ಕಸ್ಟಮ್ಸ್ ಸರಳೀಕರಣ ಕೇಂದ್ರದ ಮುಂದಿನ ಸುಧಾರಣಾ ಕಾರ್ಯಸೂಚಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ | Photo Credit : PTI
ಹೊಸದಿಲ್ಲಿ,ಡಿ.6: ಸೀಮಾಸುಂಕ (ಕಸ್ಟಮ್ಸ್)ದ ಸರಳೀಕರಣವು ತನ್ನ ಸರಕಾರದ ಮುಂದಿನ ಬೃಹತ್ ಸುಧಾರಣಾ ಕಾರ್ಯಸೂಚಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಶ್ರೀಸಾಮಾನ್ಯನ ಕೈಗಳಿಗೆ ಹೆಚ್ಚು ನಗದು ಹಣವನ್ನು ಒದಗಿಸುವ ಮೂಲಕ ಖರೀದಿಸುವಿಕೆಯನ್ನು ಉತ್ತೇಜಿಸುವುದಕ್ಕಾಗಿ ಪ್ರಸಕ್ತ ವಿತ್ತ ವರ್ಷದಲ್ಲಿ ಕೇಂದ್ರ ಸರಕಾರವು ಆದಾಯ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ತರ್ಕಬದ್ಧಗೊಳಿಸುವಿಕೆ ಹಾಗೂ ಸರಳೀಕರಣದಂತಹ ಸುಧಾರಣೆಗಳನ್ನು ಕೈಗೊಂಡಿತ್ತು ಎಂದು ಹೇಳಿದರು.
ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಕೂಲಂಕುಶ ಪರಿಶೀಲಿಸುವ ಅಗತ್ಯವಿದೆ. ಕಸ್ಟಮ್ಸ್ ಸುಂಕದ ನಿಯಮಾವಳಿಗಳನ್ನು ಅನುಸರಿಸುವುದು ಪ್ರಯಾಸಕರವಲ್ಲವೆಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸಲು ಅವುಗಳನ್ನು ನಾವು ಸರಳೀಕರಿಸಬೇಕಾದ ಅಗತ್ಯವಿದೆ ಮತ್ತು ಅದನ್ನು ನಾವು ಇನ್ನಷ್ಟು ಪಾರದರ್ಶಕಗೊಳಿಸಬೇಕಾಗಿದೆ ಎಂದು ವಿತ್ತ ಸಚಿವೆ ತಿಳಿಸಿದರು.
ಹಿಂದೂಸ್ತಾನ್ ಟೈಮ್ಸ್ ಸುದ್ದಿಸಂಸ್ಥೆಯು ಹೊಸದಿಲ್ಲಿಯಲ್ಲಿ ಶನಿವಾರ ಆಯೋಜಿಸಿದ ನಾಯಕತ್ವ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಆದಾಯ ತೆರಿಗೆಯಂತೆ, ಕಸ್ಟಮ್ಸ್ ಸುಂಕದಲೂ ಪಾರದರ್ಶಕತೆಯ ತರುವ ಅಗತ್ಯವಿದೆ ಎಂದು ಹೇಳಿದ ಅವರು, ಪ್ರಸ್ತಾವಿತ ಸುಧಾರಣೆಗಳು ಸಮಗ್ರವಾಗಿರಲಿದ್ದು, ಕಸ್ಟಮ್ಸ್ ಸುಂಕ ದರವನ್ನು ತರ್ಕಬದ್ದಗೊಳಿಸಲಿದೆ ಎಂದು ಸಚಿವೆ ತಿಳಿಸಿದರು.
2026ರ ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಈ ಕುರಿತ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಅವರು ಏಹಳಿದರು
ಕಳೆದ ಎರಡು ವರ್ಷಗಳಿಂದ ನಾವು ಸ್ಥಿರವಾಗಿ ಕಸ್ಟಮ್ಸ್ ಸುಂಕದಲ್ಲಿ ಇಳಿಕೆ ಮಾಡಿದ್ದೇವೆ. ಆದರೆ ಕೆಲವು ಸಾಮಾಗ್ರಿಗಳಲ್ಲಿ ನಮ್ಮ ದರಗಳು, ಸಮರ್ಪಕ ಮಟ್ಟಿಕ್ಕಿಂತ ಅಧಿಕವಾಗಿತ್ತು. ಅವುಗಳನ್ನು ಕೂಡಾ ಕಡಿಮೆಗೊಳಿಸಬೇಕಾದ ಅಗತ್ಯವಿದೆ. ಕಸ್ಟಮ್ಸ್ ಸುಂಕದ ಸರಳೀಕರಣವು ನನ್ನ ಮುಂದಿನ ಬೃಹತ್ ‘ಸ್ವಚ್ಛತಾ’ ಕಾರ್ಯವಾಗಿದೆ ಎಂದವರು ಹೇಳಿದರು.
ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಕುಸಿಯುತ್ತಿರುವ ಬಗ್ಗೆ ಮಾತನಾಡಿದ ನಿರ್ಮಲಾ ಅವರು, ಶೀಘ್ರದಲ್ಲೇ ರೂಪಾಯಿ ಮೌಲ್ಯವು ಸಹಜ ಮಟ್ಟಕ್ಕೆ ತಲುಪಲಿದೆ ಎಂದರು.