‘ಇಂಡಿಯಾ’ ಮೈತ್ರಿಕೂಟ ICU ನಲ್ಲಿದೆ: ಉಮರ್ ಅಬ್ದುಲ್ಲಾ
BJPಯು ಚುನಾವಣಾ ಹೋರಾಟಕ್ಕೆ ಭೇಷ್ ಎಂದ ಜಮ್ಮುಕಾಶ್ಮೀರದ ಸಿಎಂ
ಉಮರ್ ಅಬ್ದುಲ್ಲಾ | Photo Credit : PTI
ಹೊಸದಿಲ್ಲಿ,ಡಿ.6: ಬಿಜೆಪಿಯು ಚುನಾವಣೆಗಳಲ್ಲಿ ಹೋರಾಡುವ ರೀತಿಗಾಗಿ ಅದನ್ನು ಪ್ರಶಂಸಿಸಿರುವ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಪ್ರಸ್ತುತ ಸ್ಥಿತಿಯ ಬಗ್ಗೆ ಶನಿವಾರ ಕೆಲವು ಪ್ರಮುಖ ಪ್ರಶ್ನೆಗಳನ್ನೆತ್ತಿದ್ದಾರೆ.
ನಿಮ್ಮ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಉಳಿದಿದೆಯೇ ಎಂದು ಅವರನ್ನು ಪ್ರಶ್ನಿಸಲಾಗಿತ್ತು. ತನ್ನ ಪಕ್ಷವು ಮೈತ್ರಿಕೂಟದಿಂದ ಹೊರಬಂದಿದೆ ಎಂದು ಅವರು ಹೇಳಲಿಲ್ಲವಾದರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲಿನ ಬಳಿಕ ‘ಇಂಡಿಯಾ’ ಬಣವೇ ಸ್ವತಃ ಮರಣಶಯ್ಯೆಯಲ್ಲಿದೆ, ಅದು ICU ನಲ್ಲಿ ಉಸಿರಾಡುತ್ತಿದೆ ಎಂದರು.
ಅಬ್ದುಲ್ಲಾ ಇಲ್ಲಿ ನಡೆದ Hindustan Times ನಾಯಕತ್ವ ಶೃಂಗಸಭೆ 2025ರಲ್ಲಿ HTಯ ರಾಜಕೀಯ ಸಂಪಾದಕಿ ಸುನೇತ್ರಾ ಚೌಧರಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು.
2024ರ ಲೋಕಸಭಾ ಚುನಾವಣೆಗೆ ಮುನ್ನ ಎನ್‌ಡಿಎಗೆ ಸೇರ್ಪಡೆಗೊಳ್ಳುವ ಮೊದಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಬಣವನ್ನು ರೂಪಿಸಲು ನಡೆಸಿದ್ದ ಪ್ರಯತ್ನಗಳನ್ನು ಉಲ್ಲೇಖಿಸಿದ ಅಬ್ದುಲ್ಲಾ, ‘ನಾವು ನಿತೀಶ್ ಕುಮಾರ್ ಅವರನ್ನು ಮರಳಿ ಎನ್‌ಡಿಎ ತೆಕ್ಕೆಗೆ ತಳ್ಳಿದ್ದೇವೆ ಎಂದು ನಾನು ಭಾವಿಸಿದ್ದೇನೆ’ ಎಂದು ಹೇಳಿದರು.
‘ನಿತೀಶ್ ಅವರನ್ನು ಇಂಡಿಯಾ ಬಣದ ಸಂಚಾಲಕರನ್ನಾಗಿ ಮಾಡಬೇಕೇ ಎಂಬ ಕುರಿತು ಚರ್ಚೆಗಳು ನಡೆದಿದ್ದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ನಿತೀಶ್ ಅವರ ಉಪಸ್ಥಿತಿಯಲ್ಲಿ ನಾವು ಯಾವುದೇ ವ್ಯಕ್ತಿಯ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದೆ ಈ ವಿಷಯದಲ್ಲಿ ಮತ್ತೋರ್ವ ನಾಯಕ ವೀಟೊ (ನಿರಾಕರಣೆ) ಅಧಿಕಾರ ಹೊಂದಿರಬಹುದು ಎಂದು ಪರಿಣಾಮಕಾರಿಯಾಗಿ ಸೂಚಿಸಿದ್ದೆವು’ಎಂದರು.
ಪ್ರತಿಪಕ್ಷಗಳ ನಡುವಿನ ಒಪ್ಪಂದ ‘ಈಗಾಗಲೇ ಸತ್ತಿದೆ’ ಎಂಬ ಇಂಡಿಯಾ ಬಣದ ಕೆಲವು ಪಕ್ಷಗಳ ಹೇಳಿಕೆ ಕುರಿತಂತೆ ಅಬ್ದುಲ್ಲಾ,‘ನಾವು ಒಂದು ರೀತಿಯಲ್ಲಿ ಜೀವ ಬೆಂಬಲದಲ್ಲಿದ್ದೇವೆ. ಆದರೆ ಯಾರಾದರೂ ನಮಗೆ ಸ್ವಲ್ಪ ಆಘಾತವನ್ನು ನೀಡುತ್ತಾರೆ ಮತ್ತು ನಾವು ಮತ್ತೆ ಎದ್ದೇಳುತ್ತೇವೆ. ನಂತರ ದುರದೃಷ್ಟವಶಾತ್ ಬಿಹಾರದಂತಹ ಫಲಿತಾಂಶಗಳು ಸಂಭವಿಸುತ್ತವೆ ಮತ್ತು ನಾವು ಮತ್ತೆ ಕುಸಿಯುತ್ತೇವೆ,ಆಗ ಮತ್ತೊಮ್ಮೆ ಯಾರಾದರೂ ನಮ್ಮನ್ನು ತಳ್ಳಿಕೊಂಡು ತರಬೇಕಾಗುತ್ತದೆ’ಎಂದು ಹೇಳಿದರು.
ಜಾರ್ಖಂಡ್ ಮುಕ್ತಿಮೋರ್ಚಾ ಬಿಹಾರದಲ್ಲಿ ಇಂಡಿಯಾ ಅಥವಾ ಮಹಾಘಟಬಂಧನದ ಭಾಗವಾಗಿರಲಿಲ್ಲ ಎಂದು ಬೆಟ್ಟು ಮಾಡಿದ ಅಬ್ದುಲ್ಲಾ, ನಾಳೆ ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಬಣದಿಂದ ಹೊರಬಿದ್ದರೆ ತಪ್ಪು ಯಾರದು ಎಂದು ಪ್ರಶ್ನಿಸಿದರು.
‘ನಾವು ಒಂದು ಬಣವಾಗಿದ್ದರೆ ಸ್ಪಷ್ಟತೆಯ ಅಗತ್ಯವಿದೆ, ಆಗ ನಾವು ಒಂದಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಬಹುದು. ಇಲ್ಲದಿದ್ದರೆ ನಮ್ಮದು ರಾಜ್ಯ-ನಿರ್ದಿಷ್ಟ ಮೈತ್ರಿಯಾಗುತ್ತದೆ. ಆದರೆ ನಾವು ನಮ್ಮನ್ನು ಇಂಡಿಯಾ ಮೈತ್ರಿಕೂಟ ಎಂದು ಕರೆದುಕೊಳ್ಳುತ್ತಿದ್ದರೆ ನಾವು ಹೆಚ್ಚು ಸಮಗ್ರವಾಗಿರಬೇಕು’ ಎಂದರು.
ಚುನಾವಣಾ ಫಲಿತಾಂಶಗಳನ್ನು ತಿರುಚಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪ ಕುರಿತಂತೆ ಅವರು,ಇವಿಎಮ್‌ಗಳಲ್ಲಿ ಅಕ್ರಮ ನಡೆಸಬಹುದು ಎನ್ನುವುದನ್ನು ತಾನು ನಂಬುವುದಿಲ್ಲವಾದರೂ ಚುನಾವಣೆಗಳನ್ನು ಬೇರೆ ರೀತಿಗಳಲ್ಲಿ ತಿರುಚಬಹುದು ಎಂದು ಹೇಳಿದರು. ಮತದಾರರ ಪಟ್ಟಿಗಳಲ್ಲಿ ಕೈವಾಡ ನಡೆಸುವುದು ಅಥವಾ ಕ್ಷೇತ್ರ ಮರುವಿಂಗಡಣೆ ಇದಕ್ಕೆ ಅತ್ಯಂತ ಸುಲಭದ ಮಾರ್ಗವಾಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳನ್ನು ಸಮರ್ಥಿಸಿದರು.