West Bengal | ‘ಬಾಬರಿ ಮಸೀದಿ’ ಗೆ ಶಿಲಾನ್ಯಾಸ ಮಾಡಿದ ಅಮಾನತುಗೊಂಡ TMC ಶಾಸಕ ಕಬೀರ್
Photo Credit : X/@ANI
ಕೋಲ್ಕತಾ,ಡಿ.6: ತೃಣಮೂಲ ಕಾಂಗ್ರೆಸ್ ನಿಂದ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್ ಬಾಬರಿ ಮಸೀದಿ ಮಾದರಿಯ ವಾಸ್ತುವಿನ್ಯಾಸದ ಮಸೀದಿಗೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶನಿವಾರ ಶಿಲಾನ್ಯಾಸ ಮಾಡಿದ್ದಾರೆ. 1992ರಲ್ಲಿ ಸಂಘಪರಿವಾರದ ಬೆಂಬಲಿಗರು ಅಯೋಧ್ಯೆಯಲ್ಲಿನ 16ನೇ ಶತಮಾನದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ವರ್ಷಾಚರಣೆಯ ದಿನದಂದೇ ಈ ಶಿಲಾನ್ಯಾಸ ನಡೆದಿದೆ.
ಹುಮಾಯೂನ್ ಕಬೀರ್ ಅವರು ಬೆಲ್ಡಾಂಗಾ ಪಟ್ಟಣದಲ್ಲಿ ಮಸೀದಿಯ ಕಟ್ಟಡದ ಶಿಲಾನ್ಯಾಸವನ್ನು ಔಪಚಾರಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಶಿಲಾನ್ಯಾಸ ಕಾರ್ಯಕ್ರಮದ ಸ್ಥಳದಲ್ಲಿ ಭಾರೀ ಬಿಗುಭದ್ರತೆಯನ್ನು ಏರ್ಪಡಿಸಲಾಗಿತ್ತು. ಪಟ್ಟಣವನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 12ರ ಇಕ್ಕೆಲಗಳಲ್ಲಿ ಕ್ಷಿಪ್ರ ಕಾರ್ಯಪಡೆ, ಜಿಲ್ಲಾ ಪೊಲೀಸರು ಹಾಗೂ ಕೇಂದ್ರೀಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.
ಈ ಮಸೀದಿಯ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು Calcutta High Court ತಿರಸ್ಕರಿಸಿತ್ತು. ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭ ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರಕಾರದ ಹೊಣೆಗಾರಿಕೆಯೆಂದು ತಿಳಿಸಿತ್ತು.
ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಮಾದರಿಯ ವಾಸ್ತು ವಿನ್ಯಾಸದ ಮಸೀದಿಯನ್ನು ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಿರ್ಮಿಸಲು ಮಂದಾಗುವ ಮೂಲಕ ಕಬೀರ್ ಅವರು ಕೋಮುವಾದಿ ರಾಜಕೀಯದಲ್ಲಿ ತೊಡಗಿದ್ದಾರೆಂದು ಆರೋಪಿಸಿ TMCಯು ಅವರನ್ನು ಇತ್ತೀಚೆಗೆ ಪಕ್ಷದಿಂದ ಅಮಾನತುಗೊಳಿಸಿತ್ತು.