×
Ad

ರಾಹುಲ್ ಗಾಂಧಿಗೂ ಅಮೆರಿಕ ಸಂಸದರ ಪತ್ರಕ್ಕೂ ತಳುಕು ಹಾಕಿದ ಬಿಜೆಪಿ

Update: 2026-01-02 20:36 IST

Photo Credit : X/Pradeep Bhandari

ಹೊಸದಿಲ್ಲಿ, ಜ. 2: ಬಂಧನದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ಅವರ ನ್ಯಾಯಯುತ ಮತ್ತು ಸಕಾಲಿಕ ವಿಚಾರಣೆಗೆ ಆಗ್ರಹಿಸಿ ಅಮೆರಿಕದ ಎಂಟು ಸಂಸದರು ಭಾರತಕ್ಕೆ ಪತ್ರ ಬರೆದಿರುವುದನ್ನು ಬಲವಾಗಿ ಆಕ್ಷೇಪಿಸಿರುವ ಬಿಜೆಪಿಯು, ಆ ಪತ್ರದ ಹಿಂದಿನ ‘ಭಾರತ ವಿರೋಧಿ’ ಗುಂಪಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ತಳುಕು ಹಾಕಿದೆ.

ಅಮೆರಿಕದ ಎಂಟು ಸಂಸದರ ಪೈಕಿ ಒಬ್ಬರಾಗಿರುವ ಜಾನ್ ಶಾಕೋವಸ್ಕಿ ಅವರು 2024ರಲ್ಲಿ ರಾಹುಲ್ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ‘ಭಾರತ ವಿರೋಧಿ’ ಇಲ್ಹಾನ್ ಉಮರ್ ಉಪಸ್ಥಿತರಿದ್ದರು ಎಂದು ಬಿಜೆಪಿ ನಾಯಕ ಪ್ರದೀಪ ಭಂಡಾರಿ ಶುಕ್ರವಾರ ಆರೋಪಿಸಿದರು.

ರಾಹುಲ್ ಅವರು ಶಾಕೋವಸ್ಕಿ, ಸ್ಯಾಮ್ ಪಿತ್ರೋಡಾ ಮತ್ತು ಇತರರೊಂದಿಗೆ ಇದ್ದ ಛಾಯಾಚಿತ್ರವನ್ನು ಹಂಚಿಕೊಂಡ ಭಂಡಾರಿ, ‘ವಿದೇಶಗಳಲ್ಲಿ ಭಾರತ ವಿರೋಧಿ ನಿರೂಪಣೆ ಹರಡಿಕೊಂಡಾಗಲೆಲ್ಲ ಹಿನ್ನೆಲೆಯಲ್ಲೊಂದು ಹೆಸರು ಅನುರಣಿಸುತ್ತಲೇ ಇರುತ್ತದೆ: ರಾಹುಲ್ ಗಾಂಧಿ’ ಎಂದು ಆರೋಪಿಸಿದರು.

2024ರಲ್ಲಿ ರಾಹುಲ್ ಅವರನ್ನು ಭೇಟಿಯಾದ ಬಳಿಕ, ಮರುವರ್ಷ ಶಾಕೋವಸ್ಕಿ ಭಾರತವನ್ನು ಹೆಸರಿಸಿ ಮುಸ್ಲಿಂ ಸಮುದಾಯಗಳ ಮೇಲೆ ದಾಳಿಗಳು ನಡೆದಿವೆ ಎಂದು ಆರೋಪಿಸಿ ‘ಅಂತರರಾಷ್ಟ್ರೀಯ ಇಸ್ಲಾಮೋಫೋಬಿಯಾ ವಿರುದ್ಧ ಕಾಯ್ದೆ’ಯನ್ನು ಮಂಡಿಸಿದ್ದರು. ಈಗ ಇದೇ ಶಾಕೋವಸ್ಕಿ, ಗಲಭೆಗಳು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣಗಳಲ್ಲಿ ಯುಎಪಿಎ ಅಡಿ ಆರೋಪಿ ಆಗಿರುವ ಉಮರ್ ಖಾಲಿದ್ ಕುರಿತು ಕಳವಳ ವ್ಯಕ್ತಪಡಿಸಿ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಭಂಡಾರಿ ಹೇಳಿದರು.

ಭಾರತವನ್ನು ಅಸ್ಥಿರಗೊಳಿಸಲು, ಅದರ ಚುನಾಯಿತ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮತ್ತು ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ರಾಹುಲ್ ಸುತ್ತ ಸೇರಿರುವಂತೆ ಕಾಣುತ್ತಿದೆ ಎಂದೂ ಭಂಡಾರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News