×
Ad

ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣಗಳನ್ನು ರದ್ದುಗೊಳಿಸಲು ಹೈಕೋರ್ಟ್‌ಗೆ ಸುಪ್ರೀಂ ಅನುಮತಿ

Update: 2025-05-20 16:53 IST

ಸುಪ್ರೀಂ | PC : PTI 

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಕೌಟುಂಬಿಕ ಹಿಂಸಾಚಾರ ಕಾಯ್ದೆ,2005ರಡಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಸೋಮವಾರ ಉಚ್ಚ ನ್ಯಾಯಾಲಯಗಳಿಗೆ ಅನುಮತಿಯನ್ನು ನೀಡಿದೆ. ಕಾನೂನು ಮುಖ್ಯವಾಗಿ ನಾಗರಿಕ ಸ್ವರೂಪದ್ದಾಗಿದ್ದು ವಿವಾಹಿತ ಮಹಿಳೆಯರನ್ನು ಕಿರುಕುಳ ಮತ್ತು ಹಿಂಸಾಚಾರದಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆಯಾದರೂ ಕಾನೂನಿನಡಿ ಆರೋಪಿಯನ್ನು ಬಂಧಿಸಿ ಶಿಕ್ಷೆಗೊಳಪಡಿಸಿದಾಗ ವ್ಯಕ್ತಿಗಳ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗುತ್ತವೆ ಎಂದು ಅದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ಬಾಕಿಯಿರುವ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಉಚ್ಚ ನ್ಯಾಯಾಲಯಗಳು ಸಿಆರ್‌ಪಿಸಿಯ ಕಲಂ 482(ಬಿಎನ್‌ಎಸ್‌ಎಸ್‌ನ ಕಲಂ 528)ರಡಿ ಅಧಿಕಾರವನ್ನು ಬಳಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ಆದರೆ, ಉಚ್ಚ ನ್ಯಾಯಾಲಯಗಳು ತಮಗೆ ಲಭ್ಯವಿರುವ ಅಧಿಕಾರವನ್ನು ಸಂಪೂರ್ಣ ಅಕ್ರಮ ಮತ್ತು ಅನ್ಯಾಯವನ್ನು ತಡೆಗಟ್ಟುವ ಸಂದರ್ಭದಲ್ಲಿ ಮಾತ್ರ ಎಚ್ಚರಿಕೆ ಮತ್ತು ವಿವೇಚನೆಯೊಂದಿಗೆ ಬಳಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ ಭುಯಾನ್ ಅವರ ಪೀಠವು ಸ್ಪಷ್ಟಪಡಿಸಿತು.

ಕ್ರಿಮಿನಲ್ ಕಾನೂನನ್ನು ಅನ್ವಯಿಸುವುದು ಮಾನವನ ಸ್ಯಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಅತ್ಯಂತ ಗಂಭೀರ ಪರಿಣಾಮಗಳನ್ನು ಬೀರುತ್ತದೆ,ಏಕೆಂದರೆ ಕ್ರಿಮಿನಲ್ ಕಾನೂನನ್ನು ಅನ್ವಯಿಸಿದಾಗ ವ್ಯಕ್ತಿಯನ್ನು ಬಂಧಿಸಬಹುದು ಮತ್ತು ಜೈಲುಶಿಕ್ಷೆಯನ್ನು ವಿಧಿಸಬಹುದು ಎಂದು ಪೀಠವು ತಿಳಿಸಿತು.

ಮಧ್ಯಪ್ರದೇಶದ ದೇವಾಸ್‌ನ ಮಹಿಳೆಯೋರ್ವಳು 2022ರಲ್ಲಿ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ದೂರು ಸಲ್ಲಿಸಿದ್ದು, ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ತಮ್ಮ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದನ್ನು ಪ್ರಶ್ನಿಸಿ ಆಕೆಯ ಪತಿ,ಅತ್ತೆ-ಮಾವ ಮತ್ತು ಪತಿಯ ಸೋದರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ಇದಕ್ಕೂ ಮುನ್ನ ನೊಂದ ವ್ಯಕ್ತಿಗಳು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ ಪೀಠದ ಮುಂದೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣಗಳಲ್ಲಿ ಸಿಆರ್‌ಪಿಸಿಯ ಕಲಂ 482ರಡಿ ಅಧಿಕಾರವನ್ನು ಚಲಾಯಿಸಲು ಅನುಮತಿ ನೀಡದ ಸ್ಥಾಪಿತ ಕಾನೂನನ್ನು ಉಲ್ಲೇಖಿಸಿ ಅದು 2024,ಮೇ 9ರಂದು ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತ್ತು.

ಅರ್ಜಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಎದುರು ಮರುಸ್ಥಾಪಿಸುವಂತೆ ಮತ್ತು ಹೊಸದಾಗಿ ಇತ್ಯರ್ಥಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನವನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News