×
Ad

ಭೂಪರಿಹಾರ ಪ್ರಕರಣ | ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಕ್ಕೆ ಸಮಯ ಬೇಕಿದ್ದರಿಂದ ಮೇಲ್ಮನವಿ ಸಲ್ಲಿಸಲು ವಿಳಂಬ ಎಂದ ಇನ್ಫೋಸಿಸ್!

ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2025-09-02 22:10 IST

ಸುಪ್ರೀಂ ಕೋರ್ಟ್‌ | PC : PTI 


ಹೊಸದಿಲ್ಲಿ,ಸೆ.2: ಮೈಸೂರಿನಲ್ಲಿ ಕಂಪೆನಿಯ ಕ್ಯಾಂಪಸ್ ವಿಸ್ತರಣೆಗಾಗಿ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಯ ಮಾಲಿಕರ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ನೀಡುವುದನ್ನು ಪ್ರಶ್ನಿಸಿ ಸಾಫ್ಟ್‌ವೇರ್ ಸಂಸ್ಥೆ ಇನ್ಫೋಸಿಸ್ ಲಿ. ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ದೀಪಂಕರ ದತ್ತಾ ಮತ್ತು ಮನಮೋಹನ್ ಅವರ ಪೀಠವು ಮೇಲ್ಮನವಿ ಸಲ್ಲಿಸುವಲ್ಲಿ 160 ದಿನಗಳಿಗೂ ಹೆಚ್ಚು ವಿಳಂಬ ಮಾಡಿದ್ದನ್ನು ಕ್ಷಮಿಸಲು ನಿರಾಕರಿಸಿತು. ದಾಖಲೆಗಳನ್ನು ಕನ್ನಡದಿಂದ ಇಂಗ್ಲಿಷ್‌ ಗೆ ಅನುವಾದಿಸಲು ಸಮಯ ತೆಗೆದುಕೊಂಡಿತ್ತು ಎಂಬ ಇನ್ಫೋಸಿಸ್‌ ನ ಸಮಜಾಯಿಷಿಯನ್ನು ಅದು ಒಪ್ಪಿಕೊಳ್ಳಲಿಲ್ಲ.

ಕನ್ನಡದಿಂದ ಇಂಗ್ಲಿಷ್‌ಗೆ ದಾಖಲೆಗಳನ್ನು ಅನುವಾದಿಸಲು ಸಮಯ ಬೇಕಾಗಿತ್ತು ಎಂದು ಇನ್ಫೋಸಿಸ್ ಹೇಳುತ್ತಿದೆ? ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠವು ಹೇಳಿತು.

ಇನ್ಫೋಸಿಸ್ ಪರ ಹಿರಿಯ ವಕೀಲ ಆತ್ಮಾರಾಮ ನಾಡಕರ್ಣಿ ಅವರು ಕಾಲಮಿತಿಯ ಕಾರಣದಿಂದ ಅರ್ಜಿಯನ್ನು ವಜಾಗೊಳಿಸದಂತೆ ಪೀಠವನ್ನು ಆಗ್ರಹಿಸಿದರು. ಕಾಲಾವಕಾಶ ವಿಸ್ತರಣೆ ಕೋರಿ ಹೊಸ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡುವಂತೆ ಅವರ ಮನವಿಯನ್ನು ಪೀಠವು ನಿರಾಕರಿಸಿತು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯು 2005ರಲ್ಲಿ ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ವಿಸ್ತರಣೆಗಾಗಿ 18.04 ಎಕರೆ ಭೂಸ್ವಾಧೀನದ ಭಾಗವಾಗಿ ಅರ್ಜಿದಾರರ 1.05 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ವಿಶೇಷ ಭೂಸ್ವಾಧೀನಾಧಿಕಾರಿ ಪ್ರತಿ ಎಕರೆಗೆ 4.85 ಲ.ರೂ.ಗಳ ಪರಿಹಾರವನ್ನು ನಿಗದಿಪಡಿಸಿದ್ದರು. ಇದರಿಂದ ತೃಪ್ತರಾಗದ ಭೂಮಾಲಿಕರ ಕುಟುಂಬವು 1894ರ ಭೂಸ್ವಾಧೀನ ಕಾಯ್ದೆಯ ಕಲಂ 18ರಡಿ ಹೆಚ್ಚಿನ ಪರಿಹಾರವನ್ನು ಕೋರಿ ಮೈಸೂರು ಉಲ್ಲೇಖ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಜನವರಿ 2020ರಲ್ಲಿ ನ್ಯಾಯಾಲಯವು ಪರಿಹಾರವನ್ನು ಹೆಚ್ಚಿಸಿ ಪ್ರತಿ ಚದರ ಅಡಿಗೆ 220 ರೂ.ಗಳ ದರವನ್ನು ನಿಗದಿಗೊಳಿಸಿತ್ತು. ಜೊತೆಗೆ ಬಡ್ಡಿಯಂತಹ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಿತ್ತು.

ಇನ್ಫೋಸಿಸ್ ಇದನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಉಲ್ಲೇಖ ನ್ಯಾಯಾಲಯವು ನಿಗದಿಗೊಳಿಸಿರುವ ಪರಿಹಾರ ಕಡಿಮೆಯಾಗಿದೆ ಎಂದು ಭೂಮಾಲಿಕರು ಉಚ್ಚ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದರು.

2024,ಅ.22ರಂದು ಇನ್ಫೋಸಿಸ್‌ ನ ಮೇಲ್ಮನವಿಯನ್ನು ವಜಾಗೊಳಿಸಿದ್ದ ಉಚ್ಚ ನ್ಯಾಯಾಲಯವು, ಭೂಮಿಯು ಇನ್ಫೋಸಿಸ್‌ ನ ಹಾಲಿ ಕ್ಯಾಂಪಸ್‌ ಗೆ ಹೊಂದಿಕೊಂಡಿಯೇ ಇರುವುದರಿಂದ ಸ್ಪಷ್ಟವಾಗಿ ಕೈಗಾರಿಕಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದು ಚದರ ಅಡಿಗೆ 220 ರೂ.ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದು ತಿಳಿಸಿತ್ತು.

ಇದನ್ನು ಪ್ರಶ್ನಿಸಿ ಇನ್ಫೋಸಿಸ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತಾದರೂ ಆ ವೇಳೆಗಾಗಲೇ 160 ದಿನಗಳ ಕಾಲಮಿತಿ ಮೀರಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News