ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಆರೋಪ: ಅನಿಲ್ ಅಂಬಾನಿ, ADAGಗೆ ಮತ್ತೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್
ಅನಿಲ್ ಅಂಬಾನಿ | Photo Credit : PTI
ಹೊಸದಿಲ್ಲಿ,ಜ.23: ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ (ADAG) ಮತ್ತು ಅದರ ಸಮೂಹ ಕಂಪೆನಿಗಳು ಭಾಗಿಯಾಗಿರುವ ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಿ ದಾಖಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಂಬಾನಿ ಮತ್ತು ADAGಗೆ ಹೊಸದಾಗಿ ನೋಟಿಸ್‌ಗಳನ್ನು ಹೊರಡಿಸಿದೆ.
ಆರೋಪಿಸಲಾಗಿರುವ ವಂಚನೆ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ) ನಡೆಸುತ್ತಿರುವ ತನಿಖೆಗಳ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಹತ್ತು ದಿನಗಳಲ್ಲಿ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಸೂಚಿಸಿತು.
ಅರ್ಜಿದಾರರಾದ ಮಾಜಿ ಕೇಂದ್ರ ಕಾರ್ಯದರ್ಶಿ ಇಎಎಸ್ ಶರ್ಮಾ ಸಲ್ಲಿಸಿರುವ ಪಿಐಎಲ್‌ನ ನೋಟಿಸ್‌ಗಳನ್ನು ಅಂಬಾನಿ ಮತ್ತು ADAGಗೆ ಈಗಾಗಲೇ ಜಾರಿಗೊಳಿಸಲಾಗಿದೆ ಎನ್ನುವುದನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು ಗಮನಕ್ಕೆ ತೆಗೆದುಕೊಂಡಿತು.
ಪೀಠವು ಪಿಐಎಲ್‌ಗೆ ಸಂಬಂಧಿಸಿದಂತೆ ಕಳೆದ ವರ್ಷದ ನ.18ರಂದು ಕೇಂದ್ರ, ಸಿಬಿಐ, ಈ.ಡಿ., ಅನಿಲ್ ಅಂಬಾನಿ ಮತ್ತು ADAGಗೆ ನೋಟಿಸ್‌ಗಳನ್ನು ಹೊರಡಿಸಿತ್ತು.
ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಮತ್ತು ತಮ್ಮ ಉತ್ತರಗಳನ್ನು ಸಲ್ಲಿಸಲು ತಾನು ಅನಿಲ್ ಅಂಬಾನಿ ಮತ್ತು ADAGಗೆ ಕೊನೆಯ ಅವಕಾಶವನ್ನು ನೀಡುತ್ತಿರುವುದಾಗಿ ಪೀಠವು ಸ್ಪಷ್ಟಪಡಿಸಿತು.
ಮುಂದಿನ ವಿಚಾರಣೆಯನ್ನು ಹತ್ತು ದಿನಗಳ ಬಳಿಕ ನಿಗದಿಗೊಳಿಸಲಾಗಿದೆ.