ಸಮಾನ ನಾಗರಿಕ ಸಂಹಿತೆ ತರುವುದೇ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಏಕೈಕ ಮಾರ್ಗ: ಸುಪ್ರೀಂ ಕೋರ್ಟ್
Photo : PTI
ಹೊಸದಿಲ್ಲಿ: ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಏಕೈಕ ಮಾರ್ಗವೆಂದರೆ ಭಾರತದಾದ್ಯಂತ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಆರ್. ಮಹಾದೇವನ್ ಮತ್ತು ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ಪೀಠವು, ಮುಸ್ಲಿಮ್ ವೈಯಕ್ತಿಕ ಕಾನೂನು (ಶರಿಯತ್) ಅಡಿಯಲ್ಲಿ ಬರುವ ಉತ್ತರಾಧಿಕಾರ ಕಾನೂನುಗಳಡಿಯಲ್ಲಿ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿತ್ತು.
‘‘ಮುಸ್ಲಿಮ್ ಸಮಾಜದ ಒಂದು ದೊಡ್ಡ ಭಾಗವು ಸಮಾನ ಉತ್ತರಾಧಿಕಾರ ಹಕ್ಕುಗಳಿಂದ ವಂಚಿತವಾಗಿದೆ ಎನ್ನುವುದು ಸತ್ಯ. ಆದರೆ, ಶರಿಯಾ ಕಾನೂನಿನ ಉತ್ತರಾಧಿಕಾರ ವಿಧಿಯನ್ನು ರದ್ದುಗೊಳಿಸಿದರೆ, ಉತ್ತರಾಧಿಕಾರವು ಯಾವ ಕಾನೂನಿನ ವ್ಯಾಪ್ತಿಗೆ ಒಳಪಡಬೇಕು? ಇದಕ್ಕೆ ಉತ್ತರ ಸಮಾನ ನಾಗರಿಕ ಸಂಹಿತೆ. ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಏಕೈಕ ವಿಧಾನವೆಂದರೆ ಭಾರತದಾದ್ಯಂತ ಸಮಾನ ನಾಗರಿಕ ಸಂಹಿತೆ (ಯುಸಿಸಿ)ಯನ್ನು ತರುವುದು’’ ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನಿಗೆ ಧಾರ್ಮಿಕ ಸ್ವಾತಂತ್ರ್ಯದ ಖಾತರಿ ನೀಡುವ ಸಂವಿಧಾನದ 25ನೇ ವಿಧಿಯಡಿಯಲ್ಲಿ ರಕ್ಷಣೆಯಿಲ್ಲ ಎಂದು ಹೇಳಿದರು. ಉತ್ತರಾಧಿಕಾರವು ನಾಗರಿಕ ಹಕ್ಕಾಗಿದ್ದು, ಅದನ್ನು ಅಗತ್ಯ ಧಾರ್ಮಿಕ ವಿಧಿ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
‘‘ಶಾಯರಾ ಬಾನು ತೀರ್ಪಿನ ಬಳಿಕ, ದೇಶದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಮುಸ್ಲಿಮ್ ಪುರುಷರಷ್ಟೇ ಸಮಾನ ಹಕ್ಕುಗಳಿಲ್ಲ ಎಂದು ಹೇಳಲು ಸಾಧ್ಯವಿಲ್ಲ’’ ಎಂದು ಭೂಷಣ್ ಹೇಳಿದರು.
ಬುಡಕಟ್ಟು ಪಂಗಡಗಳು ಸೇರಿದಂತೆ ವಿವಿಧ ಸಮಾಜಗಳಲ್ಲಿ ಸಾಕಷ್ಟು ಅಸಮಾನತೆಗಳಿವೆ ಎನ್ನುವುದನ್ನು ಒಪ್ಪಿಕೊಂಡ ನ್ಯಾಯಾಲಯವು, ಅವುಗಳೆಲ್ಲವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಬಹುದೇ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
‘‘ಒಬ್ಬ ಪುರುಷನಿಗೆ ಒಂದೇ ಪತ್ನಿ’’ ಎಂಬ ನಿಯಮವನ್ನು ಎಲ್ಲಾ ಸಮುದಾಯಗಳಲ್ಲಿ ಸಮಾನವಾಗಿ ಜಾರಿಗೊಳಿಸಲಾಗುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
‘‘ಆದರೆ, ಅದರ ಅರ್ಥ ಎಲ್ಲಾ ಬಹು ಸಂಗಾತಿ ಮದುವೆಗಳನ್ನು ಅಸಾಂವಿಧಾನಿಕ ಎಂಬುದಾಗಿ ನ್ಯಾಯಾಲಯವು ಘೋಷಿಸಲು ಸಾಧ್ಯವೇ? ಹಾಗಾಗಿ, ನಿರ್ದೇಶಾತ್ಮಕ ನಿಯಮಗಳನ್ನು ಶಾಸಕಾಂಗವೇ ತರಬೇಕು. ಇದನ್ನು ಶಾಸಕಾಂಗದ ವಿವೇಚನೆಗೆ ಬಿಡುವುದು ಒಳ್ಳೆಯದು’’ ಎಂದು ನ್ಯಾ. ಬಾಗ್ಚಿ ಹೇಳಿದರು.
ಅರ್ಜಿಯಲಿ ತಿದ್ದುಪಡಿ ಮಾಡಲು ಭೂಷಣ್ ಒಪ್ಪಿಕೊಂಡ ಬಳಿಕ, ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು.