ತ್ರಿಪುರ ವಿದ್ಯಾರ್ಥಿಯ ಹತ್ಯೆ| ಹೆಮ್ಮೆಯ ಭಾರತೀಯನನ್ನು ಅಮಾನವೀಯವಾಗಿ ಹತ್ಯೆಗೈಯ್ಯಲಾಗಿದೆ: ಶಶಿ ತರೂರ್ ಪ್ರತಿಕ್ರಿಯೆ
ಶಶಿ ತರೂರ್ | Photo Credit : PTI
ಹೊಸ ದಿಲ್ಲಿ: ತ್ರಿಪುರದ ವಿದ್ಯಾರ್ಥಿಯನ್ನು ಡೆಹ್ರಾಡೂನ್ ನಲ್ಲಿ ಜನಾಂಗೀಯ ಪ್ರೇರಿತವಾಗಿ ಹತ್ಯೆಗೈದಿರುವುದನ್ನು ಖಂಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಇದು ರಾಷ್ಟ್ರೀಯ ಅವಮಾನವಾಗಿದ್ದು, ಸಮಾಜವು ತನ್ನದೇ ವೈವಿಧ್ಯತೆಯನ್ನು ಗೌರವಿಸುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತಿರುವನಂತಪುರಂ ಸಂಸದ ಶಶಿ ತರೂರ್, ಏಂಜೆಲ್ ಚಕ್ಮಾ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಕೇವಲ ದುರಂತವಲ್ಲ; ಇದು ರಾಷ್ಟ್ರೀಯ ಅವಮಾನವಾಗಿದೆ. ಯಾವುದೇ ಭಾರತೀಯನಿಗೂ ತನ್ನದೇ ನೆಲದಲ್ಲಿ ವಿದೇಶಿ ಎಂಬ ಭಾವನೆ ಮೂಡದ ರೀತಿಯ ಸಮಾಜವನ್ನು ನಾಗರಿಕರು ನಿರ್ಮಿಸಬೇಕಿದೆ” ಎಂದು ಅವರು ಕರೆ ನೀಡಿದ್ದಾರೆ.
“ತ್ರಿಪುರದ ಹೆಮ್ಮೆಯ ಭಾರತೀಯನನ್ನು ಜನಾಂಗೀಯವಾಗಿ ನಿಂದಿಸಲಾಗಿದ್ದು, ‘ಚೀನಿ’, ‘ಮೊಮೊ’ ಎಂಬ ನಿಂದನಾತ್ಮಕ ಬೈಗುಳಗಳನ್ನು ಬಳಸಿ, ಕೊನೆಗೆ ಹತ್ಯೆಗೈಯ್ಯಲಾಗಿದೆ” ಎಂದು ಅವರು ವಿಷಾದಿಸಿದ್ದಾರೆ. ಈ ಹತ್ಯೆಯು ಯಾವುದೋ ಒಂದು ಪ್ರತ್ಯೇಕ ಹಿಂಸಾಚಾರದ ಘಟನೆಯಲ್ಲ. ಬದಲಿಗೆ, ಸಮಾಜವು ತನ್ನದೇ ವೈವಿಧ್ಯತೆಯನ್ನು ಗುರುತಿಸುವಲ್ಲಿ ತೋರಿರುವ ನಿರ್ಲಕ್ಷ್ಯ, ಪೂರ್ವಗ್ರಹ ಹಾಗೂ ವೈಫಲ್ಯವಾಗಿದೆ” ಎಂದು ಹೇಳಿದ್ದಾರೆ.
24 ವರ್ಷದ ಅಂತಿಮ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ತ್ರಿಪುರ ಮೂಲದ ಏಂಜೆಲ್ ಚಕ್ಮಾ ಎಂಬ ವಿದ್ಯಾರ್ಥಿಯನ್ನು ಜನಾಂಗೀಯವಾಗಿ ನಿಂದಿಸಿದ್ದ ಆರು ಜನರ ಗುಂಪೊಂದು, ಡಿಸೆಂಬರ್ 9ರಂದು ಸೆಲಾಕುಯಿ ಮಾರುಕಟ್ಟೆಯಲ್ಲಿ ಆತ ಹಾಗೂ ಆತನ ಸಹೋದರ ಮೈಕೇಲ್ ಚಕ್ಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಏಂಜೆಲ್ ಚಕ್ಮಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಡಿಸೆಂಬರ್ 26ರಂದು ಮೃತಪಟ್ಟಿದ್ದನು. ಈ ಘಟನೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.