×
Ad

Uttar Pradesh | ವೀಲ್‌ ಚೇರ್‌ ವಿತರಣೆಯ ವೇಳೆ ಫೋಟೋ ಬಳಿಕ ಎದ್ದು ನಡೆದುಹೋದ ವೃದ್ಧ!

ಬಿಜೆಪಿ ಶಾಸಕರೊಬ್ಬರ ಕಾರ್ಯಕ್ರಮದ ವಿಡಿಯೋ ವೈರಲ್

Update: 2025-12-22 12:31 IST

Screengrab:X/@Dinehshukla

ಲಕ್ನೋ: ಉತ್ತರ ಪ್ರದೇಶದ ಲಂಬುವಾ ಕ್ಷೇತ್ರದ ಬಿಜೆಪಿ ಶಾಸಕ ಸೀತಾರಾಮ್ ವರ್ಮಾ ಅವರ ಸಮ್ಮುಖದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ವೇಳೆ ವೀಲ್‌ಚೇರ್‌ ವಿತರಣೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೈರಲ್ ದೃಶ್ಯಗಳಲ್ಲಿ ಆರೋಗ್ಯವಾಗಿರುವಂತೆ ಕಾಣುವ ವೃದ್ಧ ವ್ಯಕ್ತಿಯೊಬ್ಬರು ವೀಲ್‌ಚೇರ್‌ನಲ್ಲಿ ಕುಳಿತು ಶಾಸಕರೊಂದಿಗೆ ಛಾಯಾಚಿತ್ರ ಮತ್ತು ವೀಡಿಯೊಗಳಿಗೆ ಪೋಸ್ ನೀಡುತ್ತಿರುವುದು ಕಾಣುತ್ತದೆ. ವಿಡಿಯೋ ಚಿತ್ರಿಕರಣ ಮುಗಿದ ಬಳಿಕ ಆ ವ್ಯಕ್ತಿ ಸ್ವತಃ ಎದ್ದು ನಡೆದುಹೋಗುವ ದೃಶ್ಯಗಳು ದಾಖಲಾಗಿದ್ದು, ಕಾರ್ಯಕ್ರಮದ ಉದ್ದೇಶ ಮತ್ತು ಪ್ರಕ್ರಿಯೆ ಕುರಿತು ಅನುಮಾನಗಳು ವ್ಯಕ್ತವಾಗಿವೆ.

ಈ ಘಟನೆ ಶನಿವಾರ ಲಂಬುವಾ ಬ್ಲಾಕ್ ಆವರಣದಲ್ಲಿ ಅಂಗವಿಕಲರಿಗೆ ಸಹಾಯಕ ಸಾಧನಗಳ ವಿತರಣೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ನಡೆದಿದೆ. ಹೆಚ್ಚಿನ ಸಾಧನಗಳನ್ನು ವಿತರಿಸಿದ ನಂತರ ಶಾಸಕರು ಸ್ಥಳಕ್ಕೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದ ಕೊನೆಯಲ್ಲಿ ದಾಖಲೆಯ ಉದ್ದೇಶಕ್ಕಾಗಿ ಒಬ್ಬರನ್ನು ವೀಲ್‌ಚೇರ್‌ ನಲ್ಲಿ ಕುಳ್ಳಿರಿಸಿ ಚಿತ್ರೀಕರಣ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ವಿವಾದದ ಬಳಿಕ ಶಾಸಕ ಸೀತಾರಾಮ್ ವರ್ಮಾ ವೀಡಿಯೊ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಬಂಕೇಪುರ ಗ್ರಾಮದ ನಿವಾಸಿ ಸಂದೀಪ್ ಕುಮಾರ್ ಅವರಿಗೆ ವೀಲ್‌ಚೇರ್ ಮಂಜೂರಾಗಿದ್ದು, ಅವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ತಂದೆ ರಾಮಧಾನಿ ಅವರಿಗೆ ವೀಲ್‌ಚೇರ್ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವೈರಲ್ ವೀಡಿಯೊ ಕುರಿತು ಜಿಲ್ಲಾಡಳಿತವೂ ಪ್ರತಿಕ್ರಿಯೆ ನೀಡಿದ್ದು, ವೀಡಿಯೊದಲ್ಲಿ ಕಾಣುವ ವೀಲ್‌ಚೇರ್ ನಿಜವಾದ ಫಲಾನುಭವಿಯ ತಂದೆಗೆ ನೀಡಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಮುದಿತ್ ಶ್ರೀವಾಸ್ತವ ತಿಳಿಸಿದ್ದಾರೆ.

ಆದರೆ, ಫೋಟೋ ಮತ್ತು ವೀಡಿಯೊ ದಾಖಲೆ ವೇಳೆ ಆರೋಗ್ಯವಾಗಿರುವಂತೆ ಕಾಣುವ ವ್ಯಕ್ತಿಯನ್ನು ವೀಲ್‌ಚೇರ್‌ನಲ್ಲಿ ಕುಳ್ಳಿರಿಸಿದ್ದೇಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News