ಗಾರ್ಬಾ ಕಾರ್ಯಕ್ರಮದಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ಎಂಬ ಸಂಘ ಪರಿವಾರದ ಫರ್ಮಾನು: ಅದು ಸಂಘಟಕರ ಹಕ್ಕು ಎಂದು ಸಮರ್ಥಿಸಿಕೊಂಡ ಬಿಜೆಪಿ ನಾಯಕ
ಗಾರ್ಬಾ ಕಾರ್ಯಕ್ರಮ | PC : PTI
ಮುಂಬೈ: ನವರಾತ್ರಿಯ ಅಂಗವಾಗಿ ಆಯೋಜನೆಗೊಳ್ಳುವ ಗಾರ್ಬಾ ಕಾರ್ಯಕ್ರಮಕ್ಕೆ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ಶನಿವಾರ ಫರ್ಮಾನು ಹೊರಡಿಸಿರುವ ವಿಶ್ವ ಹಿಂದೂ ಪರಿಷತ್, ಕಾರ್ಯಕ್ರಮಕ್ಕೆ ಪ್ರವೇಶಿಸುವವರ ಗುರುತನ್ನು ಪತ್ತೆ ಹಚ್ಚಲು ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿ ಎಂದು ಸಂಘಟಕರಿಗೆ ಸೂಚಿಸಿದೆ.
ಇಂತಹ ಕಾರ್ಯಕ್ರಮಗಳು ಪೊಲೀಸರ ಅನುಮತಿಯ ಮೇರೆಗೆ ನಡೆಯುವುದರಿಂದ, ಕಾರ್ಯಕ್ರಮದ ಪ್ರವೇಶಕ್ಕೆ ಷರತ್ತು ವಿಧಿಸುವ ಅಧಿಕಾರ ಸಂಘಟಕರಿಗೆ ಇರುತ್ತದೆ ಎಂದು ಮಹಾರಾಷ್ಟ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ ಸಮರ್ಥಿಸಿಕೊಂಡಿದ್ದಾರೆ.
ಈ ನಡೆಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವರ್, ವಿಶ್ವ ಹಿಂದೂ ಪರಿಷತ್ ಸಮಾಜಕ್ಕೆ ಬೆಂಕಿ ಹಚ್ಚಲು ಬಯಸುತ್ತಿದೆ ಎಂದು ಟೀಕಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಿಲುವನ್ನು ಸಮರ್ಥಿಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ಶ್ರೀರಾಜ್ ನಾಯರ್, “ಗಾರ್ಬಾ ಕೇವಲ ನೃತ್ಯ ಮಾತ್ರವಲ್ಲ; ಬದಲಿಗೆ, ದೇವತೆಯನ್ನು ಸಂಪ್ರೀತಗೊಳಿಸಲು ನಡೆಸುವ ಒಂದು ಬಗೆಯ ಪ್ರಾರ್ಥನೆ. ಅವರು (ಮುಸ್ಲಿಮರು) ಅವರು ವಿಗ್ರಹ ದೇವರಲ್ಲಿ ನಂಬಿಕೆ ಹೊಂದಿಲ್ಲ. ಹೀಗಾಗಿ, ಆಚರಣೆಗಳಲ್ಲಿ ನಂಬಿಕೆ ಇರುವವರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಬೇಕು” ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ ನವರಾತ್ರಿ ಬಹಳ ಪವಿತ್ರ ಹಬ್ಬವಾಗಿದ್ದು, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ.