ರಾತ್ರಿ ಮಲಗುವಾಗ ಇಯರ್ ಫೋನ್ ಬಳಸ್ತೀರಾ? ಒಂದ್ನಿಮಿಷ ಇಲ್ಲಿ ಕೇಳಿ...
Photo Credit : chatgpt
ಪ್ರತಿ ರಾತ್ರಿ ಮಲಗುವಾಗ ಇಯರ್ ಪ್ಲಗ್ ಬಳಸುವುದು ಅಥವಾ ದೀರ್ಘಕಾಲ ಇಯರ್‌ಫೋನ್ ಬಳಸುವುದು ಆರೋಗ್ಯಕರವೇ?
ಅನೇಕ ಮಂದಿಗೆ ಇಯರ್ ಪ್ಲಗ್‌ಗಳು ಪಕ್ಕದಲ್ಲಿ ಮಲಗಿರುವವರ ಗೊರಕೆ, ಸಂಚಾರ ಶಬ್ದ ಅಥವಾ ನಿದ್ರೆಯ ಮೇಲೆ ಪರಿಣಾಮ ಬೀರುವ ಇತರ ಅಡಚಣೆಗಳನ್ನು ತಡೆಯುವ ಸರಳ ಮಾರ್ಗವಾಗಿರುತ್ತದೆ. ಅದೇ ರೀತಿ ಇಯರ್ ಫೋನ್‌ಗಳು ಸಂಗೀತ ಕೇಳುವುದು ಅಥವಾ ವೃತ್ತಿಪರ ಕೆಲಸಕ್ಕೆ ಅತಿ ಅಗತ್ಯದ ಸಾಧನವಾಗಿರುತ್ತವೆ. ಆದರೆ ನೀವು ಪ್ರತಿ ರಾತ್ರಿ ಮಲಗುವಾಗ ಇಯರ್ ಪ್ಲಗ್ ಬಳಸುವುದು ಅಥವಾ ದೀರ್ಘಕಾಲ ಇಯರ್‌ಫೋನ್ ಬಳಸುವುದು ಆರೋಗ್ಯಕರವೆ?
ಇವುಗಳನ್ನು ನಿತ್ಯವೂ ಬಳಸುವ ನಾವು ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಆಲೋಚಿಸುವುದಿಲ್ಲ. ತಾತ್ಕಾಲಿಕ ನೆಮ್ಮದಿ ಅಥವಾ ಅಗತ್ಯದ ಬಗ್ಗೆ ಆಲೋಚಿಸಿ ಬಳಸುತ್ತೇವೆ. ಈ ಬಗ್ಗೆ ‘ವಾರ್ತಾ ಭಾರತಿ’ಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ENT ತಜ್ಞರು ಮತ್ತು ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಡಾ ಚೈತನ್ಯ ವದ್ವ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಯರ್ ಪ್ಲಗ್ / ಇಯರ್ ಫೋನ್ ನಿತ್ಯ ಬಳಕೆ ಉತ್ತಮವೆ?
ಇಯರ್ ಪ್ಲಗ್, ಇಯರ್ ಪಾಡ್ಸ್ ಮತ್ತು ಇಯರ್ ಫೋನ್ಸ್ ವಿಭಿನ್ನವಾಗಿ ಕಿವಿಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಇಯರ್ ಪ್ಲಗ್ ಅನ್ನು ಹೊರಗಡೆಯಿಂದ ಬರುವ ಶಬ್ದಗಳನ್ನು ಬ್ಲಾಕ್ ಮಾಡಲು ಬಳಸಲಾಗುತ್ತದೆ. ಇಯರ್ ಫೋನ್‌ಗಳನ್ನು ನಾವು ಶಬ್ದಗಳನ್ನು ಕೇಳಲು ಬಳಸುತ್ತೇವೆ. ಸಂಗೀತ ಅಥವಾ ಇತರ ಶಬ್ದ, ಪಾಡ್‌ಕಾಸ್ಟ್ ಕೇಳಲು ಶಬ್ದದ ತೀವ್ರತೆ (ಸೌಂಡ್ ಇಂಟೆನ್ಸಿಟಿ) ಹೆಚ್ಚು ಇರುವುದನ್ನು ಕೇಳಲು ಇಯರ್ ಫೋನ್‌ಗಳನ್ನು ಬಳಸುತ್ತೇವೆ. ಇಯರ್ ಪ್ಲಗ್ ಮತ್ತು ಇಯರ್ ಫೋನ್ ಎರಡರಲ್ಲೂ ಒಂದೇ ರೀತಿಯ ಅಡ್ಡ ಪರಿಣಾಮಗಳು (ಸೈಡ್ ಇಫೆಕ್ಟ್ಸ್) ಇರುತ್ತವೆ. ಹೀಗಾಗಿ ಅವುಗಳನ್ನು ದೀರ್ಘಕಾಲ ಬಳಸುವುದು ಸೂಕ್ತವಲ್ಲ.
ರಾತ್ರಿ ಮಲಗುವಾಗ ಇಯರ್ ಪ್ಲಗ್ ಬಳಸಬಹುದೆ?
ಇಯರ್ ಪ್ಲಗ್ ಆಗಲಿ ಇಯರ್ ಫೋನ್‌ಗಳಾಗಲಿ ನಾವು ರಾತ್ರಿ ಮಲಗುವಾಗ ಬಳಸಬಾರದು. ನಿರಂತರವಾಗಿ ದೀರ್ಘಕಾಲೀನ ಬಳಸಿಕೊಂಡು ಮಲಗುವುದರಲ್ಲಿ ಬಹಳ ಅನನುಕೂಲತೆಗಳು ಇವೆ.
ಮೊದಲನೆಯದಾಗಿ ಈಗಾಗಲೇ ನಿಮ್ಮ ಇಯರ್ ಕೆನಾಲ್ ಅಲ್ಲಿ ವ್ಯಾಕ್ಸ್ ಏನಾದರೂ ಇದ್ದಲ್ಲಿ, ಅದನ್ನು ಪುಷ್ ಮಾಡುತ್ತದೆ. ಇಯರ್ ಪ್ಲಗ್/ಇಯರ್ ಪೋನ್ ಅನ್ನು ಕಿವಿಯೊಳಗೆ ಇಟ್ಟಾಗ ವ್ಯಾಕ್ಸ್ ಅನ್ನು ಕಿವಿಯ ಒಳಗಡೆ ಇಯರ್ ಡ್ರಮ್ ಕಡೆಗೆ ಇನ್ನಷ್ಟು ದೂಡಿಬಿಡುತ್ತದೆ.
ಎರಡನೆಯದಾಗಿ ತೇವಾಂಶವನ್ನು (ಮಾಯಿಶ್ಚರ್) ಟ್ರ್ಯಾಪ್ (ಸಿಲುಕಿಸುವುದು) ಮಾಡಿ ಬಿಡುತ್ತದೆ. ಹೀಗೆ ಟ್ರ್ಯಾಪ್ ಆದಾಗ ತೇವ ಜಾಸ್ತಿಯಾಗುತ್ತದೆ ಮತ್ತು ಹಾಗಾದಾಗ ಇನ್‌ಫೆಕ್ಷನ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಇಯರ್ ಪ್ಲಗ್ ಇಯರ್ ಕೆನಾಲ್‌ಗೆ ಹೋಗಿ ದೃಢವಾಗಿ ಕೂತು ಬಿಡುವ ಕಾರಣದಿಂದ ಗಾಳಿಯಾಡುವುದಿಲ್ಲ. ಹೀಗಾಗಿ ಮಾಯಿಶ್ಚರ್ ಇಯರ್ ಕೆನಾಲ್‌ನಲ್ಲಿ ಟ್ರ್ಯಾಪ್ ಆಗುತ್ತದೆ. ಆಗ ಸೋಂಕುಗಳು (ಇನ್‌ಫೆಕ್ಷನ್ಸ್) ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ತುಂಬಾ ಫಿಟ್ ಆಗಿ ನಾವು ಪ್ಲಗ್ ಮಾಡಿದ್ದರೆ ಸುತ್ತಮುತ್ತಲಿನ ಚರ್ಮಕ್ಕೆ ಪ್ರೆಶರ್ (ಒತ್ತಡ) ಬಿದ್ದಾಗ ನೋವಾಗುವ ಸಾಧ್ಯತೆ ಇರುತ್ತದೆ. ಚರ್ಮಕ್ಕೆ ನೋವಾದರೆ ಅಥವಾ ಚರ್ಮಕ್ಕೆ ಬಿಗಿಯಾಗಿ ಇಯರ್ ಪ್ಲಗ್ ಕೂತಾಗ ಸ್ಕಿನ್ ಇರಿಟೇಶನ್ (ಚರ್ಮಕ್ಕೆ ಕಿರಿಕಿರಿ) ಆಗುವ ಅನುಭವವಾಗುತ್ತದೆ. ಅದರಿಂದ ಇಯರ್ ಕೆನಾಲ್ ಸ್ಕಿನ್ ಇನ್‌ಫೆಕ್ಷನ್ಸ್ ಆಗುವ ಸಾಧ್ಯತೆ ಇರುತ್ತದೆ. ಈ ಅಡ್ಡಪರಿಣಾಮ ಇಯರ್‌ಪ್ಲಗ್ ಮತ್ತು ಇಯರ್ ಫೋನ್ ಎರಡಕ್ಕೂ ಆಗುವಂತಹ ತೊಂದರೆಯಾಗಿರುತ್ತದೆ.
ಇಯರ್ ಫೋನ್‌ಗಳಿಂದ ಅಧಿಕ ತೀವ್ರತೆಯ ಶಬ್ದದ ಸಮಸ್ಯೆ
ಇಯರ್ ಫೋನ್‌ಗಳನ್ನು ನಾವು ಪ್ರತ್ಯೇಕವಾಗಿ ಗಮನಿಸಿದಲ್ಲಿ ಮೇಲೆ ಹೇಳಿರುವುದರ ಜೊತೆಗೆ ಮತ್ತೊಂದು ಅನನುಕೂಲತೆ ಇದೆ. ಇಯರ್‌ಫೋನ್‌ಗಳು ಶಬ್ದವನ್ನು ಬಹಳ ಹತ್ತಿರದಿಂದ ಕೇಳಲು ಸಹಾಯ ಮಾಡುತ್ತವೆ. ಅದೇ ಕಾರಣದಿಂದ ಶಬ್ದ ನೇರವಾಗಿ ಸಮೀಪದ ಅಂತರದಿಂದ ಇಯರ್ ಡ್ರಮ್‌ಗೆ ಹೋಗುತ್ತಿರುತ್ತದೆ. ಆಗ ಹೈ ಇಂಟೆನ್ಸಿಟಿ (ಅಧಿಕ ತೀವ್ರತೆಯ) ಶಬ್ದ ಹಾದು ಹೋಗುತ್ತದೆ. ಹೀಗೆ ಇಯರ್ ಡ್ರಮ್‌ಗೆ ನಿರಂತರವಾಗಿ ಹೈ ಇಂಟೆನ್ಸಿಟಿ ಶಬ್ದ ಬರುತ್ತಿದ್ದಲ್ಲಿ, ಇಯರ್ ಕೆನಾಲ್ ಒಳಗೆ, ಇಯರ್ ಡ್ರಮ್ ಹಿಂದುಗಡೆ ಇರುವ ಕೆಲವು ಸ್ನಾಯುಗಳು, ಮೂಳೆಗಳಿಗೆ ಸಮಸ್ಯೆಯಾಗಬಹುದು. ಜೊತೆಗೆ ಇಯರ್ ಡ್ರಮ್ ಕೂಡ ಹೈ ಇಂಟೆನ್ಸಿಟಿ ಶಬ್ದದಿಂದಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಕಾರಣದಿಂದ ಫೆಟಿಗೇಬಿಲಿಟಿ (Fatigability) ಪ್ರಾರಂಭವಾಗುತ್ತದೆ. ಹೀಗೆ ಫೆಟಿಗೇಬಿಲಿಟಿ ಪ್ರಾರಂಭವಾದಾಗ ನೋವಾಗುತ್ತದೆ. ನಿರಂತರವಾಗಿ ದೀರ್ಘ ಅವಧಿ ಬಳಸಿದಲ್ಲಿ ಹಿಯರಿಂಗ್ ಲಾಸ್ (ಶ್ರವಣ ನಷ್ಟ) ಸಮಸ್ಯೆ ಕಂಡುಬರುತ್ತದೆ. ಇಯರ್‌ಫೋನ್ ಬಳಸುವುದರಿಂದ ಆಗುವ ಹೆಚ್ಚುವರಿ ಅನನುಕೂಲತೆ ಇದಾಗಿರುತ್ತದೆ.
ಗೊರಕೆ, ಟ್ರಾಫಿಕ್ ಶಬ್ದಗಳಿಂದ ತಪ್ಪಿಸಿಕೊಳ್ಳಲು ಇಯರ್ ಪ್ಲಗ್ ಬಳಸಬಹುದೆ?
ಬಳಸಬಹುದು. ಆದರೆ ಗೊರಕೆಗೆ ಪ್ರತಿದಿನ ಬಳಸಿದರೆ ಇಯರ್ ಕೆನಾಲ್‌ಗೆ ಸಮಸ್ಯೆಯಾಗಬಹುದು. ಮೇಲೆ ಹೇಳಲಾಗಿರುವ ಎಲ್ಲಾ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಟ್ರಾಫಿಕ್ ಅಥವಾ ಹೊರಗಿನ ಧ್ವನಿ ತಪ್ಪಿಸಲು ಇಯರ್ ಪ್ಲಗ್ ಅನ್ನು ತಾತ್ಕಾಲಿಕವಾಗಿ ಬಳಸಿದರೂ ಅದರದ್ದೇ ಆದ ಅನನುಕೂಲತೆ ಇರುವ ಕಾರಣ ಶಿಫಾರಸು ಮಾಡಲಾಗುವುದಿಲ್ಲ. ನಿರಂತರವಾಗಿ ಸ್ನಗ್ಲೀಫಿಟ್ (Snugly fit) ಆಗಿ ಇಯರ್ ಪ್ಲಗ್ ಹಾಕಿಕೊಂಡರೆ ಹೊರಗಡೆಯ ಯಾವ ಶಬ್ದವೂ ಬರುವುದಿಲ್ಲ. ಮಗು ಏನಾದರೂ ಪಕ್ಕದಲ್ಲಿದ್ದರೆ, ಅಲಾರಂ ಹೊಡೆಯುತ್ತಿದ್ದರೂ ಕೇಳಿಸುವುದಿಲ್ಲ. ಈ ಕಾರಣದಿಂದಲೂ ಶಿಫಾರಸು ಮಾಡುವುದಿಲ್ಲ.
ಇಯರ್ ಪ್ಲಗ್ ಬಳಸುವಾಗ ಮುಖ್ಯವಾಗಿ ಸುತ್ತಮುತ್ತಲಿನ ಧ್ವನಿ ಯಾವುದೂ ತಿಳಿಯುವುದಿಲ್ಲ. ಇಯರ್ ಪ್ಲಗ್ ರಾತ್ರಿ ಸಮಯ ನಿರಂತರವಾಗಿ ಬಳಸುವಾಗ ಯಾವುದೇ ಶಬ್ದ ಕೇಳದೆ ಇರುವುದು ಬಹಳ ಅಪಾಯಕಾರಿ. ಹೀಗಾಗಿ ಸಾಮಾನ್ಯವಾಗಿ ಯಾವುದೇ ರೀತಿಯ ಇಯರ್ ಪ್ಲಗ್ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ.
ದೀರ್ಘ ಸಮಯ ಇಯರ್ ಫೋನ್/ ಹೆಡ್‌ಫೋನ್‌ಗಳನ್ನು ಬಳಸಬಹುದೆ?
ಇಯರ್ ಫೋನ್‌ಗಳಲ್ಲಿ ವೈವಿಧ್ಯತೆಯಿದೆ. ವೈರ್ಡ್ ಇಯರ್ ಫೋನ್‌ಗಳಿವೆ, ಬ್ಲೂಟೂತ್ ಇಯರ್ ಪಾಡ್‌ಗಳಿವೆ (ವೈರ್‌ಲೆಸ್), ಹೆಡ್‌ಫೋನ್‌ಗಳಿವೆ. ಹೆಡ್‌ಫೋನ್‌ಗಳಲ್ಲೂ ಓವರ್ ದಿ ಇಯರ್ ಹೆಡ್‌ಫೋನ್ ಮತ್ತು ಬ್ಯಾಕ್ ದಿ ಇಯರ್ ಹೆಡ್‌ಫೋನ್ ಅಂತ ಬರುತ್ತವೆ. ಬೋನ್ ಕಂಡಕ್ಷನ್ ಹೆಡ್‌ಫೋನ್‌ಗಳೂ ಇವೆ. ಹೀಗಾಗಿ ಇಯರ್ ಫೋನ್, ಇಯರ್ ಪಾಡ್ ಮತ್ತು ಹೆಡ್‌ಫೋನ್‌ಗಳಿಗೆ ಹೋಲಿಸಿದರೆ ಹೆಡ್‌ಫೋನ್‌ಗಳು ಉತ್ತಮ.
ಕಚೇರಿಯಲ್ಲಿ ದೀರ್ಘ ಕಾಲದವರೆಗೆ ಇಯರ್ ಫೋನ್ ಅಥವಾ ಹೆಡ್‌ಫೋನ್‌ಗಳನ್ನು ಬಳಸುವವರ ಬಗ್ಗೆ, ಅಂದರೆ ಆಫೀಸ್ ಕಾಲ್ಸ್, ಮೀಟಿಂಗ್, ಲೆಕ್ಚರಿಂಗ್, ಗಾಯನ ಹೀಗೆ ದೀರ್ಘಕಾಲ ಹೆಡ್‌ಫೋನ್ ಬಳಸುವವರ ಬಗ್ಗೆ ಹೇಳುವುದಾದಲ್ಲಿ, ಸಾಮಾನ್ಯವಾಗಿ ಇಯರ್‌ಫೋನ್ ಮತ್ತು ಇಯರ್ ಪಾಡ್‌ಗಳಿಗೆ ಹೋಲಿಸಿದಲ್ಲಿ ಹೆಡ್‌ಫೋನ್ ಉತ್ತಮ.
ಏಕೆಂದರೆ ಹೆಡ್‌ಫೋನ್‌ಗಳ ಸೌಂಡ್ ರಿಸೀವರ್ ಅಥವಾ ಸೌಂಡ್ ಪರ್ಸೀವರ್ ಇಯರ್ ಕೆನಾಲ್‌ಗೆ ಹೋಗಿ ಕೂರುವುದಿಲ್ಲ. ಅದು ಪಿನ್ನಾ (Pinna) ಮೇಲೆ ಅಂದರೆ, ಕಿವಿಯ ಹೊರಗಡೆ ಭಾಗದಲ್ಲಿ ಕೂರುತ್ತದೆ. ಹೀಗಾಗಿ ಕೆನಾಲ್ ಒಳಗೆ ಯಾವುದೇ ಪ್ರೆಶರ್ ಇರುವುದಿಲ್ಲ.
ಅದರಲ್ಲೂ ಮೂರು ವಿಧಗಳಿವೆ. ಓವರ್ ದಿ ಇಯರ್, ಆನ್ ದಿ ಇಯರ್ ಮತ್ತು ಬೋನ್ ಕಂಡಕ್ಷನ್ ಮೊದಲಾಗಿ ಇವೆ. ಓವರ್ ದಿ ಇಯರ್ ಅಂದರೆ ಪಿನ್ನಾ ಮೇಲೆ ಹೆಡ್ ಫೋನ್ ಇರುತ್ತದೆ. ಇನ್ನೊಂದು ಆನ್ ದಿ ಇಯರ್ ಎಂದರೆ ಕಿವಿಯ ಹಿಂಭಾಗದ ಮೂಳೆ ಅಥವಾ ಕೂದಲಿನ ಮೇಲೆ ನಿಲ್ಲುತ್ತದೆ. ಬೋನ್ ಕಂಡಕ್ಷನ್ ಎಂದರೆ ಎರಡು ತುದಿಗಳು ಇರುತ್ತವೆ. ಒಂದು ಮೂಳೆ ಮೇಲೆ ಅಟ್ಯಾಚ್ ಮಾಡುವುದು. ಅದು ಕನೆಕ್ಟ್ ಆಗಿ ಕಿವಿಯ ಮುಂದೆ ಟ್ರೇಗಸ್ (Tragus) ಮುಂದೆ ಫಿಕ್ಸ್ ಮಾಡುವುದು. ಈ ಮೂರು ವಿಧದಲ್ಲೂ ಯಾವುದೂ ಕಿವಿಯ ಒಳಗೆ ಹೋಗದೆ ಕಿವಿಯ ಹೊರಗಡೆಯೇ ಇರುತ್ತದೆ. ಆದರೆ ಈ ಮೂರರಲ್ಲೂ ಬೋನ್ ಕಂಡಕ್ಷನ್ ಉತ್ತಮ. ಬೋನ್ ಕಂಡಕ್ಷನ್ ಲಭ್ಯವಿಲ್ಲದೆ ಇದ್ದಲ್ಲಿ ಓವರ್ ದಿ ಇಯರ್ ಮತ್ತು ಆನ್ ದಿ ಇಯರ್ ಬಳಸಬಹುದು. ಇಯರ್ ಫೋನ್ ಮತ್ತು ಇಯರ್ ಪಾಡ್‌ಗೆ ಹೋಲಿಸಿದರೆ ಇವು ಉತ್ತಮ.
ಇಯರ್ ಫೋನ್‌ಗಳಲ್ಲಿ ವೈರ್ಡ್ ಇಯರ್ ಫೋನ್ ಬಳಕೆ ಉತ್ತಮವೆ?
ಇಯರ್ ಫೋನ್‌ಗಳ ಬಗ್ಗೆ ಹೇಳುವುದಾದರೆ, ವಯರ್‌ಲೆಸ್ ಮತ್ತು ವೈರ್ಡ್ ಅಲ್ಲಿ ಯಾವುದು ಉತ್ತಮ ಎಂದು ಕೇಳಿದರೆ ನಾನು ವೈರ್ಡ್ ಶಿಫಾರಸು ಮಾಡುತ್ತೇನೆ. ಸಾಮಾನ್ಯವಾಗಿ ವಯರ್‌ಲೆಸ್ ಅಥವಾ ಇಯರ್ ಪಾಡ್‌ಗಳಲ್ಲಿ ಹೈ ಎಮಿಷನ್ಸ್ ಇರುತ್ತದೆ. ಅಂದರೆ ಸೌಂಡ್ ಟ್ರಾನ್ಸ್‌ಮಿಶನ್ (ಶಬ್ದ ವರ್ಗಾವಣೆ) ಅತ್ಯಧಿಕ ಇರುತ್ತದೆ. ಇದು ಇಯರ್ ಡರ್ಮ್ ಮತ್ತು ಇಯರ್ ನರ್ವ್ ಗೂ ಅಪಾಯಕಾರಿ. ಅಂದ್ರೆ ಹೇರ್ ಸೆಲ್ ಗಳಿಗೂ ಹಾನಿಕರ.
ಕಿವಿಯ ಒಳಗಡೆ ಹಿಯರಿಂಗ್ ನರ್ವ್ (Auditory nerve) ಇರುತ್ತದೆ. ಅದರ ಮೇಲೆ ಸಣ್ಣ ಕೋಶಗಳು (ಸೆಲ್) ಇರುತ್ತವೆ. ಅವು ನಮಗೆ ಕೇಳಲು ನೆರವಾಗುತ್ತವೆ. ಹೈ ಫ್ರೀಕ್ವೆನ್ಸಿ ಶಬ್ದದ ಅಲೆಗಳನ್ನು ಸ್ವೀಕರಿಸುವಾಗ ಎಲ್ಲಾ ಹೇರ್ ಸೆಲ್‌ಗಳಿಗೂ ಹಾನಿಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಬ್ಲೂಟೂತ್ ಇಯರ್ ಪಾಡ್ ಹಾನಿಕರವೇಕೆ ಎಂದರೆ ಅದರಲ್ಲಿ ಅತ್ಯಧಿಕ ಎಮಿಷನ್ಸ್ ಇರುತ್ತವೆ. ವೈರ್ಡ್ ಇಯರ್‌ಫೋನ್‌ಗಳಲ್ಲೂ ಎಮಿಷನ್ಸ್ ಇರುತ್ತವೆ. ಆದರೆ ಬ್ಲೂಟೂತ್‌ಗೆ ಹೋಲಿಸಿದಲ್ಲಿ ವೈರ್ಡ್ ಇಯರ್ಫೋನ್‌ನಲ್ಲಿ ಕಡಿಮೆ ಎಮಿಷನ್ಸ್ ಇರುತ್ತದೆ.
ಆದರೆ ಬ್ಲೂಟೂತ್ ಇಯರ್ ಫೋನ್ ಮತ್ತು ವೈರ್ಡ್ ಇಯರ್ ಫೋನ್ ಎರಡರಲ್ಲೂ ಇರುವ ಅನನುಕೂಲತೆ ಏನೆಂದರೆ ನಾವು ಕೇಳುವ ಶಬ್ದದ ಅಲೆಗಳು ಕಿವಿಗೆ ಸಮೀಪವಾಗಿರುತ್ತವೆ. ಹೆಡ್‌ಫೋನ್‌ಗಳಲ್ಲಿ ಇಯರ್ ಕೆನಾಲ್ ಒಳಗೆ ಇರುವುದಿಲ್ಲ, ಹೊರಗೆ ಇರುತ್ತವೆ ಎನ್ನುವುದೇ ಅನುಕೂಲಕತೆಯಾಗಿರುತ್ತದೆ. ಎರಡನೆಯದಾಗಿ ನಾವು ಸ್ವೀಕರಿಸುವ ಶಬ್ದಗಳು ಇಯರ್ ಫೋನ್‌ಗೆ ಹೋಲಿಸಿದರೆ ಸ್ವಲ್ಪ ಹೊರಗಿನಿಂದ ಬರುತ್ತವೆ.
ಅನಿವಾರ್ಯವಾದರೆ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್ ಉತ್ತಮ ಆಯ್ಕೆ
ಹೆಡ್‌ಫೋನ್‌ಗಳಲ್ಲೂ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್ ಬರುತ್ತದೆ. ಅವುಗಳಲ್ಲಿ ಎರಡು ಅನುಕೂಲತೆಗಳಿವೆ. ಮೊದಲನೆಯದಾಗಿ ಕಿವಿಯಿಂದ ಹೊರಗೆ ಕೂರುವ ಕಾರಣ ಇಯರ್ ಕೆನಾಲ್ ಅನನುಕೂಲತೆ ಅದರಲ್ಲಿ ಇರುವುದಿಲ್ಲ. ಎರಡನೆಯದಾಗಿ ಹೊರಗಿನ ಶಬ್ದಗಳನ್ನು ತೆಗೆದು ಹಾಕುತ್ತದೆ. ಹೀಗಾಗಿ ವೈಯರ್ಲೆಸ್ ಇಯರ್ ಫೋನ್ಸ್, ವೈರ್ಡ್ ಇಯರ್ ಫೋನ್ಸ್ ಮತ್ತು ಹೆಡ್ ಫೋನ್‌ಗಳಲ್ಲಿ ಯಾವುದು ಉತ್ತಮ ಎಂದು ಕೇಳಿದರೆ, ನಾಯ್ಸ್ ಕ್ಯಾನ್ಸಲೇಶನ್ ಇರುವ ಹೆಡ್‌ಫೋನ್‌ಗಳು ಉತ್ತಮ.