Image Source: Unsplash

45 ನಿಮಿಷ ವ್ಯಾಯಾಮವೆಂದರೆ ಬೇಸರವೆ? ನೃತ್ಯದಿಂದ ಈಜು–ನಡಿಗೆ, ಕ್ರೀಡೆಯವರೆಗೆ ದೈನಂದಿನ ಚಟುವಟಿಕೆಗಳಿಂದಲೇ ಕ್ಯಾಲರಿ ಕರಗಿಸಬಹುದು ಎನ್ನುವುದು ನಿಮಗೆ ಗೊತ್ತೆ? ತಜ್ಞರು ಹೇಳುವುದೇನು?

ಆರೋಗ್ಯವಾಗಿರಲು ನೀವು ಕಡ್ಡಾಯವಾಗಿ ಒಂದೇ ಬಾರಿಗೆ 45 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕಿಲ್ಲ. ನಿಯಮಿತ ವ್ಯಾಯಾಮಕ್ಕೆ ಸಮಯ ಮೀಸಲಿಡುವುದು ಕಷ್ಟವಾದರೆ, ಕ್ಯಾಲರಿಗಳನ್ನು ಕರಗಿಸಲು ಸರಳ ಮಾರ್ಗವಾಗಿ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನ ಚಲನವಲನವನ್ನು ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ಮೆಟ್ಟಿಲುಗಳನ್ನು ಬಳಸುವುದು, ಫೋನ್ ಕರೆಯಲ್ಲಿದ್ದಾಗ ನಡೆಯುವುದು ಅಥವಾ ನಿಮ್ಮ ನೆಚ್ಚಿನ ಸಂಗೀತಕ್ಕೆ 20–30 ನಿಮಿಷ ನೃತ್ಯ ಮಾಡುವುದು ಮೊದಲಾದ ಪರ್ಯಾಯಗಳನ್ನು ಬಳಸಬಹುದು.

ಎನಿಟೈಮ್ ಫಿಟ್ನೆಸ್ನ ಹಿರಿಯ ತರಬೇತುದಾರ ಲವ್ ಕುಮಾರ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಸಣ್ಣ ಚಲನವಲನಗಳು ವ್ಯಾಯಾಮದಂತೆ ಭಾಸವಾಗದೆ ಇರಬಹುದು. ಆದರೆ ಅವುಗಳನ್ನು ನಿರಂತರವಾಗಿ ಮಾಡಿದಾಗ ಗಮನಾರ್ಹ ಫಲಿತಾಂಶ ನೀಡುತ್ತವೆ. ಮುಖ್ಯ ವಿಷಯವೆಂದರೆ, ನಿಜವಾಗಿಯೂ ಆನಂದಿಸುವ ಚಟುವಟಿಕೆಗಳನ್ನು ಕಂಡುಕೊಂಡಲ್ಲಿ ಅವು ದೈನಂದಿನ ಕೆಲಸಗಳ ಪಟ್ಟಿಯಲ್ಲಿನ ಮತ್ತೊಂದು ಹೊರೆಯಾಗಿ ಪರಿಣಮಿಸುವುದಿಲ್ಲ.

ವ್ಯಾಯಾಮದಂತೆ ಭಾಸವಾಗದೆ ಇದ್ದರೂ ಕ್ಯಾಲರಿಗಳನ್ನು ಕರಗಿಸುವ ಬಗ್ಗೆ ನೋಯ್ಡಾ ಇಂಟರ್ನ್ಯಾಷನಲ್ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕಿ ಲೆಫ್ಟಿನೆಂಟ್ ಪ್ರತಿಮಾ ಪಾಂಡೆ ಮತ್ತು ಮಾಹಿಮ್ನ ಪಿಡಿ ಹಿಂದೂಜಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥೆ ಡಾ. ಶಿವಾಂಗಿ ಬೋರ್ಕರ್ ಕೆಲವು ಚಟುವಟಿಕೆಗಳನ್ನು ಸೂಚಿಸಿದ್ದಾರೆ. ಅವುಗಳೆಂದರೆ,

►ನೃತ್ಯ

ನೃತ್ಯವು ಅತ್ಯುತ್ತಮ ವ್ಯಾಯಾಮ ಪ್ರಕಾರ. ನೆಚ್ಚಿನ ಹಾಡುಗಳನ್ನು ಕೇಳುತ್ತಲೇ ಕ್ಯಾಲರಿ ಕರಗಿಸುವ ವಿಧಾನವಾಗಿರುತ್ತದೆ. ತೀವ್ರತೆಯನ್ನು ಅವಲಂಬಿಸಿ, ನೃತ್ಯವು ದೇಹದ ಸಮತೋಲನ ಮತ್ತು ಹೊಂದಾಣಿಕೆಯನ್ನು ಸುಧಾರಿಸುವ ಜೊತೆಗೆ ಮಧ್ಯಮದಿಂದ ಹೆಚ್ಚಿನ ಮಟ್ಟದ ಏರೋಬಿಕ್ ವ್ಯಾಯಾಮವನ್ನು ಒದಗಿಸುತ್ತದೆ. ಆರಂಭಿಕರಿಗೆ 20–30 ನಿಮಿಷಗಳ ನಿರಂತರ ನೃತ್ಯ ದೈಹಿಕ ಚಟುವಟಿಕೆಗೆ ಸಕಾರಾತ್ಮಕ ಕೊಡುಗೆ ನೀಡಬಲ್ಲದು.

►ಸಕ್ರಿಯ ಕ್ರೀಡೆಗಳು

ಬೈಕಿಂಗ್, ಈಜು, ಬ್ಯಾಡ್ಮಿಂಟನ್ ಮತ್ತು ಫ್ರಿಸ್ಬಿಯಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಜಿಮ್ನಲ್ಲಿ ಗಂಟೆಗಟ್ಟಲೆ ಕಳೆಯುವುದಕ್ಕೆ ಪರ್ಯಾಯವಾಗಲಿದೆ. ಇವು ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತವೆ. ಅಲ್ಲದೆ, ದೈಹಿಕ ಚಟುವಟಿಕೆಯನ್ನು ಆನಂದದಾಯಕವಾಗಿಸಲು ಉತ್ತಮ ಮಾರ್ಗವಾಗಿರುತ್ತವೆ. ಜನರು ವ್ಯಾಯಾಮದಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ.

►ಈಜು ಮತ್ತು ನಡಿಗೆ

ಈಜು ಸಂಪೂರ್ಣ ದೇಹದ ಚಟುವಟಿಕೆಯಾಗಿದ್ದು, ಅನೇಕ ಸ್ನಾಯು ಗುಂಪುಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಹಾಗೆಯೇ, ಹೈಕಿಂಗ್ (ಚಾರಣ) ಸಮಯದಲ್ಲಿ ಇಳಿಜಾರು ಅಥವಾ ಏರುಪೇರಾದ ಭೂಪ್ರದೇಶದಲ್ಲಿ ನಡೆಯುವುದು ಪ್ರಯೋಜನಕಾರಿ. ಈ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನಾತ್ಮಕ ವಿಹಾರಗಳಂತೆ ಆನಂದಿಸಲಾಗುವುದರಿಂದ, ನಿರ್ದಿಷ್ಟ ವ್ಯಾಯಾಮದ ದಿನಚರಿ ಪಾಲಿಸುತ್ತಿದ್ದೇವೆ ಎಂಬ ಭಾವನೆಯಿಲ್ಲದೆ ಸಕ್ರಿಯವಾಗಿರಲು ಸಹಾಯ ಮಾಡುತ್ತವೆ.

►ಮನರಂಜನಾ ಕ್ರೀಡೆಗಳು

ಬ್ಯಾಡ್ಮಿಂಟನ್, ಫುಟ್ಬಾಲ್, ಪಿಕ್ಲ್ಬಾಲ್ ಅಥವಾ ಬ್ಯಾಸ್ಕೆಟ್ಬಾಲ್ನಂತಹ ಕ್ರೀಡೆಗಳು ಸ್ವಾಭಾವಿಕವಾಗಿ ನಿರಂತರ ಚಲನೆಯನ್ನು ತೀವ್ರತೆಯ ಚಲನೆಗಳೊಂದಿಗೆ ಸಂಯೋಜಿಸುತ್ತವೆ. ಸೆಟ್ಗಳನ್ನು ಎಣಿಸದೆ ಆಡಿದಲ್ಲಿ ಸಕ್ರಿಯವಾಗಿರಲು ಪರಿಣಾಮಕಾರಿ ಮಾರ್ಗವಾಗಿವೆ.

ಫಿಟ್ನೆಸ್ ತಜ್ಞೆ ಮತ್ತು ಮಲ್ಟಿಫಿಟ್ ನಿರ್ದೇಶಕಿ ದೀಪ್ತಿ ಶರ್ಮಾ ಹೇಳುವಂತೆ, ತರಬೇತಿ ಮುಖ್ಯ. ಆದರೆ ಚಲನೆ ಯಾವಾಗಲೂ ವ್ಯಾಯಾಮದಂತೆ ಭಾಸವಾಗಬೇಕಿಲ್ಲ. ನೃತ್ಯ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಹೊಸ ಫಿಟ್ನೆಸ್ ಅನುಭವಗಳಾಗಿ ತರುವ ಮೂಲಕ ವ್ಯಾಯಾಮವನ್ನು ಹೆಚ್ಚು ಬೇಸರಗೊಳ್ಳದೆ ಸಕ್ರಿಯವಾಗಿರುವಂತೆ ಮತ್ತು ತಾಜಾವಾಗಿರುವಂತೆ ಮಾಡಬಹುದು.

►ನಾನ್-ಎಕ್ಸರ್ಸೈಸ್ ಆಕ್ಟಿವಿಟಿ ಥರ್ಮೋಜೆನೆಸಿಸ್

ಬಹಳಷ್ಟು ಮಂದಿಗೆ ತೂಕ ನಿರ್ವಹಣೆ ಎಂದರೆ ವ್ಯಾಯಾಮಗಳು ಮತ್ತು ಇಚ್ಛಾಶಕ್ತಿಯಾಗಿರುತ್ತವೆ. ಆದರೆ ನಿಮ್ಮ ನಿಜವಾದ ಚಯಾಪಚಯ ವ್ಯಾಯಾಮೇತರ ಚಟುವಟಿಕೆ ಥರ್ಮೋಜೆನೆಸಿಸ್ ಅಥವಾ NEAT (ನಾನ್-ಎಕ್ಸರ್ಸೈಸ್ ಆಕ್ಟಿವಿಟಿ ಥರ್ಮೋಜೆನೆಸಿಸ್) ಆಗಿರಬಹುದು.

ಹೌರಾದ ನಾರಾಯಣ ಆಸ್ಪತ್ರೆಯ ಡಾ. ಶಾಂತನು ಕುಮಾರ್ ಹೇಳುವ ಪ್ರಕಾರ, ‘NEAT’ ಎಂದರೆ ನಿಮ್ಮ ದೇಹವು ದೈನಂದಿನ ಚಲನೆಯ ಮೂಲಕ ಕ್ಯಾಲರಿಗಳನ್ನು ನಷ್ಟಮಾಡುವ ಶಕ್ತಿಯನ್ನು ಸೂಚಿಸುತ್ತದೆ. ನಡೆಯುವುದು, ಅತ್ತಿತ್ತ ಸಾಗುವುದು, ನಿಲ್ಲುವುದು, ಮೆಟ್ಟಿಲುಗಳನ್ನು ಹತ್ತುವುದು, ಮನೆಗೆಲಸ ಮಾಡುವುದು, ನಿದ್ರೆ, ಊಟ ಅಥವಾ ರಚನಾತ್ಮಕ ವ್ಯಾಯಾಮ ಎಲ್ಲವೂ ಸೇರಿರುತ್ತವೆ. ಇವೆಲ್ಲವನ್ನೂ ಒಟ್ಟಾಗಿ ನಿಭಾಯಿಸಿದಲ್ಲಿ ಸಂಖ್ಯೆ ಭಿನ್ನ ಕಥೆಯನ್ನೇ ತೋರಿಸಲಿದೆ.

NEAT ಅತಿಯಾಗಿ ತಿನ್ನುವ ಅವಧಿಯಲ್ಲಿ ತೂಕ ಹೆಚ್ಚಿಸುವ ವಿರುದ್ಧ ನೈಸರ್ಗಿಕ ಬಫರ್ ಆಗಿ ಕೆಲಸ ಮಾಡುತ್ತದೆ. ದಿನವಿಡೀ ಸ್ಥಿರವಾದ ಕಡಿಮೆ ಮಟ್ಟದ ಚಲನೆಯು ಉತ್ತಮ ಇನ್ಸುಲಿನ್ ಸಂವೇದನೆ ಮತ್ತು ಸ್ಥಿರವಾದ ರಕ್ತದಲ್ಲಿನ ಸಕ್ಕರೆಯನ್ನು ಬೆಂಬಲಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor