‘ಕಲಾವಂತ’ ‘ದೇವಳಿ’ ಎಂಬ ನೃತ್ಯಕಲಾವಿದರ ಕುಲ

Update: 2026-08-19 10:48 IST

ಕಲಾವಂತ ಸಮುದಾಯದ ಮೂಲ ವೃತ್ತಿ ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ನೃತ್ಯ, ಸಂಗೀತ, ಭಜನೆ ಹಾಡುವುದು. ಇವರನ್ನು ದೇವಸ್ಥಾನದ ಕಲಾವಿದರು ಅಂತಲೇ ಕರೆಯುತ್ತಾರೆ. ಹಿಂದೆ ರಾಜರ ಆಸ್ಥಾನದಲ್ಲೂ ನೃತ್ಯ, ಸಂಗೀತದ ಸೇವೆ ಮಾಡುತ್ತಿದ್ದರಂತೆ. ಕಲಾವಂತ ಎಂಬ ಹೆಸರಲ್ಲೇ ‘ಕಲೆ’ ಇರುವುದು ಗಮನಾರ್ಹ. ಕಲಾವಂತ ಅಂದರೆ ಕಲೆಯಲ್ಲಿ ನಿಪುಣ ಎಂಬ ಅರ್ಥ ಬರುತ್ತದೆ.

ಇಂತಹ ಸಮುದಾಯವೊಂದಿದೆ ಎಂಬುದು ನನಗೆ ತಿಳಿದಿದ್ದೇ ಕಾರವಾರದ ಗೆಳೆಯ ನಾರ್ವೇಕರ್ ಅವರಿಂದ. ಸ್ವತಹ ನಾರ್ವೇಕರ್ ಅವರೇ ಕಲಾವಂತ ಸಮುದಾಯ ದವರಾದ್ದರಿಂದ ಒಂದಷ್ಟು ವಿಶಿಷ್ಟ ಮತ್ತು ಉಪಯುಕ್ತ ಮಾಹಿತಿ ಸಿಕ್ಕಿತು.

‘ಕಲಾವಂತ’, ‘ಕಲಾವಂತ್’, ‘ಕಲಾವಂತಿ’ ಎಂದು ಕರೆಯಲಾಗುವ ಈ ಸಮುದಾಯ ಹೆಚ್ಚು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕಾರವಾರ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದ ಕಡೆ ಇದೆ.

ಕಲಾವಂತ ಸಮುದಾಯದ ಮೂಲ ವೃತ್ತಿ ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ನೃತ್ಯ, ಸಂಗೀತ, ಭಜನೆ ಹಾಡುವುದು. ಇವರನ್ನು ದೇವಸ್ಥಾನದ ಕಲಾವಿದರು ಅಂತಲೇ ಕರೆಯುತ್ತಾರೆ. ಹಿಂದೆ ರಾಜರ ಆಸ್ಥಾನದಲ್ಲೂ ನೃತ್ಯ, ಸಂಗೀತದ ಸೇವೆ ಮಾಡುತ್ತಿದ್ದರಂತೆ. ಕಲಾವಂತ ಎಂಬ ಹೆಸರಲ್ಲೇ ‘ಕಲೆ’ ಇರುವುದು ಗಮನಾರ್ಹ. ಕಲಾವಂತ ಅಂದರೆ ಕಲೆಯಲ್ಲಿ ನಿಪುಣ ಎಂಬ ಅರ್ಥ ಬರುತ್ತದೆ. ‘ಕಲಾವಂತಿ’ ಅಂದರೆ ಕಲೆಯಲ್ಲಿ ನಿಪುಣಳಾದ ಸ್ತ್ರೀ ಎಂಬುದು ಅರ್ಥ. ಈ ಹಿಂದೆ ಈ ರೀತಿ ದೇವಸ್ಥಾನದಲ್ಲಿ ಮತ್ತು ರಾಜಾಶ್ರಯದಲ್ಲಿ ನರ್ತಿಸುವ ಕಲಾವಿದರಿಗೆ ಸಾಮಾಜಿಕ ಮಾನ್ಯತೆ ಇರಲಿಲ್ಲ.

ಬಹುತೇಕ ಮರಾಠಿ ಮಿಶ್ರಿತ ಭಾಷಿಕ ಸಮುದಾಯದ ಪ್ರದೇಶದಲ್ಲಿ ಈ ರೀತಿಯ ನೃತ್ಯ ಕಲಾವಿದರಲ್ಲಿ ‘ಕಲಾವಂತ’ ಎಂಬ ಹೆಸರಿದ್ದಂತೆ. ನಮ್ಮ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮುಂತಾದ ತೆಲುಗು ಮಿಶ್ರಿತ ಪ್ರದೇಶದಲ್ಲಿ ಇರುವ, ಇದೇ ರೀತಿ ದೇವಸ್ಥಾನ ಮತ್ತು ರಾಜಾಶ್ರಯದಲ್ಲಿ ನೃತ್ಯ, ಸಂಗೀತ, ಭಜನೆ ಮಾಡುತಿದ್ದವರನ್ನು ‘ನಟವರು’ ಎಂತಲೂ ಕರೆಯುತ್ತಾರೆ. ‘ನಾಟ್ಯ’ವನ್ನೇ ತಮ್ಮ ಕುಲವೃತ್ತಿ ಮಾಡಿಕೊಂಡ ಕಾರಣಕ್ಕೆ ಇವರನ್ನು ‘ನಟವರು’ ಎಂದು ಹೆಸರಿಸಿರಬಹುದು. ಕಲಾವಂತ ಮತ್ತು ನಟವರ ನಡುವೆ ನಾಟ್ಯ, ಕಲೆ, ಸಂಗೀತ, ಹಾಡುಗಾರಿಕೆ, ಸಾಮಾಜಿಕ ಮಾನ್ಯತೆಗಳಿಗೆ ಸಂಬಂಧಿಸಿದಂತೆ ಅನೇಕ ಸಾಮ್ಯತೆಗಳು ಇದ್ದರೂ ಇವರು ಎಲ್ಲೂ ಪರಸ್ಪರ ಬೆರೆತಂತಿಲ್ಲ!

ಕಲಾವಂತ ಸಮುದಾಯದ ಭಾಷೆ ಮರಾಠಿ ಮಿಶ್ರಿತ ಕನ್ನಡ ಮತ್ತು ಕೊಂಕಣಿ ಮಿಶ್ರಿತ ಕನ್ನಡ. ಬೆಳಗಾವಿ, ವಿಜಯಪುರ ಭಾಗದಲ್ಲಿ ಮನೆಯಲ್ಲಿ ಮರಾಠಿಯನ್ನೇ ಮಾತನಾಡುತ್ತಾರೆ.

ಇವರು ಹಿಂದೂ ಧರ್ಮೀಯರಾಗಿದ್ದು ವಿಠ್ಠಲ, ಮಹಾಲಕ್ಷ್ಮಿ, ರೇಣುಕಾ ದೇವಿ, ಭವಾನಿಯರ ಆರಾಧನೆ ಮಾಡುತ್ತಾರೆ. ಕರ್ನಾಟಕದಲ್ಲಿ ಮುಖ್ಯವಾಗಿ ಬೆಳಗಾವಿಯ ಖಾನಾಪುರ, ಚಿಕ್ಕೋಡಿ, ನಿಪ್ಪಾಣಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ ಗಡಿ ಭಾಗ, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸತಾರಾ. ಗೋವಾದ ಬಾರ್ಡೆಜ್, ಸಲ್ಸೆಟ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಆದರೆ ಇವರ ಜನಸಂಖ್ಯೆ ಕಡಿಮೆ ಇದ್ದು, ನಿಖರ ಜನಗಣತಿ ಇಲ್ಲ.

ಈ ಸಮುದಾಯವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ‘ದೇವಳಿ’ ಅಂತಲೂ ಕರೆಯುತ್ತಾರೆ, ನಾನು ಈ ಸಮುದಾಯದ ಕುರಿತು ಮೇಲೆ ಹೇಳಿದ ಹೇಳಿಕೆಗೆ ವಿಭಿನ್ನ ದೃಷ್ಟಿಕೋನವೊಂದಿದೆ. ಸಿದ್ದರಾಮಯ್ಯನವರು

ಮುಖ್ಯಮಂತ್ರಿಗಳಾಗಿದ್ದಾಗ ಈ ಸಮುದಾಯದವರು ಸರಕಾರಕ್ಕೆ ಪತ್ರವೊಂದನ್ನು ಬರೆಯುತ್ತಾರೆ, ಆ ಪತ್ರದ ಅಂಶಗಳು ಈ ರೀತಿ ಇವೆ...

ದೇವದಾಸಿ ಪ್ರತಿಬಂಧಕ ವಿಧೇಯಕ ೨೦೨೫ರ ಅಧ್ಯಾಯ ೧ರ ಕ್ರಮ ಸಂಖ್ಯೆ ೨ರ(ಸಿ)ಯಲ್ಲಿ ಬರುವ ದೇವದಾಸಿ ಜಾತಿಗಳಲ್ಲಿ ಒಂದಾದ ದೇವಳಿ ಮತ್ತು ಕಲಾವಂತಿ ಸಮಾಜದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ವಾಸಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ೨೫ರಿಂದ ೩೦ ಸಾವಿರ ದೇವಳಿ ಸಮಾಜದವರು (ಇವರನ್ನು ಗೋಮಾಂತಕ ಸಮಾಜದವರು ಅಂತಲೂ ಕರೆಯುತ್ತಾರೆ) ಉತ್ತರ ಕನ್ನಡ ಜಿಲ್ಲೆಯಲ್ಲೇ ವಾಸಿಸುತ್ತಿದ್ದಾರೆ. ಜೋಯಿಡಾ ಮತ್ತು ಕಾರವಾರ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಸುಮಾರು ೧೫ ರಿಂದ ೨೦ ಸಾವಿರ ಜನ ವಾಸಿಸುತ್ತಿದ್ದಾರೆ.

ಮೂಲತಃ ದೇವಳಿ ಮತ್ತು ಕಲಾವಂತ ಸಮಾಜದವರು ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದವರು. ಮೇಲ್ವರ್ಗದವರ ಒತ್ತಡದಿಂದಲೋ, ಸಮಾಜದ ಕಟ್ಟುಪಾಡುಗಳಿಂದಲೋ ಅಥವಾ ದೇವರ ಮೇಲಿನ ಭಕ್ತಿಯ ಪರಾಕಾಷ್ಠೆಯ ಫಲವಾಗಿಯೋ ದೇವದಾಸಿಗಳಾಗಿ ಮಾರ್ಪಟ್ಟರು. ಗೋಮಾಂತಕ ಸಮಾಜದಲ್ಲಿ ಬರುವ ಇತರ ಜಾತಿಗಳಾದ ಬಾಂದಿ, ಗುರವ್ ಹಾಗೂ ಪಡಿಯಾರ್ ಜಾತಿಗಳು ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಕೊಂಕಣ ಸೀಮೆಯ ಅಂದರೆ ಗೋಮಾಂತಕ ಪ್ರದೇಶದ ಮೂಲ ನಿವಾಸಿಗಳಾಗಿದ್ದರಿಂದ ಈ ಹೆಸರು ಬಂದಿದೆ ಎಂದು ಅರ್ಥೈಸಲಾಗುತ್ತದೆ. ಮೂಲತಃ ಗೋವಾ ಹಾಗೂ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ನಿವಾಸಿಗಳಾದ ಇವರು ಪೋರ್ಚುಗೀಸರ ಆಳ್ವಿಕೆಯಲ್ಲಿ ಕ್ರೈಸ್ತ ಮತಾಂತರಕ್ಕೆ ಹೆದರಿ ಸುಮಾರು ೧೫೦-೨೦೦ ವರ್ಷಗಳ ಹಿಂದೆ ಪಕ್ಕದ ಕಾರವಾರ (ಉತ್ತರ ಕನ್ನಡ ಜಿಲ್ಲೆ)ಕ್ಕೆ ಬಂದು ನೆಲೆಸಿರುತ್ತಾರೆ. ಇವರ ಕುಲದೇವರು ಈಗಲೂ ಗೋವಾ ರಾಜ್ಯದಲ್ಲಿದೆ. ಖ್ಯಾತ ಹಿಂದಿ ಹಿನ್ನೆಲೆ ಗಾಯಕಿ ಶ್ರೀಮತಿ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಯಾನಂದ್ ಬಾಂದೋಡ್ಕರ್ ಹಾಗೂ ಶಶಿಕಲಾ ಕಾಕೋಡ್ಕರ್ ತಮ್ಮ ಸಮಾಜಕ್ಕೆ ಸೇರಿದವರಾಗಿದ್ದಾರೆ ಎಂದು ಇವರು ಹೆಮ್ಮೆಯಿಂದ ಹೇಳುತ್ತಾರೆ.

ಖ್ಯಾತ ಚಿತ್ರ ನಟಿ ದಿವಂಗತ ಪಂಡರೀಬಾಯಿ ಕೂಡ ತಮ್ಮ ಸಮಾಜಕ್ಕೆ ಸೇರಿದವರಾಗಿದ್ದು, ಇವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನವರು ಎಂದು ಹೇಳಿಕೊಳ್ಳುತ್ತಾರೆ.

ಹೀಗಿರುವಾಗ ದೇವಳಿ ಮತ್ತು ಕಲಾವಂತ ಸಮಾಜ ಒಳಗೊಂಡಂತೆ ಗೋಮಾಂತಕ ಸಮಾಜ ದವರು ರಾಜ್ಯದಲ್ಲೇ ಅತಿ ಹೆಚ್ಚು ವಾಸಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯನ್ನು ದೇವದಾಸಿ ಪ್ರತಿಬಂಧಕ ವಿಧೇಯಕದಲ್ಲಿ ಅನುಸೂಚಿ ೧ರಲ್ಲಿ ದೇವದಾಸಿ ಪದ್ಧತಿಯನ್ನು ಗುರುತಿಸಲಾಗಿರುವ ಜಿಲ್ಲೆಗಳ ಪಟ್ಟಿಯಿಂದ ಕೈ ಬಿಟ್ಟಿರುವುದರ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.

ಈ ಕಾರಣಕ್ಕೆ ದೇವದಾಸಿ ಪ್ರತಿಬಂಧಕ ವಿಧೇಯಕ ಅನುಸೂಚಿ ೧ರಲ್ಲಿ ದೇವದಾಸಿ ಪದ್ಧತಿಯನ್ನು ಗುರುತಿಸಲಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಸೇರಿಸುವಂತೆ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿ ತಮ್ಮ ಜಾತಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಅಂಗಲಾಚುತ್ತಿದ್ದಾರೆ.

ಈ ಸಮುದಾಯದ ಕುರಿತು ಬೇರೇನೂ ಹೇಳಬೇಕಿಲ್ಲ, ಇವರ ಸಾಮಾಜಿಕ ಸ್ಥಿತಿಗತಿಯನ್ನು ನೀವೇ ಅರ್ಥಮಾಡಿಕೊಳ್ಳಿ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News