(ನಿ.)ನ್ಯಾ. ಸಂತೋಷ್ ಹೆಗ್ಡೆಯವರೇ, ತಾವು ಓದಿರುವ ಸಂವಿಧಾನ ಯಾವುದು?
ಮೀಸಲಾತಿ ನೀಡುವುದು ಬಡತನ ನಿರ್ಮೂಲನದ ಕಾರ್ಯಕ್ರಮವಲ್ಲ. ಅದರಿಂದ ಮೀಸಲಾತಿ ಪಡೆದವರ ಮತ್ತು ಅವರ ಸಮೀಪವಿರುವ ವ್ಯಕ್ತಿಗಳ ಬಡತನ ಒಂದಷ್ಟು ಮಟ್ಟಿಗೆ ನೀಗಬಹುದು. ಆದರೆ 16(4)ರ ಉದ್ದೇಶ ಅದಲ್ಲ. ಅದು ಪ್ರಭುತ್ವದ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮೀಸಲಾತಿಯನ್ನು ನೀಡುತ್ತದೆ.
ಪ್ರಾತಿನಿಧ್ಯ ಇದ್ದರೆ ಮಾತ್ರ ಅದು ಪ್ರಾತಿನಿಧಿಕ ಪ್ರಜಾತಂತ್ರವಾಗುತ್ತದೆ. ಸಾರಭೂತ ಪ್ರಜಾತಂತ್ರವಾಗಲು ಅಷ್ಟು ಸಾಲದು ಎಂಬುದು ಬೇರೆ ವಿಷಯ. ಆದರೆ ಪ್ರಾತಿನಿಧ್ಯವು ‘By The People’ ಎಂಬ ಪ್ರಜಾತಾಂತ್ರಿಕ ಸೂತ್ರ ಸಾಕಾರವಾಗಲು ಅತ್ಯಗತ್ಯ.
ಮೊನ್ನೆ ಮಹಿಳಾ ಕಾಲೇಜೊಂದರಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ಮಾತನಾಡುತ್ತಾ ಸುಪ್ರೀಂ ಕೋರ್ಟಿನ ನಿವೃತ್ತ ನಾಯಮೂರ್ತಿ ಸಂತೋಷ್ ಹೆಗ್ಡೆಯವರು ಮೀಸಲಾತಿಯ ವಿರುದ್ಧ ತಮ್ಮ ಸವರ್ಣೀಯ ನಂಜನ್ನೆಲ್ಲಾ ಕಾರಿಕೊಂಡಿದ್ದಾರೆ.
ತಮ್ಮ ಭಾಷಣದಲ್ಲಿ ಅವರು 1)ಮೀಸಲಾತಿಯೇ ಸಂವಿಧಾನ ಬಾಹಿರ.
2)ಅಂಬೇಡ್ಕರ್ ಅವರು ತಮ್ಮ ಜಾತಿಯ ಜನರಿಗಾಗಿ ಹತ್ತು ವರ್ಷಗಳ ಕಾಲ ಮಾತ್ರ ಮೀಸಲಾತಿ ಕೇಳಿದ್ದರು.
3) ಮೀಸಲಾತಿ ಇರುವುದೇ ಆದರೆ ಅದು ಕೇವಲ ಬಡತನ ಆಧಾರಿತ ಮೀಸಲಾತಿ ಮಾತ್ರ ಆಗಿರಬೇಕು ಎಂದು ಪ್ರತಿಪಾದಿಸಿದ್ದಾರೆ.
ಆ ಮೂಲಕ ಭಾರತದಲ್ಲಿ ಚಾರಿತ್ರಿಕ ಸೌಲಭ್ಯ ಭೋಗಿಗಳಾದ ಮೇಲ್ಜಾತಿ ಪಟ್ಟಭದ್ರರು ಮುಂದಿಡುವ ಅತ್ಯಂತ ಆತ್ಮವಂಚಕ ನಿಲುವನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಆ ಮೂಲಕ ವೃತ್ತಿಯಿಂದ ಮಾತ್ರವಲ್ಲದೆ ನ್ಯಾಯಪ್ರಜ್ಞೆಯಿಂದಲೇ ನಿವೃತ್ತಿಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಸಂತೋಷ್ ಹೆಗ್ಡೆಯವರು ಸಾಂವಿಧಾನಿಕ ಪೀಠಗಳಲ್ಲಿ ನ್ಯಾಯ ನಿರ್ವಹಣೆ ಮಾಡಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ಹಿರಿಯ ನ್ಯಾಯಾಧೀಶರು. ಹೀಗಾಗಿ ಅವರು ಹೇಳಿರುವ ಚಾರಿತ್ರಿಕ ಅಪದ್ಧಗಳು ಮತ್ತು ನಿಲುವುಗಳು ಇವತ್ತಿನ ಸಂದರ್ಭ ದಲ್ಲಿ ಅತ್ಯಂತ ಅಪಾಯಕಾರಿ ಮತ್ತು ಪ್ರತಿಗಾಮಿ ಪಾತ್ರ ವಹಿಸುತ್ತವೆ. ಆದ್ದರಿಂದ ಅವರ ವಾದದ ಸುಳ್ಳು, ಸೋಗಲಾಡಿತನ ಹಾಗೂ ದುರುದ್ದೇಶಗಳನ್ನು ಸಂವಿಧಾನ ಮತ್ತು ಸಂವಿಧಾನ ಚರಿತ್ರೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
ಮೀಸಲಾತಿ- ಸಂವಿಧಾನ ಬಾಹಿರವೇ?
ನಿ.ನ್ಯಾ. ಸಂತೋಷ್ ಹೆಗ್ಡೆಯವರು ಸಂವಿಧಾನದ ಆರ್ಟಿಕಲ್ 14 ಕಾನೂನಿನ ಮುಂದೆ ಜಾತಿ-ಲಿಂಗ ಇತ್ಯಾದಿ ಭೇದವಿಲ್ಲದೆ ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ ಇದೆ ಎಂದು ಘೋಷಿಸಿದೆಯಾದ್ದರಿಂದ ಜಾತಿ ಮತ್ತು ಲಿಂಗ ಆಧಾರಿತ ಮೀಸಲಾತಿಗಳು ಸಂವಿಧಾನ ಬಾಹಿರ ಎಂದು ಘೋಷಿಸಿಬಿಟ್ಟಿದ್ದಾರೆ. ಇದು ಭಾರತದಲ್ಲಿ ಎಲ್ಲಾ ಮೀಸಲಾತಿ ವಿರೋಧಿಗಳು ತಮ್ಮ ಅನ್ಯಾಯದ ವಾದವನ್ನು ಮುಂದಿಡಲು ಮಂಡಿಸುತ್ತಿರುವ ಸಮಾನತೆಯ ಕಾನೂನಿನ ಅಪವ್ಯಾಖ್ಯಾನ.
ಆರ್ಟಿಕಲ್ 14ರ ಅಪವ್ಯಾಖ್ಯಾನ
ಸಂವಿಧಾನಕ್ಕೆ ಮುನ್ನ ಈ ದೇಶದಲ್ಲಿ ಶೋಷಕ ಜಾತಿಗಳಿಗೆ ಒಂದು ಕಾನೂನು ಹಾಗೂ ಶೋಷಿತ ಜಾತಿಗಳಿಗೆ ಮತ್ತೊಂದು ಕಾನೂನು ಎಂಬ ಅಮಾನವೀಯ ಮತ್ತು ಶೋಷಕ ಕಾನೂನು ಮತ್ತು ಸಂವಿಧಾನ ಜಾರಿಯಲ್ಲಿತ್ತು. ಜಾತಿಯೇ ಕಾನೂನಾಗಿತ್ತು. ಮನುಸ್ಮತಿಯೇ ಸಂವಿಧಾನವಾಗಿತ್ತು.
ಸ್ವತಂತ್ರ ಭಾರತದ ಸಂವಿಧಾನದಲ್ಲಿ ಈ ಅಸಮಾನತೆಯನ್ನು ನಿವಾರಿಸಲು ಆರ್ಟಿಕಲ್ 14ರ ಮೂಲಕ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬ ಕಲಮನ್ನು ಸೇರಿಸಲಾಯಿತು. ಹೀಗಾಗಿ ಆರ್ಟಿಕಲ್ 14ಕ್ಕೆ ಇರುವುದು ಈ ದೇಶದಲ್ಲಿ ಮೇಲ್ಜಾತಿಗಳು ಉಳಿದವರ ಮೇಲೆ ಶತಮಾನಗಳಿಂದ ಜಾತಿ ಆಧಾರದಲ್ಲಿ ನಡೆಸಿಕೊಂಡು ಬಂದ ತಾರತಮ್ಯವನ್ನು ನಿಷೇಧಿಸುವ ಆದರ್ಶ. ಎಲ್ಲರೂ ಸಮಾನರು ಎಂಬ ತೋರಿಕೆಯ ಮತ್ತು ಸೋಗಲಾಡಿ ಮೌಲ್ಯಗಳ ಮೂಲಕ ಬಲಿಷ್ಠ ಸಮುದಾಯಗಳನ್ನು ಮುಂದುವರಿಸಿಕೊಂಡು ಹೋಗುವ ಸೋಗಲಾಡಿ ಹಿಡನ್ ಅಜೆಂಡಾಗಳಲ್ಲ.
ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಈ ಹಿಂದಿನ ಜಾತಿ ಆಧಾರಿತ ಕಾನೂನುಗಳನ್ನು ತೆಗೆದು ಕಾನೂನಿನ ಮುಂದೆ ಶೋಷಕ ಮತ್ತು ಶೋಷಿತ ಜಾತಿಗಳೆಲ್ಲರೂ ಒಂದೇ ಎಂಬ ಕ್ರಾಂತಿಕಾರಕ ಕಲಂ ಸೇರಿಸಲ್ಪಟ್ಟಿತು.
ಇದು ಸಂವಿಧಾನದ ಆರ್ಟಿಕಲ್ 15 (2)ರಲ್ಲಿ ಇನ್ನಷ್ಟು ಸ್ಪಷ್ಟಪಡಿಸಲಾಗಿದೆ.:
15 (2): No citizen shall, on grounds only of religion, race, caste, sex, place of birth or any of them, be subject to any disability, liability, restriction or condition with regard to-(a)access to shops, public restaurants, hotels and places of public entertainment; or(b)the use of wells, tanks, bathing ghats, roads and places of public resort maintained wholly or partly out of State funds or dedicated to the use of the general public.
ಯಾವುದೇ ಸಾರ್ವಜನಿಕ ಸ್ಥಳ ಮತ್ತು ಸಂಸ್ಥೆಗಳಲ್ಲಿ ಜಾತಿ, ಲಿಂಗ ಇನ್ನಿತರ ವಿಷಯಗಳ ಆಧಾರದ ಮೇಲೆ ಪ್ರವೇಶ ಮತ್ತು ಅವಕಾಶಗಳನ್ನು ನಿರಾಕರಿಸಬಾರದು ಎಂಬುದು ಇದರ ತಾತ್ಪರ್ಯ. ಹೀಗಾಗಿ ಆರ್ಟಿಕಲ್ 14 ಮತ್ತು 15 ಶೋಷಕ ಜಾತಿಗಳು ಆಚರಿಸುತ್ತಿದ್ದ ಶೋಷಕ ತಾರತಮ್ಯಗಳನ್ನು ನಿವಾರಿಸುವ ಕ್ರಮವಾಗಿದೆಯೇ ವಿನಾ ಬಲಿಷ್ಠ ಜಾತಿಗಳು ಶೋಷಕ ಜಾತಿಗಳು ಸಮಾಸಮ ಎಂಬ ಪ್ರತಿಪಾದನೆಯನ್ನು ಮಾಡುವುದಿಲ್ಲ. ಹಾಗೆಯೇ ಸಂವಿಧಾನವನ್ನು ಅಪವ್ಯಾಖ್ಯಾನ ಮಾಡುವುದು ಚಾರಿತ್ರಿಕ ವಿಕೃತಿ.
ಏಕೆಂದರೆ ಒಂದು ಅಸಮಾನ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಭಾವಿಸುವುದೇ ಅಸಮಾನತೆಯನ್ನು ಮುಂದುವರಿಸುವ ಸಂಚಾಗುತ್ತದೆ. ಅಸಮಾನತೆಯನ್ನು ಗುರುತಿಸಬೇಕು. ಅಸಮಾನರನ್ನು ಸಮಾನ ಗುಂಪಿಗೆ ಸೇರಿಸದೆ ವಿಶೇಷ ಆದ್ಯತೆ ಕೊಡಬೇಕು. ಅದು ಅಸಮಾನ ಸಮಾಜದಲ್ಲಿ ಸಮಾನತೆ ತರುವ ಉಪಕ್ರಮ.
ಸಂವಿಧಾನದ 16 (4)- ಪ್ರಾತಿನಿಧ್ಯ ಮೀಸಲಾತಿಯ ಸಾಂವಿಧಾನಿಕತೆ
ಆರ್ಟಿಕಲ್ 14 ಅನ್ನು ಅಪವ್ಯಾಖ್ಯಾನ ಮಾಡುವ ನಿ.ನ್ಯಾ. ಹೆಗ್ಡೆಯವರು ಮೀಸಲಾತಿಯನ್ನು ಸಾಂವಿಧಾನಿಕವಾಗಿಯೇ ಕೊಡಮಾಡುವ ಇತರ ಆರ್ಟಿಕಲ್‌ಗಳ ಬಗ್ಗೆ ದುರುದ್ದೇಶಪೂರ್ವಕ ಮೌನವನ್ನು ಪಾಲಿಸುವುದು ಏಕೆ?
ಆ ವಿಷಯಕ್ಕೆ ಹೋಗುವ ಮುನ್ನ ಈ ದೇಶದಲ್ಲಿ ಸಾಹು ಮಹಾರಾಜರ ಕೊಲ್ಲಾಪುರದಲ್ಲಿ, ಮದ್ರಾಸ್ ಪ್ರಾಂತದಲ್ಲಿ ಹಾಗೂ ಮೈಸೂರು ಮಹಾರಾಜರ ಪ್ರಾಂತದಲ್ಲಿ ಸಾರ್ವಜನಿಕ ಉದ್ಯೋಗಗಳಲ್ಲಿ ಸಮಾನತೆ ಸಾಧಿಸಲು ಜಾತಿ ಆಧಾರಿತ ಮೀಸಲಾತಿ ಜಾರಿಯಲ್ಲಿತ್ತು ಎಂಬುದನ್ನು ಮರೆಯದಿರೋಣ.
ಅದರ ಮುಂದುವರಿಕೆಯಾಗಿಯೇ 1948ರ ನವೆಂಬರ್‌ನಲ್ಲಿ ಅಂಬೇಡ್ಕರ್ ಸಿದ್ಧಪಡಿಸಿದ ಕರಡು ಸಂವಿಧಾನದಲ್ಲ್ ಹಿಂದುಳಿದ ವರ್ಗಗಳಿಗೆ ಸಾರ್ವಜನಿಕ ಉದ್ಯೋಗಾವಕಾಶಗಳಲ್ಲಿ ಸೂಕ್ತ ಪ್ರಾತಿನಿಧ್ಯಗಳನ್ನು ಖಾತರಿ ಪಡಿಸಬೇಕೆಂಬ ಆರ್ಟಿಕಲ್ 10 (3) ಪ್ರಸ್ತಾಪಿತವಾಗುತ್ತದೆ:
10. (3) Nothing in this article shall prevent the State from making any provision for the reservation of appointments or posts in favour of any backward class of citizens who, in the opinion of the State, are not adequately represented in the services under the State.
(https://www.constitutionofindia.net/committee-report/draft-constitution-of-india೧೯೪೮/)
ಮೊದಲು ಈ ಕರಡು ಪ್ರಸ್ತಾಪದಲ್ಲಿ ಪ್ರಭುತ್ವದ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದ ಯಾವುದೇ ವರ್ಗಗಳಿಗೆ ಎಂದಿತ್ತು. ಅದನ್ನು ಅಂಬೇಡ್ಕರ್ ಅವರು ನಿರ್ದಿಷ್ಟವಾಗಿ ‘ಯಾವುದೇ ಹಿಂದುಳಿದ ವರ್ಗಗಳಿಗೆ’ ಎಂದು ಸೇರಿಸುತ್ತಾರೆ. ಏಕೆಂದರೆ ಈ ದೇಶದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ಚಾರಿತ್ರಿಕವಾಗಿ ‘ಹಿಂದುಳಿಸಲ್ಪಟ್ಟ’ ಸಮುದಾಯಗಳಿಗೆ ಮಾತ್ರ. ಆ ವಿಶೇಷಣ ಸೇರಿಸದಿದ್ದರೆ ಹಿಂದುಳಿಸಲ್ಪಟ್ಟವರಿಗೆ ಯಾವತ್ತೂ ಅವಕಾಶಗಳು ಸಿಗುವುದಿಲ್ಲ ಎಂದು ಅಂಬೇಡ್ಕರ್ ವಿವರಿಸುತ್ತಾರೆ.
ಈ ಕಲಮಿನ ಬಗ್ಗೆ 1948ರ ನವೆಂಬರ್ 30ರಂದು ಸಂವಿಧಾನ ಸಭೆಯಲ್ಲಿ ಸುದೀರ್ಘ ಚರ್ಚೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ‘ಹಿಂದುಳಿದ’ ಎಂಬ ಪದದ ಸೇರ್ಪಡೆಯ ಬಗ್ಗೆ. ಸಂವಿಧಾನ ಸಭೆಯಲ್ಲಿ ಸಂತೋಷ್ ಹೆಗ್ಡೆೆಯವರಂತೆ ಯೋಚಿಸುತ್ತಿದ್ದ ಒಂದಿಬ್ಬರು ಇದನ್ನು ಕೂಡ ಹತ್ತು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಬೇಕೆಂಬ ತಿದ್ದುಪಡಿ ಮುಂದಿಡುತ್ತಾರೆ. ಆದರೆ ಸಂವಿಧಾನ ಸಭೆ ಅದನ್ನು ತಿರಸ್ಕರಿಸುತ್ತದೆ ಹಾಗೂ ಅಂಬೇಡ್ಕರ್ ಮುಂದಿಟ್ಟಂತೆ 10 (3)ನ್ನು ಯಥಾವತ್ ಅಂಗೀಕರಿಸುತ್ತದೆ.
ಆಸಕ್ತರು ಈ ಬಗ್ಗೆ ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯನ್ನು ಈ ವೆಬ್ ವಿಳಾಸದಲ್ಲಿ ಸಂಪೂರ್ಣವಾಗಿ ಓದಬಹುದು :
(https://www.constitutionofindia.net/debates/೩೦nov-೧೯೪೮/)
ಅದೇ ಕಲಮೇ 1950ರ ಜನವರಿ 26ರಂದು ಜಾರಿಯಾದ ಸಂವಿಧಾನದಲ್ಲಿ 16 (4) ಆಗಿ ಜಾರಿಯಾಗುತ್ತದೆ.
ಆರ್ಟಿಕಲ್ 16 (4) ಹೀಗೆ ಹೇಳುತ್ತದೆ:
Nothing in this article shall prevent the State from making any provision for the reservation of appointments or posts in favour of any backward class of citizens which, in the opinion of the State, is not adequately represented in the services under the State.
ಇಲ್ಲಿ ಅತ್ಯಂತ ಮುಖ್ಯವಾದ ವಿಷಯ ‘not adequately represented in the services under the State’ ಅಂದರೆ ಸಾರ್ವಜನಿಕ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಎಂಬ ಮಹತ್ವದ ಅಂಶ.
ಹೀಗಾಗಿ ಮೀಸಲಾತಿ ನೀಡುವುದು ಬಡತನ ನಿರ್ಮೂಲನದ ಕಾರ್ಯಕ್ರಮವಲ್ಲ. ಅದರಿಂದ ಮೀಸಲಾತಿ ಪಡೆದವರ ಮತ್ತು ಅವರ ಸಮೀಪವಿರುವ ವ್ಯಕ್ತಿಗಳ ಬಡತನ ಒಂದಷ್ಟು ಮಟ್ಟಿಗೆ ನೀಗಬಹುದು. ಆದರೆ 16(4)ರ ಉದ್ದೇಶ ಅದಲ್ಲ. ಅದು ಪ್ರಭುತ್ವದ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮೀಸಲಾತಿಯನ್ನು ನೀಡುತ್ತದೆ.
ಪ್ರಾತಿನಿಧ್ಯ ಇದ್ದರೆ ಮಾತ್ರ ಅದು ಪ್ರಾತಿನಿಧಿಕ ಪ್ರಜಾತಂತ್ರವಾಗುತ್ತದೆ. ಸಾರಭೂತ ಪ್ರಜಾತಂತ್ರವಾಗಲು ಅಷ್ಟು ಸಾಲದು ಎಂಬುದು ಬೇರೆ ವಿಷಯ. ಆದರೆ ಪ್ರಾತಿನಿಧ್ಯವು ‘By The People’ ಎಂಬ ಪ್ರಜಾತಾಂತ್ರಿಕ ಸೂತ್ರ ಸಾಕಾರವಾಗಲು ಅತ್ಯಗತ್ಯ.
ಹೆಗ್ಡೆಯವರೇ, ಸಂವಿಧಾನದಲ್ಲಿ ಆರ್ಟಿಕಲ್ 46, 335, 341-2 ಇಲ್ಲವೇ?
ಅದೇ ರೀತಿ ಸಂವಿಧಾನದ ನಿರ್ದೇಶನಾ ತತ್ವದ ಭಾಗವಾಗಿರುವ ಆರ್ಟಿಕಲ್ 46 ಹೀಗೆ ಹೇಳುತ್ತದೆ:
Article 46: The State shall promote with special care the educational and economic interests of the weaker sections of the people, and, in particular, of the Scheduled Castes and the Scheduled Tribes, and shall protect them from social injustice and all forms of exploitation.
ಅಂದರೆ ಸಮಾಜದ ದುರ್ಬಲ ವರ್ಗಗಳನ್ನು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಅನ್ಯಾಯ ಮತ್ತು ಇತರ ಶೋಷಣೆಗಳಿಂದ ರಕ್ಷಿಸಲು ಪ್ರಭುತ್ವವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮೀಸಲಾತಿ, ಅತ್ಯಾಚಾರ ನಿಷೇಧ ಕಾಯ್ದೆ, ರಾಷ್ಟ್ರೀಯ ಆಯೋಗ ರಚನೆ, ಆರ್ಟಿಕಲ್ 341 ಮತ್ತು 342ರ ಮೂಲಕ ಪ್ರತಿಯೊಂದು ರಾಜ್ಯದಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುರುತಿಸುವಿಕೆ ಹಾಗೂ ಮೀಸಲಾತಿ ದೊರಕಿಸುವಿಕೆ ಇವೆಲ್ಲ ಅದರ ಭಾಗವೇ.
ಹಾಗೆಯೇ ಆರ್ಟಿಕಲ್ 335 ಹೀಗೆ ಹೇಳುತ್ತದೆ:
ಆರ್ಟಿಕಲ್ 335: The claims of the members of the Scheduled Castes and the Scheduled Tribes shall be taken into consideration, consistently with the maintenance of efficiency of administration, in the making of appointments to services and posts in connection with the affairs of the Union or of a State:
ಅಂದರೆ ಸರಕಾರದ ಉದ್ಯೋಗಗಳನ್ನು ಭರ್ತಿ ಮಾಡುವಾಗ ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಗ್ರಹಗಳನ್ನು ಪರಿಗಣಿಸತಕ್ಕದ್ದು.
ನಿ.ನ್ಯಾ. ಹೆಗ್ಡೆಯವರೇ, ಇವೆಲ್ಲವೂ ಭಾರತದ ಸಂವಿಧಾನದ ಭಾಗವೇ ಅಲ್ಲವೇ? ಮೊದಲನೆಯದಾಗಿ ನೀವು ಆರ್ಟಿಕಲ್ 14ನ್ನು ಬಿಟ್ಟು ಸಂವಿಧಾನದಲ್ಲಿ ಬೇರೆ ಕಲಮುಗಳೇ ಇಲ್ಲವೆಂಬಂತೆ ಮಾತಾಡುತ್ತೀರಿ. ಜೊತೆಗೆ ಆರ್ಟಿಕಲ್ 14 ಅನ್ನು ತಪ್ಪಾಗಿ ವ್ಯಾಖ್ಯಾನ ಮಾಡುತ್ತೀರಿ! ಏಕೆ ಹೀಗೆ?
ಸಂವಿಧಾನದ ಮೊದಲ ತಿದ್ದುಪಡಿ ಮತ್ತು ಆರ್ಟಿಕಲ್ 15 (4)
ಸಂವಿಧಾನ ಇಷ್ಟೊಂದು ಸ್ಪಷ್ಟವಾಗಿದ್ದರೂ ಸಂವಿಧಾನ ಜಾರಿಯಾದ ಮರು ವರ್ಷದಲ್ಲೇ ಕೆಲವು ಚಾಣಕ್ಯರು ಶಿಕ್ಷಣದಲ್ಲಿ ಮೀಸಲಾತಿಯನ್ನು ವಿರೋಧಿಸಿ ಆರ್ಟಿಕಲ್ 29 (2)ನ್ನು ತಪ್ಪಾಗಿ ವ್ಯಾಖ್ಯಾನಿಸಿ ಸುಪ್ರೀಂ ಮೆಟ್ಟಿಲು ಹತ್ತಿದರು.
ಆರ್ಟಿಕಲ್ 29 (2) ಹೀಗೆ ಹೇಳುತ್ತದೆ: No citizen shall be denied admission into any educational institution maintained by the State or receiving aid out of State funds on grounds only of religion, race, caste, language or any of them.
ಇದೂ ಕೂಡ ಪರಂಪರಾನುಗತವಾಗಿ ಶಿಕ್ಷಣ ಸಂಸ್ಥೆಗಳಿಗೆ ಶೋಷಿತ ಜಾತಿಗಳ ಪ್ರವೇಶವನ್ನು ನಿರಾಕರಿಸುವ ಮೂಲಕ ಶೋಷಿತ ಜಾತಿಗಳ ಮೇಲೆ ನಡೆಸುತ್ತಿದ್ದ ತಾರತಮ್ಯವನ್ನು ನಿಲ್ಲಿಸಲು ರಚಿಸಲಾದ ಕಲಂ.
ಆದರೆ 1951ರಲ್ಲಿ ಚಂಪಕಂ ದೊರೈರಾಜನ್ ಎಂಬವರು ಶೋಷಿತ ಜಾತಿಗಳಿಗೆ ಮೀಸಲಾತಿ ಅವಕಾಶ ಕೊಟ್ಟು ತನಗೆ ಮೇಲ್ಜಾತಿಯಾಗಿರುವುದರಿಂದ ಅವಕಾಶ ನಿರಾಕರಿಸಲಾಗಿದೆ. ಇದು ಸಮಾನತೆಯ ಹಕ್ಕಿಗೆ ಚ್ಯುತಿ ಎಂದು ಸಂತೋಷ್ ಹೆಗ್ಡೆಯವರಂತೆ ವಿರೋಧಿಸಿದರು. ಸುಪ್ರೀಂ ಕೋರ್ಟ್ ಕೂಡ ನೌಕರಿಯ ಬಗ್ಗೆ ಸಂವಿಧಾನ 16 (4)ರಲ್ಲಿ ಸ್ಪಷ್ಟವಾಗಿರುವಂತೆ ಶಿಕ್ಷಣದ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲವಾದ್ದರಿಂದ ಈ ತಕರಾರು ಸರಿಯಾಗಿದೆ ಎಂದು ಶಿಕ್ಷಣದಲ್ಲಿ ಮೀಸಲಾತಿ ಅಸಾಂವಿಧಾನಿಕ ಎಂದು ತೀರ್ಪು ನೀಡಿತು.
ಈ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ಮೊಟ್ಟ ಮೊದಲ ತಿದ್ದುಪಡಿಯನ್ನು ತರಲಾಯಿತು. ಆ ಮೂರು ಅಂಶಗಳ ತಿದ್ದುಪಡಿಯಲ್ಲಿ ಶಿಕ್ಷಣದಲ್ಲಿ ಮೀಸಲಾತಿಯೆಂಬುದು ಪ್ರಮುಖವಾಗಿತ್ತು. ಆ ಮೊದಲ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಆರ್ಟಿಕಲ್ 15 (4)ನ್ನು ಒಕ್ಕೊರಲಿಂದ ಸೇರಿಸಲಾಯಿತು:
ಆರ್ಟಿಕಲ್ 15 (4): Nothing in this article or in clause (2) of article 29 shall prevent the State from making any special provision for the advancement of any socially and educationally backward classes of citizens or for the Scheduled Castes and the Scheduled Tribes.
ನಿ.ನ್ಯಾ. ಹೆಗ್ಡೆಯವರೇ? ಈಗ ಇದೂ ಸಂವಿಧಾನದ ಭಾಗವೇ ಅಲ್ಲವೇ?
ಹಾಗಿದ್ದ ಮೇಲೆ ಮೀಸಲಾತಿ ಸಂವಿಧಾನ ವಿರೋಧಿ ಹೇಗಾಗುತ್ತದೆ?
ಹತ್ತು ವರ್ಷಕ್ಕೆ ಮಾತ್ರ ಮೀಸಲಾತಿ: ಸಾಂವಿಧಾನಿಕ ಸತ್ಯವೇನು?
ಇದು ಮೀಸಲಾತಿಯ ಬಗ್ಗೆ ಮೇಲ್ಜಾತಿ ಪಟ್ಟಭದ್ರರು ಸೃಷ್ಟಿಸಿರುವ ಮತ್ತೊಂದು ಅಪಪ್ರಚಾರ.
ಪ್ರಭುತ್ವ ಸೇವೆಗಳಲ್ಲಿ ಮೀಸಲಾತಿಗೂ ಹಾಗೂ ಶಿಕ್ಷಣದಲ್ಲಿ ಮೀಸಲಾತಿಗೂ ಯಾವುದೇ ಸಮಯದ ಮಿತಿಯಿಲ್ಲ ಎಂದು ಸಂವಿಧಾನ ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತದೆ. ಅಂತಹ ಗಡುವನ್ನು ವಿಧಿಸಬೇಕು ಎಂಬ ಪ್ರಸ್ತಾವವನ್ನು ಸಂವಿಧಾನ ಸಭೆ ನಿರಾಕರಿಸಿದೆ. ಸಮಯದ ಗಡುವಿಲ್ಲದ ನೌಕರಿ ಮೀಸಲಾತಿಯ 16 (4) ಮತ್ತು ಶೈಕ್ಷಣಿಕ ಮೀಸಲಾತಿಯ 15 (4) ಜಾರಿಯಾಗಿದೆ.
ಹತ್ತುವರ್ಷದ ಮೀಸಲಾತಿಯ ಅಂಶವಿರುವುದು ಕೇವಲ ರಾಜಕೀಯಕ್ಕೆ ಮಾತ್ರ. ಅದರ ಬಗ್ಗೆ ಚರ್ಚಿಸುವ ಮೊದಲು ರಾಜಕೀಯ ಮೀಸಲಾತಿಯ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು.
1947ಕ್ಕೆ ಮುನ್ನ ಬ್ರಿಟಿಷರು ತಮ್ಮದೇ ವಸಾಹತುಶಾಹಿ ಕಾರಣಗಳಿಗಾಗಿ ಸ್ಥಳೀಯ ಸಂಸ್ಥೆಗಳ ರಾಜಕೀಯ ಪ್ರಾತಿನಿಧ್ಯದಲ್ಲಿ ಕೋಮುವಾರು(ಹಿಂದೂ, ಮುಸ್ಲಿಮ್, ಸಿಖ್ ಇತ್ಯಾದಿ) ಮೀಸಲಾತಿಯನ್ನು 1916ರ ಲಕ್ನೊ ಒಪ್ಪಂದದ ಭಾಗವಾಗಿ ಹಾಗೂ 1919ರ ಸುಧಾರಣೆಗಳ ನಂತರ ಜಾರಿಗೆ ತಂದರು. ಇದರಿಂದಾಗಿ ಯಾವ ಕೋಮುಗಳ ಸಂಖ್ಯೆ ಹೆಚ್ಚಿದೆಯೋ ಅವರಿಗೆ ಹೆಚ್ಚು ಪ್ರಾತಿನಿಧ್ಯ ಎಂದಾಯಿತು. ಆ ನಂತರವೇ ಮೇಲ್ಜಾತಿ ಸಮುದಾಯ ತನ್ನನ್ನು ಹಿಂದೂ ಎಂದು ಕರೆದುಕೊಳ್ಳಲು ಪ್ರಾರಂಭಿಸಿತು ಮತ್ತು ಯಾವ ಮೇಲ್ಜಾತಿ ಸಮುದಾಯ ಅಸ್ಪಶ್ಯರನ್ನು ಮನುಷ್ಯರೆಂದೂ, ಹಿಂದೂಗಳು ಎಂದು ಪರಿಗಣಿಸುತ್ತಿರಲಿಲ್ಲವೋ ಅವರನ್ನು ಹಿಂದೂ ಎಂದು ಬಲವಂತವಾಗಿ ಕರೆಯಲು ಪ್ರಾರಂಭಿಸಿತು.
ಆದರೆ ಅಂಬೇಡ್ಕರ್ ಈ ಸಂಚನ್ನು ಬಹಳ ಬೇಗನೆ ಅರಿತರು ಮತ್ತು ದುಂಡು ಮೇಜಿನ ಪರಿಷತ್ತಿನಲ್ಲಿ ಅಸ್ಪಶ್ಯರು ಹಿಂದೂಗಳಲ್ಲ ಎಂದು ಪ್ರತಿಪಾದಿಸಿದರು. ಮುಸ್ಲಿಮ್ ಮತ್ತು ಸಿಖ್ಖರಂತೆ ಅಸ್ಪಶ್ಯರನ್ನು ಪ್ರತ್ಯೇಕ ಕೋಮು ಎಂದೇ ಪರಿಗಣಿಸಿ ಪ್ರತ್ಯೇಕ ಕೋಮು ಪ್ರಾತಿನಿಧ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಅದಕ್ಕೆ ಒಪ್ಪಿದ ಬ್ರಿಟಿಷ್ ಆಡಳಿತ ಮುಂದಿನ ಎರಡು ಚುನಾವಣೆಗಳ ತನಕ ಪ್ರಾಯೋಗಿಕವಾಗಿ ಅದನ್ನು ಜಾರಿ ಮಾಡಲು ಒಪ್ಪಿಕೊಂಡಿತ್ತು. ಆದರೆ ಗಾಂಧಿಯವರು ಯರವಾಡ ಜೈಲಿನಲ್ಲಿ ಅದರ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಹೀಗಾಗಿ ಉದ್ವಿಗ್ನ ಸನ್ನಿವೇಶದಲ್ಲಿ ಹಿಂದೂ ಚೌಕಟ್ಟಿನೊಳಗೆ ಅಸ್ಪಶ್ಯರಿಗೆ ವಿಶೇಷ ರಾಜಕೀಯ ಮೀಸಲಾತಿ ನೀಡುವ ಪೂನ ಒಪ್ಪಂದವಾಯಿತು.
ಇದು ಸವರ್ಣೀಯ ಭಾರತದಿಂದ ಅಸ್ಪಶ್ಯ ಭಾರತಕ್ಕಾದ ಘೋರ ಅನ್ಯಾಯ. ಈ ಅನ್ಯಾಯದ ಒಪ್ಪಂದಕ್ಕೆ ಸವರ್ಣೀಯ ಭಾರತದಿಂದ ಸಹಿ ಹಾಕಿದವರಲ್ಲಿ ಕಾಂಗ್ರೆಸ್ ನಾಯಕರ ಜೊತೆ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್‌ನ ಸೈದ್ಧಾಂತಿಕ ಮಹಾಪೋಷಕರಾದ ಮದನ ಮೋಹನ ಮಾಳವೀಯ, ಸವರ್ಣೀಯ ಬಂಡವಾಳಶಾಹಿ ವರ್ಗದ ಪ್ರತಿನಿಧಿ ಬಿರ್ಲಾ ಎಲ್ಲರೂ ಇದ್ದರು.
ವಾಸ್ತವದಲ್ಲಿ ಭಾರತ ವಿಭಜನೆಯಾಗುವವರೆಗೂ ಕೋಮುವಾರು ಪ್ರಾತಿನಿಧ್ಯ ಸ್ವತಂತ್ರ ಭಾರತದಲ್ಲೂ ಮುಂದುವರಿಸುವ ಚರ್ಚೆಗಳೇ ನಡೆಯುತ್ತಿತ್ತು. ಆದರೆ ಭಾರತ ವಿಭಜನೆಯಾದ ಮೇಲೆ ಧರ್ಮಾಧಾರಿತ ಮೀಸಲಾತಿ ರದ್ದಾಗಿ, ಅಸ್ಪಶ್ಯರ ರಾಜಕೀಯ ಮೀಸಲಾತಿಯು ಆರ್ಟಿಕಲ್ 334ರ ಭಾಗವಾಗಿ ಹತ್ತುವರ್ಷಗಳಿಗೆ ನಿಗದಿಯಾಯಿತು. ಇದು ಸಂವಿಧಾನದಲ್ಲಿ ದಲಿತರ ವಿರುದ್ಧ ಸವರ್ಣೀಯರು ಪಡೆದುಕೊಂಡ ಗೆಲುವು.
ಆದರೆ ಎಚ್ಚೆತ್ತ ದಲಿತ ಪ್ರಜ್ಞೆಯ ಕಾರಣದಿಂದಾಗಿ ಕಳೆದ 80 ವರ್ಷಗಳಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಈ ರಾಜಕೀಯ ಮೀಸಲಾತಿ ಸರ್ವ ಸಮ್ಮತಿಯ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಮುಂದಿನ ಹತ್ತು ವರ್ಷಗಳಿಗೆ ವಿಸ್ತರಣೆಯಾಗುತ್ತಾ ಬರುತ್ತಿದೆ. ತೀರಾ ಇತ್ತೀಚೆಗೆ 104ನೇ ತಿದ್ದುಪಡಿಯ ಮೂಲಕ ಅದನ್ನು 2030ರ ವರೆಗೂ ವಿಸ್ತರಿಸಲಾಗಿದೆ. ಆದರೆ ಒಂದು ವೇಳೆ ಈ ರಾಜಕೀಯ ಮೀಸಲಾತಿ ರದ್ದಾದರೆ ಪಕ್ಷಗಳು ಇಷ್ಟೇ ಪ್ರಾತಿನಿಧ್ಯವನ್ನು ದಲಿತರಿಗೆ ನೀಡುತ್ತಾರೆಯೇ? ಒಳಮೀಸಲಾತಿ ಇಲ್ಲದಿದ್ದರೆ ದಲಿತರಲ್ಲಿ ದಲಿತರಿಗೆ ಮೀಸಲಾತಿ ಸಿಗುತ್ತದೆಯೇ? ಈಗ ಮಹಿಳಾ ಮೀಸಲಾತಿ ಇಲ್ಲ. ಯಾವುದಾದರೂ ಪಕ್ಷಗಳು ಮಹಿಳೆಯರಿಗೆ ಶೇ.50 ಬಿಡಿ, ಶೇ. 33 ಆದರೂ ಪ್ರಾತಿನಿಧ್ಯ ಕೊಟ್ಟಿವೆಯೇ? ಈಗಂತೂ ಕರ್ನಾಟಕದ ಮಂತ್ರಿಮಂಡಲದಲ್ಲಿ ಒಬ್ಬ ಮಹಿಳೆಯೂ ಇಲ್ಲ !
ಕೊನೆಯದಾಗಿ ಒಂದು ಪ್ರಶ್ನೆ.
ಹೆಗ್ಡೆಯವರು ಇಡಬ್ಲ್ಯುಎಸ್ ಮೀಸಲಾತಿಯನ್ನೇಕೆ ಖಂಡಿಸುವುದಿಲ್ಲ?!
ನಿ. ನ್ಯಾ. ಹೆಗ್ಡೆಯವರೇ, 2019ರಲ್ಲಿ ಮೋದಿ ಸರಕಾರ ಯಾವುದೇ ಸಾಮಾಜಿಕ ಶೋಷಣೆಗೆ ಒಳಗಾಗದ ಮೇಲ್ಜಾತಿಗಳಿಗೂ ಇಡಬ್ಲ್ಯುಎಸ್ ಮೀಸಲಾತಿ ನೀಡಿತು. ಅದನ್ನು ಕಾಂಗ್ರೆಸ್, ಬಿಎಸ್‌ಪಿ, ಎಡಪಕ್ಷಗಳಾದಿಯಾಗಿ ಎಲ್ಲಾ ಪಕ್ಷಗಳು ಸ್ವಾಗತಿಸಿದವು.
ಆದರೆ ಅದರ ಸಾಂವಿಧಾನಿಕತೆಯ ಬಗ್ಗೆ ಭಿನ್ನಮತದ ತೀರ್ಪು ನೀಡಿದ ನ್ಯಾ. ರವೀಂದ್ರ ಭಟ್ ಹಾಗೂ ಆಗಿನ ಮುಖ್ಯ ನ್ಯಾಯಾಧೀಶ ಯು.ಯು. ಲಲಿತ್ ಅವರು ಮೀಸಲಾತಿಯ ಆರ್ಥಿಕ ಮಾನದಂಡವನ್ನು ತಪ್ಪಾಗಿ ಎತ್ತಿ ಹಿಡಿದರೂ ಇಡಬ್ಲ್ಯುಎಸ್ ಮೀಸಲಾತಿಯ ಬಗ್ಗೆ ಒಂದು ಪ್ರಮುಖ ಭಿನ್ನಮತ ವ್ಯಕ್ತಪಡಿಸಿದ್ದರು.
ಅದೇನೆಂದರೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (Economically Weaker Sections ಮೀಸಲಾತಿ ಎನ್ನುವುದಾದರೆ ಎಲ್ಲಾ ಜಾತಿಯ ಬಡವರಿಗೂ ಅನ್ವಯವಾಗಬೇಕು. ಆದರೆ ಇಡಬ್ಲ್ಯುಎಸ್ ಮೀಸಲಾತಿಯು ಎಸ್‌ಸಿ-ಎಸ್‌ಟಿ-ಒಬಿಸಿಗಳಲ್ಲದ ಬಡವರಿಗೆ ಎಂದು ಪರೋಕ್ಷವಾಗಿ ಜಾತಿಯನ್ನೇ ಮಾನದಂಡವಾಗಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಈ ದೇಶದಲ್ಲಿ ಅತಿ ಹೆಚ್ಚು ಬಡವರು ಇರುವುದು ಎಸ್‌ಸಿ-ಎಸ್‌ಟಿ-ಒಬಿಸಿ ಜಾತಿಗಳಲ್ಲೇ. ಹೀಗಾಗಿ ಇಡಬ್ಲ್ಯುಎಸ್ ಮೀಸಲಾತಿಯು ಜಾತಿ ಆಧಾರಿತ ಮೀಸಲಾತಿಯೇ ಆಗುತ್ತದೆ ಎಂದು ಅದರ ಸಾಂವಿಧಾನಿಕತೆಯ ಬಗ್ಗೆ ಭಿನ್ನಮತದ ತೀರ್ಪು ಕೊಟ್ಟಿದ್ದರು.
ಜಾತಿ ಆಧಾರಿತ ಮೀಸಲಾತಿಯನ್ನು ನಿರಾಕರಿಸುವ ನೀವು ಮೇಲ್ಜಾತಿಗಳಿಗೆ ಬಡತನ ಆಧಾರದ ಹೆಸರಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನೇ ಕೊಡುವ ಇಡಬ್ಲ್ಯುಎಸ್ ಮೀಸಲಾತಿಯನ್ನೇಕೆ ವಿರೋಧಿಸಲಿಲ್ಲ? ಜಸ್ಟ್ ಆಸ್ಕಿಂಗ್