ಆಗಸ್ಟ್ 9 ಮತ್ತು ಆಗಸ್ಟ್ 15

Update: 2026-08-17 16:26 IST

ರಾಮಮನೋಹರ ಲೋಹಿಯಾ ತೀರಿಕೊಳ್ಳುವ ಎರಡು ತಿಂಗಳ ಕೆಳಗೆ, ಆಧುನಿಕ ಭಾರತದ ಚರಿತ್ರೆಯಲ್ಲಿ ಆಗಸ್ಟ್ 9 ಮತ್ತು ಆಗಸ್ಟ್ 15ರ ನಡುವಣ ವ್ಯತ್ಯಾಸ ಕುರಿತು ಬರೆದರು. ‘ಮ್ಯಾನ್ಕೈಂಡ್’ ಮಾಸಪತ್ರಿಕೆಯ ಆಗಸ್ಟ್ 1967ರ ಸಂಚಿಕೆಯಲ್ಲಿ ಪ್ರಕಟವಾದ ಅವರ ‘ಆಗಸ್ಟ್ ಕ್ರಾಂತಿ: ಇಪ್ಪತ್ತೈದನೇ ಜಯಂತಿ’ ಲೇಖನದ ಮಾತುಗಳು:

‘ಆಗಸ್ಟ್ 9 ಜನರ ದಿನಾಚರಣೆಯಾಗಿತ್ತು ಮತ್ತು ಅದು ಎಂದೆಂದೂ ಜನರ ದಿನಾಚರಣೆಯಾಗಿಯೇ ಉಳಿಯಲಿದೆ. ಆಗಸ್ಟ್ 15 ಸರಕಾರಿ ದಿನಾಚರಣೆ. ಆಗಸ್ಟ್ ಹದಿನೈದನ್ನು ಕೊಂಬು ಕಹಳೆಗಳೊಂದಿಗೆ ಆಚರಿಸಲಾಗುತ್ತಿದೆ. ಏಕೆಂದರೆ ಅಂದು ಬ್ರಿಟಿಷ್ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಭಾರತದ ಪ್ರಧಾನ ಮಂತ್ರಿಯವರೊಡನೆ ಕೈ ಕುಲುಕಿದರು ಮತ್ತು ಭಗ್ನ ದೇಶಕ್ಕೆ ಭಗ್ನ ಸ್ವಾತಂತ್ರ್ಯವನ್ನು ಕೊಟ್ಟರು. ಆದರೆ ಆಗಸ್ಟ್ 9, 1942 ಜನರ ಸಂಕಲ್ಪವನ್ನು ವ್ಯಕ್ತಪಡಿಸಿತು: ನಾವು ಸ್ವತಂತ್ರರಾಗಬಯಸುತ್ತೇವೆ ಮತ್ತು ಸ್ವತಂತ್ರರಾಗುತ್ತೇವೆ ಎಂಬ ಸಂಕಲ್ಪ ಅದು. ನಮ್ಮ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಟಿಗಟ್ಟಲೆ ಜನ ಸ್ವತಂತ್ರರಾಗುವ ಆಸೆಯನ್ನು ವ್ಯಕ್ತಪಡಿಸಿದರು. ಕೆಲವು ಸ್ಥಳಗಳಲ್ಲಿ ಇದನ್ನು ಸಾಕಷ್ಟು ಬಲವಾಗಿಯೇ ವ್ಯಕ್ತಪಡಿಸಲಾಯಿತು. ಬಲ್ಲಿಯಾ ಎಂಬ ಒಂದು ಜಿಲ್ಲೆ ಕೆಲಕಾಲ ಸ್ವತಂತ್ರವಾಯಿತು. ಜಿಲ್ಲಾಧಿಕಾರಿಯನ್ನು ಬಂಧಿಸಲಾಯಿತು. ನೂರಾರು ಪೊಲೀಸ್ ವಲಯಗಳು ಸ್ವತಂತ್ರವಾದವು. ಆದರೆ ಜನರ ಸಂಕಲ್ಪ ಸಾಕಷ್ಟು ಶಕ್ತಿಯುತವಾಗಿತ್ತಾದರೂ ಅಲ್ಪಾಯುವಾಗಿತ್ತು. ಅದಕ್ಕೆ ಶಾಶ್ವತ ತೀವ್ರತೆ ಇರಲಿಲ್ಲ... ಏನೇ ಇರಲಿ. ಇದು 9 ಆಗಸ್ಟ್ 1942ರ ಇಪ್ಪತ್ತೈದನೇ ವರ್ಷದ ಜಯಂತಿ. ಇದನ್ನು ಚೆನ್ನಾಗಿ ಆಚರಿಸಬೇಕು. ಪ್ರಾಯಶಃ ಇದರ ಐವತ್ತನೇ ವಾರ್ಷಿಕೋತ್ಸವವನ್ನು ಹೇಗೆ ಆಚರಿಸಬಹುದು ಎಂದರೆ, ಆಗಸ್ಟ್ 15ನ್ನು ಎಲ್ಲರೂ ಮರೆತುಬಿಡುವ ಹಾಗೆ.’

ಆದರೆ ಆಗಸ್ಟ್ 15ರ ಸಲೀಸು ಯಾಂತ್ರಿಕ ಆಚರಣೆಗೆ ಒಗ್ಗಿಕೊಂಡ ದೇಶ ಆಗಸ್ಟ್ 9ರ ಮಹತ್ವವನ್ನೇ ಮರೆತುಬಿಟ್ಟಿತು. ಎಂಭತ್ತನಾಲ್ಕು ವರ್ಷಗಳ ಕೆಳಗೆ 1942ರ ಆಗಸ್ಟ್ 8ರಂದು ನಡೆದ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳವಳಿ ಹಾಗೂ ಆಗಸ್ಟ್ 9ರ ‘ಆಗಸ್ಟ್ ಕ್ರಾಂತಿ ದಿನ’ ಹೊಸ ತಲೆಮಾರುಗಳಿಗಿರಲಿ, ನಮ್ಮ ಸಾರ್ವಜನಿಕ ವ್ಯಕ್ತಿಗಳಿಗೂ ಮರೆತುಹೋದಂತಿದೆ:

8 ಆಗಸ್ಟ್ 1942. ಆ ಸಂಜೆ ಗಾಂಧೀಜಿ ಬ್ರಿಟಿಷರಿಗೆ ‘ಕ್ವಿಟ್ ಇಂಡಿಯಾ’ (ಭಾರತ ಬಿಟ್ಟು ತೊಲಗಿ) ಎಂಬ ಅಂತಿಮ ಎಚ್ಚರಿಕೆ ಕೊಟ್ಟರು. ಬಾಂಬೆಯ ಗ್ವಾಲಿಯರ್ ಕೆರೆ ಮೈದಾನದ ಸುತ್ತ ಕಾಯುತ್ತಿದ್ದ ಜನಸಮೂಹಕ್ಕೆ

‘ಡೂ ಆರ್ ಡೈ’ (ಮಾಡು ಇಲ್ಲವೇ ಮಡಿ) ಕರೆ ಕೊಟ್ಟರು. ದೇಶದುದ್ದಕ್ಕೂ ಮಿಂಚಿನ ಸಂಚಾರವಾಯಿತು.

9 ಆಗಸ್ಟ್ 1942. ಗಾಂಧೀಜಿ, ಕಾಂಗ್ರೆಸ್‌ನ ಮುಂಚೂಣಿ ನಾಯಕರಾದ ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಝಾದ್ ಸೇರಿದಂತೆ ರಾಷ್ಟ್ರಾದ್ಯಂತ ಹಿರಿಯ, ಕಿರಿಯ ಚಳವಳಿಯ ನಾಯಕರ ಬಂಧನವಾಯಿತು.

ಅವತ್ತು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಎಸೆಸೆಲ್ಸಿ ಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಊರಿನ ಸ್ವಾತಂತ್ರ್ಯ ಚಳವಳಿಗಾರರು ಹೈಸ್ಕೂಲಿನ ಬಳಿ ಬಂದಾಗ, ಪರೀಕ್ಷೆಯನ್ನು ಅರ್ಧಕ್ಕೇ ಬಿಟ್ಟು ಹೊರ ಬಂದ ಹುಡುಗರಲ್ಲಿ ಶಾಂತವೇರಿ ಗೋಪಾಲಗೌಡ ಎಂಬ ಹುಡುಗನೂ ಇದ್ದ. ಇಂಥ ಲಕ್ಷಾಂತರ ಹುಡುಗ, ಹುಡುಗಿಯರು ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿ ಮುಂದೆ ಧೀಮಂತ ರಾಜಕೀಯ ನಾಯಕ ನಾಯಕಿಯರಾಗಿ ಬೆಳೆದ ಅಪೂರ್ವ ಚರಿತ್ರೆಯನ್ನು ಭಾರತದ ಹೊಸ ತಲೆಮಾರುಗಳು ಮರೆಯಬಾರದು. ಮೊನ್ನೆ ಕೇಂದ್ರ ಸರಕಾರದ ಭಕ್ತರಾದ ಲಾಯರ್ ಒಬ್ಬರು ‘ಹದಿನೆಂಟು ವರ್ಷ ವಯಸ್ಸಿನೊಳಗಿನ ಹುಡುಗಿಯೊಬ್ಬಳನ್ನು ದಿಲ್ಲಿಯ ಜಂತರ್ ಮಂತರ್‌ನ ವಿದ್ಯಾರ್ಥಿ ಚಳವಳಿಗೆ ಕರೆತಂದವರಾರು?’ ಎಂಬ ಚಿಲ್ಲರೆ ‘ಲೀಗಲ್’ ಪ್ರಶ್ನೆಯನ್ನೆತ್ತಿದ್ದರು; ಬಾಲಕ ಗೋಪಾಲಗೌಡನಂಥ ಲಕ್ಷಾಂತರ ಹುಡುಗರು ಭಾಗಿಯಾದ ಸ್ವಾತಂತ್ರ್ಯ ಚಳವಳಿಯ ವಿವರಗಳೇ ಇಂಥ ಮೂರ್ಖರಿಗೆ ಗೊತ್ತಿರುವಂತಿಲ್ಲ.

9 ಆಗಸ್ಟ್ 1942. ರಾಷ್ಟ್ರ ನಾಯಕರ ಬಂಧನದಿಂದ ಸಿಟ್ಟಿಗೆದ್ದ ಜನ ತಂತಾವೇ ನಾಯಕರಾದರು. ತಮತಮಗೆ ತೋಚಿದಂತೆ ‘ಮಾಡು ಇಲ್ಲವೇ ಮಡಿ’ ಕರೆಯನ್ನು ಜಾರಿಗೊಳಿಸತೊಡಗಿದರು. ಪೊಲೀಸ್ ಠಾಣೆಗಳು, ಅಂಚೆ ಕಚೇರಿಗಳು, ಟೆಲಿಫೋನ್ ವೈರುಗಳು, ರೈಲ್ವೆ ಹಳಿಗಳು...ಮುಂತಾಗಿ ಸರಕಾರಿ ಆಸ್ತಿಯನ್ನು ಧ್ವಂಸ ಮಾಡತೊಡಗಿದರು. ಕಾಂಗ್ರೆಸ್‌ನ ಮುಂಚೂಣಿ ನಾಯಕರು ಜೈಲಿನಲ್ಲಿರುವಾಗ ಸ್ವಾತಂತ್ರ್ಯ ಚಳವಳಿಯನ್ನು ಬಗ್ಗು ಬಡಿಯುವುದು ಸುಲಭ ಎಂದುಕೊಂಡ ಬ್ರಿಟಿಷ್ ಆಡಳಿತ ಭಾರತೀಯ ಪೊಲೀಸರನ್ನೇ ಭಾರತೀಯ ಚಳವಳಿಗಾರರ ಮೇಲೆ ಛೂಬಿಟ್ಟಿತು. ಜನರನ್ನು ಜೈಲಿಗಟ್ಟಿದ ಮೇಲೆ ಚಳವಳಿಯ ಕತೆ ಮುಗಿಯಿತು ಎಂದುಕೊಂಡಿತ್ತು?

ಆದರೆ ಆಗಸ್ಟ್ ಕ್ರಾಂತಿ ಅದೇ ಆಗ ಶುರುವಾಗಿತ್ತು.

ಆಗಸ್ಟ್ ಕ್ರಾಂತಿಯ ಕಾಲದ ಸಾವಿರಾರು ಜನತಾ ಸಾಹಸಗಳ ನಡುವೆ ಸಮಾಜವಾದಿಗಳ ಪುಟ್ಟ ಗುಂಪು ನಡೆಸಿದ ‘ಕಾಂಗ್ರೆಸ್ ರೇಡಿಯೊ’ ಸಾಹಸ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಒಂದು ಸಂಜೆ ಇದ್ದಕ್ಕಿದ್ದಂತೆ ‘ಇದು ಕಾಂಗ್ರೆಸ್ ರೇಡಿಯೊ! ಭಾರತದ ಯಾವುದೋ ಭಾಗದಿಂದ ನಾವು ಮಾತಾಡುತ್ತಿದ್ದೇವೆ! ತರಂಗಾಂತರ 41.42’ ಎಂದು ಬಾನುಲಿಯಲ್ಲಿ ಹೆಣ್ಣು ದನಿಯೊಂದು ಘೋಷಿಸಿದಾಗ ಬ್ರಿಟಿಷ್ ಸರಕಾರ ಬೆಚ್ಚಿತು. ಮರುಗಳಿಗೆಗಾಗಲೇ ಗಂಡಿನ ದನಿಯಲ್ಲಿ ಸ್ವಾತಂತ್ರ್ಯ ಚಳುವಳಿಗೆ ಮಾರ್ಗದರ್ಶನ ಶುರುವಾಯಿತು. ಬ್ರಿಟಿಷ್ ಪೊಲೀಸರು ನಡೆಸುತ್ತಿದ್ದ ಹಿಂಸೆಗಳ ವರದಿಗಳು ಬಿತ್ತರವಾಗತೊಡಗಿದವು. ಪ್ರತಿರಾತ್ರಿ 8.30ರ ಸುಮಾರಿಗೆ ಇಕ್ಬಾಲರ ‘ಸಾರೆ ಜಹಾಂ ಸೆ ಅಚ್ಛಾ’ ಹಾಡು ಮೊಳಗುತ್ತಿತ್ತು; ಹಿಂದೂಸ್ತಾನಿ ಅಥವಾ ಇಂಗಿಷ್‌ನಲ್ಲಿ ಶುರುವಾಗುತ್ತಿದ್ದ ಪ್ರಸಾರ ‘ವಂದೇ ಮಾತರಂ’ನೊಂದಿಗೆ ಮುಗಿಯುತ್ತಿತ್ತು. ಕಾಂಗ್ರೆಸ್ ರೇಡಿಯೊ, ಫ್ರೀಡಂ ರೇಡಿಯೊ, ಆಝಾದಿ ರೇಡಿಯೊ ಎಂದು ಕರೆಯಲಾಗುತ್ತಿದ್ದ ಈ ರೇಡಿಯೊವನ್ನು ಬ್ರಿಟಿಷ್ ಪೊಲೀಸರು ‘ಅಕ್ರಮ ಕಾಂಗ್ರೆಸ್ ರೇಡಿಯೊ’ ಎನ್ನುತ್ತಿದ್ದರು! ಈ ಭೂಗತ ರೇಡಿಯೋ ಪ್ರಸಾರದ ಕೆಲವು ತುಣುಕುಗಳು:

‘ಬ್ರಿಟಿಷರು ಸ್ವಾತಂತ್ರ್ಯ ಚಳವಳಿಯನ್ನು ತುಳಿಯಲು ಏನೆಲ್ಲಾ ಮಾಡುತ್ತಿದ್ದಾರೆ. ಆದರೆ ಭಾರತೀಯರು ಜಗ್ಗದೆ ಎದುರಾಳಿಯನ್ನು ಎದುರಿಸುತ್ತಿದ್ದಾರೆ; ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಡಲೂ ತಯಾರಾಗಿದ್ದಾರೆ ಎಂಬುದು ಬ್ರಿಟಿಷರಿಗೆ ಅರಿವಾಗತೊಡಗಿದೆ...ದಬ್ಬಾಳಿಕೆಯ ಆಳ್ವಿಕೆಯನ್ನು ಮೂಕ ಪ್ರಾಣಿಗಳಂತೆ ಸಹಿಸಲು ಭಾರತೀಯರು ಸಿದ್ಧರಿಲ್ಲ ಎಂಬುದನ್ನು ಚಳವಳಿ ಸಿದ್ಧ ಮಾಡಿ ತೋರಿಸಿದೆ...ಬ್ರಿಟಿಷ್ ಆಡಳಿತ ಕೊನೆಗೊಂಡು ಭಾರತೀಯರ ಆಳ್ವಿಕೆ ಬರುವ ತನಕ ಚಳವಳಿ ಮುಂದುವರಿಯುತ್ತಲೇ ಇರುತ್ತದೆ...’

‘ಬ್ರಿಟಿಷ್ ಸರಕಾರ ಮತ್ತು ಕಾಂಗ್ರೆಸ್‌ನ ನಡುವೆ ರಾಜಿಕಬೂಲಿ ಮಾಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಗಾಂಧೀಜಿ ಜೈಲು ಸೇರುವ ಮುನ್ನ ‘ಇದು ಕೊನೇ ಯುದ್ಧ’ ಎಂದು ಸಾರಿ ಹೋಗಿದ್ದಾರೆ; ಅವರ ಕರೆಯಂತೆ ‘ಮಾಡು ಇಲ್ಲವೇ ಮಡಿ’- ಈ ಎರಡರ ನಡುವೆ ನಮ್ಮ ಆಯ್ಕೆ ಯಾವುದೆಂಬುದನ್ನು ನಿರ್ಧರಿಸಬೇಕಾಗಿದೆ.’

‘ಹಿಂದೂಗಳು, ಮಹಮ್ಮದೀಯರು, ಕ್ರಿಶ್ಚಿಯನ್ನರು, ಪಾರ್ಸಿಗಳು ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ. ಆದರೆ ಈ ಕಾಲದಲ್ಲಿ ಸುಳ್ಳು ಹೇಳುವುದು ಕಾನೂನುಬದ್ಧವಾಗಿಬಿಟ್ಟಿದೆ! ಈಗಿನ ದೊಡ್ಡ ಸುಳ್ಳೆಂದರೆ, ‘ಕೆಲವೇ ಮಂದಿ ಮಾತ್ರ ಸ್ವಾತಂತ್ರ್ಯ ಕೇಳುತ್ತಿದ್ದಾರೆ; ಆದರೆ ಒಂಭತ್ತು ಕೋಟಿ ಮಹಮ್ಮದೀಯರು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದಾರೆ ಎನ್ನುವುದು. ಇಂಥ ಸುಳ್ಳನ್ನು ಬ್ರಿಟಿಷರನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ! ಲಕ್ಷಗಟ್ಟಲೆ, ಕೋಟಿಗಟ್ಟಲೆ ಮುಸ್ಲಿಮರು ನಮಗೆ ಹೆಗಲೆಣೆಯಾಗಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು ಚರಿತ್ರೆ ಸಾರಿ ಹೇಳುತ್ತಿದೆ...’

‘ವಿದೇಶಿ ವಸ್ತುಗಳ ಫ್ಯಾಕ್ಟರಿ, ಕಚೇರಿಗಳೆದುರು ಶಾಂತಿಯುತವಾಗಿ ಪಿಕೆಟಿಂಗ್ ನಡೆಸಿ. ಸರಕಾರಿ ನೌಕರಿ ಬಿಟ್ಟುಬನ್ನಿ. ಮನೆಮನೆಗಳಲ್ಲಿ ಚರಕಾ ಇರಲಿ. ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ. ಹಿಂದೂ-ಮುಸ್ಲಿಮ್ ಸಾಮರಸ್ಯ ಕಾಪಾಡಿ.’ ಈ ಕಾಂಗ್ರೆಸ್ ರೇಡಿಯೊ ಪ್ರಸಾರಗಳನ್ನು ಎಚ್.ವಿ.ಆರ್. ಅಯ್ಯಂಗಾರ್ ಎಂಬ ಬಾಂಬೆ ಬ್ರಿಟಿಷ್ ಸರಕಾರದ ಅಡಿಶನಲ್ ಸೆಕ್ರೆಟರಿ ಕೇಳಿಸಿಕೊಳ್ಳುತ್ತಾ, ಆ ಮಾತುಗಳ ವಿಷಯ, ಭಾಷೆ, ಧೋರಣೆಗಳನ್ನೆಲ್ಲ ‘ಸ್ಟಡಿ’ ಮಾಡುತ್ತಿದ್ದ. ಕೊನೆಗೆ, ‘ಈ ಪ್ರಸಾರದಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಫಿಲಾಸಫಿ ಇದೆ; ಭೂಗತವಾಗಿರುವ ರಾಮಮನೋಹರ ಲೋಹಿಯಾ ಈ ಪ್ರಸಾರಗಳ ಹಿನ್ನೆಲೆಯಲ್ಲಿದ್ದಂತಿದೆ’ ಎಂದು ಅಯ್ಯಂಗಾರ್ ತೀರ್ಮಾನಿಸಿದ. ತನ್ನ ತೀರ್ಮಾನಕ್ಕೆ ಪುರಾವೆಯಾಗಿ, ‘ಸ್ವತಂತ್ರ ಇಂಡಿಯಾ ರೈತರ, ಕಾರ್ಮಿಕರ, ಕೂಲಿಕಾರರದ್ದಾಗಿರುತ್ತದೆ’; ‘ಸ್ವಾತಂತ್ರ್ಯಕ್ಕೋಸ್ಕರ ಕ್ರಾಂತಿ ಎಂದರೆ ಬಡವರಿಗಾಗಿ ಕ್ರಾಂತಿ’- ಇಂಥ ವಾಕ್ಯಗಳನ್ನು ಅಯ್ಯಂಗಾರ್ ಹೆಕ್ಕಿ ತೋರಿಸಿದ. ‘ಇದು ಸೋಷಲಿಸ್ಟರ ಕ್ರಾಂತಿಕಾರಿ ಚಳವಳಿ’ ಎಂದು ಬ್ರಿಟಿಷ್ ಸರಕಾರ ತೀರ್ಮಾನಿಸಿತು. ಭೂಗತ ರೇಡಿಯೋದ ಐಡಿಯಾ ಕೊಟ್ಟ ಲೋಹಿಯಾ ಹಣಕಾಸನ್ನೂ ಕಲೆ ಹಾಕಿದ್ದರು; ಅಚ್ಯುತ್ ಪಟವರ್ಧನ್ ಮೊದಲಾದವರ ಜೊತೆಗೂಡಿ ಪ್ರಸಾರಕ್ಕಾಗಿ ವರದಿ, ವಿಶ್ಲೇಷಣೆಗಳನ್ನು ಸಿದ್ಧಪಡಿಸುತ್ತಿದ್ದರು. ಉಷಾ ಮೆಹ್ತಾ ಎಂಬ 22 ವರ್ಷದ ಕಾನೂನು ವಿದ್ಯಾರ್ಥಿನಿ ವಿಠಲದಾಸ್, ಜವೇರಿ ಮೊದಲಾದವರ ಜೊತೆಗೂಡಿ ‘ಕಾಂಗ್ರೆಸ್ ರೇಡಿಯೊ’ದ ಉಸ್ತುವಾರಿ, ಪ್ರಸಾರ ನೋಡಿಕೊಳ್ಳುತ್ತಿದ್ದರು. ಜೀವದ ಹಂಗು ತೊರೆದ ಉಷಾ ಮೆಹ್ತಾರ ಸಾಹಸ ಅದ್ಭುತವಾದುದು. 90 ದಿನಗಳ ನಂತರ, ಈ ಅಲೆಮಾರಿ ರೇಡಿಯೊ ಸ್ಟೇಶನ್‌ನ ಮೇಲೆ ಪೊಲೀಸರ ದಾಳಿಯಾಯಿತು; ಆಗ ಲೋಹಿಯಾ ದೇಶದ ಯಾವುದೋ ಮೂಲೆಯಲ್ಲಿದ್ದರು. ವಿಠಲದಾಸ್, ಜವೇರಿ, ಉಷಾಮೆಹ್ತಾ ಜೈಲು ಶಿಕ್ಷೆಗೊಳಗಾದರು. ಮುಂದೆ ಸ್ವತಂತ್ರ ಭಾರತದಲ್ಲಿ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಪೊಲಿಟಿಕಲ್ ಸೈನ್ಸ್ ಪ್ರೊಫೆಸರ್ ಆದ ಉಷಾ ಮೆಹ್ತಾ ಇಂಡಿಯಾದ ಸಾರ್ವಜನಿಕ ಜೀವನದ ಪತನ ಕಂಡು ‘ಇದಕ್ಕಾಗಿ ನಾವು ಅಂದು ಹೋರಾಡಬೇಕಿತ್ತೇ?’ ಎಂದು ನೊಂದುಕೊಳ್ಳುತ್ತಿದ್ದರು.

‘ಆಗಸ್ಟ್ ಕ್ರಾಂತಿ ದಿನ’ದಿಂದ ಎರಡು ವರ್ಷಕಾಲ ಕ್ವಿಟ್ ಇಂಡಿಯಾ ಚಳವಳಿಯನ್ನು ಮುನ್ನಡೆಸಿದ ಅಜ್ಞಾತ ಗುಂಪುಗಳು; ಪೊಲೀಸರ ಹಿಂಸೆಯನ್ನು ಎದುರಿಸಿದ ಸಾಮಾನ್ಯ ಭಾರತೀಯರ ಕೆಚ್ಚು ಮತ್ತು ತ್ಯಾಗ; ರಾತ್ರೋರಾತ್ರಿ ಕರಪತ್ರಗಳನ್ನು ಹಂಚುತ್ತಿದ್ದ ನಿರ್ಭೀತ ತರುಣ ತರುಣಿಯರು; ಭೂಗತ ಬಾನುಲಿಯ ಮೂಲಕ ದೇಶವನ್ನು ಎಚ್ಚರದಲ್ಲಿಟ್ಟ ಧೀರರು ಮುಂತಾದ ಸ್ಫೂರ್ತಿದಾಯಕ ಸತ್ಯಗಳು ಕಣ್ಮರೆಯಾಗಲು ಬಿಡಬಾರದು. ಆ ಚಾರಿತ್ರಿಕ ದಿನಗಳ ತ್ಯಾಗಗಳನ್ನು ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’ ಕಾದಂಬರಿಯೂ ಹಿಡಿದಿಟ್ಟಿದೆ. ಆಗಸ್ಟ್ 15ರ ಜಡ ಭಾಷಣಗಳ ಮಂಕುಬೂದಿಯ ಎರಚಾಟದಲ್ಲಿ ಆಗಸ್ಟ್ 9ರ ನಿಜವಾದ ಭಾರತೀಯ ಕ್ರಾಂತಿ ಎಂದೂ ಮಸುಕಾಗಬಾರದು ಎಂಬುದನ್ನು ಕ್ವಿಟ್ ಇಂಡಿಯಾ ಚಳವಳಿ ಮತ್ತೆ ಮತ್ತೆ ನೆನಪಿಸುತ್ತಿರಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಟರಾಜ್ ಹುಳಿಯಾರ್

contributor

Similar News