ಕರ್ನಾಟಕದಲ್ಲಿ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ಎಡಿಬಿ ಸಾಲದ ಕಂತುಗಳ ಷರತ್ತಿಗೆ ಒಳಪಡಿಸಿ, ಫಲಿತಾಂಶಾಧಾರಿತ ಸಾಲದ ಮೂಲಕ ಶಿಕ್ಷಣ ಮತ್ತು ಜ್ಞಾನದ ಚೌಕಟ್ಟನ್ನು ಕೇವಲ ಆಯ್ದ ಸೀಮಿತ ಫಲಿತಾಂಶಗಳಿಗೆ ಮಿತಿಗೊಳಿಸುತ್ತಿರುವುದು ಆತಂಕಕಾರಿಯಾಗಿದೆ. ಸಾರ್ವಜನಿಕ ಶಾಲೆಗಳನ್ನು ಬಲಪಡಿಸಲು ಸಾಲಕ್ಕೆ ಮೊರೆ ಹೋಗುವುದೇ ಒಂದು ರೀತಿಯ ನಾಚಿಕೆಗೇಡಿನ ಸಂಗತಿಯಾಗಿದ್ದು, ಜೊತೆಗೆ ಶಿಕ್ಷಣದ ಆದ್ಯತೆಗಳನ್ನು ಸಾಲದ ಹಣಬಿಡುಗಡೆಗೆ ನಿಗದಿಪಡಿಸಿದ ಗುರಿ ಹಾಗೂ ಷರತ್ತುಗಳಿಗೆ ಒಳಪಡಿಸುವ ಕ್ರಮ ಶಿಕ್ಷಣದ ಮೂಲ ಉದ್ದೇಶವನ್ನು ತಿಳಿಗೊಳಿಸುತ್ತದೆ. ಈ ರೀತಿಯ ಬೆಳವಣಿಗೆ, ಶಿಕ್ಷಣ ಹಕ್ಕು ಕಾಯ್ದೆಯ ಹಿಂದಿರುವ ಮೂಲ ಆಶಯವನ್ನು ಶೇಕಡಾವಾರು ಸಾಧನೆಗೆ ಸೀಮಿತಗೊಳಿಸುವ ಮೂಲಕ ಸಮ ಸಮಾಜದ ಆಶಯವನ್ನು ಬದಿಗೆ ಸರಿಸುತ್ತದೆ.

ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಮಾನವೀಯ ನೆಲೆಯಲ್ಲಿ ಸಮ ಸಮಾಜವನ್ನು ಕಟ್ಟಿಕೊಳ್ಳಬೇಕಾದರೆ, ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವ ಅವಕಾಶದ ಮೂಲಕ ಮಾತ್ರ ಸಾಧ್ಯವೆಂಬ ಬಲವಾದ ನಂಬಿಕೆಯಿಂದ ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಲಾಗಿದೆ. ಜೊತೆಗೆ, ಎಲ್ಲಾ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಅವಕಾಶ ವಂಚಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ತೃಪ್ತಿದಾಯಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು ಕೇವಲ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆಗಳದು ಮಾತ್ರವಲ್ಲದೆ, ಸರಕಾರದ ಹಣಕಾಸನ್ನು ಅವಲಂಬಿಸದ ಶಾಲೆಗಳ ಜವಾಬ್ದಾರಿಯೂ ಆಗಿದೆ ಎಂಬುದು ಕಾಯ್ದೆಯ ಮೂಲ ಆಶಯವಾಗಿದೆ (ಪ್ಯಾರಾ 4, ಉದ್ದೇಶ ಹಾಗೂ ಕಾರಣಗಳು, 2009)

ಕರ್ನಾಟಕ ಸರಕಾರದ 30 ಸೆಪ್ಟಂಬರ್ 2026ರ ಅಧಿಸೂಚನೆ, ಎಡಿಬಿಯ ಫಲಿತಾಂಶಾಧಾರಿತ ಸಾಲದಡಿ ಶಿಕ್ಷಣದ ಆಯ್ದ ಸಾಧನೆಗಳನ್ನು ‘ಹಣಬಿಡುಗಡೆಗೆ ಜೋಡಿಸಲಾದ ಸೂಚಕ’ಗಳಾಗಿ (Disbursement-Linked Indicators-DLIs) ಪರಿವರ್ತಿಸಿ, ಅವುಗಳ ಕಾಲಮಿತಿಯ ಸಾಧನೆಗೆ ಇಲಾಖೆಯ ಆಡಳಿತವನ್ನು ಸಂಘಟಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ಡಿಎಲ್‌ಐ-1 ರಲ್ಲಿ, 2030ರೊಳಗೆ ಎಂಟನೇ ತರಗತಿಯ ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ತರಗತಿಗೆ ತಕ್ಕ ಪ್ರಾವೀಣ್ಯ ಸಾಧಿಸುವ ಮಕ್ಕಳ ಪ್ರಮಾಣವನ್ನು ಮೂಲಸ್ಥಿತಿಗಿಂತ ಕನಿಷ್ಠ ಶೇ. ಮೂರರಷ್ಟು ಹೆಚ್ಚಿಸುವುದು; ಡಿಎಲ್‌ಐ-2ರಲ್ಲಿ ಹತ್ತರಿಂದ ಹನ್ನೊಂದನೇ ತರಗತಿಗೆ ಸಾಗುವ ಪ್ರಮಾಣವನ್ನು ಶೇ. ಐದರಷ್ಟು ಹೆಚ್ಚಿಸುವುದು; ಡಿಎಲ್‌ಐ-3ರಲ್ಲಿ, 2029ರೊಳಗೆ ಹನ್ನೆರಡನೇ ತರಗತಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿನಿಯರ ಪ್ರಮಾಣವನ್ನು ಶೇ. ಮೂರರಷ್ಟು ಹೆಚ್ಚಿಸುವುದು ಗುರಿಗಳಾಗಿವೆ. ಇವುಗಳ ಸಾಧನೆಗಾಗಿ ಪಾಕ್ಷಿಕ ಸಭೆಗಳು ಮತ್ತು ಮಾಸಿಕ ಪರಿಶೀಲನೆಯನ್ನೂ ಕಡ್ಡಾಯಗೊಳಿಸಲಾಗಿದೆ (ಕರ್ನಾಟಕ ಸರಕಾರ, 2026, ಪು.1-3).

ಸಮಸ್ಯೆಯಿರುವುದು ಸಾಧನೆಯನ್ನು ಅಳೆಯುವುದರಲ್ಲಲ್ಲ. ಶಿಕ್ಷಣದ ಯಾವ ಆಯಾಮಗಳಿಗೆ ಹಣಕಾಸು ಮತ್ತು ಆಡಳಿತಾತ್ಮಕ ಆದ್ಯತೆ ದೊರೆಯಬೇಕು ಎಂಬುದನ್ನು ತಜ್ಞತೆ ಆಧಾರದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಮೂಲ ವಾರಸುದಾರರು ತೀರ್ಮಾನಿಸುವ ಬದಲು, ಹಣ ಬಿಡುಗಡೆ ಮಾಡುವ ಬ್ಯಾಂಕ್ ಆಯ್ದ ಸೂಚಕಗಳನ್ನು ನಿರ್ಧರಿಸುವುದು. ಉದಾಹರಣೆಗೆ, ಭಾಷಾ ಪ್ರಾವೀಣ್ಯದ ಮೊದಲ ಸೂಚಕದಲ್ಲಿ ಇಂಗ್ಲಿಷ್ ಮಾತ್ರ ಸ್ಪಷ್ಟವಾಗಿ ಸ್ಥಾನ ಪಡೆದಿದ್ದು, ಕನ್ನಡ ಮತ್ತು ಮಕ್ಕಳ ಇತರ ಮಾತೃ ಭಾಷೆಗಳಲ್ಲಿನ ಅಭಿವ್ಯಕ್ತಿ ಹಾಗೂ ಅರ್ಥಗ್ರಹಣಕ್ಕೆ ಸಮಾನ ಸ್ಥಾನಮಾನ ಕಾಣುವುದಿಲ್ಲ. ಉತ್ತೀರ್ಣತೆ ಮತ್ತು ಮುಂದಿನ ತರಗತಿಗೆ ಪ್ರವೇಶ ಹೆಚ್ಚಳವು ಅಗತ್ಯ ಸಾಧನೆಗಳಾದರೂ, ಅವು ಮಕ್ಕಳ ಸ್ವತಂತ್ರ ಚಿಂತನೆ, ಪ್ರಶ್ನಿಸುವ ಸಾಮರ್ಥ್ಯ, ಸೃಜನಶೀಲತೆ, ಘನತೆ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ತಾರತಮ್ಯರಹಿತ ಶಾಲಾ ಅನುಭವದ ಸಂಪೂರ್ಣತೆಯನ್ನು ಒಳಗೊಳ್ಳಲಾರವು. ಆದೇಶದಲ್ಲಿನ ಸುರಕ್ಷತೆ, ಸಾಮಾಜಿಕ ಒಳಗೊಳ್ಳುವಿಕೆ, ಲಿಂಗಸಂವೇದನೆ, ಶಿಕ್ಷಕರ ಸಾಮರ್ಥ್ಯ, ಸ್ಟೆಮ್ ಮತ್ತು ಜೀವನಕೌಶಲಗಳ ಉಲ್ಲೇಖವನ್ನು ಒಪ್ಪುತ್ತಲೇ, ಈ ವಿಶಾಲವಾದ ಆಶಯಗಳನ್ನೂ ಸಾಲದ ಕಾಲಮಿತಿಯ ಸಾಧನಾ ಚೌಕಟ್ಟಿನೊಳಗೆ ಒಳಪಡಿಸುವುದರಿಂದ, ಅಳೆಯಲು ಮತ್ತು ವರದಿ ಮಾಡಲು ಅನುಸರಿಸುವ ಸುಲಭವಾದ ಸಾಧನೆಗಳೇ ಶಿಕ್ಷಣದ ಗುಣಮಟ್ಟಕ್ಕೆ ಪರ್ಯಾಯವಾಗುವ ಅಪಾಯವಿದೆ. ಹೀಗಾಗಿ, ಈ ಅಧಿಸೂಚನೆಯು, ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 29ರಲ್ಲಿ ಸೂಚಿಸಿರುವ ಮಗುವಿನ ಸಮಗ್ರ ಹಾಗೂ ಸರ್ವತೋಮುಖ ಬೆಳವಣಿಗೆಗೆ ನೆರವಾಗಬೇಕಾದ ಸೂಚಕಗಳನ್ನು, ಹಣ ಪಡೆಯುವ ಪ್ರಧಾನ ಗುರಿ-ಸೂಚಕಗಳನ್ನಾಗಿಸಿದಾಗ, ಶಿಕ್ಷಣದ ಮೂಲ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಉದ್ದೇಶವು ಆಡಳಿತಾತ್ಮಕ ಸಾಧನೆ ಮತ್ತು ಕಂತಿನ ಅನ್ವಯ ಹಣ ಪಡೆಯುವ ಆದ್ಯತೆಯಾಗಿ ಕುಗ್ಗುವ ಅಪಾಯವಿದೆ.

ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಹಣ, ಉತ್ತಮ ಕಟ್ಟಡಗಳು, ಸಮರ್ಪಕ ಶಿಕ್ಷಕರು ಮತ್ತು ಗುಣಮಟ್ಟದ ಕಲಿಕೆಯ ಅವಕಾಶಗಳು ಅಗತ್ಯ. ಆದರೆ ಈ ಅಗತ್ಯಗಳನ್ನು ಪೂರೈಸಲು ಬ್ಯಾಂಕ್ ಒದಗಿಸುವ ಅತ್ಯಲ್ಪ ಹಣಕಾಸು ವ್ಯವಸ್ಥೆ, ಶಿಕ್ಷಣದ ಉದ್ದೇಶ, ಆಡಳಿತ ಮತ್ತು ಹೊಣೆಗಾರಿಕೆಯ ಸ್ವರೂಪವನ್ನು ಬದಲಾಯಿಸುವಂತಾಗುತ್ತಿರುವುದು ದುರದೃಷ್ಟಕರ ಮತ್ತು ಅಪಾಯಕಾರಿ. ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಸರಕಾರದ ಹೊಣೆಗಾರಿಕೆ. ಅದನ್ನು ಸಾಲ ಯೋಜನೆಯ ಅವಧಿ ಮತ್ತು ಸಾಧನಾ ಸೂಚಕಗಳಿಗೆ ಸೀಮಿತಗೊಳಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಏಶ್ಯನ್ ಅಭಿವೃದ್ಧಿ ಬ್ಯಾಂಕ್ ತನ್ನ 2026ರ ಜುಲೈ 1ರ ಪ್ರಕಟಣೆಯಲ್ಲಿ ಕರ್ನಾಟಕದ ಸಾರ್ವಜನಿಕ ಶಾಲೆಗಳನ್ನು ಬಲಪಡಿಸಲು 182.89 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ಮಂಜೂರು ಮಾಡಿರುವುದಾಗಿ ತಿಳಿಸಿದೆ. ಈ ಯೋಜನೆಯು ‘ಫಲಿತಾಂಶಾಧಾರಿತ ಸಾಲ’ (Results-Based Lending) ವಿಧಾನದಲ್ಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಯೋಜನಾ ದಾಖಲೆಗಳ ಪಟ್ಟಿಯಲ್ಲಿಯೂ ಹಣಬಿಡುಗಡೆಗೆ ಸಂಬಂಧಿಸಿದ ಸಾಧನಾ ಸೂಚಕಗಳು, ಅವುಗಳ ಪರಿಶೀಲನಾ ವಿಧಾನ ಮತ್ತು ಹಣಬಿಡುಗಡೆ ವೇಳಾಪಟ್ಟಿಯನ್ನು ಗುರುತಿಸಲಾಗಿದೆ. ಆದ್ದರಿಂದ ಸರಕಾರವು ಸಾಲದ ಮೊತ್ತ ಮತ್ತು ಹೊಸ ಸೌಲಭ್ಯಗಳ ಜೊತೆಗೆ, ಯಾವ ಸಾಧನೆಗೆ ಎಷ್ಟು ಹಣ, ಸಾಧನೆ ಆಗದಿದ್ದರೆ ಯಾವ ಪರಿಣಾಮ ಮತ್ತು ಆ ಪರಿಣಾಮವನ್ನು ಯಾರು ಭರಿಸಬೇಕು ಎಂಬುದನ್ನು ರಾಜ್ಯದ ಜನತೆಗೆ ವಿವರಿಸಬೇಕು.

ಇಂತಹ ಗುರಿ ಸಾಧನೆಗಳ ಒತ್ತಡವು ಶಾಲಾ ಮಟ್ಟದಲ್ಲಿ ಸಂಕುಚಿತ ಸಾಧನಾ ಒತ್ತಡವಾಗಿ ಜಾರಿಯಾದರೆ ಪಠ್ಯಕ್ರಮ ಸಂಕುಚಿತಗೊಳ್ಳುವುದು, ಫಲಿತಾಂಶ ಸಾಧನೆಗಾಗಿ ಮಾತ್ರ ಕಲಿಸುವುದು ಮತ್ತು ಸಾಲದ ಹಣ ಬಳಕೆಯ ಪ್ರಮಾಣ ಪತ್ರ ಒದಗಿಸುವುದು ಆದ್ಯತೆಗಳಾಗಿ, ಅವಕಾಶ ವಂಚಿತ ಮತ್ತು ಹಿಂದುಳಿದ ಮಕ್ಕಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ ಎಂಬ ಬಗ್ಗೆ ಹಲವು ಸಂಶೋಧನಾ ಅಧ್ಯಯನಗಳು ಎಚ್ಚರಿಸಿವೆ. ಹಣವನ್ನು ಸೂಚಕಗಳಿಗೆ ಜೋಡಿಸಿದಾಗ ಇತರ ಆದ್ಯತೆಗಳ ನಿರ್ಲಕ್ಷ್ಯ, ಅಂಕಿಅಂಶಗಳ ತಿರುಚುವಿಕೆ ಮತ್ತು ನಿಧಾನವಾಗಿ ಕಲಿಯುವ ಮಕ್ಕಳಿಗಿಂತ ಹೆಚ್ಚು ಸಾಧನೆ ತೋರಿಸಬಲ್ಲ ಮಕ್ಕಳಿಗೆ ಆದ್ಯತೆ ನೀಡುವ ಅಪಾಯವಿದೆ ಎಂದು ಸ್ವತಃ ವಿಶ್ವಬ್ಯಾಂಕ್ ಒಪ್ಪಿಕೊಳ್ಳುತ್ತದೆ. ವಿಶ್ವಬ್ಯಾಂಕ್ ತನ್ನ ಜಾಗತಿಕ ಟ್ರಸ್ಟ್ ಫಂಡ್‌ನ ಭಾಗವಾಗಿ ನಿರ್ವಹಿಸಲ್ಪಡುವ ಎಲ್ಲಾ ಮಕ್ಕಳ ಶಿಕ್ಷಣದಲ್ಲಿ ಫಲಿತಾಂಶಗಳಲ್ಲಿ (Result in Education for All Children-ರೀಚ್) ಇದನ್ನು ಹೇಳಿದೆ. ರೀಚ್ ವಿವರಣೆಯಂತೆ, ಫಲಿತಾಂಶಾಧಾರಿತ ಹಣಕಾಸಿನಿಂದ ಹಣದ ಲಭ್ಯತೆ ಅನಿಶ್ಚಿತವಾಗಬಹುದು; ಸೂಚಕ ಅಥವಾ ಫಲಿತಾಂಶಗಳಿಗೆ ಹಣ ಜೋಡಿಸಿದಾಗ ಅಂಕಿ ಅಂಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತೋರಿಸುವ ವಂಚನೆಯ ಸಾಧ್ಯತೆ ಉಂಟಾಗುತ್ತದೆ. ನಿರ್ದಿಷ್ಟ ಗುರಿಗಳ ಹಿಂದೆ ಓಡುವಾಗ ಶೈಕ್ಷಣಿಕ ಆದ್ಯತೆಗಳಾದ ಸೃಜನಶೀಲತೆ, ತಾರ್ಕಿಕ ಚಿಂತನೆ, ವಿಮರ್ಶೆ, ಸಂವಾದದಂತಹ ಮೂಲ ವೈಚಾರಿಕ ಚಿಂತನೆಗಳು ಕಡೆಗಣಿಸಲ್ಪಡಬಹುದು ಎಂದು ತಿಳಿಸುತ್ತದೆ. ಹೆಚ್ಚು ಸಾಧನೆ ತೋರಿಸಬಲ್ಲ ಮಕ್ಕಳ ಕಡೆಗೆ ಗಮನ ಕೇಂದ್ರೀಕರಿಸಿ, ನಿಧಾನವಾಗಿ ಕಲಿಯುವ ಮಕ್ಕಳನ್ನು ಕಡೆಗಣಿಸುವ ಅಪಾಯವನ್ನೂ ಅದು ಗುರುತಿಸುತ್ತದೆ. ಸಾಲ ನೀಡುವ ಸಂಸ್ಥೆಯೇ ಒಪ್ಪಿಕೊಳ್ಳುವ ಅಪಾಯಗಳನ್ನು ರಾಜ್ಯದ ರಾಜಕೀಯ ನಾಯಕತ್ವ ಒಪ್ಪಿಕೊಂಡಿದೆಯೇ ಅಥವಾ ಯಾವ ಸಾರ್ವಜನಿಕ ಚರ್ಚೆಯಲ್ಲಿ ಚರ್ಚಿಸಿದೆ ಎಂಬುದನ್ನು ಸರಕಾರ ರಾಜ್ಯದ ಜನತೆಗೆ ತಿಳಿಸಬೇಕಿದೆ.

ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಈ ಬಗೆಯ ಪ್ರಶ್ನೆಗಳು ಹೊಸದಲ್ಲ. ಕರ್ನಾಟಕದಲ್ಲಿ ಜಾರಿಯಾದ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮದ (ಡಿಪಿಇಪಿ) ಕುರಿತು ಸಾರಂಗಪಾಣಿ ಮತ್ತು ವಾಸವಿ (2003) ನಡೆಸಿದ ಅಧ್ಯಯನವು, ಶಾಲೆಗಳ ಲಭ್ಯತೆ ಮತ್ತು ಮೂಲಸೌಲಭ್ಯ, ಶಿಕ್ಷಕರ ತರಬೇತಿ ಹಾಗೂ ಪ್ರಾಥಮಿಕ ಶಿಕ್ಷಣದ ಮೇಲಿನ ಗಮನದಲ್ಲಿ ಕಾರ್ಯಕ್ರಮವು ಕೆಲವು ಸುಧಾರಣೆಗಳನ್ನು ತಂದಿದ್ದನ್ನು ಗುರುತಿಸುತ್ತಲೇ, ಅದರ ಸಾಂಸ್ಥಿಕ ಮಿತಿಗಳನ್ನು ಸ್ಪಷ್ಟಪಡಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿದ್ದ ಶಿಕ್ಷಣ ಇಲಾಖೆಗೆ ಸಮಾನಾಂತರವಾಗಿ ಸ್ವತಂತ್ರ ಡಿಪಿಇಪಿ ಸೊಸೈಟಿ ಮತ್ತು ಯೋಜನಾ ಕಚೇರಿಗಳ ವ್ಯವಸ್ಥೆ ರೂಪುಗೊಂಡಿದ್ದು, ಜಿಲ್ಲಾ ಮಟ್ಟದಲ್ಲಿಯೂ ಪ್ರತ್ಯೇಕ ಕಚೇರಿಗಳು, ವಾಹನಗಳು ಮತ್ತು ಕಂಪ್ಯೂಟರ್‌ಗಳೊಂದಿಗೆ ಸಮಾನಾಂತರ ವ್ಯವಸ್ಥೆಗಳು ಸ್ಥಾಪನೆಯಾಗಿದ್ದವು. ವಿಭಿನ್ನ ಕಾರ್ಯನಿರ್ವಹಣಾ ಮಾನದಂಡಗಳಿಂದ ಇಲಾಖೆಯ ಸಿಬ್ಬಂದಿಯಲ್ಲಿ ‘ನಿಮ್ಮ ಡಿಪಿಇಪಿ’ ಎಂಬ ಭಾವನೆ ಮೂಡಿದ್ದು, ಯೋಜನೆಯು ಅಂತಿಮವಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳ್ಳಬೇಕಾದ ಸಂದರ್ಭದಲ್ಲಿ ಈ ಸಾಂಸ್ಥಿಕ ಬಿರುಕು ಸಮಸ್ಯಾತ್ಮಕವಾಗಿತ್ತು ಎಂದು ಗಮನಿಸಿದ್ದಾರೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಾದ ಡಯಟ್‌ಗಳು ಡಿಪಿಇಪಿಯೊಂದಿಗೆ ಸಮರ್ಪಕವಾಗಿ ಜೋಡಣೆಯಾಗದಿರುವುದು ಹಾಗೂ ಬ್ಲಾಕ್ ಮತ್ತು ಸಮೂಹ ಸಂಪನ್ಮೂಲ ಕೇಂದ್ರಗಳು ರಾಜ್ಯ ಯೋಜನಾ ಕಚೇರಿಯಲ್ಲಿ ರೂಪಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸೀಮಿತಗೊಂಡಿರುವುದರಿಂದ, ಜಿಲ್ಲಾ ಮಟ್ಟದ ಪ್ರಾಥಮಿಕ ಶಿಕ್ಷಣದ ಸಾಂಸ್ಥಿಕ ಬಲವರ್ಧನೆ ಸಾಧ್ಯವಾಗಲಿಲ್ಲ ಎಂದು ಅಧ್ಯಯನವು ವಿಶ್ಲೇಷಿಸುತ್ತದೆ. ಕೆಲವು ಬ್ಲಾಕ್ ಸಂಪನ್ಮೂಲ ಕೇಂದ್ರಗಳ ಸಿಬ್ಬಂದಿಯ ಅಭಿಪ್ರಾಯದಂತೆ, ಅವರ ಶೈಕ್ಷಣಿಕ ಮುಂದಾಳತ್ವದ ಅವಕಾಶಗಳು ಕುಗ್ಗಿ, ಕೆಲಸದ ಬಹುಭಾಗವು ವಿವಿಧ ಸಮೀಕ್ಷೆಗಳಿಗಾಗಿ ಮಾಹಿತಿ ಸಂಗ್ರಹಿಸುವತ್ತ ವಾಲಿತ್ತು. ಅಲ್ಲದೆ, ಡಿಪಿಇಪಿಗೆ ಮುಂಚಿನ ಸ್ಥಿತಿ ಮತ್ತು ಡಿಪಿಇಪಿ ಜಾರಿಯಾಗದ ಪ್ರದೇಶಗಳೊಂದಿಗೆ ಅಗತ್ಯ ಹೋಲಿಕೆಗಳಿಲ್ಲದ ಕಾರಣ, ವರದಿಯಾದ ಕಲಿಕೆಯ ಸುಧಾರಣೆಯನ್ನು ಕಾರ್ಯಕ್ರಮದ ಪರಿಣಾಮವೆಂದು ಖಚಿತಪಡಿಸಲಾಗಲಿಲ್ಲ; ಏಳನೇ ತರಗತಿಯ ಪರೀಕ್ಷಾ ಸಾಧನೆಯ ಕೆಲವು ವರದಿಗಳು ಅತಿಶಯೋಕ್ತಿಯಿಂದ ಕೂಡಿದ್ದು ವಿಶ್ವಾಸಾರ್ಹವಾಗಿರಲಿಲ್ಲ ಎಂದೂ ಲೇಖಕರು ದಾಖಲಿಸುತ್ತಾರೆ.

ಶಿಕ್ಷಣದ ಯಶಸ್ಸನ್ನು ಅಳೆಯಬೇಕಾದದ್ದು ಮಕ್ಕಳ ಸಮಗ್ರ ಬೆಳವಣಿಗೆ, ಸಮಾನ ಅವಕಾಶ, ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಸ್ವಾತಂತ್ರ್ಯ, ಮಾತೃಭಾಷೆಯಲ್ಲಿ ಅರ್ಥಪೂರ್ಣ ಕಲಿಕೆ ಮತ್ತು ಪ್ರಜಾಸತ್ತಾತ್ಮಕ ಸಹಬಾಳ್ವೆಯ ಆಧಾರದಲ್ಲಿ. ಪರೀಕ್ಷಾ ಸಾಧನೆ ಈ ವಿಶಾಲ ಉದ್ದೇಶದ ಒಂದು ಭಾಗ ಮಾತ್ರ. ಬಡತನ, ಜಾತಿ ತಾರತಮ್ಯ, ಪೌಷ್ಟಿಕಾಂಶದ ಕೊರತೆ, ಭಾಷಾ ಅಡೆತಡೆ, ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯದ ಅಭಾವವನ್ನು ಪರಿಹರಿಸದೆ ಶಾಲೆಗಳ ಮೇಲೆ ಫಲಿತಾಂಶದ ಒತ್ತಡ ಹೇರುವುದು ಸರಕಾರದ ವ್ಯವಸ್ಥಾತ್ಮಕ ವೈಫಲ್ಯವನ್ನು ಶಿಕ್ಷಕರು ಮತ್ತು ಮಕ್ಕಳ ಮೇಲೆ ವರ್ಗಾಯಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ, ಹೆಚ್ಚಿನ ನೆರವಿನ ಅಗತ್ಯವಿರುವ ಶಾಲೆಯ ದುರ್ಬಲ ಫಲಿತಾಂಶವೇ ಅದರ ನೆರವು ಕಡಿತವಾಗಲು ಕಾರಣವಾಗಬಾರದು.

ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ ಅವಧಿಯ ಅನುಭವವೂ ಗಂಭೀರವಾಗಿದೆ. ಭಾರತದ ಮಹಾಲೇಖಪಾಲರ 2017ರ ವರದಿ ಸಂಖ್ಯೆ 23ರ ಪ್ರಕಾರ, ದಾಖಲಾತಿ, ಶಾಲೆಯಲ್ಲಿ ಉಳಿಯುವಿಕೆ ಮತ್ತು ಶಾಲೆ ಬಿಡುವಿಕೆಗೆ ಸಂಬಂಧಿಸಿದ ಯುಡೈಸ್ ಮಾಹಿತಿ ಅಪೂರ್ಣ ಅಥವಾ ತಪ್ಪಾಗಿತ್ತು. ಪರಿಶೀಲಿಸಿದ ಶಾಲೆಗಳ ವಾಸ್ತವ ಸ್ಥಿತಿ ಮತ್ತು ಯುಡೈಸ್ ಮಾಹಿತಿಯ ನಡುವೆ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. 11 ರಾಜ್ಯಗಳಲ್ಲಿ ಪ್ರತಿಕೂಲ ಶಿಕ್ಷಕ-ವಿದ್ಯಾರ್ಥಿ ಅನುಪಾತ, ಹೆಚ್ಚುವರಿ ಶಿಕ್ಷಕರ ಅಸಮರ್ಪಕ ಹಂಚಿಕೆ ಅಥವಾ ಏಕೋಪಾಧ್ಯಾಯ ಶಾಲೆಗಳ ಸಮಸ್ಯೆಗಳು ಕಂಡುಬಂದಿದ್ದವು; ಒಂಭತ್ತು ರಾಜ್ಯಗಳಲ್ಲಿ ಶಿಕ್ಷಕರನ್ನು ಶೈಕ್ಷಣಿಕೇತರ ಕೆಲಸಗಳಿಗೆ ನಿಯೋಜಿಸಲಾಗಿತ್ತು. ಮೂಲಸೌಲಭ್ಯಗಳ ನಿಗದಿತ ಗಡುವೂ ಪಾಲನೆಯಾಗಿರಲಿಲ್ಲ. ಇದು ಯೋಜನೆ, ಮೇಲ್ವಿಚಾರಣೆ ಮತ್ತು ಸಾಧನಾ ಸೂಚಕಗಳಿದ್ದರೂ ಮಕ್ಕಳ ಹಕ್ಕುಗಳು ಈಡೇರದೆ ಉಳಿಯಬಹುದು ಎಂಬುದಕ್ಕೆ ಅಧಿಕೃತ ಸಾಕ್ಷಿಯಾಗಿದೆ (ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕರು ಸಿಎಜಿ, 2017).

ಆದ್ದರಿಂದ, ಎಡಿಬಿ ಯೋಜನೆಯ ಯಶಸ್ಸಿನ ಅಂತಿಮ ಪರೀಕ್ಷೆ ಕಂತುಗಳ ಬಿಡುಗಡೆ ಅಥವಾ ಸೂಚಕಗಳ ಸಾಧನೆಯಷ್ಟೇ ಆಗಬಾರದು; ಪ್ರತಿಯೊಂದು ಮಗುವಿಗೂ ಅಗತ್ಯ ಶಿಕ್ಷಕರು, ಸುರಕ್ಷಿತ ಶಾಲೆ, ತಾರತಮ್ಯರಹಿತ ವಾತಾವರಣ ಮತ್ತು ಅರ್ಥಪೂರ್ಣ ಸಮಗ್ರ ಕಲಿಕೆ ದೊರಕಿದೆಯೇ ಎಂಬುದಾಗಿರಬೇಕು. ಸಾಲದ ಷರತ್ತುಗಳು ಮಕ್ಕಳ ಹಕ್ಕುಗಳಿಗೆ ಅಧೀನವಾಗಿರಬೇಕೇ ಹೊರತು ಮಕ್ಕಳ ಹಕ್ಕುಗಳು ಸಾಲದ ಷರತ್ತುಗಳಿಗೆ ಅಧೀನವಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿರಂಜನಾರಾಧ್ಯ ವಿ.ಪಿ.

contributor