ಕಾಲೇಜಿನಲ್ಲಿ ಬೆಳಗಿನ ಪ್ರಾರ್ಥನೆಯ ಸಮಯ. ನನ್ನ ಫೋನ್ ರಿಂಗಣಿಸಿತು. ಕರೆ ಮಾಡಿದವನು ನನ್ನ ಆಪ್ತ ವಿದ್ಯಾರ್ಥಿಯೊಬ್ಬನಾಗಿದ್ದ. ‘‘ಸರ್, ನಾನು ಸಾಯುವ ಮುನ್ನ ನಿಮ್ಮನ್ನೊಮ್ಮೆ ನೋಡಬೇಕು. ಲಲಿತಮಹಲ್ ಬಳಿಯ ಪಾರ್ಕ್‌ನಲ್ಲಿದ್ದೇನೆ...’’ ಎಂದ. ತಡಮಾಡದೆ ಕೆಲವು ಅಧ್ಯಾಪಕ ಮಿತ್ರರು ಮತ್ತು ವಿದ್ಯಾರ್ಥಿಗಳೊಂದಿಗೆ ಅಲ್ಲಿಗೆ ಹೋದೆ. ವಿಷ ಸೇವಿಸಿ ನಿತ್ರಾಣಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಹತ್ತಾರು ದಿನಗಳ ಚಿಕಿತ್ಸೆಯ ಬಳಿಕ ಆತ ಬದುಕುಳಿದ. ಬದುಕಿನತ್ತ ಮತ್ತೆ ಮುಖಮಾಡಿದ ಆತ ಇಂದು ತನ್ನದೇ ದಾರಿಯಲ್ಲಿ ಬದುಕು ಕಟ್ಟಿಕೊಂಡಿದ್ದಾನೆ.
ಇನ್ನೊಂದು ಘಟನೆ ಇನ್ನೂ ಸೂಕ್ಷ್ಮವಾದುದು. ತಡರಾತ್ರಿಯಲ್ಲಿ ಒಬ್ಬ ವಿದ್ಯಾರ್ಥಿನಿಯ ಕರೆ ಬಂತು. ‘‘ನಾನು ಸ್ವಲ್ಪ ಹೊತ್ತಿನಲ್ಲಿ ಸಾಯಲಿದ್ದೇನೆ. ನಿಮ್ಮೊಂದಿಗೆ ಒಮ್ಮೆ ಮಾತನಾಡಬೇಕು ಅನ್ನಿಸಿತು...’’ ಎಂದು ಆಕೆ ಅಳುತ್ತಿದ್ದಳು. ಪರಿಸ್ಥಿತಿಯ ಗಂಭೀರತೆ ಅರಿವಾಗಿತ್ತು. ಗಾಬರಿಯಾಗದೆ, ‘‘ಬೆಳಗಾಗುವವರೆಗೆ ಕಾಯುತ್ತೀಯಾ? ನಾನೂ ಕೂಡ ನಿನ್ನೊಂದಿಗೆ ಮಾತನಾಡಬೇಕು’’ ಎಂದು ಹೇಳಿದೆ. ಆ ಕೂಡಲೇ ಒಬ್ಬ ಅಧ್ಯಾಪಕಿಯೋರ್ವರನ್ನು ಆಕೆಯ ಮತ್ತು ಅವಳ ಕುಟುಂಬದೊಂದಿಗೆ ಮಾತನಾಡುವ ವ್ಯವಸ್ಥೆ ಮಾಡಿದೆ. ಬೆಳಗ್ಗೆ ಕಾಲೇಜಿಗೆ ಬಂದ ಆಕೆ, ‘‘ನಿಮ್ಮ ಮತ್ತು ಮೇಡಂ ಜೊತೆಗೆ ಮಾತನಾಡಿದ ನಂತರ ಸಾಯುವ ಆಲೋಚನೆ ಕೈಬಿಟ್ಟೆ’’ ಎಂದಳು.
ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಹಿಂದೆ ನಡೆದ ಈ ಎರಡು ಘಟನೆಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಆದರೆ ನಂತರದ ವರ್ಷಗಳಲ್ಲಿ ನನ್ನ ಪರಿಚಯದ ಹಲವು ಯುವಕ-ಯುವತಿಯರು ಆತ್ಮಹತ್ಯೆಗೆ ಬಲಿಯಾಗಿರುವುದನ್ನು ಕಂಡಿದ್ದೇನೆ. ನಮ್ಮ ಕಣ್ಣೆದುರೇ ಓದಿ, ಬೆಳೆದು, ಬದುಕು ಕಟ್ಟಿಕೊಳ್ಳಬೇಕಾದ ತರುಣ-ತರುಣಿಯರು ಬದುಕಿನಿಂದಲೇ ಹೊರನಡೆಯುವುದು ಕೇವಲ ಕುಟುಂಬದ ದುರಂತವಲ್ಲ; ಅದು ಶಿಕ್ಷಣ ವ್ಯವಸ್ಥೆ ಮತ್ತು ಇಡೀ ಸಮಾಜದ ಆತ್ಮಪರಿಶೀಲನೆಯ ಸಂದರ್ಭ. ನಮ್ಮ ಯುವಜನರು ಬದುಕಿನ ಮೇಲೆ ಭರವಸೆ ಕಳೆದುಕೊಳ್ಳುವಷ್ಟು ಅವರೊಳಗೆ ಏನು ನಡೆಯುತ್ತಿದೆ?
ಈ ಪ್ರಶ್ನೆಗೆ ಈಗ ಸರ್ವೋಚ್ಚ ನ್ಯಾಯಾಲಯ ನೇಮಿಸಿರುವ ರಾಷ್ಟ್ರೀಯ ಕಾರ್ಯಪಡೆಯ ಇತ್ತೀಚಿನ ಸಮೀಕ್ಷೆ ಮತ್ತಷ್ಟು ಗಂಭೀರ ಹಿನ್ನೆಲೆ ನೀಡಿದೆ. 2.43 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಆಧರಿಸಿದ ಪ್ರಾಥಮಿಕ ವರದಿಯಲ್ಲಿ ಸುಮಾರು ಶೇ.15ರಷ್ಟು ವಿದ್ಯಾರ್ಥಿಗಳು ಕಳೆದ ಆರು ತಿಂಗಳಲ್ಲಿ ದೀರ್ಘಕಾಲದ ತೀವ್ರ ಒತ್ತಡ, ಸಂಕಟ, ಖಿನ್ನತೆ ಅಥವಾ ಆತಂಕ ಅನುಭವಿಸಿದ್ದಾಗಿ, ಸುಮಾರು ಶೇ.9ರಷ್ಟು ವಿದ್ಯಾರ್ಥಿಗಳು ಕಳೆದ ಒಂದು ವರ್ಷದಲ್ಲಿ ಆತ್ಮಹತ್ಯೆಯ ಆಲೋಚನೆಗಳನ್ನು ಅನುಭವಿಸಿದ್ದಾಗಿ ತಿಳಿಸಿದ್ದಾರೆ. ಈ ಮಾದರಿ ದೇಶದ ಸಂಪೂರ್ಣ ವಿದ್ಯಾರ್ಥಿ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಕಾರ್ಯಪಡೆಯೇ ಸ್ಪಷ್ಟಪಡಿಸಿದೆ. ಆದರೂ ಇವು ನಿರ್ಲಕ್ಷಿಸಬಹುದಾದ ಸೂಚನೆಗಳ ಇನ್ನೂ ಕೂಡ ಸಮೀಕ್ಷೆಯ ಮತ್ತೊಂದು ಆತಂಕಕಾರಿ ಅಂಶವೆಂದರೆ ಸುಮಾರು ಶೇ.34ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ತಾವು ಹೊರಗಿನವರಂತೆ ಭಾಸವಾಗುತ್ತದೆ ಎಂದು ಹೇಳಿರುವುದು. ಕೇವಲ ಶೇ.56ರಷ್ಟು ಮಂದಿಗೆ ತಮ್ಮ ಸಂಸ್ಥೆಯ ಆಡಳಿತ ಗಂಭೀರ ಸಮಸ್ಯೆಗಳನ್ನು ನ್ಯಾಯಯುತವಾಗಿ ನಿಭಾಯಿಸುತ್ತದೆ ಎಂಬ ವಿಶ್ವಾಸವಿದೆ. ಶೇ.32ರಷ್ಟು ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಲ್ಲಿ ಕೌನ್ಸೆಲಿಂಗ್ ಸೇವೆಯೇ ಇಲ್ಲ ಎಂದು ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು ಶೇ.67ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ.
ಇಲ್ಲಿ ಅಂಕಿ-ಅಂಶಗಳಾಚೆ ಇರುವ ಒಂದು ಮನಸ್ಸನ್ನು ಮತ್ತು ಅದರೊಳಗಿನ ನೋವನ್ನು ನಾವು ನೋಡಬೇಕು. ವಿದ್ಯಾರ್ಥಿಯೊಬ್ಬ ಪ್ರತಿದಿನ ತರಗತಿಗೆ ಬರುತ್ತಾನೆ, ಪರೀಕ್ಷೆ ಬರೆಯುತ್ತಾನೆ, ಅಂಕ ಪಡೆಯುತ್ತಾನೆ; ಹೊರಗಿನಿಂದ ಎಲ್ಲವೂ ಸಹಜವಾಗಿ ಕಾಣಬಹುದು. ಆದರೆ ಒಳಗೆ ‘‘ನಾನು ಇಲ್ಲಿಗೆ ಸೇರಿದ ವನಲ್ಲ’’, ‘‘ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ’’, ‘‘ನನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಯಾರೂ ಇಲ್ಲ’’ ಎಂಬ ಭಾವನೆ ಇರಬಹುದು. ಆದ್ದರಿಂದ ಶಿಕ್ಷಣ ಸಂಸ್ಥೆ ಕೇವಲ ಪಾಠ ಮತ್ತು ಪದವಿ ನೀಡುವ ಸ್ಥಳವಲ್ಲ; ಅದು ವಿದ್ಯಾರ್ಥಿಗಳ ಭಾವನೆಗೆ ಬೆಲೆ, ಭದ್ರತೆ, ಸಂಬಂಧ ಮತ್ತು ಭರವಸೆ ನೀಡುವ ಸ್ಥಳವೂ ಆಗಬೇಕು.
ವಿದ್ಯಾರ್ಥಿಗಳ ಆತ್ಮಹತ್ಯೆಗೆ ಒಂದೇ ಕಾರಣವನ್ನು ಗುರುತಿಸುವುದು ತಪ್ಪಾಗುತ್ತದೆ. ಶೈಕ್ಷಣಿಕ ಒತ್ತಡ, ಉದ್ಯೋಗದ ಅನಿಶ್ಚಿತತೆ, ಅತಿಯಾದ ಸ್ಪರ್ಧೆ, ವೃತ್ತಿ ಆಯ್ಕೆಯ ಗೊಂದಲ, ಕಠಿಣ ಶೈಕ್ಷಣಿಕ ನಿಯಮಗಳು, ಪ್ಲೇಸ್‌ಮೆಂಟ್ ಒತ್ತಡ, ಅಧ್ಯಾಪಕರ ಕೊರತೆ, ಸಾಮಾಜಿಕ ಅಥವಾ ಜಾತಿ ತಾರತಮ್ಯ, ಲಿಂಗಭೇದ, ಕೌಟುಂಬಿಕ ಸಂಘರ್ಷ, ಸಂಬಂಧಗಳ ಸಮಸ್ಯೆ, ಆರ್ಥಿಕ ಸಂಕಷ್ಟ, ದೌರ್ಜನ್ಯ, ಏಕಾಂಗಿತನ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು ಇವೆಲ್ಲವೂ ವಿಭಿನ್ನ ಸಂದರ್ಭಗಳಲ್ಲಿ ಪಾತ್ರವಹಿಸಬಹುದು. ಆದರೆ ಯಾವುದೇ ಒಂದು ಅಂಶವನ್ನೇ ಆತ್ಮಹತ್ಯೆಯ ಏಕೈಕ ಕಾರಣವೆಂದು ಹೇಳಲಾಗದು. ವ್ಯಕ್ತಿಯ ಪರಿಸ್ಥಿತಿ, ಅನುಭವ ಮತ್ತು ಪ್ರತಿಕ್ರಿಯೆ ಪ್ರತ್ಯೇಕವಾಗಿರುತ್ತದೆ.
ಹಿಂದಿನ ಹಲವು ಅಧ್ಯಯನಗಳಲ್ಲಿಯೂ ಶೈಕ್ಷಣಿಕ ಒತ್ತಡದ ಜೊತೆಗೆ ಕುಟುಂಬ ಮತ್ತು ಸ್ನೇಹ ಸಂಬಂಧಗಳ ಸಮಸ್ಯೆಗಳು ಯುವಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಕಂಡುಬಂದಿದೆ. ಬೆಂಗಳೂರಿನಲ್ಲಿ ನಡೆದ ಹಿಂದಿನ ಅಧ್ಯಯನಗಳಲ್ಲಿಯೂ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಆಲೋಚನೆ ಮತ್ತು ಪ್ರಯತ್ನಗಳ ಆತಂಕಕಾರಿ ಪ್ರಮಾಣ ವರದಿಯಾಗಿತ್ತು. ಆ ಅಧ್ಯಯನಗಳನ್ನು ಇಂದಿನ ರಾಷ್ಟ್ರೀಯ ಸಮೀಕ್ಷೆಯೊಂದಿಗೆ ನೇರವಾಗಿ ಹೋಲಿಸಲಾಗದಿದ್ದರೂ, ಒಂದು ಸಂಗತಿ ಸ್ಪಷ್ಟ-ಯುವಜನರ ಮಾನಸಿಕ ಆರೋಗ್ಯದ ಪ್ರಶ್ನೆ ಹೊಸದಲ್ಲ; ಅದು ಇನ್ನೂ ಪರಿಹಾರಕ್ಕಾಗಿ ಕಾಯುತ್ತಿರುವ ಒಂದು ದೊಡ್ಡ ಸವಾಲು.
ಇಲ್ಲಿ ಕೌನ್ಸೆಲಿಂಗ್‌ನ ಪಾತ್ರ ಮಹತ್ವವಾದದ್ದು. ಕೌನ್ಸೆಲಿಂಗ್ ಎಂದರೆ ‘‘ಧೈರ್ಯವಾಗಿರು’’ ಎಂದು ಹೇಳಿ ಕಳುಹಿಸುವುದಲ್ಲ. ವಿದ್ಯಾರ್ಥಿಯ ಮಾತನ್ನು ತೀರ್ಪಿಲ್ಲದೆ ಕೇಳುವುದು, ಪರಿಸ್ಥಿತಿಯ ಗಂಭೀರತೆಯನ್ನು ಗುರುತಿಸುವುದು, ಅಗತ್ಯವಿದ್ದರೆ ತರಬೇತಿ ಪಡೆದ ವೃತ್ತಿಪರರ ನೆರವಿಗೆ ಕರೆದೊಯ್ಯುವುದು ಮತ್ತು ನಂತರವೂ ಬೆಂಬಲಿಸುವುದು. ಪ್ರತಿಯೊಬ್ಬ ಅಧ್ಯಾಪಕರೂ ಮನೋವೈದ್ಯರಾಗಬೇಕಿಲ್ಲ; ಆದರೆ ವಿದ್ಯಾರ್ಥಿಯ ವರ್ತನೆಯಲ್ಲಿ ಆಗುವ ಅಸಾಮಾನ್ಯ ಬದಲಾವಣೆ, ನಿರಂತರ ಗೈರುಹಾಜರಿ, ಏಕಾಂಗಿತನ, ಓದಿನಲ್ಲಿ ತೀವ್ರ ಕುಂಠಿತ ಅಥವಾ ನಿರಾಶೆಯ ಮಾತುಗಳನ್ನು ಗಮನಿಸುವಷ್ಟು ಸಂವೇದನಾಶೀಲರಾಗಬೇಕು. ಅಧ್ಯಾಪಕರು ಚಿಕಿತ್ಸಕರಾಗದಿದ್ದರೂ, ನೆರವಿನತ್ತ ಕರೆದೊಯ್ಯುವ ಮೊದಲ ಸೇತುವೆಯಾಗಬಹುದು.
ಕುಟುಂಬದ ಪಾತ್ರವೂ ಅಷ್ಟೇ ಮುಖ್ಯ. ‘‘ಎಷ್ಟು ಅಂಕ ಬಂದಿದೆ?’’, ‘‘ಯಾವ ಉದ್ಯೋಗ ಸಿಗುತ್ತದೆ?’’, ‘‘ಅವನಿಗಿಂತ ನೀನು ಏಕೆ ಕಡಿಮೆ?’’ ಎಂಬ ಪ್ರಶ್ನೆಗಳ ನಡುವೆ ಕೆಲವೊಮ್ಮೆ ಅತ್ಯಗತ್ಯವಾದ ಪ್ರಶ್ನೆ ಮರೆಯಾಗುತ್ತದೆ-‘‘ನೀನು ಹೇಗಿದ್ದೀಯ?’’ ಮಕ್ಕಳ ವೈಫಲ್ಯವನ್ನು ಹೋಲಿಕೆ ಮಾಡದೆ ಕೇಳುವ, ಸಮಸ್ಯೆ ಯನ್ನು ಹೇಳಿದಾಗ ಬಯ್ಯದೆ ಅರ್ಥಮಾಡಿಕೊಳ್ಳುವ, ತಪ್ಪು ಮಾಡಿದಾಗಲೂ ಮನೆ ಸುರಕ್ಷಿತ ಸ್ಥಳವಾಗಿಯೇ ಉಳಿಯುವ ವಾತಾವರಣ ಅಗತ್ಯ.
ಈ ಸಂದರ್ಭದಲ್ಲಿ ನಮ್ಮ ಶಿಕ್ಷಣದ ಗುರಿಯನ್ನೂ ಮರುಪರಿಶೀಲಿಸಬೇಕಾಗಿದೆ. ಪರೀಕ್ಷೆಯ ಅಂಕ, ಪದವಿ ಮತ್ತು ಉದ್ಯೋಗ ಮಾತ್ರವೇ ಜೀವನಕ್ಕೆ ಸಾಕಾಗುವುದಿಲ್ಲ. ವೈಫಲ್ಯವನ್ನು ಎದುರಿಸುವುದು, ಒತ್ತಡ ನಿರ್ವಹಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ಸಹಾಯ ಕೇಳುವುದು, ಆರೋಗ್ಯಕರ ಸಂಬಂಧಗಳನ್ನು ಬೆಳೆಸುವುದು ಮತ್ತು ಮತ್ತೆ ಎದ್ದು ನಿಲ್ಲುವುದು ಕೂಡ ಶಿಕ್ಷಣದ ಭಾಗವಾಗಬೇಕು. ಜೀವನ ಕೌಶಲ ಶಿಕ್ಷಣವನ್ನು ಹೆಚ್ಚುವರಿ ಚಟುವಟಿಕೆಯಾಗಿ ಪರಿಗಣಿಸದೆ ಅದನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಕೂಡ ನೋಡಬೇಕಾಗಿದೆ.
ಈ ಸಮಸ್ಯೆ ಕುಟುಂಬ ಅಥವಾ ಕಾಲೇಜಿನ ಹೊಣೆಗಾರಿಕೆ ಮಾತ್ರವಲ್ಲ. ಸರಕಾರ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ವ್ಯವಸ್ಥೆ, ಅಧ್ಯಾಪಕರು, ಪೋಷಕರು, ಸ್ನೇಹಿತರು, ಮಾಧ್ಯಮ ಮತ್ತು ಸಮಾಜಎಲ್ಲರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಸುಲಭವಾಗಿ ದೊರೆಯುವ ಕೌನ್ಸೆಲಿಂಗ್, ತರಬೇತಿ ಪಡೆದ ಸಿಬ್ಬಂದಿ, ಸಂಕಷ್ಟ ನಿರ್ವಹಣಾ ವ್ಯವಸ್ಥೆ, ನ್ಯಾಯಯುತ ಆಡಳಿತ ಮತ್ತು ಮಾನಸಿಕ ಆರೋಗ್ಯದ ಕುರಿತ ಕಳಂಕವನ್ನು ಕಡಿಮೆ ಮಾಡುವ ಪ್ರಯತ್ನಗಳು ಅಗತ್ಯ. ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸಹಜ ಸಾವಿನ ಕುರಿತು ಸಂಸ್ಥೆಗಳ ಜವಾಬ್ದಾರಿಯನ್ನು ಬಲಪಡಿಸುವ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳೂ ಈ ಅಗತ್ಯವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ.
2011ರಿಂದ 2022ರವರೆಗೆ ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೂ, ಪ್ರತೀ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಆತ್ಮಹತ್ಯೆಗಳ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ ಎಂಬ ಮಾಹಿತಿಯೂ ಕಾರ್ಯಪಡೆಯ ಗಮನಕ್ಕೆ ಬಂದಿದೆ. ಇದರ ಹಿನ್ನೆಲೆ ಮತ್ತು ವಿಧಾನವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾದರೂ, ಒಂದು ಪ್ರಶ್ನೆ ನಮ್ಮ ಮುಂದೆ ನಿಲ್ಲುತ್ತದೆ: ಉನ್ನತ ಶಿಕ್ಷಣದ ವಿಸ್ತರಣೆ ಮಾತ್ರ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಖಾತ್ರಿಪಡಿಸುತ್ತದೆಯೇ? ಶಿಕ್ಷಣದ ಪ್ರಮಾಣದ ಜೊತೆಗೆ ಅದರ ಮಾನವೀಯ ಗುಣವೂ ವಿಸ್ತರಿಸಬೇಕಾಗಿದೆ.
ನನ್ನ ಆ ಇಬ್ಬರು ವಿದ್ಯಾರ್ಥಿಗಳ ಘಟನೆಗಳನ್ನು ನೆನಪಿಸಿಕೊಂಡಾಗ ಒಂದು ಸಂಗತಿ ಮನದಟ್ಟಾಗುತ್ತದೆ. ಇಬ್ಬರೂ ಅಂತಿಮ ನಿರ್ಧಾರಕ್ಕೂ ಮುನ್ನ ಯಾರನ್ನೋ ಸಂಪರ್ಕಿಸಿದ್ದರು. ಒಬ್ಬನು ‘‘ನಿಮ್ಮನ್ನು ನೋಡಬೇಕು’’ ಎಂದ; ಮತ್ತೊಬ್ಬಳು ‘‘ನಿಮ್ಮೊಂದಿಗೆ ಮಾತನಾಡಬೇಕು’’ ಎಂದಳು. ಆ ಕ್ಷಣದಲ್ಲಿ ಅವರ ಮಾತನ್ನು ಗಂಭೀರವಾಗಿ ಕೇಳಲು ಯಾರೋ ಇದ್ದರು. ಬಹುಶಃ ಅದೇ ಒಂದು ಸಣ್ಣ ದಾರಿ ಬದುಕಿನತ್ತ ಮರಳಲು ಕಾರಣವಾಯಿತು.
ಆದ್ದರಿಂದ ವಿದ್ಯಾರ್ಥಿಯನ್ನು ಕೇವಲ ಅಂಕಪಟ್ಟಿಯಾಗಿ ನೋಡಬಾರದು. ಅವನು ಕನಸುಗಳಿರುವ, ಭಯಗಳಿರುವ, ವೈಫಲ್ಯಗಳಿರುವ, ಸಂಬಂಧಗಳಿರುವ, ಕೆಲವೊಮ್ಮೆ ಯಾರಿಗೂ ಹೇಳಲಾಗದ ನೋವನ್ನೂ ಹೊತ್ತಿರಬಹುದು.
ಒಂದು ಪರೀಕ್ಷೆಯಲ್ಲಿ ಸೋತರೆ ಮತ್ತೊಂದು ಪರೀಕ್ಷೆ ಬರೆಯಬಹುದು. ಉದ್ಯೋಗ ಕೈತಪ್ಪಿದರೆ ಮತ್ತೊಂದು ಅವಕಾಶ ಹುಡುಕಬಹುದು. ಸಂಬಂಧ ಮುರಿದರೆ ಬದುಕು ಅಲ್ಲಿಯೇ ಮುಗಿಯುವುದಿಲ್ಲ. ಆದರೆ ಕಳೆದುಹೋದ ಒಂದು ಜೀವವನ್ನು ಮರಳಿ ತರಲು ಸಾಧ್ಯವಿಲ್ಲ.
ಹೀಗಾಗಿ ನಮ್ಮ ಶಿಕ್ಷಣದ ಗುರಿ ಕೇವಲ ಉದ್ಯೋಗಕ್ಕೆ ಸಿದ್ಧವಾಗುವ ಯುವಕ-ಯುವತಿಯರನ್ನು ರೂಪಿಸುವುದು ಮಾತ್ರವಲ್ಲ; ಬದುಕಿನ ಏರಿಳಿತಗಳನ್ನು ಎದುರಿಸಬಲ್ಲ, ಸೋಲಿನ ನಂತರ ಮತ್ತೆ ಎದ್ದು ನಿಲ್ಲಬಲ್ಲ, ಅಗತ್ಯವಿದ್ದಾಗ ಸಹಾಯ ಕೇಳಬಲ್ಲ ಮತ್ತು ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಮನುಷ್ಯರನ್ನು ರೂಪಿಸುವುದಾಗಬೇಕು.
ಕೊನೆಗೆ, ಆ ಎರಡು ಕರೆಗಳು ಮತ್ತೆ ನೆನಪಾಗುತ್ತವೆ. ಒಂದು ಕರೆ. ಒಂದು ಮಾತು. ಒಂದು ಕ್ಷಣದ ಮಾನವೀಯತೆ. ಕೆಲವೊಮ್ಮೆ ಇಷ್ಟೇ ಒಂದು ಬದುಕಿಗೆ ಸಾಕಾಗಬಹುದು.