ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ...
ರೈತರು ಈಗಾಗಲೇ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿಗಾಗಿ ಸಿಕ್ಕಾಪಟ್ಟೆ ಭೂಮಿ ಕಳೆದುಕೊಂಡಿದ್ದಾರೆ. ಹೊಸ ಹೊಸ ಯೋಜನೆಗಳ ಹೆಸರಲ್ಲಿ ಇನ್ನೆಷ್ಟು ಜಮೀನು ಕಳೆದುಕೊಳ್ಳಬೇಕು? ಟೌನ್‌ಶಿಪ್ ಯೋಜನೆಗೆ ಯಾರ ವಿರೋಧವೂ ಇಲ್ಲ. ಆದರೆ, ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕಷ್ಟೇ ವಿರೋಧ. ಬಂಜರು ಭೂಮಿ ಗುರುತಿಸಿ, ಯೋಜನೆ ರೂಪಿಸಿದರೆ ತಕರಾರಿಲ್ಲ. ಈ ಯೋಜನೆಗೆ ಲಕ್ಷಾಂತರ ಮರಗಳು ಬಲಿಯಾಗಲಿವೆ. ತೆಂಗು, ಅಡಿಕೆ ಸೇರಿದಂತೆ ತರಾವರಿ ಮರಗಳು ನೆಲಕ್ಕುರುಳಲಿವೆ. ‘ಮರಗಳನ್ನು ಬೆಳೆಸಲು ನಮ್ಮ ರೈತರು ಹರಿಸಿದ ಬೆವರೆಷ್ಟು’ ಎಂದು ಮುಖ್ಯಮಂತ್ರಿ ಶಿವಕುಮಾರ್ ಒಂದು ಕ್ಷಣ ಯೋಚಿಸಿದರೆ ಒಳ್ಳೆಯದು.
ಇದು ರೆಡ್ ಇಂಡಿಯನ್ ‘ಸುವಾಮಿಶ್’ ಬುಡಕಟ್ಟು ನಾಯಕ ಸಿಯಾಟಲ್ 1854ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷರಿಗೆ ಬರೆದಿರುವ ಪತ್ರ. ಪತ್ರದ ಒಕ್ಕಣೆ ಹೀಗಿದೆ- ‘ನೀವು ಆಕಾಶವನ್ನು ಮತ್ತು ಭೂಮಿ ಉಷ್ಣತೆಯನ್ನು ಖರೀದಿಸುವಿರಿ ಹೇಗೆ? ಪ್ರಕೃತಿ ಕೊಳ್ಳುವ ಅಥವಾ ಮಾರುವ ಕಲ್ಪನೆಯೇ ನಮಗೆ ವಿಚಿತ್ರವಾಗಿ ಕಾಣುತ್ತಿದೆ. ಗಾಳಿಯ ತಾಜಾತನ ಮತ್ತು ನೀರಿನ ಮಿನುಗನ್ನು ನಾವು ಮಾರುವುದಾದರೂ ಹೇಗೆ? ನೀವು ಕೊಳ್ಳುವುದಾದರೂ ಹೇಗೆ? ಭೂಮಿ ನಮಗೆ ತಾಯಿ. ಅದನ್ನು ಮುಂದಿನ ಪೀಳಿಗೆಗೂ ಉಳಿಸಿ. ಭೂಮಿ ನಮ್ಮ ದೇವರು. ನಿಮ್ಮ ದೇವರು. ಎಲ್ಲರ ದೇವರೂ ಹೌದು. ಮನುಷ್ಯ ಜೀವಜಾಲ ಹೆಣೆಯಲಿಲ್ಲ. ಆತ ಜೀವಜಾಲದ ಒಂದು ಎಳೆ. ಜೀವ ಜಾಲದಲ್ಲಿ ಪರಸ್ಪರ ಎಲ್ಲವೂ ಬೆಸೆದುಕೊಂಡಿವೆ.
ನಿಮ್ಮ ಹಸಿವು ಭೂಮಿಯನ್ನು ನುಂಗಿ ಬಂಜರು ಮಾಡುತ್ತದೆ. ನಮಗದು ಅನ್ನ ಕೊಡುವ ಅಕ್ಷಯ ಪಾತ್ರೆ. ನಿಮಗೆ ಭೂಮಿ ಒಂದು ವಸ್ತು. ಅದನ್ನು ಬಳಸಿ ಬಿಸಾಡುತ್ತೀರಿ. ನಮ್ಮ ಪೂರ್ವಜರು ಬಾಳಿ, ಬದುಕಿದ್ದು ಇಲ್ಲೇ, ಈ ಮಣ್ಣಿನಲ್ಲಿ. ಅವರು ಮಣ್ಣಾಗಿದ್ದು ಇಲ್ಲೇ. ನಿಮಗಿದು ಬರೀ ಮಣ್ಣು. ನಮಗಿದು ಪವಿತ್ರ ಮಣ್ಣು. ಭೂಮಿ, ಮಣ್ಣು ಬಿಟ್ಟು ಹೋಗುವುದಾದರೂ ಎಲ್ಲಿಗೆ? ನಾವು ಭೂಮಿಯನ್ನು ಮಾರುವುದಾದರೂ ಹೇಗೆ? ನಿಮಗೆ ಗೊತ್ತಿರಲಿ, ಭೂಮಿ, ಆಕಾಶ, ಗಾಳಿ, ನೀರು ಯಾರ ಆಸ್ತಿ ಅಲ್ಲ; ಅವನ್ನು ಮಾರಲು ಸಾಧ್ಯವಿಲ್ಲ. ಇಲ್ಲಿರುವ ಪ್ರಕೃತಿ ನಮ್ಮ ಕುಟುಂಬ. ಪ್ರಾಣಿ-ಪಕ್ಷಿ ಸಂಕುಲ ನಮ್ಮ ರಕ್ತ-ಮಾಂಸ. ಹೂ-ಹಣ್ಣು ನಮ್ಮ ಕಣ್ಣುಗಳು. ಚಿಟ್ಟೆ, ಕೀಟಗಳು ನಮ್ಮ ಬದುಕಿನ ಕಾಮನಬಿಲ್ಲು. ಇಲ್ಲಿ ಹರಿಯುವ ನದಿ-ಝರಿ, ಹಳ್ಳ ಕೊಳ್ಳಗಳು ನಮ್ಮ ಉಸಿರು.
ನಾವು ಭೂಮಿ ಮಾರಲು ನಿರಾಕರಿಸಿದರೆ ಬಲವಂತವಾಗಿ ಒಕ್ಕಲೆಬ್ಬಿಸುವಿರಿ. ಬಲ ಪ್ರಯೋಗಿಸುವಿರಿ. ನಮ್ಮ ತುಂಡು ಭೂಮಿಯನ್ನು ಮುಂದಿನ ಪೀಳಿಗೆಗೂ ಬಿಟ್ಟು ಹೋಗಲು ಅವಕಾಶ ಮಾಡಿಕೊಡಿ. ನಮ್ಮ ಭೂಮಿ ಕಿತ್ತುಕೊಂಡು ಕಾಂಕ್ರಿಟ್ ಕಾಡು ಮಾಡಿದರೆ ಮುಂದೊಂದು ದಿನ ಮನುಷ್ಯ ಕುಲಕ್ಕೇ ಆಪತ್ತು. ಉಳಿದ ಜೀವಜಾಲವೂ ನಾಶವಾಗಬಹುದು.’
ರೆಡ್ ಇಂಡಿಯನ್ ಬುಡಕಟ್ಟು ಜನಾಂಗದ ಭೂಮಿ ಖರೀದಿಗೆ ಅಮೆರಿಕ ಅಧ್ಯಕ್ಷ ಮುಂದಾದಾಗ ಸಿಯಾಟಲ್ ಈ ಪತ್ರ ಬರೆದಿದ್ದಾನೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಈ ಪತ್ರ ಪರಿಸರ ಸಂರಕ್ಷಣೆ ಘೋಷಣೆಯಾಗಿ ಉಳಿದಿದೆ. ರೆಡ್ ಇಂಡಿಯನ್ ನಾಯಕನ ಪತ್ರವನ್ನು ಇಲ್ಲಿ ನೆನಪು ಮಾಡಿಕೊಳ್ಳಲು ಕಾರಣವಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉದ್ದೇಶಿತ ‘ಬಿಡದಿ ಟೌನ್‌ಶಿಪ್’ಗಾಗಿ ಒಕ್ಕಲೆಬ್ಬಿಸಲು ಹೊರಟಿರುವ ರೈತರೂ ಅಕ್ಷರಶಃ ರೆಡ್ ಇಂಡಿಯನ್ನರ ಪರಿಸ್ಥಿತಿಯಲ್ಲಿದ್ದಾರೆ.
ರೆಡ್ ಇಂಡಿಯನ್ನರು ಅಮೆರಿಕ ಅಧ್ಯಕ್ಷರನ್ನು ಬೇಡಿಕೊಂಡಂತೆ, ಬಿಡದಿ ಸುತ್ತಮುತ್ತಲ ಗ್ರಾಮಗಳ ರೈತರು ಮುಖ್ಯಮಂತ್ರಿ ಡಿಕೆಶಿ ಅವರ ಮುಂದೆ, ‘ನಮ್ಮ ಭೂಮಿ ಕಿತ್ತುಕೊಂಡು ಬದುಕನ್ನು ಕಸಿದುಕೊಳ್ಳಬೇಡಿ’ ಎಂದು ಅಂಗಲಾಚುತ್ತಿದ್ದಾರೆ. ರೈತರ ಅನ್ನದ ತಟ್ಟೆಗೇ ಸರಕಾರ ಕೈಹಾಕಿದೆ. ಟೌನ್‌ಶಿಪ್ ಕಾಂಗ್ರೆಸ್-ಜೆಡಿಎಸ್ ಮಧ್ಯೆ ‘ರಾಜಕೀಯ ಚದುರಂಗದಾಟ’ಕ್ಕೆ ಅಂಗಳವಾಗಿದೆ. ಅಸಹಾಯಕ ರೈತರು ‘ದಾಳ’ವಾಗಿದ್ದಾರೆ. ಎರಡು ದಶಕಗಳಿಂದ ಬಿಡದಿ ಸುತ್ತಮುತ್ತ 9 ಕಂದಾಯ ಗ್ರಾಮಗಳ ವ್ಯಾಪ್ತಿಯ 24 ಗ್ರಾಮಗಳ ರೈತರು ಆತಂಕದಲ್ಲೇ ಬದುಕುತ್ತಿದ್ದಾರೆ. ರೈತರ 9,600 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಸರಕಾರ ಪ್ರಕ್ರಿಯೆ ಆರಂಭಿಸಿದೆ. ಇದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕಲ್ಪನೆಯ ಕೂಸು. 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮೊಳಕೆಯೊಡೆದಿದ್ದು. ಗ್ರೇಟರ್ ಬೆಂಗಳೂರು ಉಪ ನಗರ ಯೋಜನೆ. ಏನು ಕಾರಣವೋ ಕೈಗೂಡಲಿಲ್ಲ. ಡಿಕೆಶಿ ಮುಖ್ಯಮಂತ್ರಿ ಆದ ಬಳಿಕ ಯೋಜನೆಗೆ ಬಲ ಬಂದಿದೆ. ಜೆಡಿಎಸ್ ನಾಯಕರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಅದೇ ಕಾರಣಕ್ಕೆ ಡಿಕೆಶಿ ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ‘ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಮಾತಿನಂತೆ ರೈತರು ಬೀದಿಗೆ ಬೀಳುತ್ತಿದ್ದಾರೆ.
ರಾಜ್ಯ ಸರಕಾರ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದು ಫಲವತ್ತಾದ ಜಮೀನು. ಇಲ್ಲಿ ಬೆಳೆಯುವ ಬೆಳೆಗಳು ರೈತರಿಗೆ ಬಂಗಾರ. ರೇಷ್ಮೆ, ತೆಂಗು, ಅಡಿಕೆ, ಭತ್ತ, ರಾಗಿ, ಮಾವು, ಸೊಪ್ಪು, ತರಕಾರಿ ಮುಖ್ಯ ಬೆಳೆ. ಹಸಿರಿನಿಂದ ತುಂಬಿ ತುಳುಕುವ ಪರಿಸರ. ಬಂಗಾರದಂಥ ಜಮೀನುಗಳ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಿರುವುದು ವಿವೇಕರಹಿತ ನಡೆ. ಯೋಜನೆಗೆ 18 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶವಿದೆ. ಒಂದು ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ. ಒಂದು ಮಾದರಿ ನಗರದಲ್ಲಿ ಯಾವ್ಯಾವ ವ್ಯವಸ್ಥೆಗಳು ಇರಬೇಕೋ ಎಲ್ಲವೂ ಇರಲಿದೆ. ಆದರೆ, ಪ್ರಶ್ನೆ ಇರುವುದು, ‘ಟೌನ್‌ಶಿಪ್ ಯೋಜನೆಗೆ ಫಲವತ್ತಾದ ಭೂಮಿಯೇ ಬೇಕೇ?’ ಇಲ್ಲಿ ಬೆಳೆಯುವುದನ್ನು ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಭಯ ಹುಟ್ಟಿಸಲಾಗಿದೆ. ವೃಷಭಾವತಿ ನೀರಿನಲ್ಲೇ ಸಮಸ್ಯೆ ಇದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಕ್ಯಾನ್ಸರ್ ಕಾಯಿಲೆಗೆ ಹೆದರಿ ಓಡುವುದುಂಟೆ? ಇದೊಂದು ರೀತಿ ‘ನೆಗಡಿಯಾದರೆ ಮೂಗು ಕೊಯ್ದರು’ ಎಂಬ ವಾದದಂತಿದೆ. ನೀರು ಕಲುಷಿತಗೊಂಡಿದ್ದರೆ ಶುದ್ಧೀಕರಿಸಬೇಕು.
ರೈತರು ಈಗಾಗಲೇ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿಗಾಗಿ ಸಿಕ್ಕಾಪಟ್ಟೆ ಭೂಮಿ ಕಳೆದುಕೊಂಡಿದ್ದಾರೆ. ಹೊಸ ಹೊಸ ಯೋಜನೆಗಳ ಹೆಸರಲ್ಲಿ ಇನ್ನೆಷ್ಟು ಜಮೀನು ಕಳೆದುಕೊಳ್ಳಬೇಕು? ಟೌನ್‌ಶಿಪ್ ಯೋಜನೆಗೆ ಯಾರ ವಿರೋಧವೂ ಇಲ್ಲ. ಆದರೆ, ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕಷ್ಟೇ ವಿರೋಧ. ಬಂಜರು ಭೂಮಿ ಗುರುತಿಸಿ, ಯೋಜನೆ ರೂಪಿಸಿದರೆ ತಕರಾರಿಲ್ಲ. ಈ ಯೋಜನೆಗೆ ಲಕ್ಷಾಂತರ ಮರಗಳು ಬಲಿಯಾಗಲಿವೆ. ತೆಂಗು, ಅಡಿಕೆ ಸೇರಿದಂತೆ ತರಾವರಿ ಮರಗಳು ನೆಲಕ್ಕುರುಳಲಿವೆ. ‘ಮರಗಳನ್ನು ಬೆಳೆಸಲು ನಮ್ಮ ರೈತರು ಹರಿಸಿದ ಬೆವರೆಷ್ಟು’ ಎಂದು ಮುಖ್ಯಮಂತ್ರಿ ಶಿವಕುಮಾರ್ ಒಂದು ಕ್ಷಣ ಯೋಚಿಸಿದರೆ ಒಳ್ಳೆಯದು. ರೈತರ ವಿರೋಧದ ನಡುವೆಯೂ ‘ಯೋಜನೆ ಮಾಡೇ ತೀರುತ್ತೇವೆ’ ಎಂದು ಹಠ ಮಾಡುವುದು ಸರಿಯಲ್ಲ. ತಮಾಷೆ ಎಂದರೆ, ಕುಮಾರಸ್ವಾಮಿ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದಾಗ ಶಿವಕುಮಾರ್ ಒಳಗೊಂಡಂತೆ ಅನೇಕ ನಾಯಕರು ಪ್ರತಿಭಟಿಸಿದ್ದರು. ಬಿಡದಿ ಟೌನ್‌ಶಿಪ್‌ಗೆ ರಾಜಕೀಯ ಬಣ್ಣ ಬಂದಿರುವುದರಿಂದ ಹಳ್ಳಿಗಳು ಹೋಳಾಗಿವೆ. ಸಣ್ಣಪುಟ್ಟ ರಾಜಕೀಯ ಪುಢಾರಿಗಳು ಯೋಜನೆಯ ಪರ-ವಿರುದ್ಧ ನಿಂತಿದ್ದಾರೆ. ರೈತರು ಮಾತ್ರ ಯಾರಾದರೂ ತಮ್ಮ ಬೆಂಬಲಕ್ಕೆ ಬಂದು, ಯೋಜನೆ ನಿಲ್ಲಿಸಬಹುದೇ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ರೈತರ ವಿರೋಧದ ನಡುವೆಯೂ ಟೌನ್‌ಶಿಪ್‌ಗೆ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳಿಗೆ ಸರಕಾರ ಪರಿಹಾರ ನಿಗದಿಪಡಿಸಿದೆ. ಎಕರೆಗೆ ರೂ. ಎರಡರಿಂದ ಎರಡೂವರೆ ಕೋಟಿವರೆಗೆ ಸಿಗಲಿದೆ. ಜಮೀನು ಕಳೆದುಕೊಳ್ಳುವವರಲ್ಲಿ ಸಣ್ಣ ರೈತರೇ ಹೆಚ್ಚು. ಹತ್ತಿಪ್ಪತ್ತು ಕುಂಟೆ, ಒಂದು ಎಕರೆ, ಹೆಚ್ಚೆಂದರೆ ಎರಡು ಎಕರೆ ಜಮೀನು ಹೊಂದಿದವರೇ ಅಧಿಕ. ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ಸಂಖ್ಯೆ ಕಡಿಮೆ. ‘ಭೂಮಿ ಕಳೆದುಕೊಂಡು ಪರಿಹಾರ ಪಡೆದರೆ ಬದುಕು ಏನಾಗಬಹುದು’ ಎಂಬ ಪ್ರಜ್ಞೆ ರೈತರಿಗಿದೆ. ‘ನೈಸ್ ಯೋಜನೆಗೆ ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿರುವ ರೈತರು ಎಲ್ಲಿದ್ದಾರೆ ಹುಡುಕಿಕೊಂಡು ಬನ್ನಿ’ ಎಂದು ಬಿಡದಿ ಸುತ್ತಮುತ್ತಲ ರೈತರು ಹೇಳುತ್ತಿದ್ದಾರೆ. ‘ರಾಷ್ಟ್ರೀಯ ಹೆದ್ದಾರಿಗೆ ಜಮೀನು ಕಳೆದುಕೊಂಡವರು ಏನಾಗಿದ್ದಾರೆ ನೋಡಿ ಬನ್ನಿ’ ಎಂದು ಕೇಳುತ್ತಿದ್ದಾರೆ. ದೊಡ್ಡ ದೊಡ್ಡ ಯೋಜನೆಗಳಿಗೆ ಇದ್ದ ತುಂಡು ಭೂಮಿ ಕಳೆದುಕೊಂಡು ಬಿಡಿಗಾಸು ಪರಿಹಾರ ಪಡೆದ ರೈತರು ಬರಿಗೈಲಿ ನಿಂತಿದ್ದಾರೆ. ಪರಿಹಾರದ ಹಣವನ್ನು ತಿಂದು, ತೇಗಿ, ಕುಡಿದು, ಜೂಜಾಡಿ, ಮಜಾ ಮಾಡಿ ಬಂದಿದ್ದನ್ನೆಲ್ಲ ಕಳೆದುಕೊಂಡಿದ್ದಾರೆ.
ಕೇಂದ್ರದಲ್ಲಿ 2004ರಿಂದ 2014ರ ನಡುವೆ ಅಧಿಕಾರದಲ್ಲಿದ್ದ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ 2013ರಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಗೊಳಿಸಿದೆ. ರಾಜ್ಯ ಸರಕಾರ ಅವರದೇ ಪಕ್ಷದ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ಕಾಯ್ದೆಗೆ ಮನ್ನಣೆ ನೀಡಿದಂತೆ ಕಾಣುತ್ತಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಜಮೀನು ಸ್ವಾಧೀನಕ್ಕೆ ಶೇ. 70ರಷ್ಟು ರೈತರ ಒಪ್ಪಿಗೆ ಪಡೆಯಬೇಕು. ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆ ಯೋಜನೆಗೆ ಶೇ. 80ರಷ್ಟು ಜಮೀನುಗಳ ಮಾಲಕರ ಒಪ್ಪಿಗೆ ಪಡೆಯಬೇಕು ಎಂದು ಕಾಯ್ದೆ ಹೇಳುತ್ತದೆ. ರೈತರಿಗೆ ವಿತರಿಸುವ ಪರಿಹಾರವೂ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಬೇಕು ಎಂದಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಅಹವಾಲು ಕೇಳಬೇಕು. ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಇದ್ಯಾವ ಪ್ರಕಿಯೆಗಳನ್ನು ಅನುಸರಿಸಿದಂತೆ ಕಾಣುತ್ತಿಲ್ಲ. ರೈತರೂ ಈ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ಬಿಡದಿ ಟೌನ್‌ಶಿಪ್ ತಲೆ ಎತ್ತಲಿರುವ ಹಳ್ಳಿಗಳಲ್ಲಿ ರೈತರ ಅಭಿಪ್ರಾಯ ಪಡೆಯಲಿ. ಬಹಿರಂಗವಾಗಿ ಆದರೂ ಪರವಾಗಿಲ್ಲ. ರಹಸ್ಯ ಮತದಾನದ ಮೂಲಕವಾದರೂ ಸರಿ. ಭೂಸ್ವಾಧೀನ ನ್ಯಾಯಸಮ್ಮತವಾಗಿರಬೇಕು ಮತ್ತು ಪಾರದರ್ಶಕವಾಗಿರಬೇಕು. ಹೀಗಾದಾಗ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರದ ಘನತೆಯೂ ಹೆಚ್ಚುತ್ತದೆ. ಡಿಕೆಶಿ ಮೇಲೆ ಗೌರವವೂ ಬರುತ್ತದೆ. ಯಾವುದೇ ತೀರ್ಮಾನ ಏಕಪಕ್ಷೀಯವಾದರೆ ಅನುಮಾನಕ್ಕೆ ದಾರಿಯಾಗುತ್ತದೆ.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಗ್ರಾಮಗಳ ರೈತರು ಭೂಸ್ವಾಧೀನದ ವಿರುದ್ಧ ನಡೆಸಿದ್ದ ಹೋರಾಟಕ್ಕೆ ಸಿದ್ದರಾಮಯ್ಯ ಸರಕಾರ ಮಣಿದಿತ್ತು. ಅಧಿಸೂಚನೆ ರದ್ದುಪಡಿಸಿತ್ತು. ಈಗ ರೈತರಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂಬ ದೂರುಗಳಿವೆ. ಆದರೆ, ಜಮೀನು ಮಾಲಕರೇ ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಡಲು ಮುಂದೆ ಬರುತ್ತಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ವಾಸ್ತವವೇನೆಂದು ಬಾಧಿತ ರೈತರೇ ಬಹಿರಂಗಪಡಿಸಬೇಕು.
ಮೂರ್ನಾಲ್ಕು ವಾರದ ಹಿಂದೆ ಮಹಾರಾಷ್ಟ್ರದ ಪುಣೆ ಸಮೀಪ ತಲೆಎತ್ತಿರುವ ಮಗರ್ ಪಟ್ಟಾ ‘ಟೌನ್‌ಶಿಪ್’ ಕುರಿತು ಬರೆದಿದ್ದೆ. 25 ವರ್ಷದ ಹಿಂದೆ 430 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೊಂದು ಮಾದರಿ ಯೋಜನೆ. ಮಾದರಿ ಏಕೆಂದರೆ, ಜಮೀನು ಕಳೆದುಕೊಂಡ ರೈತರೂ ಯೋಜನೆಯ ಪಾಲುದಾರರು (ಶೇರ್ ಹೋಲ್ಡರ್ಸ್) ರೈತರನ್ನು ಒಂದೇ ಸಲ ಪರಿಹಾರ ಕೊಟ್ಟು ಬೀದಿಪಾಲು ಮಾಡಿಲ್ಲ. ಬದಲಿಗೆ ಬರುವ ಲಾಭದಲ್ಲಿ ನಿರಂತರವಾಗಿ ಪಾಲು ಸಿಗುತ್ತಿದೆ. ಕೇಂದ್ರವಾಗಲೀ ಅಥವಾ ರಾಜ್ಯವಾಗಲೀ ಈ ಯೋಜನೆಯನ್ನೇ ಅನುಸರಿಸಬೇಕು. ಹಾಗಾದಾಗ ಮಾತ್ರ ರೈತರು ಖುಷಿಯಿಂದ ಭೂಮಿ ಕೊಡಲು ಮುಂದೆ ಬರುತ್ತಾರೆ. ಏನಾದರೂ ಆಗಲಿ, ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಭೂಸ್ವಾಧೀನ ಕುರಿತು ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ.