ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ
ಇಂದು ಫ.ಗು. ಹಳಕಟ್ಟಿಯವರ ಜನ್ಮದಿನ
‘‘ಹೊಟ್ಟೆಯ ಹಸಿವಿಗೆ ಮಿತಿಯುಂಟು-ನೆತ್ತಿಯ ಹಸಿವಿಗೆ ಮಿತಿಯಿಲ್ಲ.’’ ವಚನ ಪಿತಾಮಹ ಎಂದೇ ಖ್ಯಾತಿ ಪಡೆದ ಫ.ಗು. ಹಳಕಟ್ಟಿಯವರು ಜೀವನದೃಷ್ಟಿ ಇದು. ಎಂಭತ್ನಾಲ್ಕು ವರ್ಷ ಬದುಕಿದ್ದ ಹಳಕಟ್ಟಿ ಬೇರೆಯವರು ಮಾಡುವುದಿರಲಿ, ಕಲ್ಪಿಸಿಕೊಳ್ಳಲೂ ಆಗದಷ್ಟು ಕೆಲಸ ಮಾಡಿಹೋಗಿದ್ದಾರೆ. ಭಾಷಾ ವಿದ್ವಾಂಸರು ಅದುವರೆಗೂ ಕಣ್ಣಾರೆ ನೋಡಲೂ ಸಿಗದಿದ್ದ ವಚನಗಳನ್ನು ಹುಡುಕಿ ತೆಗೆದು ಮೊದಲು ಪ್ರಕಟಿಸಿದವರು ಫ.ಗು.ಹಳಕಟ್ಟಿ. ಅವರು ಸಂಗ್ರಹಿಸಿದ ವಚನಗಳ ಸಂಖ್ಯೆ ಹನ್ನೆರಡೂವರೆ ಸಾವಿರಕ್ಕೂ ಜಾಸ್ತಿ ಇದೆ ಎನ್ನುವುದೇ ಅವರ ಕೆಲಸದ ಮಹತ್ವವನ್ನು ಅರಿತುಕೊಳ್ಳಬಹುದು. ಅವರ ಈ ದುಡಿಮೆ, ನಮ್ಮ ತಲೆಮಾರಿನ ನೂರಾರು ಆಸಕ್ತರ ಶ್ರಮ, ಶ್ರದ್ಧೆ, ತಾಳ್ಮೆ, ಜಾಣ್ಮೆ, ವಿವೇಚನೆಗಳನ್ನು ಆಹ್ವಾನಿಸುವಷ್ಟು ವೈವಿಧ್ಯಪೂರ್ಣವೂ, ಮೌಲಿಕವು ಆಗಿದೆ.
ಹಳಕಟ್ಟಿ ಪೂರ್ವಜರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಳಕಟ್ಟಿ ಎಂಬ ಗ್ರಾಮಕ್ಕೆ ಸೇರಿದವರು. ಫಕೀರಪ್ಪ ಹಳಕಟ್ಟಿಯವರು 1880ರ ಜುಲೈ 2ರಂದು ಧಾರವಾಡದಲ್ಲಿ ಜನಿಸಿದರು. ಅವರ ತಂದೆ ಗುರುಬಸಪ್ಪ, ತಾಯಿ ದಾನಮ್ಮ. ಗುರುಬಸಪ್ಪ ಅವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಆದರೆ ಸಾಹಿತಿಯಾಗಿ ಹೆಸರು ಗಳಿಸಿದ್ದರು. ಫಕೀರಪ್ಪ 3ನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಗುರುಬಸಪ್ಪನವರು ಮಗನನ್ನು ಬೆಳೆಸಿದರು. ಫಕೀರಪ್ಪನವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿಯೇ ಆಯಿತು. 1896ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಬಾಶೆಲ್ ಮಿಶನ್ ಸಂಸ್ಥೆಯಿಂದ ಪೂರೈಸಿದರು. ಬಾಶೆಲ್ ಮಿಶನ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕ್ರಿಶ್ಚಿಯನ್ ಮಿಶನರಿಗಳ ಸತತ ಪರಿಶ್ರಮ, ಕರ್ತವ್ಯ ನಿಷ್ಠೆ, ಜ್ಞಾನದಾಹ ಮೊದಲಾದ ಗುಣಗಳು ಫಕೀರಪ್ಪನವರ ಮೇಲೆ ಗಾಢವಾದ ಪರಿಣಾಮ ಬೀರಿದವು.
1896ರಲ್ಲಿ ಫ.ಗು.ಹಳಕಟ್ಟಿಯವರು ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣಪ್ಪನವರ ಜೇಷ್ಠ ಪುತ್ರಿ ಭಾಗೀರಥಿಯವರೊಂದಿಗೆ ಮದುವೆಯಾದರು. 1902ರಲ್ಲಿ ಮುಂಬೈನ ಸೈಂಟ್ ಝೇವಿಯರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಧಾನ ವಿಷಯದೊಂದಿಗೆ ಬಿಎಸ್‌ಸಿ ಪದವಿಯನ್ನು ದ್ವಿತೀಯ ದರ್ಜೆಯಲ್ಲಿ ಅವರು ತೇರ್ಗಡೆಯಾದರು. 1904ರಲ್ಲಿ ಮುಂಬೈನಲ್ಲಿಯೇ ಎಲ್‌ಎಲ್‌ಬಿ ಮುಗಿಸಿಕೊಂಡು, ಬೆಳಗಾವಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಅವರಿಗೆ ವಕೀಲ ವೃತ್ತಿ ಯಾಕೋ ಸರಿ ಅನಿಸಲಿಲ್ಲ. ಶರಣ ಸಾಹಿತ್ಯದಿಂದ ಆಕರ್ಷಿತರಾದ ಫ.ಗು.ಹಳಕಟ್ಟಿಯವರು ಬೆಳಗಾವಿಯಿಂದ ವಿಜಯಪುರಕ್ಕೆ 1923ರಲ್ಲಿ ಬಂದು ನೆಲೆಸಿ ವಚನಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು.
ಹಳಕಟ್ಟಿಯವರು ಪ್ರಾಥಮಿಕ ಶಾಲೆಗಳ ಬೆಳವಣಿಗೆಯಲ್ಲಿ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅವರು 1929ರಲ್ಲಿ ಶಾಲಾ ಸಮಿತಿಯ ಅಧ್ಯಕ್ಷರಾದಾಗ 7 ಗಂಡುಮಕ್ಕಳ ಮತ್ತು 3 ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿದರು. ಅವರು ಯಾವುದೇ ಕಾರ್ಯ ಮಾಡಲಿ ಅದನ್ನು ಅತ್ಯಂತ ನಿಷ್ಠೆಯಿಂದ, ಶಿಸ್ತಿನಿಂದ, ಯೋಜನಾಬದ್ಧರಾಗಿ ನಿರ್ವಹಿಸುತ್ತಿದ್ದರು. ಈ ತೆರನಾದ ಭದ್ರವಾದ ಬುನಾದಿಯ ಮೇಲೆ ಆರಂಭಗೊಂಡ ಬಿಎಲ್‌ಡಿಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಉತ್ತರಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಕಲೆ, ವಿಜ್ಞಾನ, ವಾಣಿಜ್ಯ, ವೈದ್ಯಕೀಯ ಶಿಕ್ಷಣ, ತಾಂತ್ರಿಕ ಮೊದಲಾದ ಹತ್ತು ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿ, ವಿಜಯಪುರ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದೆ. 1933ರಲ್ಲಿ ಸ್ಥಾಪಿತವಾದ ಬೆಳಗಾವಿಯ ಲಿಂಗರಾಜ ಕಾಲೇಜು, 1944ರಲ್ಲಿ ಸ್ಥಾಪಿತವಾದ ಬಾಗಲಕೋಟೆಯ ಬಸವೇಶ್ವರ ಕಾಲೇಜು, ಬನಹಟ್ಟಿಯಲ್ಲಿ ಸ್ಥಾಪಿತವಾದ ಜನತಾಶಿಕ್ಷಣ ಸಂಸ್ಥೆಯ ಹುಟ್ಟಿಗೂ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯದ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಪರೀಕ್ಷಕರಾಗಿ, ಸೆನೆಟ್ ಸದಸ್ಯರಾಗಿ ಪಠ್ಯ ಪುಸ್ತಕಗಳ ಸಂಪಾದಕರಾಗಿ ಶಿಕ್ಷಣದ ಅಭಿವೃದ್ಧಿಗೆ ಅವರು ಹಗಲಿರುಳು ದುಡಿದು, ಉತ್ತರಕರ್ನಾಟಕದ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಕುದುರಿಸಿದರು.
ಸಮಾಜ ಸುಧಾರಣೆಯೇ ದೇವರ ಆರಾಧನೆ ಎಂದು ಅರಿತು ಫ.ಗು.ಹಳಕಟ್ಟಿಯವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಒಕ್ಕಲುತನ ಸಹಕಾರ ಸಂಘ, ಹತ್ತಿ ಮಾರಾಟಗಾರರ ಸಂಘ, ನೇಕಾರರ ಸಹಕಾರ ಸಂಘ, ವಿಲ್ಸನ್ ಆ್ಯಂಟಿ ಫ್ಯಾಮಿನ್ ಇನ್‌ಸ್ಟಿಟ್ಯೂಟ್ ಮುಂತಾದ ಸಂಘ-ಸಂಸ್ಥೆಗಳನ್ನು ಸಮಾಜದ ಏಳ್ಗೆಗಾಗಿ ಕಟ್ಟಿದರು. ಹಳಕಟ್ಟಿಯವರು ಕನ್ನಡ ಸಂಶೋಧನಾ ಸಮಿತಿಯ ಸದಸ್ಯರಾಗಿ, ಸಾಹಿತ್ಯ ಪರಿಷತ್ತಿನ ಸದಸ್ಯರಾಗಿಯೂ ದುಡಿದಿದ್ದಾರೆ, ಅವರ ಕಾರ್ಯಕ್ಷಮತೆಗೆ ದೊರೆತ ಪ್ರತಿಫಲವೆಂಬಂತೆ 1920ರಲ್ಲಿ ನಡೆದ ಮುಂಬೈ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಸರ್ವಾನುಮತದಿಂದ ಆರಿಸಿ ಬಂದರು. ಹಳಕಟ್ಟಿಯವರು ರಾಜಕೀಯ ರಂಗದಲ್ಲಿ ಉಳಿದಿದ್ದರೆ ಏನೇನೋ ಆಗಬಹುದಿತ್ತು. ಆದರೆ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಸೇವೆ ಮುಖ್ಯವಾಗಿತ್ತು.
ಸಂಶೋಧನೆ ಫ.ಗು.ಹಳಕಟ್ಟಿಯವರ ಅತ್ಯಂತ ಆಸಕ್ತಿಯ ಕ್ಷೇತ್ರ. ವಿಜ್ಞಾನ ಮತ್ತು ಕಾನೂನು ಪದವೀಧರರಾಗಿದ್ದ ಅವರ ಸಾಹಿತ್ಯ ಕೃಷಿಯಲ್ಲಿ ಸತ್ಯತೆ, ಸ್ಪಷ್ಟತೆ, ಪ್ರಾಮಾಣಿಕತೆ ಎದ್ದು ತೋರುತ್ತವೆೆ. ಅವರು ವಿಜಯಪುರ, ಬೆಳಗಾವಿ, ಧಾರವಾಡ ಜಿಲ್ಲೆಯ ಹಲವಾರು ಗ್ರಾಮ, ಮನೆ, ಮಠಗಳನ್ನು ಸುತ್ತಿ ತಾಡವೋಲೆಗಳನ್ನು ಸಂಗ್ರಹಿಸಿದರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ಮೊದಲಾದ ಶಿವಶರಣರ ವಚನಗಳನ್ನು ಸಂಗ್ರಹಿಸಿ, ಶಿವಾನುಭವ ಪತ್ರಿಕೆಯಲ್ಲಿ ಪ್ರಕಟಿಸಿದರು. ನಂತರ ಶಿವಾನುಭವ ಗ್ರಂಥಮಾಲೆಯ ಮೂಲಕ ಅವುಗಳನ್ನು ಗ್ರಂಥರೂಪದಲ್ಲಿ ಹೊರತಂದರು. ಹೀಗೆ ಅಜ್ಞಾತ ವಚನಕಾರರನ್ನು ನಾಡಿನ ಜನತೆಗೆ ಪ್ರಥಮವಾಗಿ ಪರಿಚಯಿಸಿದ ಹೆಗ್ಗಳಿಕೆ ಅವರದ್ದಾಗಿದೆ. ವಚನಶಾಸ್ತ್ರಸಾರದ ಮೂರು ಸಂಪುಟಗಳು ವಚನ ಸಾಹಿತ್ಯದ ಮೇರು ಕೃತಿಗಳು. ಶೂನ್ಯ ಸಂಪಾದನೆ, ಏಕೋತ್ತರ ಶತಸ್ಥಲಗಳಂಥ ಹಲವಾರು ವಚನಸಾಹಿತ್ಯದ ಮೌಲಿಕ ಗ್ರಂಥಗಳು ಹಳಕಟ್ಟಿಯವರ ಸಂಶೋಧನೆಯ ಮೇರುಕೃತಿಗಳಾಗಿವೆ. ವಚನವಾಙ್ಮಯದ ಅಧ್ಯಯನಕ್ಕೆ ಪೂರಕವಾದ ಶಿವಾನುಭವ ಶಬ್ದಕೋಶ ಗ್ರಂಥ, ಶಿವಶರಣರ ಸಂಗೀತ ವಚನಗಳು ಸಾಮಾನ್ಯ ಜನರು ಹಾಡಲಿಕ್ಕೆ ಬರುವ ಗ್ರಂಥವಾಗಿದೆ. ಹರಿಹರನ ರಗಳೆಗಳನ್ನು ಕನ್ನಡಸಾಹಿತ್ಯ ಲೋಕಕ್ಕೆ ಪ್ರಥಮವಾಗಿ ಪರಿಚಯಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುವಂಥದ್ದು. ಅಲ್ಲದೇ ಶಿವಾನುಭವ ಮತ್ತು ನವಕರ್ನಾಟಕ ಎಂಬ ಎರಡೂ ಪತ್ರಿಕೆಗಳನ್ನು ನಡೆಸಿಕೊಂಡು ಬಂದಿದ್ದರು. 1914ರಿಂದ 1961ರವರೆಗೆ ಅವರು ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 12 ಸ್ವತಂತ್ರ ಗ್ರಂಥಗಳು, 77 ಸಂಪಾದಿತ ಗ್ರಂಥಗಳು, 51 ಅಪ್ರಕಟಿತ ಗ್ರಂಥಗಳು, 7 ಶಾಸನ ಸಂಪಾದನೆ, 130ಕ್ಕೂ ಹೆಚ್ಚು ಬಿಡಿ ಲೇಖನಗಳು ಹೀಗೆ ಫ.ಗು.ಹಳಕಟ್ಟಿಯವರ ಒಟ್ಟು ಸಾಹಿತ್ಯ ಕೃಷಿ ಎಂದು ಅಂದಾಜಿಸಬಹುದು.
ಫ.ಗು. ಹಳಕಟ್ಟಿಯವರ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳನ್ನು ಪರಿಗಣಿಸಿ, ನಾಡಿನ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿವೆ. 1926ರಲ್ಲಿ ಬಳ್ಳಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928ರಲ್ಲಿ ನಡೆದ ಮೂರನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, 1931ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯತ್ವ, 1956ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಿಲಿಟ್ ಪದವಿ, 1957ರಲ್ಲಿ ಹಂಸಭಾವಿಯಲ್ಲಿ ನಡೆದ 13ನೆಯ ಅಖಿಲಭಾರತ ಶಿವಾನುಭವ ಸಂಸ್ಥೆಯ ಸಮ್ಮೇಳನದ ಅಧ್ಯಕ್ಷತೆ, ಬ್ರಿಟಿಷ್ ಸರಕಾರದ ರಾವ್‌ಬಹದ್ದೂರ್ ಬಿರುದು ಹೀಗೆ ಹತ್ತು ಹಲವು ಗೌರವಗಳು ಅವರಿಗೆ ಸಂದಿವೆ. ಜುಲೈ 2ನ್ನು ವಚನಸಾಹಿತ್ಯ ಸಂರಕ್ಷಣಾ ದಿನವೆಂದು ಸರಕಾರ ಘೋಷಿಸಿ, ಹಳಕಟ್ಟಿಯವರಿಗೆ ಗೌರವ ಸಲ್ಲಿಸಿದೆ. ವಿಜಯಪುರದ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘವು ಡಾ. ಫ.ಗು ಹಳಕಟ್ಟಿಯವರ ಸ್ಮಾರಕ ಭವನವನ್ನು ನಿರ್ಮಿಸಿದೆ. 1974ರಿಂದ ಸೊಲ್ಲಾಪುರದಲ್ಲಿ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ.1980ರಲ್ಲಿ ಹಳಕಟ್ಟಿಯವರ ಜನ್ಮಶತಾಬ್ಧಿ ವರ್ಷವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಚನ ಪಿತಾಮಹ, ವಚನ ಗುಮ್ಮಟ, ಕರ್ನಾಟಕ ಮ್ಯಾಕ್ಸ್‌ಮುಲ್ಲರ್, ಸಚೇತನ ವಿಶ್ವವಿದ್ಯಾಲಯ, ಆಧುನಿಕ ಶರಣ, ಯುಗಪುರುಷ ಮೊದಲಾದ ವಿಶೇಷಣಗಳಿಂದ ನಾಡಿನ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಹಳಕಟ್ಟಿಯವರು ಒಬ್ಬ ಕುಟುಂಬ ಜೀವಿ, ಅವರದು ಸುಖೀ ಕುಟುಂಬ. ಪತ್ನಿ ಭಾಗೀರಥಿಯವರ ಸಹಕಾರದಿಂದಲೇ ಹಳಕಟ್ಟಿಯವರಿಗೆ ಸಾಹಿತ್ಯ ಸೇವೆ, ಸಮಾಜ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಅವರಿಗೆ ಏಳು ಮಕ್ಕಳು. ಹಳಕಟ್ಟಿಯವರು ವಿಜಯಪುರ ಹಾಗೂ ಧಾರವಾಡಗಳಲ್ಲಿ ನಿವೇಶನಗಳನ್ನು ಹೊಂದಿದ್ದರೂ, ಕೊನೆಯವರೆಗೂ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದು ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಿಡುತ್ತಿದ್ದರು. 1921ರಲ್ಲಿ ಹಳಕಟ್ಟಿಯವರು ಅನಾರೋಗ್ಯದಿಂದ ಬಳಲುತ್ತಿರುವಾಗಲೂ ಹೊಟ್ಟೆಯ ಮೇಲೆ ರಟ್ಟನ್ನು ಇಟ್ಟುಕೊಂಡು ವಚನಶಾಸ್ತ್ರ ಭಾಗ 1ನ್ನು ಸಿದ್ಧಗೊಳಿಸಿದ್ದರು. ನಾಡು, ನುಡಿ, ಸಮಾಜ, ಶಿಕ್ಷಣ, ಸಾಹಿತ್ಯ ಹೀಗೆ ವಿವಿಧ ಸೇವಾ ನೆಲೆಗಳಲ್ಲಿ ಫ.ಗು.ಹಳಕಟ್ಟಿಯವರು ಅವಿಶ್ರಾಂತವಾಗಿ ದುಡಿದರು. 1960ರಿಂದ ಅವರ ದೇಹ ಸ್ಥಿತಿಯು ದುರ್ಬಲಗೊಳ್ಳುತ್ತಾ ನಡೆಯಿತು. 1964ರಲ್ಲಿ ವಿಜಯಪುರ ಕಾಮರ್ಸ್ ಕಾಲೇಜಿನ ಕರ್ನಾಟಕ ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅದು ಅವರ ಜೀವನದ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಅವರ ಪತ್ನಿ ಭಾಗೀರಥಿ 1964ರ ಮೇ 25ರಂದು ತೀರಿಕೊಂಡರು. ಅವರಿಗೆ ತಮ್ಮ ಸಹಧರ್ಮಿಣಿ ಅಗಲಿದ್ದು ಬಹುದೊಡ್ಡ ಆಘಾತವನ್ನುಂಟು ಮಾಡಿತು. ಫ.ಗು.ಹಳಕಟ್ಟಿಯವರು 1964ರ ಜೂನ್ 29ರಂದು ನಿಧನರಾದರು.
ವಚನಸಾಹಿತ್ಯಕ್ಕೆ ಹಳಕಟ್ಟಿಯವರು ಮಾಡಿದ ಸೇವೆ ವಿಶ್ವಮಾನ್ಯವಾದದ್ದು. ಬಸವಾದಿ ನೂರಾರು ಶಿವಶರಣರ ಇತಿಹಾಸಕ್ಕೆ ಹೊಸ ಬೆಳಕನ್ನು ನೀಡಿದ್ದಾರೆ.ವಚನಸಾಹಿತ್ಯ ಎಂದಾಕ್ಷಣ ಹಳಕಟ್ಟಿ, ಹಳಕಟ್ಟಿ ಎಂದಾಕ್ಷಣ ವಚನಸಾಹಿತ್ಯ ನೆನಪಾಗುತ್ತದೆ. ಇಂದು ಸಾಹಿತ್ಯ ಸಂಶೋಧನೆಯಲ್ಲಿ ಪ್ರಾಮಾಣಿಕತೆ, ಸಂಯಮ, ಕ್ರಿಯಾಶೀಲತೆ ಕಡಿಮೆಯಾಗಿವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇಂಥ ಸಂದರ್ಭದಲ್ಲಿ ಹಳಕಟ್ಟಿಯವರ ಆದರ್ಶ ಜೀವನವನ್ನು, ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವುದು ಕನ್ನಡಿಗರ ಕರ್ತವ್ಯವಾಗಿದೆ.