ಭಾರತ ರಾಷ್ಟ್ರ (ಹೊಸ) ಚರಿತ್ರೆ-ಒಂದು ಕಿಸೆಗಳ್ಳ ಆವೃತ್ತಿ
ನಿಜಕ್ಕೂ ಘನಮಾನ್ಯ ಸಚಿವರ ಆಶಯ ಒಳ್ಳೆಯದೇ: ಕುರುಡರಿಗೆ ಸುಂದರ ಜಗತ್ತಿನ ಅರಿವಿರಬೇಕು. ಅವರಿಗೆ ಬಾಹ್ಯಪ್ರಪಂಚವನ್ನು ಅವರಿಗೇ ಅರ್ಥವಾಗುವ ಅದೇ ಧಾಟಿ-ರಾಗ-ತಾಳದಲ್ಲಿ ವಿವರಿಸಬೇಕು. ಅಲ್ಲದೇ ಹೋದರೆ ಅವರಿಗೆ ಜಗತ್ತಿನ, ಸಮಾಜದ ವಾಸ್ತವತೆ ಗೊತ್ತಾದೀತು. ಈಗ ಹಾಗಿಲ್ಲ. ಆದ್ದರಿಂದ ಕನಿಷ್ಠ ಈ ಅಂಧ ಸಮುದಾಯಕ್ಕೆ ದೃಷ್ಟಿ ಬರುವವರೆಗಾದರೂ ಭಾರತವು ಸುಂದರವಾಗಿರುವ ಅನುಭವವಿರಲಿ.
ಭಾರತದ ಘನಮಾನ್ಯ ಗೃಹಸಚಿವರು (ಬೇರೆ ಯಾವ ಖಾತೆಯನ್ನು ಅವರು ಹೊಂದಿದ್ದಾರೋ ಗೊತ್ತಿಲ್ಲ) ಭಾರತಕ್ಕೆ ಹೊಸ ಚರಿತ್ರೆಯನ್ನು ಬರೆಸುವ ಎಚ್ಚರಿಕೆಯ ಸಲಹೆ ನೀಡಿದ್ದಾರೆ. (ಅದೃಷ್ಟಕ್ಕೆ ಅವರು ಬರೆಯುವ ಬೆದರಿಕೆ ಹಾಕಿಲ್ಲ!). ಹೇಗಿದ್ದರೂ ಸದ್ಯ ಭಾರತದ ಚರಿತ್ರೆ ಬದಲಾಗಲಿದೆ. ಕನಿಷ್ಠ ಅರಳುವ ಮಕ್ಕಳ ಪಠ್ಯಪುಸ್ತಕಗಳಲ್ಲಾದರೂ! ಜಾರ್ಜ್ ಆರ್ವೆಲ್ ತನ್ನ 1984ರ ಊಹೆಯು ಇಷ್ಟು ಬೇಗ ವಿಶ್ವಗುರುವಿನ ಪವಿತ್ರ ಭಾರತದಲ್ಲಿ ಸಾಕಾರಗೊಂಡದ್ದನ್ನು ನೋಡಿ ಸಮಾಧಿಯಿಂದೆದ್ದು ಸಮಾಧಾನಗೊಳ್ಳಬಹುದು.
ನಿಜಕ್ಕೂ ಘನಮಾನ್ಯ ಸಚಿವರ ಆಶಯ ಒಳ್ಳೆಯದೇ: ಕುರುಡರಿಗೆ ಸುಂದರ ಜಗತ್ತಿನ ಅರಿವಿರಬೇಕು. ಅವರಿಗೆ ಬಾಹ್ಯಪ್ರಪಂಚವನ್ನು ಅವರಿಗೇ ಅರ್ಥವಾಗುವ ಅದೇ ಧಾಟಿ-ರಾಗ-ತಾಳದಲ್ಲಿ ವಿವರಿಸಬೇಕು. ಅಲ್ಲದೇ ಹೋದರೆ ಅವರಿಗೆ ಜಗತ್ತಿನ, ಸಮಾಜದ ವಾಸ್ತವತೆ ಗೊತ್ತಾದೀತು. ಈಗ ಹಾಗಿಲ್ಲ. ಆದ್ದರಿಂದ ಕನಿಷ್ಠ ಈ ಅಂಧ ಸಮುದಾಯಕ್ಕೆ ದೃಷ್ಟಿ ಬರುವವರೆಗಾದರೂ ಭಾರತವು ಸುಂದರವಾಗಿರುವ ಅನುಭವವಿರಲಿ.
ಭಾರತದ ಪ್ರಧಾನಿ ನಿರ್ಮಾಪಕರಾಗಿ ಈ ಸಚಿವರು ನಿರ್ದೇಶಕರಾಗಿರುವ ಹೊಸ ಚರಿತ್ರೆಯಲ್ಲಿ ಎರಡು ವಿಭಾಗಗಳಿರುತ್ತವೆಯೆಂದು ಘನಮಾನ್ಯ ಸಚಿವರು ಘೋಷಿಸಿದ್ದಾರೆ: 2014ರ ವರೆಗಿನ ಮತ್ತು 2014ರ ಬಳಿಕದ ಭಾರತ. ಪ್ರಾಯಃ 2014ರ ಪೂರ್ವದ ಚರಿತ್ರೆಯನ್ನು ಪ್ರಧಾನಿ ನಿರ್ಮಾಪಕರಾಗಿ ಈ ಸಚಿವರು ನಿರ್ದೇಶಕರಾಗಿರುವ ಹೊಸ ಚರಿತ್ರೆಯಲ್ಲಿ ಎರಡು ವಿಭಾಗಗಳಿರುತ್ತವೆ: 2014ರ ಪೂರ್ವದ ಇಂಡಿಯಾ ಚರಿತ್ರೆ ಮತ್ತು 2014ರ ಬಳಿಕದ ಭಾರತ ಚರಿತ್ರೆ. ಇದನ್ನು ಕನಸಿನಲ್ಲಿ ಕಂಡಂತೆ ಹೀಗೆ ವಿವರಿಸಬಹುದು. ಇದೊಂದು ಅಂಕಣ ಮಿತಿಯ ಟಿಪ್ಪಣಿಯಾಗಿರುವ ಕಾರಣ ಮತ್ತು ಇದು ಕಿಸೆಯಲ್ಲಿ ಹಿಡಿಯಬಹುದಾದ್ದರಿಂದ ಈ ಆವೃತ್ತಿಯನ್ನು ಇಂಗ್ಲಿಷ್‌ನಲ್ಲಿ ಹೇಳುವ ‘ಪಾಕೆಟ್ ಎಡಿಶನ್’ ಎನ್ನಬಹುದು. ಆದರೆ ಇದು ಒಳಗೊಂಡ ವಿಚಾರದ ಹಿನ್ನೆಲೆ ಮತ್ತು ಉದ್ದೇಶಗಳು ಘನಮಾನ್ಯ ಸಚಿವರಿಗಿಂತಲೂ ಅವರ ಭಕ್ತರಿಗೆ ಆಕ್ಷೇಪಾರ್ಹವೆನ್ನಿಸಬಹುದಾದ್ದರಿಂದ ಇದನ್ನು ‘ಪಿಕ್‌ಪಾಕೆಟ್ ಎಡಿಶನ್’ ಅಥವಾ ಅಚ್ಚ ಕನ್ನಡದಲ್ಲಿ ‘ಕಿಸೆಗಳ್ಳ ಆವೃತ್ತಿ’ ಎನ್ನಬಹುದೇನೋ?
ಹಳೆಯದಾದ ಮತ್ತು ಆತ್ಮ ನಿರ್ಭರತೆಗೆ ಕಂಟಕಪ್ರಾಯವಾದ ‘ಇಂಡಿಯಾ’ ಎಂಬ ಹೆಸರು ತಕ್ಷಣವೇ ಬ್ರಿಟಿಷ್ ಪರಂಪರೆಯ ‘ಈಸ್ಟ್ ಇಂಡಿಯಾ ಕಂಪೆನಿ’ಯನ್ನು ಮತ್ತು ಆ ಮೂಲಕ ಗುಲಾಮಗಿರಿಯನ್ನು ನೆನಪಿಸಬಹುದಾದ್ದರಿಂದ ‘ಇಂಡಿಯಾ’ ಎಂಬ ಪದವನ್ನು ಎಲ್ಲೆಲ್ಲಿ ಅಸ್ತಿತ್ವದಲ್ಲಿದೆಯೋ ಅಲ್ಲಲ್ಲಿಂದ ತಕ್ಷಣದಿಂದಲೇ ಕಿತ್ತುಹಾಕುವ ದಿವ್ಯ, ಭವ್ಯ ಯೋಜನೆಯನ್ನು ಕಾರ್ಯಗತಗೊಳಿಸಬಹುದು. ಇದರಿಂದಾಗಿ ಈಗಿರುವ ಇಂಡಿಯಾದ ಪ್ರಜೆಗಳು ಅಪ್ಪಟ ಭಾರತೀಯರಾಗಲು ಅವಕಾಶವಿದೆ. ಈಗಾಗಲೇ ‘ಇಂಡಿಯನ್’ ಎಂದು ಪ್ರಚಲಿತವಿದ್ದ ಕ್ರಿಮಿನಲ್ ಕಾಯ್ದೆಗಳನ್ನು ‘ಭಾರತೀಯ’ಗೊಳಿಸಿ ಅವು ಸುಂದರವಾಗಿ ರೂಪುಗೊಂಡು ದೇಶದಲ್ಲಿ ಅಪರಾಧಗಳೇ ನಡೆಯುವುದಿಲ್ಲವೆಂಬ ಹಂತಕ್ಕೆ ತಲುಪಿದ್ದೇವೆ. ಒಂದು ವೇಳೆ ಅಪರಾದ ನಡೆಸಿದವನಿಗೂ ಇವು ಭಾರತೀಯ ಅಪರಾಧಗಳಾದ್ದರಿಂದ ತಾನು ಕೈಗೊಂಡ ಅಪರಾಧವು ಭಾರತಮಾತೆಯ ಚರಣಕಮಲದಲ್ಲಿ ನಡೆಸಿದ ಸೇವೆಯೆಂದು ತಿಳಿಯಲೂ ಅವಕಾಶವಿದೆ. ಕೊಲೆಗೆ ಭಾರತೀಯ ಕೊಲೆ, ಅತ್ಯಾಚಾರಕ್ಕೆ ಭಾರತೀಯ ಅತ್ಯಾಚಾರ, ಮೋಸ, ವಂಚನೆ, ವಿಶ್ವಾಸದ್ರೋಹ ಹೀಗೆ ಎಲ್ಲ ಅಪರಾಧಗಳಿಗೂ ಭಾರತೀಯ ಎಂದು ಸೇರುವುದರಿಂದ ಇದೊಂದು ಆತ್ಮನಿರ್ಭರ ಅಪರಾಧವಾಗುತ್ತದೆ ಮತ್ತು ಭಾರತೀಯ ಅಸ್ಮಿತೆಯನ್ನು ಎತ್ತಿಹಿಡಿದಂತಾಗುತ್ತದೆ. ಮಾತ್ರವಲ್ಲ ಇದು ಭಾರತೀಯತೆಗೆ ಹೆಮ್ಮೆ ತರುವ ಒಂದು ಬದಲಾವಣೆಯೂ ಆಗುತ್ತದೆ. ಇದನ್ನು ವಿರೋಧಿಸುವವರನ್ನು ಪಾಕಿಸ್ತಾನದ ಬದಲು ಇಂಗ್ಲೆಂಡ್‌ಗೆ ಹೋಗಿ ಅನ್ನಬಹುದು. ಹೀಗೆ ಹೇಳುವುದರಿಂದ ದೇಶದ್ರೋಹಿಗಳು ಕೋಪಗೊಳ್ಳಲಾರರು. ಬಹಳಷ್ಟು ಜನರು ಹೋಗಬಹುದಾದ್ದರಿಂದ ದೇಶದ ಜನಸಂಖ್ಯೆಯು ಕಡಿಮೆಯಾಗಬಹುದು. ಆಗ ಒಂದು ಸುಂದರ ಭಾರತವು ತಾನೇತಾನಾಗಿ ಮೈದಳೆಯಬಹುದು. ಇಂತಹ ನಾಮಕರಣವು ಭಾರತದಲ್ಲಿ ಸಮಸ್ಯೆಯೇ ಅಲ್ಲವಾದ್ದರಿಂದ ಈ ಯೋಜನೆ ಶೀಘ್ರವೇ ಕಾರ್ಯಗತಗೊಳ್ಳಬಹುದು.
ಮುಂದಿನ ಹೆಜ್ಜೆಯೆಂದರೆ 2014ರ ಪೂರ್ವದಲ್ಲಿದ್ದ ಮತ್ತು ಆನಂತರ ಬಹುಮತದ ಕೊರತೆಯಿಂದ ಸಹಿಸಿಕೊಂಡು ಬಂದ ಇಂಡಿಯಾದ ಸಂವಿಧಾನವನ್ನು ರದ್ದುಗೊಳಿಸುವುದು ಮತ್ತು ಮನುಸ್ಮತಿಯನ್ನು ಭಾರತದ ಸಂವಿಧಾನವೆಂದು ಘೋಷಿಸುವುದು. ಇದರಿಂದ ಭಾರತದ ಬಹುಪಾಲು ಸಮಸ್ಯೆಗಳು ಪರಿಹಾರವಾಗಬಹುದು. ಏಕೆಂದರೆ ನಮ್ಮಲ್ಲಿ ಈಗಿರುವ ಬಹುಪಾಲು ಕಾನೂನುಗಳು ಈ ಸಂವಿಧಾನದ ಅಡಿಯಲ್ಲೇ ನಡೆಯುತ್ತಿವೆ. ಕಾನೂನನ್ನು ದೇಶಭಕ್ತರು ತಮಗೆ ಬೇಕೆಂದಾಗ ಸರಕಾರದ ಕೃಪಾಬೆಂಬಲದೊಂದಿಗೆ ಕೈಗೆತ್ತಿಕೊಳ್ಳುತ್ತಾರಾದರೂ ಅದಕ್ಕೆ ಒಮ್ಮೊಮ್ಮೆ ನ್ಯಾಯಾಂಗದಿಂದ ತೊಡಕುಗಳು ಉಂಟಾಗುತ್ತಿವೆ. ಅಲ್ಲದೆ ಒಮ್ಮೆ ಮನುಸ್ಮತಿ ಜಾರಿಗೆ ಬಂದರೆ ನಮ್ಮ ಈಗಿನ, ಈಚೆಗೆ ಭಾರತೀಯವಾಗಿ ಬದಲಾದ ಕಾಯ್ದೆಗಳೂ ಅಗತ್ಯವಾಗದೆ ಅವನ್ನೂ ರದ್ದುಪಡಿಸುವ ಮೂಲಕ ಮುದ್ರಿಸಲು ಬೇಕಾದ ಟನ್ನುಗಟ್ಟಲೆ ಕಾಗದದ ಉಳಿತಾಯವಾಗಿ ಪರಿಸರ ರಕ್ಷಣೆಯೂ ಆಗಬಹುದು. ಈಗಿನ ತೊಡಕುಗಳನ್ನು ನಿವಾರಿಸಲೋಸುಗ ಈ ಕಾನೂನುಗಳ ಬೇರನ್ನೇ ಕಿತ್ತುಹಾಕುವ ಈ ಯೋಜನೆ ಮಹತ್ವದ ಫಲಪ್ರದ ಯೋಜನೆಯಾಗಬಹುದು. ಆಗ ನಮ್ಮ ಋಷಿಮುನಿಗಳು, ಸಂಸ್ಕೃತ ವಿದ್ವಾಂಸರುಗಳು ಸರ್ವೋಚ್ಚ ನ್ಯಾಯಾಲಯದಲ್ಲಿ, ಉಚ್ಚನ್ಯಾಯಾಲಯಗಳಲ್ಲಿ ಯಾವುದೇ ಈಗಿನ ತೀರ್ಪುಗಳ ಹಂಗಿಲ್ಲದೆ ಸಂಸ್ಕೃತದಲ್ಲಿ ವಾದಿಸಿ ಸಮಾಜದ ರಕ್ಷಣೆಯನ್ನು ಮಾಡಬಹುದು. ಅವರ ಶಿಷ್ಯರು ಅಧೀನ ನ್ಯಾಯಾಲಯಗಳಲ್ಲಿ ತಮ್ಮ ತರ್ಕವನ್ನು ಮಂಡಿಸಬಹುದು. ಸಂಸ್ಕೃತವನ್ನು ಬಲ್ಲವರನ್ನು ಮಾತ್ರ ಸುಸಂಸ್ಕೃತರೆಂದು ಘೋಷಿಸುವ ಮತ್ತು ಇತರರನ್ನು ದೇಶದ್ರೋಹಿಗಳೆಂದು ಘೋಷಿಸುವ ಮೂಲಕ ದೇಶದಲ್ಲಿ (ಸು)ಭಿಕ್ಷೆ ಶಾಶ್ವತವಾಗಬಹುದು.
2014ರ ಪೂರ್ವದ ಚರಿತ್ರೆಯಲ್ಲಿ ದೇಶದ ಒಳಗಿನ ಹಲವು ರಾಜ್ಯ-ಸಾಮ್ರಾಜ್ಯಗಳು ಪರಸ್ಪರ ಯುದ್ಧ ಮಾಡಿಕೊಂಡದ್ದು ಅಥವಾ ಅವರು ತಮ್ಮ ಪ್ರಜೆಗಳ ಮೇಲೆ ಸವಾರಿಮಾಡಿದ್ದನ್ನು ಎಲ್ಲ ಪಠ್ಯಗಳಿಂದ ಕಿತ್ತುಹಾಕಲಾಗುವುದು. ಪ್ರತಿಯೊಬ್ಬ ಭಾರತೀಯ ಅಂದರೆ ಹಿಂದೂ ಅರಸರು ಪರಮ ದಯಾಳುವಾಗಿದ್ದರೆಂದೂ ತ್ರಿಮತಸ್ಥರನ್ನೂ ಗೌರವಿಸುತ್ತಿದ್ದರೆಂದೂ ವರ್ಣಾಶ್ರಮ ಧರ್ಮದಡಿ ಸಕಲರಿಗೂ ಸೌಭಾಗ್ಯಗಳು ಸಿಕ್ಕಿ ಒಂದು ಸುಖೀ ಸಮಾಜದಡಿ ಎಲ್ಲರೂ ಬದುಕುತ್ತಿದ್ದರೆಂದೂ, ಅಸ್ಪಶ್ಯತೆ ಯಾವ ಕಾಲದಲ್ಲೂ ಇರಲಿಲ್ಲವೆಂದೂ ದಾಖಲಿಸಲಾಗುವುದು. ವಿದೇಶೀಯರ ಆಕ್ರಮಣ, ಘಜನಿ ಮುಹಮ್ಮದ್ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ ಮತ್ತಿತರ ಅಂತಹ ಘಟನೆಗಳು ಬರಬಹುದು. ಹಿಂದೂಯೇತರ ವ್ಯಕ್ತಿ, ಸಂಘಟನೆಗಳ ಬಗ್ಗೆ ಮಾತ್ರ ಈ ಚರಿತೆಯಲ್ಲಿ ದಾಖಲಾತಿಗಳಿರುತ್ತವೆ. ಬೌದ್ಧರೂ, ಜೈನರೂ ಶೈವರೂ, ಇನ್ನಿತರ ಪರಿಶಿಷ್ಟ ವರ್ಗಗಳೂ ಹಿಂದೂಧರ್ಮದ ಕವಲುಗಳೆಂದೂ, ಬುದ್ಧನು ದಶಾವತಾರದ ಕೊನೆಯ ಅವತಾರವೆಂದೂ ಮಹಾವೀರನೆಂಬವನು 11ನೇ ಅವತಾರವೆಂದು ಸೇರಿಸಿ ನಮ್ಮ ಪೌರಾಣಿಕ ಕಲ್ಪನೆಯನ್ನು ಏಕಾದಶಾವತಾರವೆಂದು ಅಥವಾ 12ನೇ ಆಟಗಾರರಂತೆ ಎಲ್ಲಾದರೂ ಸೇರಿಸುವ ಒಬ್ಬ ಮಹಾವ್ಯಕ್ತಿಯೆಂದು ಪ್ರಚುರಪಡಿಸಬಹುದು.
ಘನಮಾನ್ಯ ಸಚಿವರು ಇಷ್ಟೇ ಹೇಳಿಲ್ಲ. 2047ರ ಹೊತ್ತಿಗೆ ಭಾರತ ವಿಶ್ವದಲ್ಲೇ ಮೊದಲ ಸ್ಥಾನ ಅಥವಾ ಅದಕ್ಕೂ ಮೇಲಿನ ಸ್ಥಾನವನ್ನು ತುಂಬಿಸಲಿದೆಯೆಂದು ಪ್ರಧಾನಿ ಫರ್ಮಾನ್ ಹೊರಡಿಸಿದ್ದರು. ಅದು ಎಷ್ಟು ಹತ್ತಿರವಿದೆಯೆಂದು ದೂರದರ್ಶಕವನ್ನು ಹಿಡಿದು ಈ ದೇಶದ ಅಸಂಖ್ಯಾತ ದೂರದೃಷ್ಟಿಯ ಜನರನ್ನು ಒಪ್ಪಿಸಿದರು. ಇದರ ಪೂರಕ ಪಠ್ಯದಂತೆ ಜನರೀಗ ಸದ್ಯ ನಮ್ಮೆದುರಿರುವ ಹಸಿವಿನ, ನಿರುದ್ಯೋಗದ, ಭ್ರಷ್ಟಾಚಾರದ, ಸಾಮರಸ್ಯದ ಅಭಾವದ ಕುರಿತು ಚಿಂತಿಸುತ್ತಿಲ್ಲ. ಏಕೆಂದರೆ ಅವರ ‘ಚಿತ್ತ ನೇರ 2047ರತ್ತ’ ಎಂಬ ಮಾಧ್ಯಮ ಶೀರ್ಷಿಕೆಯಂತಿದೆ. ಘನಮಾನ್ಯ ಗೃಹಸಚಿವರು ಟಿ-20 ಆಟಗಾರರಂತೆ ಈ ಅವಧಿ ಬಹಳ ದೂರವಾಯಿತೆಂಬ ಆತಂಕವನ್ನು ಹೋಗಲಾಡಿಸಲು ತಮ್ಮ ಪುತ್ರರತ್ನವು ಮುಂದಾಳತ್ವ ವಹಿಸಿದ ಜಾಗತಿಕ ಕ್ರಿಕೆಟಿನ ಲೆಕ್ಕಾಚಾರದಂತೆ ಊಹೆಯಿಂದ 2036ರ ವಿಶ್ವ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತವು ಮೊದಲ 5 ಪದಕಪಟ್ಟಿಯಲ್ಲಿ ವಿಜೃಂಭಿಸಲಿದೆಯೆಂದು ಹೇಳಿದ್ದಾರೆ. ಸಂತೋಷ. ತರ್ಕಬದ್ಧವಾಗಿ ಅಥವಾ ಅಂಕಿ-ಅಂಶಗಳ ಆಧಾರದಲ್ಲಿ ಇದು ಹೇಗಾಗುತ್ತದೆಂಬ ಬಗ್ಗೆ ವಿವರಣೆಯಾಗಲೀ ಸಮರ್ಥನೆಯ ಅಗತ್ಯವಿಲ್ಲವೆಂಬುದನ್ನು ಅವರು ಕಂಡುಕೊಂಡಿದ್ದಾರೆ. ಏಕೆಂದರೆ ಬಹುಮತ ಅವರ ಜೊತೆಗಿದೆ.
ಹಾಗೆಯೇ 2036ರ ಒಲಿಂಪಿಕ್ಸನ್ನು ಭಾರತದಲ್ಲೇ ನಿರ್ಧರಿಸಿದರೆ ನಮ್ಮ ಸಮೀಪ ಸ್ಪರ್ಧಿಗಳಿಗೆ ವೀಸಾ ನಿರಾಕರಣೆಯೋ ಅಥವಾ ಹಾಗೂ ಹೀಗೂ ಅವರು ಬಂದರೆ ಅವರನ್ನು ಯಾವುದಾದರೂ ಆರೋಪದಲ್ಲಿ ಅಥವಾ ಕಾರಣವಿಲ್ಲದೆ ಮುನ್ನೆಚ್ಚರಿಕೆಯ ಗೃಹಬಂಧನದಲ್ಲಿರಿಸಿದರೆ ಭಾರತೀಯರು ಮೊದಲ ಸ್ಥಾನವನ್ನೇ ಪಡೆಯಬಹುದು. (ಅಯೋಧ್ಯೆಯಲ್ಲಿ ಲೂಟಿಯಾದ ವಿಚಾರದ ಅನ್ವೇಷಣೆಗೆಂದು ಅಯೋಧ್ಯೆಗೆ ಹೊರಟ ಕಾಂಗ್ರೆಸ್‌ನ ದಿಂಡಿ ಮತ್ತು ದಾಂಡಿಯ ಮಿಶ್ರಯಾತ್ರೆ ಹೊರಡುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆಯಲ್ಲ ಹಾಗೆ!) ಅಥವಾ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಲ್ಲಿ ನಡೆದಂತೆ ಒಲಿಂಪಿಕ್ಸ್ ಮಂಡಳಿಗೂ ಜೈ ಶಾ ಅವರನ್ನು ಅಧ್ಯಕ್ಷರನ್ನಾಗಿಸಿದರೆ ಇದು ಇನ್ನಷ್ಟು ಸುಸೂತ್ರ. ಈಗ ನಡೆಯುತ್ತಿರುವ ವಿಶ್ವಕಪ್ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಅಂತಿಮ ಸುತ್ತಿಗೆ ಬರುವುದು ಖಾತ್ರಿಯಿತ್ತು. ಈ ನಿರೀಕ್ಷೆಯಿಂದ ಅಂತಿಮ ಪಂದ್ಯಗಳ ಕಾರ್ಯಕ್ರಮಸೂಚಿಯನ್ನು ಭಾರತಕ್ಕೆ ಅನುಕೂಲವಾಗುವಂತೆ ನಿಗದಿಪಡಿಸಲಾಗಿದೆ ಎಂದು ಇಬ್ಬರು ಮಾಜಿ ಕ್ರಿಕೆಟಿಗರು ಈಗಾಗಲೇ ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆಯದ ಐಸಿಸಿ ಇದು ಜಾಗತಿಕವಾಗಿ ಅತೀ ಹೆಚ್ಚು ಕ್ರಿಕೆಟ್ ಪ್ರೇಮಿಗಳು ನೋಡುವುದಕ್ಕೂ ಆ ಮೂಲಕ ಪ್ರಾಯೋಜಕರಿಗೂ, ಜಾಹೀರಾತುದಾರರಿಗೂ ಅನುಕೂಲವಾಗುವುದಕ್ಕಾಗಿ ಹೀಗೆ ಮಾಡಲಾಗಿದೆಯೆಂದೂ ಇದರಲ್ಲಿ ಬೇರೆ ದುರುದ್ದೇಶಗಳಿಲ್ಲವೆಂದೂ ಸ್ಫಟಿಕ ಸ್ಪಷ್ಟಪಡಿಸಿದ್ದಾರೆ. ಇದೇ ಅಥವಾ ಇಂತಹ ಕಾರ್ಯಸೂಚಿಯನ್ನು ಒಲಿಂಪಿಕ್ಸ್‌ಗೂ ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ಭಾರತದ ಕ್ರಿಕೆಟ್ ಮಂಡಳಿಯು ಒಂದು ಉದಾತ್ತ ಮತ್ತು ಉದಾರ ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ಅದು ತೆರಿಗೆ ಪಾವತಿಸಬೇಕಾಗಿಲ್ಲ ಮತ್ತು ತೆರಿಗೆದಾರರ ಹಣವನ್ನು ಅದು ಇಲೆಕ್ಟೋರಲ್ ಬಾಂಡುಗಳಂತೆ, ಪಿಎಂ ಕೇರ್ ನಿಧಿಯಂತೆ ತಮ್ಮ ಬಳಗಕ್ಕೆ ಹಂಚಬಹುದಾದ್ದರಿಂದ ಆಟಗಾರರೆಲ್ಲರೂ ಈಗಾಗಲೇ ದೇಶಭಕ್ತರಾಗಿ ಕೋಟಿಕೋಟಿ ದೋಚಿ ಮುಂಬೈಯಲ್ಲಿ ಮತ್ತು ಭವಿಷ್ಯದ ಸುಖೀ ಬದುಕಿಗಾಗಿ ವಿದೇಶದಲ್ಲಿ ಫ್ಲಾಟುಗಳನ್ನು ಖರೀದಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮರ್ಯಾದಾ ಪುರುಷೋತ್ತಮನ ನಿದರ್ಶನವು ನಮಗೆ ಸಹಕಾರಿಯಾಗಬಹುದು: ಸದ್ಯದ ಬೆಳವಣಿಗೆ ಆಶಾದಾಯಕ. 2014ರ ಮೊದಲಿನ ಚರಿತ್ರೆಗೆ ಸಂವಾದಿಯಾಗಿ ಈ ಒಂದು-ಒಂದೂವರೆ ದಶಕದ ಚರಿತ್ರೆಯಲ್ಲಿ ಇನ್ನಷ್ಟು ಅಭ್ಯುದಯವಾಗಿದೆ. ಈಗ ನಾವು ಘಜನಿ ಮುಹಮ್ಮದನಿಗೆ ನಮ್ಮ ದೇವಾಲಯಗಳನ್ನು ಕೊಳ್ಳೆಹೊಡೆಯಲು ಬಿಡುವುದಿಲ್ಲ. ಅದು ನಮ್ಮ ದೇವರು; ನಮ್ಮ ದುಡ್ಡು. ಆದ್ದರಿಂದ ಅದನ್ನು ನಾವೇ ಕೊಳ್ಳೆಹೊಡೆಯಬಹುದೇ ಹೊರತು, ಲೂಟಿ ಮಾಡಬಹುದೇ ಹೊರತು, ಇತರರಿಗೆ ಅವಕಾಶವಿಲ್ಲ. ಮಂದಿರವಲ್ಲೇ ಕಟ್ಟುವೆವು, ಅದನ್ನು ನಾವೇ ಲೂಟಿ ಮಾಡುವೆವು ಎಂಬ ಆತ್ಮನಿರ್ಭರತಾ ತತ್ವವನ್ನು ಮನಸಾ ಸಾಧಿಸುವೆವು. ಆತ್ಮನಿರ್ಭರತಾ ಭಾರತದಲ್ಲಿ ಅಯೋಧ್ಯೆ ಮಾತ್ರವಲ್ಲ, ಕಾಶಿ, ಮಥುರಾ ಮುಂತಾದ ಅನೇಕ ಮಂದಿರಗಳನ್ನು ಜೀರ್ಣೋದ್ಧಾರ ಮಾಡಿದರೆ ನಿಯಮಿತವಾಗಿ, ನಿಗದಿತವಾಗಿ ಅವನ್ನು ಲೂಟಿಮಾಡಬಹುದು. ದೇವರೇ ಇರುವುದು ಭಕ್ತರಿಗಾಗಿ; ಮತ್ತವರ ದುಡ್ಡು ಇನ್ಯಾರಿಗೆ ಸೇರಬೇಕು? ಆದ್ದರಿಂದ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸಮಾಡುವುದರಿಂದ ಹಿಂದುತ್ವ ಪ್ರತಿಪಾದಕ ಭಕ್ತರಿಗೆ ವಿನಾಯಿತಿ ನೀಡಬಹುದು. ಪ್ರತೀ ಕುಟುಂಬಕ್ಕೂ ನಾಲ್ಕು ಮಕ್ಕಳಾಗಬೇಕಾದ್ದರಿಂದ ಅವರ ಪೈಕಿ ಒಬ್ಬರನ್ನು ಈ ಲೂಟಿಕೋರ ಪಡೆಯ ಸದಸ್ಯರನ್ನಾಗಿ ಮಾಡಬಹುದು. ಮತ್ತು ಅಂತಹ ಪಡೆಯನ್ನು ರಾಷ್ಟ್ರಭಕ್ತರ ಅಥವಾ ದೇವಭಕ್ತರ ಪಡೆ ಎಂದು ಗುರುತಿಸಿ ಅಂತಹ ಸಂಘಟನೆಗಳು ನೋಂದಣಿ ಮಾಡಬೇಕಿಲ್ಲವೆಂದು ಘೋಷಿಸಬಹುದು.
ಮುಂದೆ ಭಾರತೀಯರಿಗೆ ರಕ್ಷಣೆಯ ಮಹದುದ್ದೇಶವನ್ನು ಈಡೇರಿಸಬಹುದು. ಹಿಂದುತ್ವವು ಅಪಾಯದಲ್ಲಿದೆಯಾದ್ದರಿಂದ ಭಾಗವತರಿಗೆ ನೀಡಿದಂತಹ ಝೆಢ್ ಭದ್ರತೆಯನ್ನು ಪ್ರತಿಯೊಬ್ಬ ಸ್ವಯಂಸೇವಕನಿಗೂ ನೀಡಿದರೆ ಅವರಿಗೆ ರಕ್ಷಣೆಯೂ ಆಯಿತು, ನಿರುದ್ಯೋಗಿಗಳಿಗೆ ಉದ್ಯೋಗ ಭದ್ರತೆಯೂ ಆಯಿತು. ಆಯುಧಗಳ ಅಗತ್ಯವಿಲ್ಲ. ಏಕೆಂದರೆ ಶ್ರೀರಾಮಚಂದ್ರನು ಕೋದಂಡಧಾರಿಯಾದಂತೆ ಪ್ರತಿಯೊಬ್ಬನೂ ದಂಡಧಾರಿಯಾದರೆ ಯಾವ ದೇಶವೂ ಭಾರತದ ವಿರುದ್ಧ ಆಕ್ರಮಣವನ್ನು ಮಾಡುವಂತಿಲ್ಲ. ಒಂದು ವೇಳೆ ಆಕ್ರಮಣದ ಬಗ್ಗೆ ಗೊತ್ತಾದರೆ ತಕ್ಷಣ ಶಾಂತಿದೂತ ಡೊನಾಲ್ಡ್ ಟ್ರಂಪ್ ಅವರಿಗೆ ದೂರಿತ್ತರೆ ಅವರು ಎಲ್ಲವನ್ನೂ ರಾಜಿಮಾಡಿಸಿ ಶಾಂತಿಸ್ಥಾಪನೆ ಮಾಡುತ್ತಾರೆ.
ಇನ್ನೊಂದು ಸಮಸ್ಯೆಯನ್ನು ಬಗೆಹರಿಸಲು ಯೋಚಿಸುವಂತಿದೆ. ಈವರೆಗಿನ ಇತಿಹಾಸವನ್ನು ಹೊಸದಾಗಿ ಬರೆಯುವಾಗ ಭಾರತೀಯ ಪಂಚಾಂಗವನ್ನು ಅಳವಡಿಸಬೇಕಾಗುತ್ತದೆ. ಇದರಿಂದ ಪ್ರಧಾನಿಗೆ ವಿನಾಯಿತಿ ಕೊಡಬಹುದು. ಏಕೆಂದರೆ ಅವರು ಬಹುಪಾಲು ವಿದೇಶಗಳಲ್ಲೇ ಇರುತ್ತಾರೆ. ನಮ್ಮ ಗಡಿಯಾರಗಳಿಗೆ ಭಾರತೀಯ ವೇಳಾಪಟ್ಟಿಯನ್ನು ನೀಡಿದರೆ ಅನುಸರಿಸಲು ಸುಲಭ.
ಇಂತಹ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಘನಮಾನ್ಯ ಸಚಿವರು ಉದ್ದೇಶಿಸಿದ ಹೊಸ ಚರಿತ್ರೆಯಲ್ಲಿ ಅಳವಡಿಸಬಹುದು. ಅವರ ಮತ್ತು ಅವರ ಬೆಂಬಲಕ್ಕೆ ನಿಂತ ಹಿಮ್ಮೇಳದ ಭಾಗವತರೇ ಮೊದಲಾದ ಕಲಾವಧಾನಿಗಳ ಮೇಧಾವಿತನವು ಅಸದಳವಾದ್ದರಿಂದ ಇನ್ನೂ ಅನಿರೀಕ್ಷಿತ ಚರಿತ್ರೆಯು ಹುಟ್ಟಬಹುದು. ಅದಕ್ಕೆ ನಾವು ಕೊರಳೆತ್ತಿ ಸಿದ್ಧರಾಗಬೇಕು, ಅಷ್ಟೇ.