×
Ad

ಸಮತಾವಾದವೆಂದರೆ ಭಯವೇಕೆ?

Update: 2026-06-02 09:48 IST

ಗಾಳಿಯನ್ನು ಇದು ಭಾರತದ ಗಾಳಿ, ಇದು ಪಾಶ್ಚಾತ್ಯ ದೇಶಗಳ ಗಾಳಿ ಎಂದು ಗುರುತಿಸುವುದು ಹೇಗೆ ಮೂರ್ಖತನವೋ ಹಾಗೆಯೇ ಸಮಾಜವಾದವನ್ನು ಇದು ಅನ್ಯದೇಶದ್ದು ನಮ್ಮ ದೇಶದ್ದಲ್ಲ ಎಂದು ಹೇಳುವುದು ಕೂಡ ಮೂರ್ಖತನದ ಪರಮಾವಧಿಯಾಗಿದೆ. ಜಗತ್ತಿನ ಅತ್ಯಂತ ಕೊನೆಯ ವ್ಯಕ್ತಿಗೂ ಸೇರಿದ್ದು ವಚನ ಸಿದ್ಧಾಂತ. ಅದರ ನಿಜ ವಾರಸುದಾರರಾದ ಸಮತಾವಾದಿಗಳನ್ನು ಕಂಡರೆ ಸನಾತನವಾದಿಗಳಿಗೆ ನಡುಕ ಶುರುವಾಗುವುದು ಸಹಜವೇ ಆಗಿದೆ. ಬೇವನ್ನು ಮೆಚ್ಚಿದ ಕಾಗೆಗೆ ಮಾವು ಇಳಿದಪ್ಪಂತೆ ವರ್ಣಾಶ್ರಮ ಧರ್ಮದ ತರತಮ ಭಾವವನ್ನೇ ಅಪ್ಪಿಕೊಂಡು ಬರುತ್ತಿರುವವರಿಗೆ ಸಮತಾವಾದದ ಬಗೆಗೆ ಸಕಾರಣ ಭಯವಿರಲು ಸಾಕು.

‘‘ಸಮತೆ, ಸಮಾನತೆ ಅಥವಾ ಕಮ್ಯುನಿಸಂ ಎಂಬ ಪದಗಳು ದೇಶೀಯ ಪದಗಳಲ್ಲ. ಇವು ಹೊರಗಿನಿಂದ ಅದರಲ್ಲಿಯೂ ಪಾಶ್ಚಾತ್ಯರಿಂದ ಬಂದವುಗಳು. ಆದ್ದರಿಂದ ಈ ಪದಗಳು ಮತ್ತು ಅವುಗಳು ಬಿಂಬಿಸುವ ಪರಿಕಲ್ಪನೆಗಳು ನಮಗೆ ಬೇಕಿಲ್ಲ’’ ಎಂಬ ಮೂರ್ಖ ವಾದವೊಂದು ಮುನ್ನೆಲೆಗೆ ಬರುತ್ತಿದೆ. ಇದು ‘ಫುಡ್’ ಎಂಬ ಪದ ನಮ್ಮದಲ್ಲ ಆದ್ದರಿಂದ ನಮಗೆ ಫುಡ್ (ಆಹಾರ) ಬೇಕಿಲ್ಲ ಎಂಬ ಹುಚ್ಚುತನದ ಪರಮಾವಧಿಯಂತೆ ಕಾಣಿಸುತ್ತಿದೆ. ಅದರಲ್ಲಿಯೂ ಕೋಮುವಾದದ ಅಮಲೇರಿಸಿಕೊಂಡಿರುವ ಪಡ್ಡೆ ಪಟಾಲಂ ಅಂತೂ ಸ್ವದೇಶಿ, ರಾಷ್ಟ್ರೀಯತೆ, ಸ್ಥಳೀಯತೆ ಎಂಬ ಹೊಸ ಪದಪುಂಜಗಳ ಅಡಿಯಲ್ಲಿ ಆಧುನಿಕವಾದುದೆಲ್ಲವನ್ನೂ ತಿರಸ್ಕರಿಸುತ್ತ ಮತ್ತೆ ಚರಿತ್ರೆಯ ಚಕ್ರಗಳನ್ನು ಹಿಂದಕ್ಕೆಳೆಯುತ್ತಿದ್ದಾರೆ. ವಿಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಂಡೇ ವಿಜ್ಞಾನವನ್ನು ಹಳಿಯುವುದು. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುತ್ತಲೇ ಅದನ್ನು ನಿರಾಕರಿಸುವುದು ಎಗ್ಗಿಲ್ಲದೆ ನಡೆದಿದೆ. ಅಸಲಿಗೆ ಇವರು ಪ್ರಗತಿ ವಿರೋಧಿಗಳಂತೆ ಕಂಡರೂ ಹಾಗಿಲ್ಲ. ಆಧುನಿಕ ತಂತ್ರಜ್ಞಾನದ ಮೂಲಕ ಎಲ್ಲ ಸುಖೋಪಭೋಗ ಬೇಕು. ಆದರೆ ಇತರರು ಅದನ್ನು ಅನುಭವಿಸಬಾರದು ಎಂಬುದೇ ಇವರ ಒಳಮರ್ಮ. ಆದ್ದರಿಂದಲೇ ಅವರು ದೇಸಿಯ ಬದುಕು ಶ್ರೇಷ್ಠ, ದೇಸಿಯತೆ, ಸ್ಥಳೀಯತೆ ಪದಪುಂಜಗಳನ್ನು ಬಳಸುತ್ತಲೇ ರೈತರ ಕುತ್ತಿಗೆ ಒತ್ತುತ್ತಾರೆ. ಪರಂಪರೆ ಎನ್ನುತ್ತಲೇ ಪಾರಂಪಾರಿಕ ಜ್ಞಾನಶಿಸ್ತುಗಳನ್ನು ಮೂಲೆಗೊತ್ತುತ್ತಾರೆ. ಪರಂಪರೆಯಡಿಯಲ್ಲಿ ವರ್ಣಾಶ್ರಮ ಧರ್ಮವನ್ನು ಎತ್ತಿ ಹಿಡಿಯುವುದೇ ಅವರ ಗುರಿ.

ಇತ್ತೀಚೆಗೆ ಮಹಾನುಭಾವರೊಬ್ಬರು ಕಮ್ಯುನಿಸ್ಟರನ್ನು ಬಯ್ಯಬೇಕೆಂದು ಹೊರಟು ಸಮಾನತೆಯನ್ನು ಧಿಕ್ಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಮ್ಯುನಿಸಂ ಎಂದರೆ ಸಮಾನತೆ ಎಂಬುದನ್ನು ಸೂಕ್ತವಾಗಿಯೇ ಅರ್ಥೈಸುತ್ತ ‘‘ಹಸ್ತದಲ್ಲಿ ಐದು ಬೆರಳುಗಳೇ ಸಮನಾಗಿಲ್ಲ. ವ್ಯವಸ್ಥೆ ನಡೆಯಬೇಕಾದರೆ ಒಬ್ಬರು ಡಿಐಜಿ, ಅವರ ಕೆಳಗೆ ಎಸ್‌ಪಿ, ಸರ್ಕಲ್ ಇನ್‌ಸ್ಪೆಪೆಕ್ಟರ್ ಹೀಗೆ ಈ ಶ್ರೇಣಿ ಇರಬೇಕಾಗುತ್ತದೆ’’ ಎಂದು ಹೇಳುತ್ತ ಸನಾತನಿಗಳು ಸೃಷ್ಟಿಸಿದ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಖುಲ್ಲಂಖುಲ್ಲಾ ಸಮರ್ಥಿಸಿಕೊಂಡಿದ್ದಾರೆ. ಶತಮಾನಗಳಿಂದಲೂ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಲು ಗ್ರಾಮೀಣ ಜನತೆಯು ಇದೇ ಐದು ಬೆರಳಿನ ಉದಾಹರಣೆ ಕೊಡುತ್ತಲೇ ಬಂದಿದ್ದಾರಷ್ಟೆ. ಅದೇ ಹಳಸಲು ಮತ್ತು ಅತಾರ್ಕಿಕ ವಾದವನ್ನು ಇವರು ಮತ್ತೆ ಮುನ್ನೆಲೆಗೆ ತಂದು ನಗೆಪಾಟಲಿಗೀಡಾಗಿದ್ದಾರೆ. ಬೆರಳುಗಳ ಜೈವಿಕ ವಿನ್ಯಾಸವು ನಿಸರ್ಗದ ದೇಣಿಗೆಯಾಗಿದೆ. ಅದು ಕೂಡ ಜೀವಿಗಳ ಅನೂಕೂಲಕ್ಕಾಗಿ ನಿರ್ಮಾಣವಾದ ಶಾರೀರಿಕ ರಚನೆ. ಇದರಲ್ಲಿ ತಾರತಮ್ಯವಿಲ್ಲ. ಪ್ರತೀ ಬೆರಳಿಗೂ ಸ್ವಾಯತ್ತ ಅಸ್ತಿತ್ವವಿದೆ. ಆದರೆ ಸಮಾಜದಲ್ಲಿ ಸೃಷ್ಟಿಯಾಗಿರುವ ಅಸಮಾನತೆಯು ನೈಸರ್ಗಿಕವಾದುದಲ್ಲ. ಅದು ಮಾನವ ನಿರ್ಮಿತ ಮತ್ತು ಮನುಷ್ಯರ ಬದುಕಿಗೆ ಮಾರಕ. ಕನಿಷ್ಠ ಉಣ್ಣುವಾಗಲಾದರೂ ಎಲ್ಲ ಬೆರಳುಗಳು ಸಮಪಾತಳಿಯಲ್ಲಿ ಇರಬೇಕಾಗುತ್ತದೆ.

ಜೀವ ಜಂತುಗಳ ಉಗಮ-ವಿಕಾಸದ ಬಗೆಗೆ ಮತ್ತು ಸಮಾಜ ರಚನೆಯ ಐತಿಹಾಸಿಕತೆಯ ಅರಿವಿರದ ಅವಿವೇಕಿಗಳು ಇಂಥ ನಿರರ್ಥಕ ವಾದಗಳನ್ನು ಹೂಡುತ್ತಲೇ ಬರುತ್ತಿದ್ದಾರೆ. ನಿಸರ್ಗದಲ್ಲಿ ಅನಂತ ವೈವಿಧ್ಯತೆ ಇದೆ. ಆದರೆ ಅಸಮಾನತೆ ಇಲ್ಲ. ಪ್ರತೀ ಜೀವಿ ಆಕಾರ, ಸ್ವರೂಪದಲ್ಲಿ ವೈವಿಧ್ಯ ಇದೆ. ಒಬ್ಬರಂತೆ ಒಬ್ಬರಿಲ್ಲ. ಎಷ್ಟು ಜೀವರಾಶಿಗಳಿವೆಯೋ ಅಷ್ಟು ನಮೂನೆಗಳಿವೆ. ಇದೇ ಸೃಷ್ಟಿಯ ಅಗಾಧತೆ. ಅನಂತ ಅಗಾಧತೆಯ ಅರಿವಿರದ ಮೂಢರಿಗೆ ತಮ್ಮ ಬಾಲಿಶ ವಾದಗಳು ಒಂದಲ್ಲ ಒಂದು ದಿನ ಗೇಲಿಗೆ ಒಳಗಾಗುತ್ತವೆ ಎಂಬ ಅರಿವಿರದು. ಇದೂ ಕೂಡ ಮಾನವರ ಬದುಕಿನ ಮಿತಿಯೇ ಆಗಿದೆ. ಆದರೆ ಸೃಷ್ಟಿಯ ಯಾವುದೇ ಪ್ರಾಣಿಗಳಲ್ಲಿ ಇರದ ತಾರತಮ್ಯವು ಮನುಷ್ಯರಲ್ಲಿ ಮಾತ್ರ ನಿರ್ಮಾಣವಾಗಿದೆ. ಮನುಷ್ಯರು ತಮ್ಮ ಸ್ವಾರ್ಥ ಮತ್ತು ಸಂಕುಚಿತ ಬುದ್ಧಿಯಿಂದಾಗಿ ಇಲ್ಲದ ಭ್ರಮೆಗಳನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಿದ್ದಾರೆ. ಎಲ್ಲ ಮನುಷ್ಯರ ರಕ್ತದ ಬಣ್ಣ ಕೆಂಪು. ಎಲ್ಲರ ಪ್ರಾಣಕ್ಕೆ ಸಮಾನ ಅಸ್ತಿತ್ವವಿದೆ. ಎಲ್ಲ ಜೀವಿಗಳಿಗೂ ಒಂದೇ ಗಾಳಿ, ನೀರು, ನೆಲ, ಆಕಾಶ ಮತ್ತು ಬೆಂಕಿ ಇದೆ. ಸೃಷ್ಟಿಯಲ್ಲಿ ಇರದ ಭೇದವನ್ನು ಮನುಷ್ಯರು ಸೃಷ್ಟಿಸಿಕೊಂಡಿದ್ದಾರೆ ಎಂಬುದೇ ದುರಂತ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಮನುಷ್ಯರಲ್ಲಿ ಕಲ್ಪಿತ ವಿಭಾಗಗಳನ್ನು ಸೃಷ್ಟಿ ಮಾಡಿದ್ದು ಇದೇ ಸನಾತನ ಸಿದ್ಧಾಂತ. ದೇವರೆಂಬ ಕಲ್ಪಿತ ವಾಸ್ತವವನ್ನು ಇನ್ನಷ್ಟು ನಿಗೂಢಗೊಳಿಸಿ ಪರಬ್ರಹ್ಮನೊಬ್ಬನೇ ಸತ್ಯ. ಕಣ್ಣಿಗೆ ಕಾಣುತ್ತಿರುವ ಜಗತ್ತೆಲ್ಲವೂ ಮಿಥ್ಯೆ ಎಂದು ಬೋಧಿಸುತ್ತ ಪರಬ್ರಹ್ಮದ ಜ್ಞಾತವಾಗಬೇಕಾದರೆ ಸನಾತನ ಧರ್ಮ ಅಂದರೆ ವರ್ಣಾಶ್ರಮ ಧರ್ಮವನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ವಿಧಿಸಲಾಗಿದೆ. ವರ್ಣಾಶ್ರಮ ಧರ್ಮದ ಆಚಾರ ಕೃತಿಗಳಾದ ಋಗ್ವೇದದ ಹತ್ತನೇ ಮಂಡಲದ 90ನೇ ಪುರುಷಸೂಕ್ತದಲ್ಲಿ

ಬ್ರಾಹ್ಮಣೋಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ |

ಊರು ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ॥

ಎಂದು ಹೇಳಲಾಗಿದೆ. ಪರಮ ಪುರುಷನ ಮುಖದಿಂದ ಬ್ರಾಹ್ಮಣನು, ಬಾಹುಗಳಿಂದ ಕ್ಷತ್ರಿಯನು, ತೊಡೆಗಳಿಂದ ವೈಶ್ಯನು, ಪಾದಗಳಿಂದ ಶೂದ್ರನು ಜನಿಸಿದ್ದಾನಂತೆ. ಹೀಗಾಗಿ ಬ್ರಾಹ್ಮಣರು ವೇದಾದಿಗಳನ್ನು ಓದುವುದು, ಬೋಧನೆ ಮಾಡುವುದು, ಯಜ್ಞಯಾಗಗಳನ್ನು ಮಾಡಿಸುವುದು, ಕ್ಷತ್ರಿಯರು ತಮ್ಮ ಬಾಹು ಬಲದಿಂದ ಯುದ್ಧಾದಿಗಳಲ್ಲಿ ನಿರತರಾಗಿದ್ದು ದೇಶ ರಕ್ಷಣೆ, ಪ್ರಜಾಪಾಲನೆ ಮಾಡಬೇಕು. ವೈಶ್ಯರು ವ್ಯಾಪಾರೋದ್ಯೋಗಗಳನ್ನು ಮಾಡಿದರೆ ಶೂದ್ರರು ಮಾತ್ರ ಈ ಮೇಲಿನ ಮೂರು ವರ್ಣದವರ ಸೇವೆ ಮಾಡಿಕೊಂಡು ಇರಬೇಕಂತೆ. ಅವರಿಗಾಗಿ ಕೃಷಿ, ಕುಶಲ ಕಲೆ, ಉತ್ಪಾದನೆಗಳಲ್ಲಿ ತೊಡಗಿಕೊಳ್ಳಬೇಕೆಂದು ವಿಧಿಸಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅಧ್ಯಾಯ 4ರ ಶ್ಲೋಕ 13ರಲ್ಲಿ ‘‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’’ ಎಂದು ಹೇಳಿದ್ದೇನೋ ಸರಿ. ಆದರೆ ಈವರೆಗೂ ಇದು ಸಾಕಾರಗೊಂಡಿಲ್ಲ. ಹುಟ್ಟಿನಿಂದಲ್ಲದೆ ಸಾಮರ್ಥ್ಯಗಳಿಂದ ವರ್ಣಗಳು ಇವತ್ತಿಗೂ ನಿರ್ಣಯವಾಗಿಲ್ಲ. ಪುರಾಣ ಕಾಲದ ಕಥೆಗಳೇ ಅವರ ಬೊಗಳೆಯನ್ನು ಬಯಲು ಮಾಡಿವೆ. ವಿಶ್ವಾಮಿತ್ರನು ಹುಟ್ಟಿನಿಂದ ಕ್ಷತ್ರಿಯನಾಗಿ ತಪಸ್ಸಿನಿಂದ ಬ್ರಾಹ್ಮಣನಾಗಲು ಪ್ರಯತ್ನಿಸಿದನಂತೆ. ಆದರೆ ಹೀಗಾದರೆ ತಮ್ಮ ವರ್ಣಾಶ್ರಮ ಧರ್ಮಕ್ಕೆ ಚ್ಯುತಿ ಬರುವುದೆಂದು ಎಲ್ಲ ಬ್ರಾಹ್ಮಣ ಋಷಿಗಳು ನಾರಾಯಣನ ಮೊರೆ ಹೋಗಲು ಆತನು ವಿಶ್ವಾಮಿತ್ರನ ತಪಸ್ಸು ಭಂಗ ಮಾಡಲೆಂದೇ ಮೇನಕೆಯನ್ನು ಕಳಿಸುತ್ತಾನೆ. ಆತ ಅವಳ ಸೌಂದರ್ಯಕ್ಕೆ ಮನಸೋತು ವಿಚಲಿತನಾಗಿ ತಪೋಭಂಗಕ್ಕೆ ಒಳಗಾಗಿ ಮೇನಕೆಯಲ್ಲಿ ಅನುರಕ್ತನಾಗುತ್ತಾನೆ. ತತ್ಪರಿಣಾಮವಾಗಿ ಮೇನಕೆಯಲ್ಲಿ ಶಕುಂತಲೆ ಎಂಬ ಸುಂದರ ಹೆಣ್ಣು ಮಗುವಿನ ಜನನಕ್ಕೆ ಕಾರಣನಾಗುತ್ತಾನೆ. ಮತ್ತೆ ಪ್ರಯತ್ನಿಸಿ ತಪಸ್ಸು ಕೈಗೊಳ್ಳುತ್ತಾನೆ. ಈ ಬಾರಿ ದೇವಾದಿದೇವತೆಗಳು ಹರ ಸಾಹಸ ಮಾಡಿದರೂ ವಿಚಲಿತನಾಗದೆ ಸ್ವರ್ಗಕ್ಕೆ ಹೋಗಲು ಮುಂದಾದರೆ ಅಲ್ಲಿಯೂ ಈ ಬ್ರಾಹ್ಮಣರು ಕುತಂತ್ರದಿಂದ ಸ್ವರ್ಗಕ್ಕೆ ಏರಲು ಸಾಧ್ಯವಾಗದೆ ಅಂತರಿಕ್ಷದಲ್ಲಿ ನಡುವೆ ಜೋತಾಡುತ್ತಾನೆ. ಅದೇ ತ್ರಿಶಂಕು ಸ್ಥಿತಿಯಾಗಿದೆಯಂತೆ. ವಿಶ್ವಾಮಿತ್ರ ಬ್ರಹ್ಮರ್ಷಿಯಾದರೂ ಅವನಿಗೆ ಬ್ರಾಹ್ಮಣ ಋಷಿಗಳ ದರ್ಜೆಯಿಲ್ಲವೆಂದೇ ವೈದಿಕರು ಈ ಕ್ಷಣಕ್ಕೂ ವಾದಿಸುತ್ತಾರೆ. ಕ್ಷತ್ರಿಯನಾದ ವಿಶ್ವಾಮಿತ್ರನ ಕಥೆಯೇ ಇದಾದರೆ ಶೂದ್ರನಾದ ಶಂಭೂಕನ ಸ್ಥಿತಿಯಂತೂ ಯಾರಿಗೂ ಬೇಡವಾಗಿದೆ.

ಶಂಭೂಕ ವೇದಾದಿಗಳ ಅಧ್ಯಯನ ಮಾಡಿ ತಪಸ್ಸು ಮಾಡಿ ಪರಮ ಮುಕ್ತಿ ಪಡೆಯಬೇಕೆಂದು ಹೊರಟರೆ ಬ್ರಾಹ್ಮಣರ ದೂರನ್ನು ಆಲಿಸಿದ ರಘರಾಮನು ಮರೆ ಮೋಸದಿಂದ ವಧೆ ಮಾಡುತ್ತಾನೆ. ಇನ್ನೋರ್ವ ಶೂದ್ರನಾದ ಏಕಲವ್ಯ ಕ್ಷತ್ರಿಯರಿಗೆ ಮೀಸಲಾದ ಬಿಲ್ವಿದ್ಯೆ ಕಲಿಯಲು ಮುಂದಾದರೆ ಬ್ರಾಹ್ಮಣ ಗುರೋತ್ತಮ ದ್ರೋಣ ಮರೆ ಮೋಸದಿಂದಲೇ ಗುರುದಕ್ಷಿಣೆ ನೆಪದಲ್ಲಿ ತಾನು ನೇರವಾಗಿ ವಿದ್ಯೆ ಕಲಿಸದಿದ್ದರೂ ಹೆಬ್ಬೆರಳನ್ನು ಬಲಿ ಪಡೆಯುತ್ತಾನೆ. ಈ ಎಲ್ಲ ಕಥೆಗಳನ್ನು ಜನರು ಕಟ್ಟಿಲ್ಲ. ಇದೇ ಸನಾತನಿಗಳು ಬರೆದಿಟ್ಟ ಕಥೆಗಳೇ ಆಗಿವೆ. ಹೀಗಿರುವಾಗಲೂ ಚಾತುರ್ವರ್ಣ ವ್ಯವಸ್ಥೆಯು ಗುಣಾಧಾರಿತವಾಗಿದೆ ಎಂದು ಬೊಗಳೆ ಕೊಚ್ಚಿಕೊಳ್ಳುವುದನ್ನು ಬಿಡುವುದಿಲ್ಲ. ಪ್ರಾಚೀನ ಕಾಲ ಹೋಗಲಿ, ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯಲ್ಲಿಯೇ ಇದುವರೆಗೆ ಬ್ರಾಹ್ಮಣರಲ್ಲದವರು ಸನಾತನಿಗಳ ದೇವಾಲಯಗಳಲ್ಲಿ ಪೂಜಾರಿಗಳಾಗುವ ಹಕ್ಕು ಪಡೆದಿಲ್ಲ. ದಲಿತರು ಮತ್ತು ಮಹಿಳೆಯರಿಗೆ ದೇವಸ್ಥಾನಗಳ ಗರ್ಭಗುಡಿಗಳೊಳಗೆ ಪ್ರವೇಶವಿಲ್ಲ. ವೈಚಾರಿಕತೆಯ ಈ ಯುಗದಲ್ಲಿ ಗುಡಿಗಳ ಪ್ರವೇಶಕ್ಕೆ ಯಾರೂ ಹಾತೊರೆಯುತ್ತಿಲ್ಲವಾದರೂ ಹಕ್ಕಿನ ಪ್ರಶ್ನೆಗಾಗಿ ಮಂದಿರ ಪ್ರವೇಶವು ಸ್ವಾಭಿಮಾನದೊಂದಿಗೆ ತಳಕು ಹಾಕಿಕೊಳ್ಳುತ್ತದೆ. ಹೀಗಿರುವಾಗಲೂ ಸನಾತನಿಗಳು ತಮ್ಮದು ಶ್ರೇಷ್ಠ ಸಂಸ್ಕೃತಿ ಎಂದು ಬೀಗುವ ಮೂರ್ಖತನದಿಂದ ಹಿಂದೆ ಸರಿಯುತ್ತಿಲ್ಲ. ಸನಾತನಿಗಳಿಗೆ ಸಮತೆಯಲ್ಲಿ ವಿಶ್ವಾಸವಿಲ್ಲ. ಯಾವತ್ತೂ ಸಮಾಜದಲ್ಲಿ ಸಮಾನತೆ ಇರಲೇ ಇಲ್ಲ. ಇರಬಾರದು. ಅಸಮಾನತೆ ದೈವೀನಿರ್ಮಿತವಾಗಿದೆ. ಅದಕ್ಕೆಲ್ಲ ಕಾರಣ ಅವರವರ ಪೂರ್ವ ಜನ್ಮದ ಸಂಚಿತ ಕರ್ಮವೆಂಬ ಪೊಳ್ಳುಗಳನ್ನೇ ನಂಬಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಸಮಾನತೆ ಸಾರುವ ತತ್ವಗಳು ಅವರಿಗೆ ಅಪಥ್ಯ. ಅವುಗಳನ್ನು ತಾತ್ವಿಕವಾಗಿ ನಿವಾರಿಸಿಕೊಳ್ಳಲು ಸಾಧ್ಯವಾಗದಿರಲು ಅಡ್ಡ ವಾದಗಳನ್ನು ಹೂಡುತ್ತಾರೆ. ಕುಂಟು ನೆಪಗಳನ್ನು ಒಡ್ಡುತ್ತ ಆ ಪದಗಳು ನಮ್ಮವು ಅಲ್ಲ. ಸಮಾಜವಾದ-ಸಮತಾವಾದ ಇವೆಲ್ಲ ಹೊರಗಿನಿಂದ ಬಂದಿವೆ. ನಮ್ಮ ಸಂಸ್ಕೃತಿಗೆ ಅವು ಒಗ್ಗುವುದಿಲ್ಲ. ನಮ್ಮ ಸನಾತನ ಸಂಸ್ಕೃತಿಯೇ ಜಗತ್ತಿನಲ್ಲಿ ಸರ್ವ ಶ್ರೇಷ್ಠವಾಗಿದೆ ಎಂದು ಬಡಬಡಿಸುತ್ತಾರೆ. ಇವೆಲ್ಲವೂ ಇವರ ಹತಾಶೆಯ ವಾದಗಳಾಗಿವೆ ವಿನಃ ಅಲ್ಲಿ ತಾರ್ಕಿಕತೆ ಇಲ್ಲ. ತಾತ್ವಿಕ ವಾಗ್ವಾದಗಳಿಗೆ ಬೇಕಾದ ಕನಿಷ್ಠ ಧಾತು ಅಲ್ಲಿಲ್ಲ.

ಮೊದಲನೆಯದಾಗಿ ಸಮಾನತೆ, ಸಮತೆ ಎಂಬ ಪರಿಕಲ್ಪನೆಗಳು ಭಾರತದ ಉಪಖಂಡದಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಚಾರ್ವಾಕ, ಸಾಂಖ್ಯರ ಕಾಲದಲ್ಲಿಯೇ ಬೀಜಾರೋಪಣೆಗೊಂಡ ಇವು ಬುದ್ಧ ಗುರುವಿನ ಕಾಲಕ್ಕಾಗಲೇ ಫಲ ನೀಡಲು ಶುರುವಾಗಿದ್ದವು. ಕನ್ನಡ ನಾಡಿನಲ್ಲಿಯಂತೂ ವಚನಕಾರರು ಸಮಾನತೆಗಾಗಿ ಪಾರಮಾರ್ಥಿಕ ಆಂದೋಲನವನ್ನೇ ಗೈಯ್ದರು. ಹಾವಿನಾಳ ಕಲ್ಲಯ್ಯನವರ ಒಂದು ವಚನ

‘‘ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,

ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ

ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ

ಮಹಾಲಿಂಗ ಕಲ್ಲೇಶ್ವರದೇವರು ನಗುವರು’’

ಕಲ್ಲಯ್ಯ ಶರಣರ ಅಪರೂಪದ ಈ ವಚನ ತನ್ನ ಕ್ಲುಪ್ತತೆಯಿಂದ ಮನಸೆಳೆಯುತ್ತದೆ. ಪ್ರತೀ ಚಿಕ್ಕ ವಾಕ್ಯದಲ್ಲಿ ಸುದೀರ್ಘವಾದ ತತ್ವಪ್ರಣಾಲಿಯನ್ನೇ ಅಡಕಗೊಳಿಸಲಾಗಿದೆ. ಅರಿವೆ ಗುರು-ಈ ಸಾಲನ್ನು ಕುರಿತು ಸಾವಿರಾರು ಪುಟಗಳಷ್ಟು ವಿವರಿಸಬಹುದು. ಅದರಂತೆ ‘ಸಮತೆ ಎಂಬುದೇ ಎಲ್ಲ ಯೋಗಗಳಿಗಿಂತ ಶ್ರೇಷ್ಠ’ ಎಂಬ ಮಾತಂತೂ ಅವರ ದಾರ್ಶನಿಕ ಪ್ರತಿಭೆಯ ದ್ಯೋತಕವಾಗಿ ನಿಂತಿದೆ. ಜಾಗತಿಕ ದರ್ಶನಗಳು ಹಟಯೋಗ, ರಾಜಯೋಗ, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಶಿವಯೋಗ, ದೃಷ್ಟಿಯೋಗ ಮುಂತಾಗಿ ವೈವಿಧ್ಯಪೂರ್ಣವಾದ ಮಾರ್ಗಗಳನ್ನು ವಿವರಿಸುತ್ತವೆ. ಈ ಎಲ್ಲ ಯೋಗಮಾರ್ಗಗಳ ಅನುಸಂಧಾನದ ವಿನ್ಯಾಸಗಳು ಸಂಕೀರ್ಣವೂ, ವಿಸ್ತಾರವೂ ಆಗಿವೆ. ಮುಮುಕ್ಷುಗಳು ಇವುಗಳನ್ನು ಪುಟಗಟ್ಟಲೆ ವಿವರಿಸಿದ್ದಾರೆ. ಅದೇನೇ ಇರಲಿ ಕಲ್ಲಯ್ಯನವರು ಮಾತ್ರ ಈ ಎಲ್ಲ ಯೋಗಗಳನ್ನು ಕಟ್ಟಿ ತಕ್ಕಡಿಯಲ್ಲಿಟ್ಟರೆ ಸಮತೆ ಎಂಬ ಒಂದೇ ತತ್ವ ಸಾಕು ಇವುಗಳನ್ನು ಅಳೆದು ಸುರಿಯುತ್ತದೆ ಎನ್ನುತ್ತಾರೆ. ಶರಣರಲ್ಲಿ ಸಮತೆ ಎಂದರೆ ಜಾತಿ, ವರ್ಗ, ವರ್ಣ ರಹಿತ ಲಿಂಗ ನಿರಪೇಕ್ಷಿತ ಸಮ ಸಮಾಜ ರಚನೆಯೇ ಆಗಿದೆ. ತಮ್ಮ ಹತ್ತಾರು ವಚನಗಳಲ್ಲಿ ಇದನ್ನು ದೃಢೀಕರಿಸಿದ್ದಾರೆ.

ಸಮತೆಯಿಂದಲೇ ಸಮರಸ, ಸಮರತಿ, ಸಮಕಳೆ ಇತ್ಯಾದಿ ದಾರ್ಶನಿಕ ಪರಿಭಾಷೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಮತೆ ಅರ್ಥಾತ್ ಸಮಾನತೆ ಎಂಬುದು ಬರಿ ಮಾತಲ್ಲ. ಅದು ಬದುಕಿ ತೋರಿಸಬೇಕಾದ ಬಟ್ಟೆ. ಸೃಷ್ಟಿಯಲ್ಲಿ ಉದಿಸಿದ ಪ್ರತೀ ಜೀವಿಗೂ ಸಮ ಪಾಲು ಇದೆ. ಸಮ ಗೌರವವಿದೆ. ಇಲ್ಲಿ ಯಾರೂ ಮೇಲಲ್ಲ. ಕೀಳಲ್ಲ. ಕೆಲಸ ಯಾವುದೇ ಇರಲಿ ಅದಕ್ಕೆ ಸಲ್ಲಬೇಕಾದ ಗೌರವ ಮತ್ತು ಕೂಲಿ ಸಮಾನವಾಗಿರಬೇಕು. ಪ್ರತಿಯೊಬ್ಬರಿಂದಲೂ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸ, ಪ್ರತಿಯೊಬ್ಬರ ಅಗತ್ಯಕ್ಕೆ ಅನುಗುಣವಾದ ಪ್ರತಿಫಲ. ಅವಶ್ಯಕತೆಗೆ ಹೊರತಾದುದನ್ನು ಸಂಗ್ರಹಿಸಿಟ್ಟು ಕೊಳ್ಳುವುದು ವರ್ಜ್ಯ. ಇದುವೇ ಸಮತಾವಾದದ ಸ್ಥೂಲ ತತ್ವ. ಇದೇ ಮಾತನ್ನು ಬಸವಣ್ಣನವರು ಹೀಗನ್ನುತ್ತಾರೆ:

‘‘ಹೊನ್ನಿನೊಳಗೊಂದು ಒರೆಯ, ಸೀರೆಯೊಳಗೊಂದು ಎಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ

ಕೂಡಲಸಂಗಮದೇವಾ’’

ಸಮತಾವಾದ ಎಂದರೆ ಇದಕ್ಕಿಂತ ಬೇರೆ ವಿವರಣೆ ಬೇಕೆ? ಅಂದಂದಿನ ಕೂಲಿ ಅಂದಂದಿಗೆ ಪಡೆದು ಹಿಂದು ಮುಂದೆ ಸಂದೇಹವಿಲ್ಲದಂತೆ ಬದುಕಬೇಕು. ಹುಟ್ಟಿದ ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚ್ಛಿಂದವಾಗದಿರಬೇಕು. ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದ್ದನ್ನು ಹಂಚಿಕೊಂಡು ಅಂದರೆ ದಾಸೋಹ ಮಾಡಬೇಕು. ಮಾಡುವ ಮಾಟದಲ್ಲಿ ತಾನಿಲ್ಲದಿರಬೇಕು. ಸಮತಾವಾದವು ಕನ್ನಡಿಗರಿಗೆ ಹೊಸದಲ್ಲ. ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಈ ಎಲ್ಲ ತತ್ವಗಳನ್ನು ದರ್ಶನವಾಗಿ ಕಟ್ಟಿಕೊಟ್ಟಿದ್ದಾರೆ. ಇದೇ ತತ್ವಗಳೇ ಆಧುನಿಕ ಕಾಲದಲ್ಲಿ ಮಾರ್ಕ್ಸ್‌ವಾದದಲ್ಲಿ ಪ್ರತಿಫಲನಗೊಂಡಿದ್ದರೆ ಅದು ಕಾಕತಾಳಿಯವೇನಲ್ಲ. ಇದರ ಹಿಂದೆ ಜಾಗತಿಕ ಚಾರಿತ್ರಿಕ ನಡೆಗಳಿವೆ. ಮಾನವ ಸಮಾಜಗಳು ವರ್ಗ ಸಂಘರ್ಷದ ನೆಲೆಯಲ್ಲಿ ಹಂತ ಹಂತವಾಗಿ ನಿಚ್ಚಳಗೊಳ್ಳುತ್ತಲೇ ಬಂದಿವೆ.

ಭಾರತದ ಮಟ್ಟಿಗೆ ಹೇಳುವುದಾದರೆ ಸಮಾನತೆಯ ಬೀಜವು ಬುದ್ಧ ಗುರುವಿನಲ್ಲಿ ಅಂಕುರಿಸಿ ಬಸವಾದಿ ಶರಣರಲ್ಲಿ ಹೆಮ್ಮರವಾಗಿ ಬೆಳೆದು ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಫಲವಾಗಿ ದಕ್ಕಿವೆ. ದಲಿತ, ದಮನಿತ, ಮಹಿಳೆ ಮುಂತಾಗಿ ಅಸಂಖ್ಯ ದುಡಿಯುವ ವರ್ಗಕ್ಕೆ ದೊರೆತ ಈ ಪ್ರತಿಫಲವನ್ನು ಕಂಡು ಕರುಬುವ ಜಾತಾಂಧ್ಯರು ಅಸಮಾನತೆಯು ಸ್ಥಿರವಾಗಿರಬೇಕೆಂದು ಹಪಹಪಿಸುತ್ತಾರೆ. ಇದುವೇ ದೈವೀಸಂಕಲ್ಪವೆಂದು ನಂಬಿಸಲು ಹವಣಿಸುತ್ತಾರೆ. ಹೀಗಾಗಿ ಅವರಿಗೆ ಸಮಾನತೆ ಎಂದರೆ ಅಲರ್ಜಿ. ಸಮಾನತೆಯನ್ನು ತಪ್ಪು ಎಂದು ತಾತ್ವಿಕವಾಗಿ ಶ್ರುತ ಪಡಿಸಲು ಸಾಧ್ಯವಿಲ್ಲದಿದ್ದಾಗ ಅದನ್ನು ಬೋಧಿಸುವವರನ್ನು ಪಾಖಂಡಿಗಳು ಅಥವಾ ನಾಸ್ತಿಕರು ಎಂದೆಲ್ಲಾ ಬೊಬ್ಬೆ ಹಾಕುತ್ತಾರೆ. ಅವರಿಗೆ ಎರಡು ವಿಷಯಗಳನ್ನು ಸ್ಪಷ್ಟ ಪಡಿಸಬೇಕಿದೆ. 1. ಸಮಾನತೆ ಎಂಬುದು ಯಾವುದೇ ದೇಶ, ಕಾಲ ಅಥವಾ ಜನಾಂಗದ ಗುತ್ತಿಗೆಯಲ್ಲ. ಅದು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ತತ್ವ ಪ್ರಣಾಲಿಯಾಗಿದೆ. 2. ಈ ತತ್ವಪ್ರಣಾಲಿಯೂ ಎಲ್ಲ ದೇಶಗಳಲ್ಲಿ ಅನೂಚಾನವಾಗಿ ತನ್ನದೇ ಪರಿಭಾಷೆ ಮತ್ತು ಶೈಲಿಯಲ್ಲಿ ಅನುರಣಿತವಾಗುತ್ತಲೇ ಇದೆ.

ಗಾಳಿಯನ್ನು ಇದು ಭಾರತದ ಗಾಳಿ, ಇದು ಪಾಶ್ಚಾತ್ಯ ದೇಶಗಳ ಗಾಳಿ ಎಂದು ಗುರುತಿಸುವುದು ಹೇಗೆ ಮೂರ್ಖತನವೋ ಹಾಗೆಯೇ ಸಮಾಜವಾದವನ್ನು ಇದು ಅನ್ಯದೇಶದ್ದು ನಮ್ಮ ದೇಶದ್ದಲ್ಲ ಎಂದು ಹೇಳುವುದು ಕೂಡ ಮೂರ್ಖತನದ ಪರಮಾವಧಿಯಾಗಿದೆ. ಜಗತ್ತಿನ ಅತ್ಯಂತ ಕೊನೆಯ ವ್ಯಕ್ತಿಗೂ ಸೇರಿದ್ದು ವಚನ ಸಿದ್ಧಾಂತ. ಅದರ ನಿಜ ವಾರಸುದಾರರಾದ ಸಮತಾವಾದಿಗಳನ್ನು ಕಂಡರೆ ಸನಾತನವಾದಿಗಳಿಗೆ ನಡುಕ ಶುರುವಾಗುವುದು ಸಹಜವೇ ಆಗಿದೆ. ಬೇವನ್ನು ಮೆಚ್ಚಿದ ಕಾಗೆಗೆ ಮಾವು ಇಳಿದಪ್ಪಂತೆ ವರ್ಣಾಶ್ರಮ ಧರ್ಮದ ತರತಮ ಭಾವವನ್ನೇ ಅಪ್ಪಿಕೊಂಡು ಬರುತ್ತಿರುವವರಿಗೆ ಸಮತಾವಾದದ ಬಗೆಗೆ ಸಕಾರಣ ಭಯವಿರಲು ಸಾಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಮೀನಾಕ್ಷಿ ಬಾಳಿ

contributor

Similar News