ಪ್ರಜಾಪ್ರಭುತ್ವದ ಹೃದಯದ ಮೇಲೆಯೇ ಬಿದ್ದ ಕಲ್ಲುಗಳು...
ಸೋನಾರ್‌ಪುರದಲ್ಲಿ ಎಸೆಯಲ್ಪಟ್ಟ ಕಲ್ಲುಗಳು ಒಬ್ಬ ರಾಜಕಾರಣಿಯ ಮೇಲೆ ಮಾತ್ರ ಬಿದ್ದಿಲ್ಲ. ಅವು ಭಾರತದ ಪ್ರಜಾಪ್ರಭುತ್ವದ ಹೃದಯದ ಮೇಲೆಯೇ ಬಿದ್ದಿವೆ. ಆ ಗಾಯದ ನೋವನ್ನು ಅರಿಯದಿದ್ದರೆ, ನಾಳೆ ಕಲ್ಲುಗಳು ಇನ್ನೊಬ್ಬ ನಾಯಕನ ಕಡೆಗೆ ಅಲ್ಲ, ನಮ್ಮ ಸಂವಿಧಾನ ಮತ್ತು ನಮ್ಮ ವ್ಯಕ್ತಿಸ್ವಾತಂತ್ರ್ಯದ ಕಡೆಗೆ ಹಾರುವ ಅಪಾಯವಿದೆ.
ಮೇ 30, 2026ರಂದು ಪಶ್ಚಿಮ ಬಂಗಾಳದ ಸೋನಾರ್‌ಪುರದಲ್ಲಿ ನಡೆದ ಘಟನೆ ಕೇವಲ ಒಬ್ಬ ರಾಜಕಾರಣಿಯ ಮೇಲಿನ ದಾಳಿಯಲ್ಲ. ಅದು ಭಾರತೀಯ ಪ್ರಜಾಪ್ರಭುತ್ವದ ಮೂಲ ನೆಲೆಯ ಬಗ್ಗೆ ಆತಂಕ ಹುಟ್ಟಿಸುವ ಎಚ್ಚರಿಕೆಯ ಗಂಟೆಯಾಗಿದೆ. ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಮೊಟ್ಟೆ, ಕಲ್ಲುಗಳನ್ನು ಎಸೆದು ಹಲ್ಲೆ ನಡೆಸಿದ ಗುಂಪು ಕೇವಲ ತಮ್ಮ ರಾಜಕೀಯ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಅಂದುಕೊಂಡರೆ ತಪ್ಪಾಗುತ್ತದೆ. ಅವರು ಪ್ರಜಾಪ್ರಭುತ್ವದ ಆಶಯಗಳನ್ನೇ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಯಾವುದಾದರೂ ರಾಜಕಾರಣಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದಾಗ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹಲವಾರು ದಾರಿಗಳಿವೆ. ಪ್ರಶ್ನಿಸಲು ಅವಕಾಶಗಳಿವೆ, ನ್ಯಾಯಾಲಯ ಇದೆ, ಸಾರ್ವಜನಿಕ ಚರ್ಚೆಗಳಿವೆ, ಇನ್ನೂ ಮುಂದಕ್ಕೆ ಹೋದರೆ ಚುನಾವಣೆಗಳಿವೆ, ತಮಗೆ ನೀಡಿರುವ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ರಾಜಕಾರಣಿಗಳನ್ನು ಸೋಲಿಸಿ ಮನೆಯಲ್ಲಿ ಕೂರಿಸುವ ವೋಟಿಂಗ್ ಪವರ್ ನಮ್ಮ ಬಳಿ ಇದೆ. ಆದರೆ ಯಾವುದೇ ಪಕ್ಷದ ರಾಜಕಾರಣಿಗಾಗಲಿ ಅಥವಾ ರಾಜಕೀಯ ವಿರೋಧಿಗಾಗಲಿ ಕಲ್ಲು ಉತ್ತರವಾಗುವಾಗ, ಅದು ಕೇವಲ ವ್ಯಕ್ತಿಯ ಮೇಲಿನ ಹಿಂಸೆಯಾಗಿರುವುದಿಲ್ಲ. ಅದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿಯಾಗುತ್ತದೆ.
ಕಳೆದ ಕೆಲವು ದಶಕಗಳಲ್ಲಿ ಭಾರತದಲ್ಲಿ ಒಂದು ನಿರ್ದಿಷ್ಟ ರಾಜಕೀಯ ಸಂಸ್ಕೃತಿ ಬೆಳೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಸಂಸ್ಕೃತಿಯ ಮೂಲದಲ್ಲಿ ನಾವು ಮತ್ತು ಅವರು ಎಂಬ ವಿಭಜನೆಯ ರಾಜಕಾರಣವಿದೆ. ರಾಷ್ಟ್ರೀಯತೆ, ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಸಮಾಜವನ್ನು ಎರಡು ಭಾಗಗಳಾಗಿ ವಿಭಜಿಸಲಾಗುತ್ತಿದೆ. ಒಂದು ಕಡೆ ನಿಜವಾದ ದೇಶಭಕ್ತರು, ಮತ್ತೊಂದು ಕಡೆ ದೇಶದ್ರೋಹಿಗಳು, ರಾಷ್ಟ್ರವಿರೋಧಿಗಳು, ಶತ್ರುಗಳು ಎಂಬ ಲೇಬಲ್‌ಗಳನ್ನು ಅಂಟಿಸಲಾಗುತ್ತಿದೆ.
ಇಂತಹ ರಾಜಕಾರಣದ ಅತ್ಯಂತ ಅಪಾಯಕಾರಿ ಅಂಶವೆಂದರೆ ಅದು ಜನರ ವಿಮರ್ಶಾತ್ಮಕ ಚಿಂತನೆಯನ್ನು ದುರ್ಬಲಗೊಳಿಸುತ್ತದೆ. ಒಂದು ನಿರ್ದಿಷ್ಟ ನಾಯಕ ಅಥವಾ ಸಂಘಟನೆಯನ್ನು ಪ್ರಶ್ನಿಸುವುದೇ ದೇಶವಿರೋಧ ಎಂಬ ಭಾವನೆ ನಿರ್ಮಿಸಲಾಗುತ್ತದೆ. ಇದರ ಪರಿಣಾಮವಾಗಿ ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಪ್ರಶ್ನಿಸುವ ಸಂಸ್ಕೃತಿ ನಿಧಾನವಾಗಿ ಸಾಯತೊಡಗುತ್ತದೆ.
ಮನೋವಿಜ್ಞಾನಿಗಳು Dehumanization ಎಂದು ಕರೆಯುವ ಪ್ರಕ್ರಿಯೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕೀಯ ವಿರೋಧಿಯನ್ನು ಮನುಷ್ಯರಾಗಿ ನೋಡುವ ಬದಲು ‘ದೇಶದ್ರೋಹಿ’, ‘ಶತ್ರು’ ಎಂದು ಬಿಂಬಿಸಿದಾಗ, ಅಂತಹವರ ವಿರುದ್ಧ ನಡೆಯುವ ಹಿಂಸೆ ಸಹಜ ಮತ್ತು ನ್ಯಾಯಸಮ್ಮತ ಎಂದು ಜನರು ನಂಬತೊಡಗುತ್ತಾರೆ. ಇತಿಹಾಸದಲ್ಲಿ ಅನೇಕ ದುರಂತಗಳಿಗೆ ಇದೇ ಮನಸ್ಥಿತಿ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳು ಈ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿವೆ. ವಾಟ್ಸ್‌ಆ್ಯಪ್ ಸಂದೇಶಗಳು, ಯೂಟ್ಯೂಬ್ ಪ್ರಚಾರಗಳು, ಸಂಘಟಿತ ಟ್ರೋಲ್ ಆರ್ಮಿಗಳು ಬಿಡುತ್ತಿರುವ ಅರ್ಧಸತ್ಯಗಳ ಮೇಲೆ ನಿರ್ಮಿತವಾದ ರಾಜಕೀಯ ಪ್ರೊಪೋಗಾಂಡಗಳು ಸಾಮಾನ್ಯ ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಮಾಹಿತಿಯನ್ನು ಪರಿಶೀಲಿಸದೆಯೇ ಅದೇ ಅಂತಿಮ ಸತ್ಯವೆಂದು ನಂಬಿ ಹಾಗೆಯೇ ಸ್ವೀಕರಿಸಲ್ಪಡುತ್ತಿದೆ. ಆ ಕಾರಣಕ್ಕೆ Digital emotionsಗಳ ಮುಂದೆ ವಾಸ್ತವಾಂಶಗಳು ಸೋಲುತ್ತಿವೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ನಾಯಕರು ಮಾತ್ರವಲ್ಲ, ಸಾಮಾನ್ಯ ನಾಗರಿಕರೂ ಕೂಡ ಹಿಂಸೆಯ weaponಗಳಾಗಿ ಬಳಸಲ್ಪಡುತ್ತಿದ್ದಾರೆ. ಸೋನಾರ್‌ಪುರದಲ್ಲಿ ಕಲ್ಲು ಎಸೆದವರು ಯಾರೂ ವೃತ್ತಿಪರ ರಾಜಕಾರಣಿಗಳಾಗಿರಲಿಲ್ಲ. ಅವರು ನಮ್ಮ ನಡುವಿನ ಸಾಮಾನ್ಯ ಜನರೇ ಆಗಿದ್ದರು. ಆದರೆ ದ್ವೇಷ ಮತ್ತು ವಿಭಜನೆಯ ರಾಜಕಾರಣ ಅವರ ವಿವೇಕವನ್ನು ಕುಬ್ಜಗೊಳಿಸಿತ್ತು.
ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕು. ಇಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸೆಗಳು ಯಾವುದೇ ಒಂದು ಪಕ್ಷದ ಏಕಸ್ವಾಮ್ಯವಲ್ಲ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಪಕ್ಷಗಳ ಬೆಂಬಲಿಗರು ಹಿಂಸಾಚಾರದಲ್ಲಿ ತೊಡಗಿರುವ ಅನೇಕ ಉದಾಹರಣೆಗಳಿವೆ. ಆದರೆ ಸಂಘಟಿತವಾಗಿ ಮೂಲಭೂತವಾದದ ಮೇಲೆ ಒಂದು ಚೌಕಟ್ಟನ್ನು ನಿರ್ಮಿಸಿ, ಸಂವಿಧಾನ ವಿರೋಧಿ, ಬಹುತ್ವದ ವಿರೋಧಿ ವಿಚಾರಗಳನ್ನು ಹೆಚ್ಚು ಪ್ರಚಾರಗೊಳಿಸಿ ಧರ್ಮ ಧರ್ಮಗಳ ನಡುವೆ ವೈಷಮ್ಯ ಬಿತ್ತುವಂತಹ ವಿಭಜನಾಕಾರಿ ಸಿದ್ಧಾಂತಗಳನ್ನು ಶಾಖೆಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ಜನಮಾನಸದಲ್ಲಿ ಬಿತ್ತುವ ಪ್ರಯತ್ನ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಕೇವಲ ಚುನಾವಣಾ ರಾಜಕಾರಣವನ್ನು ಮಾತ್ರವಲ್ಲ, ಸಮಾಜದ ಚಿಂತನಾ ವಿಧಾನವನ್ನೇ ಬದಲಾಯಿಸಿಬಿಡುತ್ತದೆ.
ಭಾರತದ ಸಂವಿಧಾನವು ಬಹುತ್ವ, ಸಮಾನತೆ ಮತ್ತು ಸ್ವಾತಂತ್ರ್ಯದ ಮೇಲೆ ನಿರ್ಮಾಣಗೊಂಡಿದೆ. ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ ಎಂಬ ಕಲ್ಪನೆಗಳು ಭಾರತದ ನೈಜ ಸ್ವರೂಪಕ್ಕೆ ವಿರುದ್ಧವಾಗಿವೆ. ಈ ದೇಶದ ಶಕ್ತಿ ಇರುವುದೇ ಅದರ ವೈವಿಧ್ಯದಲ್ಲಿ. ಆ ವೈವಿಧ್ಯವನ್ನು ಅಪಾಯವಾಗಿ ಚಿತ್ರಿಸುವ ಯಾವುದೇ ರಾಜಕಾರಣ ಅಂತಿಮವಾಗಿ ಭಾರತದ ಮೂಲ ತತ್ವದ ಮೇಲಿನ ದಾಳಿಯೇ ಆಗುತ್ತದೆ.
ಇಂದು ನಮಗೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿರುವುದು ರಾಜಕಾರಣಿಗಳು ಅಲ್ಲ, ರಾಜಕೀಯ ಪಕ್ಷಗಳೂ ಅಲ್ಲ. ಬದಲಾಗಿ ವಿವೇಕ ಮತ್ತು ಅಂಧ ಭಕ್ತಿಯ ನಡುವಿನ ಹೋರಾಟವಾಗಿದೆ. ಪ್ರಶ್ನಿಸುವ ನಾಗರಿಕರ ಮತ್ತು ಕುರುಡು ಅನುಯಾಯಿಗಳ ನಡುವಿನ ಸಂಘರ್ಷವಾಗಿದೆ. ಸಮಾನತೆ ಸಾರುವ ಸಂವಿಧಾನದ ಮೌಲ್ಯಗಳು ಮತ್ತು ಅಸಮಾನತೆಯನ್ನು ಸಾರುವ ಮೂಲಭೂತವಾದದ ನಡುವಿನ ಸಮರವಾಗಿದೆ.
ಈ ಪರಿಸ್ಥಿತಿಯಿಂದ ಹೊರಬರಲು ಸಮಾಜದಲ್ಲಿ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಬೇಕಾಗಿದೆ. ಯುವಜನರು ಹೆಚ್ಚು ಓದಬೇಕು, ಪ್ರಶ್ನಿಸಬೇಕು, ಮಾಹಿತಿಯನ್ನು ಪರಿಶೀಲಿಸಬೇಕು. ಸ್ವತಂತ್ರ ಪತ್ರಿಕೋದ್ಯಮವನ್ನು ರಕ್ಷಿಸಬೇಕು. ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಬೇಕು. ಭಿನ್ನಾಭಿಪ್ರಾಯವನ್ನು ದೇಶದ್ರೋಹವಾಗಿ ಅಲ್ಲ, ಪ್ರಜಾಪ್ರಭುತ್ವದ ಆಶಯದ ಸಂಕೇತವಾಗಿ ಕಾಣುವ ಮನೋಭಾವ ಬೆಳೆಸಬೇಕು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವವನ್ನು ಕೇವಲ ಆಡಳಿತ ವ್ಯವಸ್ಥೆಯಾಗಿ ನೋಡಲಿಲ್ಲ. ಅದು ಪರಸ್ಪರ ಗೌರವ, ಸಂವಾದ ಮತ್ತು ಸಹಬಾಳ್ವೆಯ ಜೀವನ ವಿಧಾನ ಎಂದು ಅವರು ಪ್ರತಿಪಾದಿಸಿದರು. ಆ ಮೌಲ್ಯಗಳು ದುರ್ಬಲವಾದರೆ ಚುನಾವಣೆಗಳು ನಡೆಯಬಹುದು, ಸರಕಾರಗಳು ಬದಲಾಗಬಹುದು, ಆದರೆ ಪ್ರಜಾಪ್ರಭುತ್ವದ ಮೂಲ ತತ್ವ ಮಾತ್ರ ಉಳಿಯುವುದಿಲ್ಲ.
ಸೋನಾರ್‌ಪುರದಲ್ಲಿ ಎಸೆಯಲ್ಪಟ್ಟ ಕಲ್ಲುಗಳು ಒಬ್ಬ ರಾಜಕಾರಣಿಯ ಮೇಲೆ ಮಾತ್ರ ಬಿದ್ದಿಲ್ಲ. ಅವು ಭಾರತದ ಪ್ರಜಾಪ್ರಭುತ್ವದ ಹೃದಯದ ಮೇಲೆಯೇ ಬಿದ್ದಿವೆ. ಆ ಗಾಯದ ನೋವನ್ನು ಅರಿಯದಿದ್ದರೆ, ನಾಳೆ ಕಲ್ಲುಗಳು ಇನ್ನೊಬ್ಬ ನಾಯಕನ ಕಡೆಗೆ ಅಲ್ಲ, ನಮ್ಮ ಸಂವಿಧಾನ ಮತ್ತು ನಮ್ಮ ವ್ಯಕ್ತಿಸ್ವಾತಂತ್ರ್ಯದ ಕಡೆಗೆ ಹಾರುವ ಅಪಾಯವಿದೆ.