×
Ad

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಾಮಾನ್ಯ ನಾಗರಿಕನೋರ್ವನ ಸರಳ ಪ್ರಶ್ನೆಗಳು

Update: 2026-06-02 09:51 IST

ಮಾನ್ಯ ನ್ಯಾಯಾಧೀಶರೇ, ಬಿಹಾರ ರಾಜ್ಯದ ಎಸ್‌ಐಆರ್ ಕುರಿತ ಅರ್ಜಿಗೆ ಸಂಬಂಧಿಸಿದ ನಿಮ್ಮ ತೀರ್ಪನ್ನು ನಾವು ಅರ್ಥಮಾಡಿಕೊಳ್ಳಲಾಗುತ್ತಿಲ್ಲ, ಕ್ಷಮಿಸಿ. ನೀವು ಹೇಳಿರುವುದೇನೆಂದರೆ, ಭಾರತದ ಜನರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೂ ಅವರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ! ಅವರ ಪೌರತ್ವ ಸಾಬೀತು ಪಡಿಸಲು ಅವರ ಹೆಸರುಗಳನ್ನು ಭಾರತೀಯ ಪೌರತ್ವ ಕಾಯ್ದೆಯ ಅಡಿಯಲ್ಲಿ ಸೂಕ್ತ ಅಧಿಕಾರಿಗೆ ನಿರ್ಣಯಕ್ಕಾಗಿ ಕಳುಹಿಸಬೇಕು. ಸೂಕ್ತ ಅಧಿಕಾರಿ ಅಂತಹ ಅರ್ಜಿಗಳನ್ನು ಮುಂದಿನ ಸ್ಥಳೀಯ ಸಂಸ್ಥೆಗಳ ಅಥವಾ ವಿಧಾನ ಸಭೆ ಚುನಾವಣೆಯ ಒಳಗೆ ವಿಲೇವಾರಿ ಮಾಡಬೇಕು. ಅವರು ಭಾರತದ ಪೌರರು ಎಂದು ಸಾಬೀತಾದರೆ ಅವರ ಹೆಸರನ್ನು ಮತ್ತೆ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು. ನಿಜಕ್ಕೂ ಮುಗ್ಧ ಜನರ ಕುರಿತು ನಿಮಗಿರುವ ಈ ಕಾಳಜಿ ಮೆಚ್ಚಬೇಕಾದ ವಿಷಯ.

ಆದರೆ ನಮ್ಮ ಸಂವಿಧಾನವು ಜಾತಿ, ಧರ್ಮ, ಮತ, ಲಿಂಗ, ಆರ್ಥಿಕ ಸ್ಥಿತಿ ಯಾವುದನ್ನೂ ಪರಿಗಣಿಸದೆ ಭಾರತದ ಎಲ್ಲ ಜನರಿಗೆ ಕೆಲವು ಹಕ್ಕುಗಳನ್ನು ಖಚಿತಪಡಿಸಿದೆ; ಅದರಲ್ಲಿ ಮತದಾನದ ಹಕ್ಕೂ ಸೇರಿದೆ. ಆದರೆ ಈಗ, ಭಾರತದ ಚುನಾವಣಾ ಆಯೋಗ ತಯಾರಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಗಣನೀಯ ಸಂಖ್ಯೆಯ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಾಗುತ್ತಿಲ್ಲ! ನಮ್ಮ ಸಂವಿಧಾನವು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸ್ಪಷ್ಟವಾಗಿ ಹೇಳುತ್ತದೆ. ಈಗ ನೀವು ಚುನಾವಣಾ ಆಯೋಗದ ಎಸ್‌ಐಆರ್ ನಡೆಸುವ ಸಂವಿಧಾನಬದ್ಧ ಕರ್ತವ್ಯ ಮತ್ತು ಹಕ್ಕನ್ನು ಸಮರ್ಥಿಸಿದ್ದೀರಿ. ಆದರೆ ಸಂವಿಧಾನದಲ್ಲಿ ಜನರಿಗೆ ನೀಡಿರುವ ಮತದಾನದ ಹಕ್ಕಿನ ಕುರಿತು ನಿಮ್ಮ ನಿಲುವು ಏನು ಎಂದು ಪ್ರಶ್ನಿಸ ಬೇಕಾಗುತ್ತದೆ? ಏಕೆಂದರೆ ಚುನಾವಣಾ ಆಯೋಗ ಅನೇಕರನ್ನು ಮತದಾರರಾಗಿ ಆಯ್ಕೆ ಮಾಡದೆ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳನ್ನು ಸೇರ್ಪಡಿಸದಿದ್ದರೂ, ನಿಮ್ಮ ಪ್ರಕಾರ ಅವರು ಇನ್ನೂ ಭಾರತದ ನಾಗರಿಕರೇ ಆಗಿದ್ದಾರೆ. ಕಾರಣ ಅವರ ಪೌರತ್ವದ ವಿಚಾರಣೆ ಇನ್ನೂ ನಡೆದಿಲ್ಲ! ಆದರೂ ಮತದಾನ ಮಾಡಲು ಅವರು ಅನರ್ಹರು! ಹಾಗಾದರೆ ನೀವು ಪರಿಣಾಮಕಾರಿಯಾಗಿ ಹೇಳುತ್ತಿರುವುದೇನು-ನಮ್ಮ ದೇಶದ ಚುನಾವಣಾ ಆಯೋಗ ಇಷ್ಟಪಟ್ಟ ಮತ್ತು ಆಯ್ದ ಕೆಲವೇ ಜನರು ಮಾತ್ರ ಕಾನೂನಿನ ಮುಂದೆ ಸಮಾನರು, ಉಳಿದವರು ಅಲ್ಲ ಅಂತಲೇ!?

ಇನ್ನೊಂದು ಮುಖ್ಯ ಪ್ರಶ್ನೆಯೆಂದರೆ ಈಗ ಪಶ್ಚಿಮ ಬಂಗಾಳ, ಅಸ್ಸಾಂ ಮುಂತಾದ ರಾಜ್ಯಗಳ ಮುಖ್ಯಮಂತ್ರಿಗಳು ಮತದಾರರ ಪಟ್ಟಿಯಲ್ಲಿ ಇಲ್ಲದವರಿಗೆ ಯಾವುದೇ ಸರಕಾರಿ ಸವಲತ್ತುಗಳು ಸಿಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಈಗ ಇರುವ ನಿಯಮಾವಳಿಗಳ ಪ್ರಕಾರ ಯಾವುದೇ ಒಬ್ಬ ನಾಗರಿಕ ತಾನು ಈ ದೇಶದ ಪ್ರಜೆ ಎಂದು ನಿರೂಪಿಸಲು ಸರಕಾರಕ್ಕೆ ಒಪ್ಪಿಗೆ ಆಗುವ ಹಲವಾರು ದಾಖಲಾತಿಗಳನ್ನು ಮೊದಲು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಹಾಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಅವುಗಳು ಸರಿ ಇವೆ ಎಂದು ಜಿಲ್ಲಾಧಿಕಾರಿಗೆ ಅನಿಸಿದಲ್ಲಿ ಅದನ್ನು ಅರುವತ್ತು ದಿನಗಳ ಒಳಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಬೇಕು. ನಂತರ ರಾಜ್ಯ ಸರಕಾರ ಆ ದಾಖಲೆಗಳನ್ನು ಪರಿಶೀಲಿಸಿ ಒಕ್ಕೂಟ ಸರಕಾರದ ಗೃಹ ಇಲಾಖೆಗೆ ಮೂವತ್ತು ದಿನಗಳ ಒಳಗೆ ಕಳುಹಿಸಬೇಕು. ಗೃಹ ಇಲಾಖೆ ಆ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ತನ್ನ ನಿರ್ಧಾರವನ್ನು ತಿಳಿಸಬೇಕು. ಆದರೆ ಗೃಹ ಇಲಾಖೆ ಭದ್ರತಾ ಕಾರಣಗಳನ್ನು ಮುಂದೊಡ್ಡಿ ಇನ್ನೂ ಹೆಚ್ಚಿನ ಪರಿಶೀಲನೆಗಾಗಿ ತನ್ನ ನಿರ್ಣಯವನ್ನು ನಿಧಾನವಾಗಿಸಲು/ಮುಂದೂಡಲು ಅವಕಾಶ ಇದೆ. ಹಾಗಾಗಿ ಪೌರತ್ವ ಸಾಬೀತು ಪಡಿಸಲು ಈಗಿನ ನಿಯಮಗಳಂತೆ ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ ಮೂರು ತಿಂಗಳಿನಿಂದ ಹದಿನೆಂಟು ತಿಂಗಳುಗಳು ಬೇಕಾಗುತ್ತದೆ! ಈಗ ಬಾಕಿ ಇರುವ ಕೆಲವೇ ಸಾವಿರ ಅರ್ಜಿಗಳ ವಿಲೇವಾರಿಗೇ ಇಷ್ಟು ಸಮಯ ಬೇಕಾದರೆ ಇನ್ನು ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಈಗಾಗಲೇ ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟ ಸುಮಾರು ಆರು ಕೋಟಿ ಜನರ ಹಾಗೂ ಇನ್ನೂ ಎಸ್‌ಐಆರ್ ಪ್ರಕ್ರಿಯೆ ಬಾಕಿ ಇರುವ ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ಹೊರಹೋಗ ಬಹುದಾದ ನಾಲ್ಕರಿಂದ ಆರು ಕೋಟಿ ಜನಗಳ ಅಂದರೆ ಒಟ್ಟಾರೆ ಹತ್ತರಿಂದ ಹನ್ನೆರಡು ಕೋಟಿ ಜನರ ಪೌರತ್ವ ನಿರ್ಧರಿಸಲು ಎಷ್ಟು ಸಮಯ ಬೇಕಾಗ ಬಹುದು!? ಇದರ ಕುರಿತು ನೀವು ಯೋಚಿಸಿದ್ದೀರಾ!? ಈ ಪ್ರಕ್ರಿಯೆ ನಿಮ್ಮ ಆದೇಶದಂತೆ ಮುಂದಿನ ಸ್ಥಳೀಯ ಸಂಸ್ಥೆಗಳ ಅಥವಾ ವಿಧಾನ ಸಭೆ ಚುನಾವಣೆಯ ಒಳಗೆ ವಿಲೇವಾರಿ ಆಗಲು ಸಾಧ್ಯವಿದೆಯೇ!? ಈಗಿನ ವ್ಯವಸ್ಥೆಯಲ್ಲಿ ಸರಕಾರಿ ಯಂತ್ರ ಅಷ್ಟು ಚುರುಕಾಗಿ ಕೆಲಸ ನಿರ್ವಹಿಸುವ ಸಾಧ್ಯತೆ ಇದೆಯೇ? ಅಥವಾ ಉದ್ದೇಶಪೂರ್ವಕವಾಗಿಯೇ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆ ಇಲ್ಲವೇ!? ಹಾಗೆಯೇ ಒಂದು ರಾಜ್ಯದಲ್ಲಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಥವಾ ವಿಧಾನ ಸಭೆ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಯ ನಂತರ ಬರುವುದಾದರೆ ಈಗ ಮತದಾರರ ಪಟ್ಟಿಯಲ್ಲಿಲ್ಲದ ಜನರು ಲೋಕಸಭಾ ಚುನಾವಣೆಯಲ್ಲಿ ಮತಚಲಾಯಿಸಲು ಅನರ್ಹರಾಗುವುದಿಲ್ಲವೇ!?

ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಅಂಶವೆಂದರೆ ಈ ಹತ್ತು ಹನ್ನೆರಡು ಕೋಟಿ ಜನರಲ್ಲಿ ಬಹುಪಾಲು ಜನರು ಹಲವು ವರ್ಷಗಳ ನಂತರ ತಮ್ಮ ಪೌರತ್ವ ಸಾಬೀತು ಪಡಿಸಲು ಯಶಸ್ವಿಯಾದರೆ ಅಲ್ಲಿಯವರೆಗೆ ಅವರಿಗೆ ನಿರಾಕರಿಸಲ್ಪಟ್ಟ ಮತದಾನದ ಹಕ್ಕಿಗೆ, ಸರಕಾರಿ ಸವಲತ್ತುಗಳಿಗೆ ಯಾರು ಹೊಣೆ!? ಅಷ್ಟೇ ಮುಖ್ಯವಾದ ಇನ್ನೊಂದು ವಿಷಯ ಎಂದರೆ ಹೀಗೆ ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟ ಹೆಚ್ಚಿನ ಜನರು ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು. ಇವರಿಗೆ ದಾಖಲಾತಿಗಳನ್ನು ಹೊಂದಿಸಲು, ಸರಕಾರಿ ಕಚೇರಿಗಳಿಗೆ ಅಲೆಯಲು ಆಗುವ ಖರ್ಚು-ವೆಚ್ಚಗಳನ್ನು ಭರಿಸುವ ಶಕ್ತಿ ಇಲ್ಲ. ಜೊತೆಗೆ ದಿನನಿತ್ಯ ದುಡಿದೇ ಮೂರು ಹೊತ್ತಿನ ಕೂಳು ಸಂಪಾದಿಸ ಬೇಕಾದ ಅನಿವಾರ್ಯತೆ ಇರುವುದರಿಂದ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಅರಿಯಲು ಸರಕಾರಿ ಕಚೇರಿಗಳಿಗೆ ಅಲೆಯುವಷ್ಟು ಸಮಯವೂ ಇಲ್ಲ. ಹಾಗಿರುವಾಗ ಇಂತಹ ಜನರಿಗೆ ಅವರ ಪೌರತ್ವ ಸಾಬೀತಾಗುವವರೆಗೆ ಅವರಿಗೆ ಸಹಜವಾಗಿ ದೊರೆಯಬೇಕಾದ ಸರಕಾರಿ ಸವಲತ್ತುಗಳನ್ನು ನಿರಾಕರಿಸುವುದು ನ್ಯಾಯಯುತವೇ!? ಇದು ಸಂವಿಧಾನ ವಿರೋಧಿ ಕೃತ್ಯ ವಾಗುವುದಿಲ್ಲವೇ? ಅಂತೆಯೇ ಇದು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಈಗಿನ ಆಡಳಿತ ಪಕ್ಷದ ಹುನ್ನಾರಕ್ಕೆ ಹಾದಿ ಸುಗಮ ಮಾಡಿಕೊಟ್ಟಂತಾಗುವುದಿಲ್ಲವೆ? ಪ್ರತೀ ರಾಜ್ಯದಲ್ಲೂ ಹಲವು ಲಕ್ಷಗಳಿಂದ ಕೆಲವು ಕೋಟಿಗಳವರೆಗೆ ಮತದಾರರ ಪಟ್ಟಿಯಿಂದ ಹೊರಹಾಕಲ್ಪಟ್ಟ ಜನರಿಂದಾಗಿ ಸಂಪೂರ್ಣ ಚುನಾವಣಾ ಫಲಿತಾಂಶವೇ ಬದಲಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಅವರ ಮತಗಳನ್ನು ಪರಿಗಣಿಸದೇ ನಡೆದ/ನಡೆಯುವ ಚುನಾವಣೆಗಳು ನ್ಯಾಯ ಸಮ್ಮತವೇ!?

ಕೊನೆಯದಾಗಿ, ಈ ತೀರ್ಪು ಈಗಿನ ಆಡಳಿತ ಪಕ್ಷಕ್ಕೆ ಚುನಾವಣೆಯಲ್ಲಿ ಜಯಗಳಿಸಲು ಅನುಚಿತವಾಗಿ ಸಹಕರಿಸಿ ಸಂವಿಧಾನವನ್ನು ಪುನಃ ಬರೆಯುವುದಾಗಿ ಘೋಷಿಸಿರುವ ಅವರ ಪ್ರಯತ್ನಕ್ಕೆ ರತ್ನಕಂಬಳಿ ಹಾಸಿಕೊಟ್ಟಂತೆ ಆಗುತ್ತದೆ ಎಂದು ನಿಮಗೆ ಅನ್ನಿಸುವುದಿಲ್ಲವೇ!? ಮೇಲುನೋಟಕ್ಕೇ ಸರಿ ಇಲ್ಲ, ಸಂವಿಧಾನ ಬದ್ಧವಾಗಿಲ್ಲ ಎಂದೆನಿಸುವ ನಿಮ್ಮ ಇತ್ತೀಚಿನ ಇಂತಹ ತೀರ್ಪುಗಳ ಮೂಲಕ ನೀವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ?!?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಚ್.ಎಸ್. ನಂದಕುಮಾರ್, ಮಂಗಳೂರು

contributor

Similar News