ವರಕವಿಗಳೂ ಕೀರ್ತನಕಾರರೂ ಎನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ಮಾಂಡಲಿಕ ದೊರೆತನದ ಆಡಳಿತಗಾರನಾಗಿ, ಸಿರಿತನದ ಸಕಲ ಸೌಭಾಗ್ಯಗಳಲ್ಲಿ ನಿರಾಸಕ್ತ ನಿರ್ಮೋಹಿಯಾಗಿ, ಬದುಕಿನ ಸತ್ಯ ತತ್ವಗಳಿಗೆ ಕಾವ್ಯದ ಸೊಗಡನ್ನು ನೀಡಿ, ಸಾರ್ವಕಾಲಿಕ ಸತ್ಯ ಸಾರಿದ ಸಂತನಾಗಿದ್ದರೂ, ಕುರುಬರ ಕುಲದಲ್ಲಿ ಹುಟ್ಟಿದ ಒಂದೇ ಕಾರಣಕ್ಕೆ ಸಿಗಬೇಕಾದ ಗೌರವ, ಪ್ರಚಾರಗಳಿಂದ ವಂಚಿತನಾಗಿರುವುದು ಒಂದು ದುರಂತ.

ಕನಕದಾಸರು ಕೀರ್ತನೆಗಳ ಜೊತೆಗೆ ಕಾವ್ಯಗಳನ್ನು, ಮಂಡಿಗೆಗಳನ್ನು ರಚಿಸಿ ಒಟ್ಟು ದಾಸ ಸಾಹಿತ್ಯದ ಹರವನ್ನು, ಅದರ ವೈವಿಧ್ಯತೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲ, ತಮ್ಮ ಸಮಕಾಲೀನ ವಿಕ್ಷಿಪ್ತ ಪರಿಸರಕ್ಕೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಮಾನವೀಯವಾಗಿ ಸ್ಪಂದಿಸಿ ಬದುಕಿನ ಮೌಲ್ಯ ಶೋಧನೆಗೆ ತೊಡಗಿದ್ದರಿಂದಾಗಿ ಅವರ ಕಾವ್ಯ, ಕೀರ್ತನೆಗಳು ಎಲ್ಲ ಕಾಲದ ಎಲ್ಲ ಪ್ರಜ್ಞಾವಂತ ಸಾಹಿತ್ಯಾಸಕ್ತರ ಗಮನ ಸೆೆಳೆಯಬಲ್ಲವುಗಳಾಗಿವೆ. ದಾಸಸಾಹಿತ್ಯ ಪುರಂದರ ದಾಸರನ್ನು ಕಳೆದುಕೊಂಡಿದ್ದರೆ ಮುಕ್ಕಾಗುತ್ತಿತ್ತು. ಆದರೆ, ಕನಕದಾಸರನ್ನು ಕಳೆದುಕೊಂಡಿದ್ದರೆ ಮೂಲೆಗುಂಪಾಗುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಪುರಂದರದಾಸರ ಕೀರ್ತನೆಗಳ ಸಂಖ್ಯೆಗೆ ಹೋಲಿಸಿದರೆ, ಕನಕದಾಸರ ಕೀರ್ತನೆಗಳು ಅತ್ಯಲ್ಪವಾಗಿ ಕಾಣಬಹುದು.ಆದರೆ ಕನಕದಾಸರ ಕೀರ್ತನೆಗಳ ಸತ್ವವನ್ನು ಗಮನಿಸಿದರೆ ಅವು ಪುರಂದರದಾಸರ ಕೀರ್ತನೆಗಳ ಸತ್ವದೊಂದಿಗೆ ಸಮಸ್ಪರ್ಧಿಯಾಗಬಲ್ಲವು. ಹಾಗೆ ನೋಡಿದರೆ, ಪುರಂದರದಾಸರ ಕೀರ್ತನೆಗಳಿಗಿಂತ ಕನಕದಾಸರ ಕೀರ್ತನೆಗಳಲ್ಲಿ ಕಾವ್ಯಗುಣ ಒಂದು ಕೈ ಮಿಗಿಲಾಗಿಯೇ ಇರುವಂತೆ ತೋರುತ್ತದೆ. ಇದಕ್ಕೆ ಕಾರಣ ಕನಕದಾಸರು ಮೂಲತಃ ಕವಿಗಳು ಎನ್ನುವುದೇ ಆಗಿದೆ. ಪುರಂದರದಾಸರ ಕೀರ್ತನೆಗಳಲ್ಲಿಯಂತೆ ಮುಖ್ಯವಾದ ಕಾವ್ಯಗುಣ ಕೇವಲ ಪಲ್ಲವಿಯಲ್ಲಿ ಮಡುಗಟ್ಟಿ ಉಳಿದ ಚರಣಗಳಲ್ಲಿ ಅದರ ಸಮರ್ಥನೆಯ ತರ್ಕವಾಗಿಯೋ ಅಥವಾ ಪಲ್ಲವಿಯಲ್ಲಿನ ಧ್ವನಿಯನ್ನು ವಾಚ್ಯವಾಗಿ ವಿವರಿಸುವ ಪದ್ಧತಿಯಲ್ಲಿಯೋ ಪರ್ಯಾವಸನವಾಗುವುದು ಕನಕದಾಸರಲ್ಲಿ ಕಡಿಮೆಯೆಂದು ಹೇಳಬಹುದು. ಕನಕದಾಸರಲ್ಲಿ ಕಂಡುಬರುವ ಜಿಜ್ಞಾಸೆ, ಕಲ್ಪಕಥೆಗಳು ಬೇರೆಯವರಲ್ಲಿ ವಿರಳವೆಂದೇ ಹೇಳಬಹುದು ಎಂಬುದಾಗಿ ಜಿ.ಎಸ್.ಶಿವರುದ್ರಪ್ಪನವರು ಅಭಿಪ್ರಾಯ ಪಟ್ಟಿರುವುದನ್ನು ಗಮನಿಸಿದಾಗ ಕನಕದಾಸರ ಕೀರ್ತನೆಗಳ ಅಂತಃಸ್ಸತ್ವ ಮತ್ತು ಹಿರಿಮೆ ಗರಿಮೆಗಳ ಸ್ಪಷ್ಟ ತಿಳಿವಳಿಕೆ ಯಾರಿಗಾದರೂ ಆಗುತ್ತದೆ.

ಸವಕಲಾದ ಸಂಸ್ಕೃತ ಭಾಷೆಯನ್ನು ಬದಿಗಿರಿಸಿ, ಗರಿಮುರಿಯದ ಆಡುಭಾಷೆಯನ್ನು ಸಾಹಿತ್ಯದ ಗಾದಿಗೇರಿಸಿದಾಗ ಒಂದು ಹೊಸ ಹೊಗರು ಹೊಮ್ಮತ್ತದೆ. ಜೀವಕಳೆಯ ಚಿಗರು ನಳನಳಿಸುತ್ತದೆ. ಜನಪದ ಜೀವನದ ಸಮಸ್ಟಿ ಸತ್ವ ಅದಕ್ಕೆ ಗೋಡು ಗೊಬ್ಬರವಾಗಿ ಜೀವದ್ರವ್ಯವನ್ನು ನೀಡಿ ಪೋಷಿಸುತ್ತದೆ. ಯಾವ ಸಾಹಿತ್ಯದಲ್ಲಿ ಜಾನಪದ ಸತ್ವದ ಜೀವದ್ರವ್ಯ ಇರುವುದಿಲ್ಲವೋ ಅದು ಕಾಗದದ ಹೂವಿನಂತಿರುತ್ತದೆ. ನೀರಸವಾಗಿ, ನಿರ್ಗಂಧವಾಗಿ ಕನಕದಾಸರ ಬಹುತೇಕ ಕೀರ್ತನೆಗಳು ಜಾನಪದ ಸೊಗಡಿನ ಹೊಳೆಯಲ್ಲಿ ಮಿಂದು, ಸಹೃದಯರ ಮನಸ್ಸನ್ನು ಸೆರೆ ಹಿಡಿಯುತ್ತವೆ. ಕನಕದಾಸರು ಕೀರ್ತನಕಾರರು, ಕವಿ, ದಾರ್ಶನಿಕ ಮತ್ತು ಸಮಾಜ ಸುಧಾರಣಾವಾದಿಯೂ ಆಗಿದ್ದರು. ಭಕ್ತನಾಗಿಯೂ ಸ್ವಬಂಡಾಯ ಮನೋಧರ್ಮದ ಚಿಕಿತ್ಸಕರಾಗಿದ್ದರು. ಸಾಮಾಜಿಕ ಮೌಲ್ಯಗಳನ್ನು ಬಿತ್ತುವುದಲ್ಲದೆ, ಈ ಮೌಲ್ಯಾಧಾರಣೆಗೆ ತನ್ನನ್ನೇ ಒಡ್ಡಿಕೊಂಡ ಬಗೆ ಅನನ್ಯವಾದುದು. ಸಾಮಾನ್ಯವಾಗಿ ಕಾವ್ಯ ಪ್ರತಿಭಾ ಪ್ರದರ್ಶನಕ್ಕೆ ಭಾಷಾ ಪ್ರೌಢಿಮೆ, ಹೊಗಳಿಕೆಗಳನ್ನು ಸಾಮಗ್ರಿ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಅನುಭವ,ಅಭಿವ್ಯಕ್ತಿಯನ್ನು ಏಕಮಾಡಿಕೊಂಡು ಸಾಹಿತ್ಯ ರಚಿಸಿದರು. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಕೀರ್ತನೆಯಲ್ಲಿ ಮಾನವನ ಬದುಕಿನ ಸಿದ್ಧಾಂತವನ್ನು ತೋರಿಸಿದ್ದಾರೆ. ಬದುಕಿನ ಬೆಡಗನ್ನು ಬಣ್ಣಿಸುತ್ತಲೇ ಅದರ ಗುಟ್ಟನ್ನು ರಟ್ಟಾಗಿಸಿಬಿಡುತ್ತಾರೆ ಕನಕದಾಸರು.

ಕನಕ ಕುಮಾರವ್ಯಾಸ, ಪುರಂದರದಾಸರ ಹಾಗೆ ವೈಷ್ಣವ ಭಕ್ತಿ ಪಂಥಕ್ಕೆ ಸೀಮಿತವಾದವನಲ್ಲ. ‘‘ದಾಸ ದಾಸರ ಮನೆಯ ದಾಸಿಯರ ಮಗ ನಾನು, ಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಶಂಕರದಾಸರ ಮನೆಯ ಮಂಕುದಾಸಯ್ಯ ನಾನು, ಬೊಂಕದಿ ಬಾಗಿಲನ ಕಾಯುವ ಬಡದಾಸ ನಾನಯ್ಯ, ಕಾಳಿದಾಸರ ಮನೆಯ ಕೀಳು ದಾಸಯ್ಯ ನಾನು’’ ಎಂದು ಮೊರೆಯಿಡುವ ಈ ಸಂತ ಕವಿ ತಮ್ಮ ಸಾಹಿತ್ಯದುದ್ದಕ್ಕೂ ಧರ್ಮದ ಮೌಢ್ಯ, ಕಂದಾಚಾರಗಳನ್ನು, ಅನಿಷ್ಟ ನಂಬಿಕೆಗಳನ್ನು ಟೀಕಿಸುವುದನ್ನೂ ಮರೆಯುವಂತಿಲ್ಲ. ಹಿಂದೂ ಧರ್ಮಕ್ಕೆ ಶಾಪವಾಗಿದ್ದ ಶ್ರೇಣೀಕೃತ ವರ್ಣವ್ಯವಸ್ಥೆಯನ್ನು ಹೋಗಲಾಡಿಸಿ ಎಂದು ಕರೆ ನೀಡುವ ಕನಕದಾಸರು, ತಮ್ಮನ್ನು ವಿರೋಧಿಸಬಂದ ಪುರೋಹಿತಶಾಹಿಗಳಿಗೆ ‘ಆತ್ಮ ಯಾವ ಕುಲ, ಜೀವ ಯಾವ ಕುಲ?’ ಎಂದು ಕೇಳುತ್ತಾರೆ.

ಕುಲವನ್ನು ಖಂಡಿಸುವಲ್ಲಿ ಬಸವೇಶ್ವರ, ಸರ್ವಜ್ಞರಷ್ಟೇ ಧೈರ್ಯವನ್ನು ಕನಕದಾಸರು ತೋರಿಸಿದ್ದಾರೆ. ‘‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’’ ಎಂದು ಧೈರ್ಯವಾಗಿ ಕುಲಚಾರವನ್ನು ಮಾಡುವ ಸಮಾಜಕ್ಕೆ ನೇರ ಸವಾಲನ್ನು ಹಾಕಿದ್ದಾರೆ. ಕುಲ-ಜಾತಿಗಳ ತಾರತಮ್ಯ ಖಂಡಿಸುವ ಕನಕದಾಸರ ನಿಷ್ಠುರತೆ, ಸ್ಪಷ್ಟತೆ ಇನ್ನಾವ ದಾಸರ ಕೀರ್ತನೆಗಳಲ್ಲೂ ಸಿಗುವುದಿಲ್ಲ. ಡಾಂಭಿಕ ಭಕ್ತಿಯ ಭಕ್ತರನ್ನು ಡೊಂಕುಬಾಲದ ನಾಯಕರು ಎಂದು ಅವರು ಕರೆದಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದ ಕನಕದಾಸರು, ಆ ಗ್ರಾಮೀಣ ಸತ್ವವನ್ನು ಜಾನಪದ ಸತ್ವದಲ್ಲಿ ತಮ್ಮ ಕೀರ್ತನೆಯ ತತ್ವಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕನಕದಾಸರ ಪ್ರಾಮಾಣಿಕ ದೃಷ್ಟಿಗೆ ಕಪಟ ಕೃತ್ಯಗಳು ಒಗ್ಗುವುದಿಲ್ಲ. ಆದ್ದರಿಂದಲೇ ಅವರ ಆಕ್ಷೇಪಣೆಯ ಧಾಟಿ ಕಟುವಾಗಿದೆ. ದಿಟವಿದ್ದಲ್ಲಿ ದಿಟ್ಟತನ ತಪ್ಪದಷ್ಟೇ!

ಕನಕದಾಸರ ಪ್ರತೀ ಮಾತಿನಲ್ಲೂ ಒಂದು ಉಪದೇಶಾಮೃತವಿದೆ. ವಿಶಿಷ್ಟ ಆಲೋಚನೆ, ಕೆಚ್ಚೆದೆಯ ಮಾತು, ಸಾಮಾಜಿಕ ಚಿಂತನೆ, ಮಾನವೀಯ ಅಂತಃಕರಣದಿಂದ ಕನಕದಾಸರ ಕಾವ್ಯಾಭಿವ್ಯಕ್ತಿ ವಿಶಿಷ್ಟವಾಗಿದೆ. ಸಮಾಜದ ನಿಮ್ನ ವರ್ಗದಿಂದ ಬಂದ ಒಂದೇ ಕಾರಣಕ್ಕೆ ಅನುಭವಿಸಬೇಕಾಗಿ ಬಂದ ಅವಮಾನ, ಅಪಹಾಸ್ಯಗಳಿಂದ ಪಟ್ಟ ಸಂಕಟ, ಒತ್ತಡಗಳ ನಡುವೆ ಪ್ರದರ್ಶಿಸಿದ ಜೀವ ಸಂದೇಶ ಅಮೂಲ್ಯವಾದುದು. ಆ ಹುಟ್ಟಿನ ಕಾರಣಕ್ಕಾಗಿ ಅನುಭವಿಸಿದ ಸಮಾಜ ನಿರ್ಮಿತ ನೆಲೆಗಳನ್ನು ಕಿತ್ತೆಸೆಯಲು ತೆಗೆದುಕೊಂಡ ನೇರ ನಿಷ್ಠುರ ಕ್ರಿಯೆಗಳಿಂದ ಕನಕದಾಸರಿಗೆ ಮಹತ್ವ ಬರುತ್ತದೆ. ಹೀಗಾಗಿ ಕನಕದಾಸರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಇದ್ದು ಆಚರಿಸಿ ದಾಖಲಿಸಿದ ರೀತಿಗೆ ಮಹತ್ವ ಬರುತ್ತದೆ.

ಕನಕದಾಸರು ರಾಮಧಾನ್ಯಚರಿತ್ರೆ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಸಾರ, ನೃಸಿಂಹಸ್ತವ, ಕೀರ್ತನೆಗಳು, ಮುಂಡಿಗೆಗಳು, ಸುಳಾದಿಗಳು, ಉದಯರಾಗಗಳು, ಉಗಾಭೋಗಗಳನ್ನು ರಚಿಸಿ, ಸಮಾಜ ಸಂಘಟನೆ ಮತ್ತು ಪರಿವರ್ತನೆಗಳಲ್ಲಿ ತನಗಾರೂ ಈಡಿಲ್ಲವೆಂಬಂತೆ ದುಡಿದು, ಜನರ ಕಣ್ಮಣಿಯಾಗಿ, ಇಂದಿನವರು ಮತ್ತು ಮುಂದಿನವರು ಮರೆಯಲು ಸಾಧ್ಯವಾಗದಂತೆ ಬಾಳಿ ಬದುಕಿದ ಮಹಾ ಚೇತನ ಎನ್ನಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor