ಶೂದ್ರ, ಶರಣ ಸಂಸ್ಕೃತಿಯ ಶ್ರೀಗಳು ನೀಲಿವಸ್ತ್ರ ತೊಡಲಿ
ಪುರಾತನ ಕಾಲದಿಂದಲೂ ಸ್ವಾಮೀಜಿಗಳು ಸನ್ಯಾಸತ್ವದ ಸಂಕೇತವಾಗಿ, ಅಧ್ಯಾತ್ಮ ಸಾಧನೆಯ ಪ್ರತೀಕವಾಗಿ ಕೇಸರಿ ಬಣ್ಣದ ವಸ್ತ್ರ ಧರಿಸುತ್ತಿದ್ದಾರೆ. ಕೇಸರಿ ಬಣ್ಣ ಸನಾತನ ಸಂಸ್ಕೃತಿಯನ್ನೂ ಪ್ರತಿಪಾದಿಸುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ.ಅಂಬೇಡ್ಕರ್ ಅವರು ದೇಶಕ್ಕೆ ಅರ್ಪಿಸಿರುವ ಭಾರತೀಯ ಸಂವಿಧಾನವೇ ಪ್ರಧಾನವಾದುದು. ಅಂಬೇಡ್ಕರ್ ತತ್ವಗಳು, ಸಂವಿಧಾನದ ಆಶಯಗಳು ನೀಲಿ ಬಣ್ಣವನ್ನು ಪ್ರತಿನಿಧಿಸುತ್ತವೆ. ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕು, ಗೌರವ ಮತ್ತು ಅವಕಾಶ ಸಿಗಬೇಕು ಎಂಬುದು ಸಾಂವಿಧಾನಿಕ ತತ್ವವಾಗಿದೆ. ನೀಲಿ ಬಣ್ಣವು ಅಂಬೇಡ್ಕರ್ವಾದಿ ಚಳವಳಿಯಲ್ಲಿ ಸಮಾನತೆಯ ಹೋರಾಟವನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಶೂದ್ರ ಸಮುದಾಯಗಳ, ಶರಣ ಸಂಸ್ಕೃತಿಯ ಸ್ವಾಮೀಜಿಗಳು, ಮಠಾಧೀಶರು, ಸನ್ಯಾಸಿಗಳು ಕೇಸರಿ ಬಣ್ಣದ ಬದಲು ನೀಲಿ ಬಣ್ಣದ ವಸ್ತ್ರವನ್ನೇ ತೊಡಬೇಕು ಎಂಬುದು ನನ್ನ ಮನವಿಯಾಗಿದೆ.
ಸನಾತನ ಸಂಸ್ಕೃತಿಯನ್ನು ಪ್ರತಿನಿಧಿಸುವವರು ಕೇಸರಿ ಬಣ್ಣದ ವಸ್ತ್ರವನ್ನೇ ತೊಡಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗೌರವಿಸುವ ಮಠಾಧೀಶರು ನೀಲಿ ವಸ್ತ್ರವನ್ನು ತೊಟ್ಟರೆ ಅಂಬೇಡ್ಕರ್ ತತ್ವಕ್ಕೆ, ಭಾರತೀಯ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ. ಮಠಾಧೀಶರು ನೀಡುವ ಆಶೀರ್ವಚನವನ್ನು ಪಾಲಿಸುವ ಜನ ಸಮುದಾಯವೇ ನಮ್ಮ ಸಮಾಜದಲ್ಲಿದೆ. ನೀಲಿ ಬಣ್ಣ ತೊಟ್ಟು ಆಶೀರ್ವಚನ ನೀಡಿದರೆ ಅವು ಅಂಬೇಡ್ಕರ್ ತತ್ವಗಳಿಗೆ ಆಧಾರಿತವಾದ ಮಾತುಗಳೆನಿಸುತ್ತವೆ. ಅಂಬೇಡ್ಕರ್ ತತ್ವವನ್ನು ಜನಸಮುದಾಯದ ಮನಸ್ಸಿಗೆ ಇಳಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಂದು ನಾವಿದ್ದೇವೆ. ಹೀಗಾಗಿ ಶೂದ್ರ ಸಮುದಾಯಗಳ ಸ್ವಾಮೀಜಿಗಳು ಶೀಘ್ರದಲ್ಲಿ ಕೇಸರಿ ವಸ್ತ್ರದ ಬದಲು ನೀಲಿ ವಸ್ತ್ರ ತೊಟ್ಟು ಸಮಾಜದ ಮುಂದೆ ಬರಬೇಕು.
ನಾವು ಬಸವಣ್ಣನವರನ್ನು ನೋಡಿಲ್ಲ. ಆದರೆ ಅವರನ್ನು ನೆನೆಸಿಕೊಂಡಾಗ ಶ್ವೇತವರ್ಣಧಾರಿಯಾಗಿ ಅವರ ಚಿತ್ರ ನಮ್ಮ ಕಣ್ಣಮುಂದೆ ಬರುತ್ತದೆೆ. ಕೇಸರಿ ವಸ್ತ್ರಧಾರಿಯಾಗಿ ಅವರು ನಮ್ಮ ಸ್ಮತಿಪಟಲದಲ್ಲಿ ನಿಲ್ಲುವುದಿಲ್ಲ. ಈ ಕಂಪ್ಯೂಟರ್ ಯುಗಮಾನದಲ್ಲಿ, ಕೃತಕ ಬುದ್ಧಿಮತ್ತೆಯ ಕಾಲಮಾನದಲ್ಲಿ ನಾವು ಸಾಂವಿಧಾನಿಕ ಮೌಲ್ಯಗಳನ್ನೇ ಸಮಾಜದಲ್ಲಿ ಬಿತ್ತಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರ್ವ ಸಮುದಾಯವನ್ನೂ ಪ್ರತಿನಿಧಿಸುತ್ತಿದ್ದ ‘ಅನುಭವ ಮಂಟಪ’ವೇ ಮೂಲ ಬೇರು. ಅಲ್ಲಮಪ್ರಭು ನೇತೃತ್ವದ ಶೂನ್ಯ ಪೀಠದಲ್ಲಿ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಸಮಗಾರ ಹರಳಯ್ಯ, ಮೋಳಿಗೆ ಮಾರಯ್ಯ ಮುಂತಾದ ಸರ್ವ ಸಮುದಾಯಗಳ ಸದಸ್ಯರೂ ಇದ್ದರು. ಶರಣ ಸಂಸ್ಕೃತಿ ಸಮಾನತೆಯ ಧಾರೆಯಾಗಿ ಬೆಳಕು ಮೂಡಿಸಿತ್ತು. ಹೀಗಾಗಿ ಬಸವಾದಿ ಶರಣರ ವಚನ ಸಂಸ್ಕೃತಿಯನ್ನು ಪ್ರತಿಪಾದಿಸುವ ಲಿಂಗಾಯತ ಮಠಾಧೀಶರು ಕೂಡ ಕೇಸರಿ ವಸ್ತ್ರದ ಬದಲು ನೀಲಿ ವಸ್ತ್ರವನ್ನು ತೊಟ್ಟು ಪ್ರಜಾಪ್ರಭುತ್ವ ತತ್ವಗಳಿಗೆ ಗೌರವ ಕೊಡಬೇಕು.
ದಲಿತ, ಹಿಂದುಳಿದ, ಶರಣ ಸಂಸ್ಕೃತಿಯ ಸ್ವಾಮೀಜಿಗಳು ಕೇಸರಿ ಬಿಟ್ಟು ನೀಲಿ ವಸ್ತ್ರವನ್ನು ತೊಟ್ಟರೆ ಅಂಬೇಡ್ಕರ್ ಪ್ರತಿಪಾದಿಸುವ ವೈಚಾರಿಕ, ವೈಜ್ಞಾನಿಕ ಚಿಂತನೆಯ ಮಾರ್ಗದರ್ಶಿಯಾಗಿ ನಿಲ್ಲುತ್ತಾರೆ. ನಾವಿಂದು ಮಂಗಳಯಾನ ಮಾಡಿದ್ದೇವೆ. ಚಂದ್ರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ (ಮ್ಯಾನ್ ಮಿಷನ್) ಸಿದ್ಧತೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿಗಳು ಸನಾತನ ಸಂಸ್ಕೃತಿಯ ಆಚರಣೆಗಳನ್ನು ಬಿತ್ತನೆ ಮಾಡಿದರೆ ಬಲು ವೈರುಧ್ಯ ಎನಿಸುವುದಿಲ್ಲವೇ?
ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಒಂದೇ ಒಂದು ಅಸ್ತ್ರ ಅದು ಸಂವಿಧಾನ. ಅದಕ್ಕೆ ಅನುಸಾರವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕಿದೆ. ಶ್ರೀಮಂತರು ಹಾಗೂ ಬಡವರ ನಡುವಿನ ಶಿಕ್ಷಣದಲ್ಲಿ ವ್ಯತ್ಯಾಸ ಇರಬಾರದು. ಅಂಬಾನಿ, ಟಾಟಾ, ಬಿರ್ಲಾರ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ನಮ್ಮ ನಮ್ಮ ಗ್ರಾಮೀಣ ಬಡ ಮಕ್ಕಳಿಗೂ ಸಿಗಬೇಕಾಗಿದೆ. ಇದನ್ನೇ ಸಂವಿಧಾನ ಪ್ರತಿಪಾದಿಸುತ್ತದೆ.
ಸನಾತನ ಪರಂಪರೆಯ ಸಂಸ್ಕೃತ ಭಾಷೆ ಅನ್ನ ಕೊಡುವ ಭಾಷೆಯಾಗಿ ಉಳಿದಿಲ್ಲ. ಈಗ ನಮ್ಮ ಮಕ್ಕಳು ಅನ್ನ ಹುಟ್ಟಿಸಿಕೊಳ್ಳಬೇಕಾದರೆ ಇಡೀ ವಿಶ್ವವನ್ನು ಅರ್ಥ ಮಾಡಿಕೊಳ್ಳುವ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಬೇಕಾಗಿದೆ. ಜೆನ್ ಝಿ ತಲೆಮಾರಿನ ಮುಂದೆ ಹಲವು ಸವಾಲುಗಳಿವೆ. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ಅನ್ವೇಷಣೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ವಿಶ್ವವನ್ನು ಅವರು ಎದುರಿಸಲು ಗ್ಲೋಬಲ್ ಇಂಟಿಲೆಜೆನ್ಸ್ ಬೇಕಾಗಿದೆ. ಸಾಮಾಜಿಕ ನ್ಯಾಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕಾದರೆ ಸಂವಿಧಾನದ ಆಶಯಗಳು ಈಡೇರಲೇಬೇಕಿದೆ.
ನೀಲಿ ಎಂದರೆ ಕೇವಲ ಬಣ್ಣವಲ್ಲ, ಸಾಗರ, ಆಕಾಶಗಳ ಬಣ್ಣವೂ ಕೂಡ ನೀಲಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ನೀಲಿ ಬಣ್ಣ ಸಾಮಾಜಿಕ ನ್ಯಾಯ, ಸಮಾನತೆ, ಸ್ವಾಭಿಮಾನ, ಸಂಘಟನೆ, ಒಗ್ಗಟ್ಟು, ಹೋರಾಟ, ಶಿಕ್ಷಣ, ಹಕ್ಕು, ವಿಮೋಚನೆಯನ್ನು ಪ್ರತಿನಿಧಿಸುತ್ತದೆ. ಮಠಗಳ ಉದ್ದೇಶವೂ ಇದೇ ಆಗಿರುವ ಕಾರಣ ನಮ್ಮ ಶೂದ್ರ, ಶರಣ ಸಂಸ್ಕೃತಿಯ ಮಠಾಧೀಶರು ಆದಷ್ಟು ಬೇಗ ಹಳತನ್ನು ಕಳಚಿ ಹೊಸ ಮನ್ವಂತರ ಸೃಷ್ಟಿಸುವ ನೀಲಿ ಬಣ್ಣದ ವಸ್ತ್ರವನ್ನೇ ತೊಡಬೇಕು ಎಂಬುದು ನನ್ನ ಮನವಿಪೂರ್ವಕ ಬಿನ್ನಹವಾಗಿದೆ.
ಈ ನೆಲದ ಮೂಲನಿವಾಸಿ, ಶೂದ್ರ ಹಾಗೂ ಶೋಷಿತ ಸಮುದಾಯಗಳ ಸಾಮಾಜಿಕ ಜಾಗೃತಿ, ಸ್ವಾಭಿಮಾನ ಮತ್ತು ಸಮಾನತೆಯ ಆಶಯಗಳನ್ನು ಜಗತ್ತಿಗೆ ಸಾರುವ ಮಹತ್ತರ ಜವಾಬ್ದಾರಿ ನಮ್ಮ ಮಠಾಧೀಶರು ಹಾಗೂ ಧಾರ್ಮಿಕ ನಾಯಕರ ಮೇಲಿದೆ. ಧರ್ಮವು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಮನುಷ್ಯರ ನಡುವೆ ಸಮಾನತೆ, ಸಹೋದರತ್ವ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಬಿತ್ತುವ ಶಕ್ತಿಯಾಗಬೇಕು.
ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳು, ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಚಿಂತನೆಗಳು ಕುವೆಂಪು, ಕನಕದಾಸರು, ನಾರಾಯಣ ಗುರುಗಳ ಮಾನವೀಯತೆ ಕಳಕಳಿಗಳು ಹಾಗೂ ಭಾರತದ ಸಂವಿಧಾನದ ಆಶಯಗಳು ಶೋಷಿತ ಸಮುದಾಯಗಳಿಗೆ ದಾರಿದೀಪವಾಗಿವೆ. ಹಾಗೆಯೇ, ಅಶೋಕ ಚಕ್ರವು ಧರ್ಮ, ನ್ಯಾಯ, ಚಲನಶೀಲತೆ ಮತ್ತು ಪ್ರಗತಿಯ ಸಂದೇಶವನ್ನು ಸಾರುತ್ತದೆ. ಆದ್ದರಿಂದ ನೀಲಿಬಣ್ಣವನ್ನು ಕೇವಲ ಬಣ್ಣವಾಗಿ ನೋಡದೆ ಎಲ್ಲಾ ಸಮಾಜ ಸುಧಾರಕರ ಆಶಯವಾಗಿ ನೋಡಬಹುದು.