ಒಳಿತೆಂಬಲ್ಲಿ ಸರ್ವಾಧಿಕಾರ
ಇದೊಂದು ಬಹಳ ಸೂಕ್ಷ್ಮವಾದ ವಿಷಯ. ಪ್ರೀತಿ, ಕಾಳಜಿ ಮತ್ತು ಮಮತೆ ಎಂದ ಕೂಡಲೇ ಅದನ್ನು ಭಾವನಾತ್ಮಕವಾಗಿ ಆಪ್ತತೆಯಿಂದ ನೋಡುವುದು ನಮ್ಮ ಸಾಮಾನ್ಯ ಧೋರಣೆ, ಹಾಗೆಯೇ ಸಮಾಜ ಕೊಡುವ ಎಲ್ಲರೂ ಒಪ್ಪುವಂತಹ ಚಿತ್ರಣ. ಆದರೆ, ಪ್ರೀತಿಯೊಳಗೂ ಸರ್ವಾಧಿಕಾರದ ಧೋರಣೆ ಇರಬಹುದು.
ತಂದೆ ಮಗುವನ್ನು ಅಪಾರವಾಗಿ ಪ್ರೀತಿಸುತ್ತಿರಬಹುದು, ಗಂಡ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿರಬಹುದು, ಒಬ್ಬ ನಾಯಕ ತನ್ನ ಜನರ ಕ್ಷೇಮಾಭ್ಯುದಯಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರಬಹುದು, ಆದರೂ ಅವರ ಧೋರಣೆಯಲ್ಲಿ ನಿರಂಕುಶವಾದ ಅಥವಾ ಸರ್ವಾಧಿಕಾರಿ ಮನಸ್ಥಿತಿ ಇರಬಹುದು.
ಏಕೆಂದರೆ ನಿರಂಕುಶವಾದ ಅಥವಾ ಸರ್ವಾಧಿಕಾರತ್ವ ಯಾವಾಗಲೂ ದ್ವೇಷ, ರೋಷ, ಆವೇಶದ ಭಾಷೆಯಲ್ಲಿಯೇ ಮಾತಾಡುವುದಿಲ್ಲ. ಕೆಲವೊಮ್ಮೆ ಅದು, ನಿನ್ನ ಒಳ್ಳೆಯದಕ್ಕೇ ಹೇಳುತ್ತಿದ್ದೇನೆ ಎಂಬ ಅತ್ಯಂತ ಪ್ರೀತಿಯ ವಾಕ್ಯದಲ್ಲಿಯೂ ಬರಬಹುದು. ನಿನ್ನ ಒಳಿತಷ್ಟೇ ನನಗೆ ಬೇಕು ಎನ್ನಬಹುದು. ಆದರೆ ಒಳ್ಳೆಯದು ಎಂದರೇನು ಎಂಬುದನ್ನು ನಿರ್ಧರಿಸುವ ಹಕ್ಕು ಸಂಪೂರ್ಣವಾಗಿ ತನ್ನದೇ ಎಂದರೆ? ಅದು ಉಪಕಾರ ಆಗಬಹುದು. ಆದರೆ ಪ್ರಜಾಸತ್ತಾತ್ಮಕತೆ ಅಲ್ಲ. ಒಬ್ಬರ ಒಳ್ಳೆಯ ಉದ್ದೇಶವು ಇನ್ನೊಬ್ಬನ ಕರ್ತೃತ್ವವನ್ನು ರದ್ದುಪಡಿಸುವ ಪರವಾನಿಗೆ ಅಲ್ಲ.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದೇನೆಂದರೆ, ಅಧಿಕಾರ ಹಂಚಿಕೊಳ್ಳುವುದು ಎಂದರೆ ಅಧಿಕಾರ ಕಳೆದುಕೊಳ್ಳುವುದಲ್ಲ. ಬಹಳ ಜನರಿಗೆ ಭಾಗವಹಿಸುವಿಕೆ ಎಂದರೆ ನಿಯಂತ್ರಣ ಕಳೆದುಕೊಳ್ಳುವುದು ಎಂಬ ಭಯವಿರುತ್ತದೆ.
ಹೇಗೆಂದರೆ, ನಮ್ಮ ಭಾರತೀಯ ಕುಟುಂಬಗಳಲ್ಲಿನ ಧೋರಣೆಗಳನ್ನು ಗಮನಿಸಿ. ಮಗುವಿನ ಮಾತು ಕೇಳಿದರೆ ಅದು ತಲೆಮೇಲೆ ಕುಳಿತುಕೊಳ್ಳುತ್ತದೆ, ಹೆಂಡತಿಯನ್ನು ಅಂಕೆಯಲ್ಲಿ ಇಡದಿದ್ದರೆ ಅವಳು ಕುಟುಂಬಕ್ಕೆ ವಿಧೇಯಳಾಗಿ ಇರುವುದಿಲ್ಲ, ಉದ್ಯೋಗಿಗಳ ಅಥವಾ ವಿದ್ಯಾರ್ಥಿಗಳ ಮಾತು ಕೇಳಿದರೆ ಅವರು ಶಿಸ್ತು ಪಾಲಿಸುವುದಿಲ್ಲ. ಜನರ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಿದರೆ ಸರಕಾರದ ಸ್ವಾಯತ್ತತೆ ಅಥವಾ ಅಧಿಕಾರದ ಘನತೆ ಕಡಿಮೆಯಾಗುತ್ತದೆ. ಅಷ್ಟೆಲ್ಲಾ ಏಕೆ, ಪುರುಷಾಹಂಕಾರದ ಗಂಡ ಹೆಂಡತಿಯ ಬಳಿ, ಪಿತೃಪ್ರಧಾನವಾದ ಕುಟುಂಬದಲ್ಲಿ ತಂದೆ ಮಕ್ಕಳ ಬಳಿ ತಾನು ತಪ್ಪು ಮಾಡಿದಾಗ ಸಾರಿ ಎಂಬ ಸರಳ ವಾಕ್ಯದಲ್ಲಿ ಕ್ಷಮೆ ಕೇಳುವುದಿಲ್ಲ.
ಮರೆಯಲೇ ಬಾರದಾಗಿರುವ ಒಂದು ವಿಷಯವೇನೆಂದರೆ, ಆರೋಗ್ಯಕರ ಪ್ರಜಾಸತ್ತಾತ್ಮಕ ಅಧಿಕಾರಕ್ಕೆ ಒಂದು ವಿಚಿತ್ರ ಶಕ್ತಿ ಇದೆ. ಅದು ಪ್ರಶ್ನೆಗಳಿಗೆ ಹೆದರುವುದಿಲ್ಲ. ಏಕೆಂದರೆ ಅದರ ನ್ಯಾಯಸಮ್ಮತತೆ (legitimacy) ಇತರರನ್ನು ಸುಮ್ಮನಿರಿಸುವುದರಿಂದ ಬರುವುದಿಲ್ಲ; ವಿಶ್ವಾಸದಿಂದ ಬರುತ್ತದೆ.
ಪ್ರಜಾಸತ್ತಾತ್ಮಕ ಧೋರಣೆಯುಳ್ಳ ಪೋಷಕರಿಗೆ, ಶಿಕ್ಷಕರಿಗೆ, ನಾಯಕರಿಗೆಲ್ಲರಿಗೂ ಅಧಿಕಾರ ಎಂಬುದು ಇರುತ್ತದೆ. ಆದರೆ ಸರ್ವಾಧಿಕಾರಿ ಧೋರಣೆಯುಳ್ಳ ಅಧಿಕಾರ ‘‘ನನ್ನ ಬಳಿ ಅಧಿಕಾರ ಇದೆ, ಆದ್ದರಿಂದ ನಾನು ಹೇಳಿದಂತೆ ನೀನು ಕೇಳಬೇಕು’’ ಎಂದರೆ, ಪ್ರಜಾಸತ್ತಾತ್ಮಕ ಧೋರಣೆಯುಳ್ಳವರು, ‘‘ನನಗೆ ನಮ್ಮೆಲ್ಲರ ಜವಾಬ್ದಾರಿ ಇದೆ. ಆದ್ದರಿಂದ ನಾನು ನಿನ್ನನ್ನೂ ಕೇಳಬೇಕು’’ ಎನ್ನುತ್ತಾರೆ.
ತಮ್ಮನ್ನು ತಾವು ಅಹಂಕಾರದಿಂದ ಹೊರತಾಗಿಸಿಕೊಂಡು ತಮ್ಮತನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೋ ಅವರು ಸಂಬಂಧಗಳನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ, ಅದರಿಂದ ಅಧಿಕಾರವೂ ಕೂಡಾ ನಿಯಂತ್ರಣದಲ್ಲಿರುತ್ತದೆ. ಈ ಸೂಕ್ಷ್ಮತೆ ಬಹಳಷ್ಟು ಕುಟುಂಬಗಳಲ್ಲಿಯೂ ಇರುವುದಿಲ್ಲ, ಹಾಗೆಯೇ ಆಡಳಿತದಲ್ಲಿಯೂ ಕೂಡಾ ಇರುವುದಿಲ್ಲ. ಅಲ್ಲಿಯೇ ಸಂಘರ್ಷ ಉಂಟಾಗುವುದು.
ಪ್ರಜಾಸತ್ತಾತ್ಮಕ ಮಾನಸಿಕ ರಚನೆಯನ್ನು ಗಮನಿಸಿ. ಯಾರೊಬ್ಬರೂ ತನ್ನನ್ನು ಪ್ರಶ್ನಿಸಿದಾಗ ತನಗೆ ಕೋಪ, ಕಿರಿಕಿರಿ ಮತ್ತು ಅವಮಾನ ಉಂಟಾಗಿ ತನ್ನ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆಯೇ? ಹಾಗೆ ಅನಿಸಿದರೂ ಅದನ್ನು ನಿಭಾಯಿಸಬಲ್ಲೆನೇ? ತನ್ನ ಮಾತನ್ನು ಒಪ್ಪದ, ತನ್ನ ಅಧಿಕಾರವನ್ನು ಪ್ರಶ್ನಿಸುವ ವ್ಯಕ್ತಿಯೊಡನೆ ತನ್ನ ಸಂಬಂಧವನ್ನು ಉಳಿಸಿಕೊಳ್ಳಬಲ್ಲೆನೇ? ತನಗೆ ಸಿಕ್ಕ ಅಧಿಕಾರವನ್ನು ಇತರರ ಮೇಲೆ ಸವಾರಿ ಮಾಡಲು ಬಳಸದೆ ಮತ್ತು ತನ್ನಲ್ಲೇ ಕೇಂದ್ರೀಕರಿಸಿಕೊಳ್ಳದೆಯೇ ಇತರರೊಂದಿಗೆ ಹಂಚಿಕೊಳ್ಳಬಲ್ಲೆನೇ?
ಈ ಮೂರೂ ಪ್ರಶ್ನೆಗಳು ನಮ್ಮ ಪ್ರಜಾಸತ್ತಾತ್ಮಕ ಸಾಮರ್ಥ್ಯಗಳು ಇದೆಯೋ ಇಲ್ಲವೋ ಎಂದು ಸೂಚಿಸುತ್ತವೆ. ತನ್ನ ಅಹಮನ್ನು ಸಂಭಾಳಿಸಿಕೊಳ್ಳಲಾಗದವನಿಗೆ ಭಿನ್ನಾಭಿಪ್ರಾಯವನ್ನು ನಿಯಂತ್ರಿಸಲು ಅಥವಾ ಕ್ರಮಗೊಳಿಸಲು ಕಷ್ಟ ಸಾಧ್ಯ. ಯಾರಿಗೆ ಭಿನ್ನಾಭಿಪ್ರಾಯವನ್ನು ಸಹಿಸಲು ಆಗುವುದಿಲ್ಲವೋ ಅವರಲ್ಲಿ ಅಧಿಕಾರ ಹಂಚಿಕೆಯೂ ಕಷ್ಟ. ಹೀಗಾಗಿ ಪ್ರಜಾಪ್ರಭುತ್ವ ಎನ್ನುವುದು ಹೊರಗಿನ ಆಡಳಿತ ವ್ಯವಸ್ಥೆಗೆ ಬರುವ ಮೊದಲು ಒಳಗಿನ ವೈಯಕ್ತಿಕ ಸಂಬಂಧಗಳಲ್ಲಿ ಮತ್ತು ಕುಟುಂಬಗಳಲ್ಲಿ ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ಪ್ರಜಾಸತ್ತಾತ್ಮಕತೆ ಎಂಬುದು ಆಡಳಿತದ ವಿಷಯ ಮಾತ್ರವಲ್ಲ, ಮಾನಸಿಕ ರಚನೆಯ ವಿಷಯ.
(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)