ಸೂಪರ್ ಸುಖೋಯಿ: ವಾಯುಸೇನೆಯ ಬೆನ್ನೆಲುಬಿನಿಂದ ದೈತ್ಯಶಕ್ತಿಯತ್ತ

Update: 2026-08-23 09:40 IST

ಸೂಪರ್ ಸುಖೋಯಿ ಯಾವುದೋ ಹೊಸ ಯುದ್ಧ ವಿಮಾನವಲ್ಲ. ಇದರ ಮೂಲ ಏರ್ ಫ್ರೇಮ್ ಅದೇ ಆಗಿರುತ್ತದೆ. ಈಗ ಸಂಪೂರ್ಣ ಗಮನ ವಿಮಾನದ ಮೆದುಳು ಮತ್ತು ವ್ಯವಸ್ಥೆಗಳ ಆಳವಾದ ಆಧುನೀಕರಣದತ್ತಲೇ ನೆಟ್ಟಿರುತ್ತದೆ. ಸರಳವಾಗಿ ಹೇಳುವುದಾದರೆ, ವಿಮಾನದ ದೇಹ ಅದೇ ಆಗಿದ್ದರೂ, ಅದರ ಕಣ್ಣುಗಳು, ಕಿವಿಗಳು ಮತ್ತು ಆಲೋಚನಾ ಸಾಮರ್ಥ್ಯ ವೃದ್ಧಿಯಾಗಿರುತ್ತದೆ.

ಭಾರತ ತನ್ನ ಇತಿಹಾಸದಲ್ಲೇ ಅತಿದೊಡ್ಡ ಯುದ್ಧ ವಿಮಾನ ಮೇಲ್ದರ್ಜೆಗೇರಿಸುವಿಕೆಯ ಪ್ರಯತ್ನ ಒಂದಕ್ಕೆ ಸನ್ನದ್ಧವಾಗುತ್ತಿದೆ. ಭಾರತೀಯ ವಾಯುಪಡೆ ತನ್ನ ಅಪಾರ ಸಂಖ್ಯೆಯ ಸು-30ಎಂಕೆಐ ಯುದ್ಧ ವಿಮಾನಗಳನ್ನು ಇನ್ನಷ್ಟು ಸಾಮರ್ಥ್ಯಶಾಲಿ ಯಂತ್ರಗಳನ್ನಾಗಿಸಿ, ಮುಂದಿನ ದಶಕಗಳ ಇನ್ನಷ್ಟು ಆಧುನಿಕ ಅಪಾಯಗಳನ್ನೂ ಎದುರಿಸಲು ಸಮರ್ಥವಾಗಿಸಬೇಕು ಎಂದು ಆಲೋಚಿಸುತ್ತಿದೆ. ಈ ಪ್ರಯತ್ನ ಸೂಪರ್ ಸುಖೋಯಿ ಅಥವಾ ಸೂಪರ್-30 ಯೋಜನೆ ಎಂಬುದಾಗಿ ಜನಪ್ರಿಯವಾಗಿದೆ.

ಸು-30ಎಂಕೆಐ ಯುದ್ಧ ವಿಮಾನ ಹೆಚ್ಚು ತೂಕವುಳ್ಳ, ಅವಳಿ ಇಂಜಿನ್ ಹೊಂದಿರುವ ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ಭಾರತೀಯ ವಾಯು ಸೇನೆಯ ಬೆನ್ನೆಲುಬಾಗಿದೆ. ಈಗ ಬಹುತೇಕ 260 ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇವೆ ಸಲ್ಲಿಸುತ್ತಿವೆ. ಇವು ದೀರ್ಘ ವ್ಯಾಪ್ತಿಯ ಹಾರಾಟ ನಡೆಸಬಲ್ಲವಾಗಿದ್ದು, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆಯುಧಗಳನ್ನು ಹೊಂದಬಲ್ಲವು. ಇದರೊಡನೆ, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಲು ಅನುಮೋದನೆ ಪಡೆದಿರುವ ಏಕೈಕ ವಿಮಾನ ಇದಾಗಿದೆ. ಆದರೆ ತಂತ್ರಜ್ಞಾನ ಎನ್ನುವುದು ನಿಂತ ನೀರಾಗಿರುವುದಿಲ್ಲವಲ್ಲ? ಇಪ್ಪತ್ತು ವರ್ಷಗಳ ಹಿಂದೆ ಅತ್ಯುತ್ತಮ ಎನಿಸಿಕೊಂಡಿದ್ದ ರೇಡಾರ್‌ಗಳು, ಇಲೆಕ್ಟ್ರಾನಿಕ್ಸ್ ಮತ್ತು ಮಿಷನ್ ಸಿಸ್ಟಮ್‌ಗಳು ಇಂದು ಹಳೆಯದಾಗಿರುತ್ತವೆ. ಈ ವಿಮಾನಗಳು ಆಧುನಿಕ ವಾಯು ಯುದ್ಧದಲ್ಲೂ ಪರಿಣಾಮಕಾರಿ ಆಗಿರ ಬೇಕೆಂದರೆ, ಅವುಗಳನ್ನು ಅಭಿವೃದ್ಧಿ ಪಡಿಸಲೇಬೇಕು.

ಹಾಗೆಂದು ಸೂಪರ್ ಸುಖೋಯಿ ಯಾವುದೋ ಹೊಸ ಯುದ್ಧ ವಿಮಾನವಲ್ಲ. ಇದರ ಮೂಲ ಏರ್ ಫ್ರೇಮ್ ಅದೇ ಆಗಿರುತ್ತದೆ. ಈಗ ಸಂಪೂರ್ಣ ಗಮನ ವಿಮಾನದ ಮೆದುಳು ಮತ್ತು ವ್ಯವಸ್ಥೆಗಳ ಆಳವಾದ ಆಧುನೀಕರಣದತ್ತಲೇ ನೆಟ್ಟಿರುತ್ತದೆ. ಸರಳವಾಗಿ ಹೇಳುವುದಾದರೆ, ವಿಮಾನದ ದೇಹ ಅದೇ ಆಗಿದ್ದರೂ, ಅದರ ಕಣ್ಣುಗಳು, ಕಿವಿಗಳು ಮತ್ತು ಆಲೋಚನಾ ಸಾಮರ್ಥ್ಯ ವೃದ್ಧಿಯಾಗಿರುತ್ತದೆ. ಈ ಪ್ಯಾಕೇಜ್ ಒಂದು ಹೊಸದಾದ, ದೇಶೀಯ ನಿರ್ಮಾಣದ, ವಿರೂಪಾಕ್ಷ ಎಂಬ ಹೆಸರಿನ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ ರೇಡಾರ್, ಆಧುನಿಕ ಮಿಷನ್ ಕಂಪ್ಯೂಟರ್‌ಗಳು, ಸುಧಾರಿತ ಕಾಕ್‌ಪಿಟ್ ಮತ್ತು ಏವಿಯಾನಿಕ್ಸ್, ಆಧುನಿಕ ಇಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳು ಮತ್ತು ಭಾರತೀಯ ಆಯುಧಗಳ ಉತ್ತಮ ಹೊಂದಾಣಿಕೆಗಳನ್ನು ಒಳಗೊಂಡಿದೆ. ಒಂದು ಬಾರಿ ಕೆಲಸ ಪೂರ್ಣಗೊಂಡ ಬಳಿಕ, ಈ ವಿಮಾನಗಳು ಹೆಚ್ಚು ದೂರವನ್ನು ನೋಡಬಲ್ಲವು, ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಬಲ್ಲವು, ಶತ್ರು ರೇಡಾರ್‌ಗಳನ್ನು ಸುಲಭವಾಗಿ ತಪ್ಪಿಸಬಹುದು ಅಥವಾ ಜಾಮ್ ಮಾಡಬಲ್ಲವು ಮತ್ತು ಇತರ ಭಾರತೀಯ ವ್ಯವಸ್ಥೆಗಳೊಡನೆ ವೇಗವಾಗಿ ಸಮಾಲೋಚಿಸಬಲ್ಲವು.

ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ಕೇಂದ್ರ ಸ್ಥಾನದಲ್ಲಿರುವುದು ವಿರೂಪಾಕ್ಷ ಎಇಎಸ್‌ಎ ರೇಡಾರ್. ಇದನ್ನು ಡಿಆರ್‌ಡಿಒದ ಇಲೆಕ್ಟ್ರಾನಿಕ್ಸ್ ಮತ್ತು ರೇಡಾರ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ ಅಥವಾ ಎಲ್‌ಆರ್‌ಡಿಇ ಅಭಿವೃದ್ಧಿ ಪಡಿಸಿವೆ. ಇದು ಗ್ಯಾಲಿಯಂ ನೈಟ್ರೈಡ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಇದು 2,400ರಿಂದ 2,600 ಟ್ರಾನ್ಸ್‌ಮಿಟ್ ರಿಸೀವ್ ಮಾಡ್ಯುಲ್‌ಗಳನ್ನು ಒಯ್ಯಲಿದೆ. ಈ ಮಾಡ್ಯುಲ್‌ಗಳನ್ನು ಜೊತೆಯಾಗಿ ಕಾರ್ಯಾಚರಿಸುವ ಸಾವಿರಾರು ಸಣ್ಣ ರೇಡಾರ್‌ಗಳು ಎಂದುಕೊಳ್ಳಿ. ಈಗಿನ ಸು-30ಎಂಕೆಐಗಳಲ್ಲಿರುವ ಹಳೆಯ ಮೆಕ್ಯಾನಿಕಲಿ ಸ್ಕ್ಯಾನ್ಡ್ ರೇಡಾರ್‌ಗಳಿಗೆ ಹೋಲಿಸಿದರೆ, ಎಇಎಸ್‌ಎ ರೇಡಾರ್ ಸಾಕಷ್ಟು ದೂರದಲ್ಲಿರುವ, ಅಂದರೆ 300ರಿಂದ 400 ಕಿಲೋಮೀಟರ್ ದೂರದ ಗುರಿಗಳನ್ನು ಗುರುತಿಸಬಲ್ಲದು. ಇದು ಏಕಕಾಲದಲ್ಲಿ ಹಲವು ಗುರಿಗಳನ್ನು ಗಮನಿಸಿ, ಜಾಮಿಂಗ್ ಅನ್ನು ಪ್ರತಿರೋಧಿಸಿ, ಇದರ ಒಳಗೆ ಯಾವುದೂ ಭೌತಿಕವಾಗಿ ಚಲಿಸದಿರುವುದರಿಂದ ಕಾರ್ಯಾಚರಿಸುವ ವಿಧಾನವನ್ನು ತಕ್ಷಣವೇ ಬದಲಿಸಿಕೊಳ್ಳಬಲ್ಲದು. ಇದು ಪೈಲಟ್‌ಗಳಿಗೆ ನೆರವಾಗಿ, ಶತ್ರುಗಳನ್ನು ಮೊದಲೇ ಗುರುತಿಸಿ ದಾಳಿ ನಡೆಸಲು ಪೂರಕವಾಗಿದ್ದು, ಬಿಯಾಂಡ್ ವಿಶುವಲ್ ರೇಂಜ್ ಯುದ್ಧದಲ್ಲಿ ಬಹುದೊಡ್ಡ ಅನುಕೂಲ ಕಲ್ಪಿಸುತ್ತದೆ. ಇಲ್ಲಿ ಯಾರು ಮೊದಲು ಶತ್ರುವನ್ನು ನೋಡುತ್ತಾರೋ, ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸರಳವಾಗಿ ಹೇಳುವುದಾದರೆ, ನೂತನ ರೇಡಾರ್ ಪೈಲಟ್‌ಗೆ ಇನ್ನಷ್ಟು ಉತ್ತಮ ನೋಟ ಮತ್ತು ಆಕಾಶದ ಹೆಚ್ಚು ಸ್ಪಷ್ಟ ಚಿತ್ರಣ ಒದಗಿಸುತ್ತದೆ.

ಇನ್ನು ಆಯುಧಗಳು ಈ ಕಥೆಯ ಮುಂದಿನ ದೊಡ್ಡ ಭಾಗ. ಸೂಪರ್ ಸುಖೋಯಿ ಹೆಚ್ಚು ಭಾರತೀಯ ನಿರ್ಮಾಣದ ಆಯುಧಗಳನ್ನು ತನ್ನ ಪ್ರಮುಖ ಆಯ್ಕೆಯಾಗಿ ಹೊಂದಿರಲಿದೆ. ಅವುಗಳ ಪೈಕಿ ಅಸ್ತ್ರ ಕುಟುಂಬದ ಬಿಯಾಂಡ್ ವಿಶುವಲ್ ರೇಂಜ್ ಕ್ಷಿಪಣಿಗಳು ಅತ್ಯಂತ ಮುಖ್ಯವಾಗಿವೆ. ವಿಮಾನಕ್ಕೆ ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿಯ ಸೇರ್ಪಡೆಯನ್ನೂ ಯೋಜಿಸಲಾಗಿದ್ದು, ಇದು ಶತ್ರು ರೇಡಾರ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಬೇಟೆಯಾಡುತ್ತದೆ. ಸುಧಾರಿತ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳು ಅಪಾಯಗಳನ್ನು ಪತ್ತೆಹಚ್ಚಿ, ಅವುಗಳ ವಿಧವನ್ನು ಗುರುತಿಸಿ, ಪ್ರತಿದಾಳಿ ನಡೆಸಲು ನೆರವಾಗುವುದರಿಂದ, ಅಪಾಯಕಾರಿ ಆಗಸ ದಲ್ಲೂ ವಿಮಾನ ಪಾರಾಗಲು ನೆರವಾಗುತ್ತವೆ. ಹೊಸ ಯೋಜನಾ ಕಂಪ್ಯೂಟರ್‌ಗಳು, ಡಿಜಿಟಲ್ ಪರದೆಗಳು ಮತ್ತು ಡೇಟಾ ಲಿಂಕ್‌ಗಳು ಪೈಲಟ್‌ಗೆ ಯುದ್ಧರಂಗದ ಒಂದು ಸ್ಪಷ್ಟ ಚಿತ್ರಣವನ್ನು ಒದಗಿಸಿ, ಆತನಿಗೆ ಕ್ಷಿಪ್ರವಾಗಿ ಈ ಮಾಹಿತಿಗಳನ್ನು ಇತರ ಯುದ್ಧ ವಿಮಾನಗಳಿಗೆ, ಎಡಬ್ಲ್ಯುಎಸಿಎಸ್ ವಿಮಾನ ಮತ್ತು ಭೂ ಕೇಂದ್ರಗಳಿಗೆ ಹಂಚಿಕೊಳ್ಳಲು ನೆರವಾಗುತ್ತವೆ.

ಸಹಜವಾಗಿಯೇ ಇಂತಹ ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣ ವೆಚ್ಚವಾಗುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಮೊದಲ ಹಂತದ 84 ಯುದ್ಧ ವಿಮಾನಗಳ ಅಭಿವೃದ್ಧಿಗೆ ಅಂದಾಜು 8 ಬಿಲಿಯನ್ ಡಾಲರ್ ತಗಲಬಹುದು. ಪ್ರತೀ ಡಾಲರ್‌ಗೆ 110 ರೂಪಾಯಿ ಮೌಲ್ಯವನ್ನು ಅಂದಾಜಿಸಿದರೆ, ಬಹುತೇಕ 88,000 ಕೋಟಿ ರೂ. ವೆಚ್ಚವಾಗಲಿದೆ. ಅಂದರೆ, ಪ್ರತಿಯೊಂದು ವಿಮಾನದ ಅಭಿವೃದ್ಧಿಗೆ ಅಂದಾಜು 1,045 ಕೋಟಿ ರೂ. ವೆಚ್ಚವಾಗಲಿದೆ. ಎರಡನೇ ಹಂತದಲ್ಲಿ ಇನ್ನೂ 120 ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಲಿದ್ದು, ಇದಕ್ಕೆ 11 ಬಿಲಿಯನ್ ಡಾಲರ್ ಅಥವಾ ಅಂದಾಜು 1,21,000 ಕೋಟಿ ರೂ. ವೆಚ್ಚವಾಗಲಿದೆ. ಎರಡು ಹಂತಗಳೂ ಉದ್ದೇಶಿತ ರೀತಿಯಲ್ಲಿ ನೆರವೇರಿದರೆ, ಭಾರತದ 200ಕ್ಕೂ ಹೆಚ್ಚು ಸು-30ಎಂಕೆಐ ಯುದ್ಧ ವಿಮಾನಗಳು ಸೂಪರ್ ಸುಖೋಯಿ ಹಂತವನ್ನು ತಲುಪಲಿವೆ. ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಮೊದಲ ಹಂತದಲ್ಲೇ ಪೂರ್ಣಗೊಳ್ಳುವ ಕಾರಣದಿಂದ, ಎರಡನೇ ತಂಡದ ಅಭಿವೃದ್ಧಿ ವೆಚ್ಚ ಕಡಿಮೆಯಾಗುವ ಸಾಧ್ಯತೆಗಳಿವೆ. ಇವೆಲ್ಲ ಅಂಕಿಅಂಶಗಳು ಇನ್ನೂ ಬರಿಯ ಅಂದಾಜಾಗಿರುವುದರಿಂದ, ಎಲ್ಲವೂ ಸರಕಾರದ ಅಂತಿಮ ಅನುಮೋದನೆಯ ಮೇಲೆ ಅವಲಂಬಿತವಾಗಿವೆ.

ಪ್ರಸ್ತುತ ಯೋಜನೆಗೆ ಇನ್ನೂ ಭದ್ರತಾ ಸಂಸದೀಯ ಸಮಿತಿ ಯಿಂದ ಅಂತಿಮ ಅನುಮೋದನೆ ಲಭಿಸಬೇಕಿದೆ. ಒಂದು ಬಾರಿ ಅನುಮೋದನೆ ಬಂದರೆ, ಎರಡು ಸು-30ಎಂಕೆಐ ಯುದ್ಧ ವಿಮಾನ ಗಳನ್ನು ಹಾರಾಡುವ ಪರೀಕ್ಷಾ ಕೇಂದ್ರವಾಗಿ ಪರಿವರ್ತಿಸಲಾಗುತ್ತದೆ. ಹೊಸ ರೇಡಾರ್, ಏವಿಯಾನಿಕ್ಸ್, ಇಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳು ಮತ್ತು ಆಯುಧಗಳ ಪರೀಕ್ಷೆಗೆ ಅಂದಾಜು ಮೂರು ವರ್ಷಗಳ ಕಾಲ ಹಿಡಿಯುವ ನಿರೀಕ್ಷೆಯಿದ್ದು, ಸಂಪೂರ್ಣ ಹಾರಾಟ ಪರೀಕ್ಷೆಗಳಿಗೆ ಐದು ವರ್ಷಗಳು ಬೇಕಾಗಬಹುದು. ಯಶಸ್ವಿ ಪರೀಕ್ಷೆಗಳ ಬಳಿಕವಷ್ಟೇ ಮುಖ್ಯ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ಇಂತಹ ಬಹಳಷ್ಟು ಸಂಕೀರ್ಣ ವ್ಯವಸ್ಥೆಗಳನ್ನು ಒಂದು ಯುದ್ಧ ವಿಮಾನದೊಳಗೆ ಅಳವಡಿಸುವುದು ಕಠಿಣ ಇಂಜಿನಿಯರಿಂಗ್ ಕಾರ್ಯವಾಗಿದ್ದು, ಇದಕ್ಕಾಗಿ ನಿಧಾನವಾದ, ಜಾಗರೂಕತೆಯ ವಿಧಾನ ಅತ್ಯವಶ್ಯಕವಾಗಿದೆ.

ಭಾರತ ಈಗಾಗಲೇ ಹೊಸ ಯುದ್ಧ ವಿಮಾನಗಳನ್ನು ನಿರ್ಮಿಸುತ್ತಿರುವಾಗ, ಇಷ್ಟೊಂದು ಹಣವನ್ನು ವೆಚ್ಚ ಮಾಡುವುದೇಕೆ? ತೇಜಸ್ ಎಂಕೆ2 ಮತ್ತು ಐದನೇ ತಲೆಮಾರಿನ ಎಎಂಸಿಎಗಳು ನಿಜಕ್ಕೂ ಪ್ರಮುಖ ಯೋಜನೆಗಳೇ. ಆದರೆ, ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸಲು ಬಹಳಷ್ಟು ವರ್ಷಗಳು ಹಿಡಿಯು ತ್ತವೆ. ಭಾರವಾದ ಯುದ್ಧ ವಿಮಾನಗಳು ಮತ್ತು ಲಘು ಯುದ್ಧ ವಿಮಾನಗಳು ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತವೆ. ಸು-30ಎಂಕೆಐ ಈಗಾಗಲೇ ಶಕ್ತಿಯುತವಾಗಿ ಹಾರಾಡುತ್ತಿದ್ದು, ದೀರ್ಘ ವ್ಯಾಪ್ತಿ ಮತ್ತು ವಿಶಿಷ್ಟವಾದ ಬ್ರಹ್ಮೋಸ್ ಕ್ಷಿಪಣಿಯನ್ನೂ ಹೊಂದಿದೆ. ಹೊಸ ಯುದ್ಧ ವಿಮಾನಗಳು ಸಿದ್ಧವಾಗುವ ಅವಧಿಯಲ್ಲಿ ಇದನ್ನು ಮೇಲ್ದರ್ಜೆಗೆ ಏರಿಸುವುದು ವಾಯು ಸಾಮರ್ಥ್ಯವನ್ನು ಬಲಶಾಲಿಯಾಗಿಡಲು ಒಂದು ಪ್ರಾಯೋಗಿಕ ವಿಧಾನವಾಗಿದೆ.

ಇದರ ಯಶಸ್ಸು ಭಾರತದ ರಕ್ಷಣಾ ತಂತ್ರಜ್ಞಾನವನ್ನು ಬಲಪಡಿಸ ಲಿದ್ದು, ಆಮದಿನ ಮೇಲಿನ ಅವಲಂಬನೆ ಕಡಿಮೆಗೊಳಿಸಿ, ಭಾರತದ ಆಗಸಗಳನ್ನು 2040ರ ಆಚೆಗೂ ಸುರಕ್ಷಿತವಾಗಿಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಿರೀಶ್ ಲಿಂಗಣ್ಣ

contributor

Similar News