ಸರಕಾರಿ ವಿಶ್ವವಿದ್ಯಾನಿಲಯಗಳ ಕಥೆ-ವ್ಯಥೆ
ಬಸವರಾಜ ರಾಯರೆಡ್ಡಿಯವರು ಒಳ್ಳೆಯ ನೀತಿ ನಿರೂಪಣೆಗೆ ಆದ್ಯತೆ ನೀಡಿ ಕೆಲಸ ಮಾಡಿದರೆ ಮುಂದಿನ ಸರಕಾರಗಳು ಅದನ್ನೇ ಅನುಸರಿಸಬೇಕಾಗುತ್ತದೆ. ತಪ್ಪು ನಿರ್ಧಾರ ಮಾಡಿದರೆ ಮುಂಬರುವ ಬಿಜೆಪಿ ಸರಕಾರ ಒಂದು ತಪ್ಪಿನ ತೀವ್ರತೆ ಹೆಚ್ಚಿಸಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಮುಂದಾಗುತ್ತದೆ. ಬಸವರಾಜ ರಾಯರೆಡ್ಡಿಯವರು ಉನ್ನತ ಶಿಕ್ಷಣ ಇಲಾಖೆಯ ಘನತೆ ಹೆಚ್ಚಿಸುವ ಕೆಲಸ ಮಾಡಲಿ. ಸರಕಾರಿ ವಿಶ್ವವಿದ್ಯಾನಿಲಯಗಳ ವೈಭವ ಮರುಕಳಿಸುವಂತೆ ಮರು ರೂಪಿಸಿದರೆ ಒಂದು ಪೀಳಿಗೆ ಸಚಿವರನ್ನು ಸ್ಮರಿಸುತ್ತದೆ.
ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 32 ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲ ಹಳೆಯ ಹೊಸ ವಿಶ್ವವಿದ್ಯಾನಿಲಯಗಳು ಬೋಧಕ-ಬೋಧಕೇತರ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ಮೂಲಭೂತ ಸೌಕರ್ಯಗಳಿಲ್ಲದೆ ಕಳಾಹೀನವಾಗಿವೆ. ಅಷ್ಟು ಮಾತ್ರವಲ್ಲ ನಿವೃತ್ತ ನೌಕರರಿಗೆ ಪಿಂಚಣಿ ಕೊಡಲಾಗದ ಕಂಗಾಲ ಸ್ಥಿತಿಗೆ ತಲುಪಿವೆ.
ಹೌದು ಕರ್ನಾಟಕ ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳು ಒಬ್ಬ ದೂರದೃಷ್ಟಿಯುಳ್ಳ ಉನ್ನತ ಶಿಕ್ಷಣ ಸಚಿವರಿಗಾಗಿ ಹಂಬಲಿಸುತ್ತಿದ್ದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಎಂ.ಸಿ. ಸುಧಾಕರ್ ಅತ್ಯಂತ ಪ್ರಾಮಾಣಿಕ ಮತ್ತು ಸಜ್ಜನ ವ್ಯಕ್ತಿ. ಕುಲಪತಿ -ಕುಲಸಚಿವರ ನೇಮಕಾತಿಯಲ್ಲಿ ಹಪಾಹಪಿಯಿಂದ ಹಣ ಮಾಡಲಿಲ್ಲ. ಕುಲಪತಿಗಳನ್ನು ಗುಲಾಮರಂತೆ ನಡೆಸಿಕೊಳ್ಳಲಿಲ್ಲ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಏನಾದರೂ ಸುಧಾರಣೆ ತರಬೇಕೆಂಬ ಹಂಬಲ ತುಡಿತ ಇತ್ತು. ಆದರೆ ದೂರದೃಷ್ಟಿಯ ಕೊರತೆಯಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಹಿಂದಿನ ಬಿಜೆಪಿ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಜಾರಿಗೆ ತಂದಿದ್ದ ಅಪಾಯಕಾರಿ ನೀತಿಗಳನ್ನು ರದ್ದು ಮಾಡುವ ಧೈರ್ಯ ಕೂಡ ಪ್ರದರ್ಶಿಸಲಿಲ್ಲ. ಅಶ್ವತ್ಥ ನಾರಾಯಣ ಅವರು ಅನುಷ್ಠಾನಕ್ಕೆ ತಂದ, ವಿಶ್ವವಿದ್ಯಾನಿಲಯಗಳ ಸ್ವಾಯತ್ತೆಗೆ ಧಕ್ಕೆ ತರುವ ಯುಯುಸಿಎಂ (ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ )ವ್ಯವಸ್ಥೆಯನ್ನು ಪುನರ್ ಪರಿಶೀಲಿಸಿ ಹೊಸ ವ್ಯವಸ್ಥೆ ರೂಪಿಸುವ ಗೋಜಿಗೆ ಹೋಗಲಿಲ್ಲ. ಒಎಂಆರ್ ಶೀಟ್ ಅಕ್ರಮ ತಿದ್ದುಪಡಿ ಮಾಡುವ ಮೂಲಕ ಕರ್ನಾಟಕ ಲೋಕಸೇವಾ ಆಯೋಗದಷ್ಟೇ ಭ್ರಷ್ಟಗೊಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಾಯಕಲ್ಪ ನೀಡಲಿಲ್ಲ. ಕನಿಷ್ಠ ಪಕ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಭ್ರಷ್ಟ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಸಾಹಸ ತೋರಲಿಲ್ಲ. ಅಶ್ವತ್ಥ ನಾರಾಯಣ ಕಾಲದ ಭ್ರಷ್ಟ ವ್ಯವಸ್ಥೆಯನ್ನೇ ಮುಂದುವರಿಸಿದರು. ಸರಕಾರಿ ಪ್ರಥಮ ದರ್ಜೆಯ ಪದವಿ ಮಹಾವಿದ್ಯಾನಿಲಯಗಳಲ್ಲಿ ಖಾಲಿ ಇರುವ ಪ್ರಿನ್ಸಿಪಾಲ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಲಿಲ್ಲ. ಯುಜಿಸಿ ನಿಯಮಾನುಸಾರ ಶೈಕ್ಷಣಿಕ ಅರ್ಹತೆ ಪಡೆದುಕೊಳ್ಳದ 3,853 ಜನ ಅತಿಥಿ ಉಪನ್ಯಾಸಕರ ಹಿತ ಕಾಪಾಡಲು ಅನಗತ್ಯವಾಗಿ ಸಮನ್ವಯ ಅಧಿಕಾರಿ ಹುದ್ದೆಗಳನ್ನು ಸೃಷ್ಟಿಸಿ ಬೊಕ್ಕಸಕ್ಕೆ ಹೊರೆ ಮಾಡಿದರು. ನಕಲಿ ಪಿಎಚ್.ಡಿ. ಪದವಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾದ ವಂಚಕರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕಿದರು.
ಸರಕಾರಿ ವಿಶ್ವವಿದ್ಯಾನಿಲಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ದುರ್ಬಲವಾಗಿದ್ದೇ ಅಶ್ವತ್ಥ ನಾರಾಯಣ ಅವರ ಅವೈಜ್ಞಾನಿಕ ತಪ್ಪು ನೀತಿಗಳಿಂದ. ಕೊನೆಯ ಗಳಿಗೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ್ದು, ಹತ್ತಾರು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡಿದ್ದು, ಕೋಮುವಾದಿ ವಿಚಾರಧಾರೆಗಳನ್ನು ಪ್ರಚಾರ ಮಾಡಲೆಂದೇ ಹುಟ್ಟಿಕೊಂಡ ಆರೆಸ್ಸೆಸ್‌ನವರ ಚಾಣಕ್ಯ ವಿಶ್ವವಿದ್ಯಾನಿಲಯವನ್ನು ಮತ್ತಷ್ಟು ಉತ್ತೇಜಿಸಿದ್ದು ಸುಧಾಕರ್ ಅವರ ವೈಫಲ್ಯವೇ ಆಗಿತ್ತು.
ಈಗ ಉನ್ನತ ಶಿಕ್ಷಣ ಇಲಾಖೆಗೆ ಹೊಸ ಮಂತ್ರಿ ಬಂದಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಹಿರಿಯ ಮತ್ತು ದೂರದೃಷ್ಟಿಯುಳ್ಳ ಶಿಕ್ಷಣ ಸಚಿವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜನತಾ ಪರಿವಾರದ ಹಿನ್ನೆಲೆಯ, ರಾಮಕೃಷ್ಣ ಹೆಗಡೆಯವರ ಕಾಲದ, ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆ ಇರುವ ಬಸವರಾಜ ರಾಯರೆಡ್ಡಿಯವರು ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಈ ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯವರಿಗೆ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ದಿ. ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಪ್ರೊ. ಲಕ್ಷ್ಮಿಸಾಗರ, ಎಸ್.ಕೆ. ಕಾಂತಾ, ಸಿದ್ದರಾಮಯ್ಯ ಅವರಂತಹ ಹಿರಿಯರ ಜೊತೆಗೆ ಮಂತ್ರಿಯಾಗಿ ಕೆಲಸ ಮಾಡಿ ಅಪಾರ ಅನುಭವ ಪಡೆದವರು.
ಬಸವರಾಜ ರಾಯರೆಡ್ಡಿಯವರು ಮನಸ್ಸು ಮಾಡಿದರೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಯನ್ನೇ ಮಾಡಬಲ್ಲರು. ಸೊರಗಿದ ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ಮರು ಜೀವ ನೀಡಬಲ್ಲರು. ಅವರ ಕ್ರಿಯಾಶೀಲತೆ ಮತ್ತು ಕರ್ತೃತ್ವ ಶಕ್ತಿಯ ಬಗ್ಗೆ ಎರಡು ಮಾತಿಲ್ಲ.
ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕಾರಾವಧಿಯ ಉತ್ತರಾರ್ಧದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. 2016ರಿಂದ 2018ರವರೆಗೆ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿಯವರು ಮಾಡಿದ ಒಂದು ಕೆಲಸ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿ ನಿಂತಿದೆ.
ಲಂಡನ್‌ನ ಸ್ಕೂಲ್ ಆಫ್ ಇಕನಾಮಿಕ್ಸ್ ಮಾದರಿಯಲ್ಲಿ ಆರ್ಥಿಕ -ಸಾಮಾಜಿಕ ಅಧ್ಯಯನಕ್ಕೆ ಮೀಸಲಾದ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಬಸವರಾಜ ರಾಯರೆಡ್ಡಿಯವರಿಗೆ ಹೊಳೆಯಿತು. ಲಂಡನ್ ಗೂ ಹೋಗಿ ಅಧ್ಯಯನ ಮಾಡಿದರು. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದಿದ ಆ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ರಾಜ್ಯ ದಲ್ಲೂ ಒಂದು ವಿಶ್ವವಿದ್ಯಾನಿಲಯ ಕಟ್ಟಬೇಕೆಂದು ದೃಢ ಸಂಕಲ್ಪ ಮಾಡಿದರು.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದರ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮಾತ್ರವಲ್ಲ ಸಂಪುಟದ ಅನುಮೋದನೆ ಪಡೆದುಕೊಂಡು, ಉಭಯ ಸದನಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯ ಕಾಯ್ದೆಗೆ ಒಪ್ಪಿಗೆ ದಕ್ಕಿಸಿಕೊಂಡರು. ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ನಿರ್ಧಾರ ಮಾಡಿದ ಮಾತ್ರಕ್ಕೆ ಕನಸು ಸಾಕಾರಗೊಳ್ಳುವುದಿಲ್ಲ. ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಮತ್ತು ಅಂದುಕೊಂಡಿದ್ದನ್ನು ಸಾಧಿಸುವ ಛಲ ಇರಬೇಕಾಗುತ್ತದೆ. ಕೇವಲ ಎರಡು ವರ್ಷಗಳ ಅವಧಿಗೆ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿಯವರು ಕಾಲಮಿತಿಯೊಳಗೆ ಕಾರ್ಯ ಪೂರೈಸುವ ಒತ್ತಡಕ್ಕೆ ಒಳಗಾಗಿದ್ದರು. ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯವರನ್ನು ಒಪ್ಪಿಸಿ ನಲವತ್ತು ಎಕರೆ ಜಮೀನು ಪಡೆದುಕೊಂಡು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯ ಕ್ಯಾಂಪಸ್ ನಿರ್ಮಾಣಕ್ಕೆ ಕೈ ಹಾಕಿದರು. ಕೇವಲ ಆರು ತಿಂಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕಟ್ಟಡಗಳೊಂದಿಗೆ ಭವ್ಯ, ಸುಸಜ್ಜಿತ ಮತ್ತು ಸೌಂದರ್ಯ ಪ್ರಜ್ಞೆ ಇಟ್ಟುಕೊಂಡು ಅದ್ಭುತ ಕ್ಯಾಂಪಸ್ ನಿರ್ಮಾಣ ಮಾಡಿಯೇ ಬಿಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಬಸವರಾಜ ರಾಯರೆಡ್ಡಿಯವರಿಗಿರುವ ಗೌರವ, ಪ್ರೀತಿಯ ಆಳ ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನೋಡಿದಾಗ ಮನವರಿಕೆಯಾಗುತ್ತದೆ. ಖ್ಯಾತ ಶಿಕ್ಷಣ ತಜ್ಞರು, ಅರ್ಥ ಶಾಸ್ತ್ರಜ್ಞರು, ಕೇಂದ್ರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ವಿಜಯೇಂದ್ರ ಕಸ್ತೂರಿರಂಗನ್ ವರದರಾಜ ರಾವ್ (ವಿ.ಕೆ.ಆರ್.ವಿ. ರಾವ್ )ಅವರು ಬೆಂಗಳೂರಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಅಧ್ಯಯನಕ್ಕೆಂದು (ಐಸೆಕ್) ಒಂದು ಅಪರೂಪದ ಸಂಸ್ಥೆ ಸ್ಥಾಪಿಸಿದ್ದರು. ಕಟ್ಟಡ ವಿನ್ಯಾಸ, ಕ್ಯಾಂಪಸ್ ಸ್ವರೂಪ ಎಲ್ಲವೂ ಅತ್ಯುತ್ತಮ ಗುಣಮಟ್ಟದ್ದು. ಆ ಮಾದರಿಯಲ್ಲಿ ಬಸವರಾಜ ರಾಯರೆಡ್ಡಿಯವರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯ ನಿರ್ಮಾಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ದುರಂತವೆಂದರೆ; 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಯಿತು. ಅನಿವಾರ್ಯವಾಗಿ ಎಚ್.ಡಿ. ದೇವೇಗೌಡರ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಬೇಕಾಯಿತು. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಶಿಕ್ಷಣದ ಬಗ್ಗೆ ಕನಿಷ್ಠ ಒಲವಿಲ್ಲದ ಜಿ.ಟಿ. ದೇವೇಗೌಡರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು. ಜಿ.ಟಿ. ದೇವೇಗೌಡರು ಉದಾಸೀನತೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯನ್ನು ಮಗ ಮತ್ತು ಅಳಿಯನಿಗೆ ಮೇಯಲು ಬಿಟ್ಟರು. ಉನ್ನತ ಶಿಕ್ಷಣ ಇಲಾಖೆಯ ದುರ್ಗತಿ ಅಲ್ಲಿಂದ ಶುರುವಾಯಿತು. ಹಾಗೆ ನೋಡಿದರೆ ಉನ್ನತ ಶಿಕ್ಷಣ ಇಲಾಖೆಗೆ, ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ಕೆಟ್ಟ ದಿನಗಳು ಶುರುವಾಗಿದ್ದೇ ಡಿ.ಎಚ್. ಶಂಕರಮೂರ್ತಿ, ಅರವಿಂದ ಲಿಂಬಾವಳಿಯಂಥ ಅಪ್ಪಟ ಸಂಘ ಪರಿವಾರದ ರಾಜಕಾರಣಿಗಳು ಉನ್ನತ ಶಿಕ್ಷಣ ಸಚಿವ ಖಾತೆ ವಹಿಸಿಕೊಂಡಾಗಿನಿಂದ. ಬಸವರಾಜ ರಾಯರೆಡ್ಡಿಯವರು ಅತ್ಯುತ್ತಮ ಗುಣಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯವನ್ನೇನೋ ಲೋಕಾರ್ಪಣೆ ಮಾಡಿದರು. ನಂತರ ಬಂದ ಉನ್ನತ ಶಿಕ್ಷಣ ಸಚಿವರು ಆ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಶ್ರಮಿಸಲೇ ಇಲ್ಲ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರಕಾರಗಳಲ್ಲಿ ಸತತ ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯವನ್ನು ಸಂಪೂರ್ಣ ಕಡೆಗಣಿಸಿದರು. ಅಷ್ಟು ಮಾತ್ರವಲ್ಲ ಎಲ್ಲ ವಿಶ್ವವಿದ್ಯಾನಿಲಯಗಳನ್ನು ದಿವಾಳಿ ಅಂಚಿನಲ್ಲಿ ತಂದು ನಿಲ್ಲಿಸಿದರು.
ಡಾ. ಸಿ.ಎನ್. ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿ ಮಾಡಿದ ಘನ ಕಾರ್ಯಗಳೆಂದರೆ, ಯಾವುದೇ ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಕೇಂದ್ರ ಸರಕಾರ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದರು. ನಾಲ್ಕು ವರ್ಷಗಳ ವಿಶ್ವವಿದ್ಯಾನಿಲಯಗಳಲ್ಲಿ ಕೋಮುವಾದಿ ಚಟುವಟಿಕೆಗಳು ನಡೆಯುವಂತೆ ನಿಗಾ ವಹಿಸಿದರು. ಸಂಘ ಪರಿವಾರದ ಹಿನ್ನೆಲೆಯವರಿಗೆ ಕುಲಪತಿ, ಕುಲಸಚಿವ ಮತ್ತು ಸಿಂಡಿಕೇಟ್ ಸದಸ್ಯ ಸ್ಥಾನ ದಯಪಾಲಿಸಿದ್ದು ಮಹತ್ತರ ಸಾಧನೆ. ಕೇಂದ್ರ ಸರಕಾರದ ತಪ್ಪು ಶಿಕ್ಷಣ ನೀತಿಯಿಂದಾಗಿ ಕರ್ನಾಟಕದ ಸರಕಾರಿ ವಿಶ್ವವಿದ್ಯಾನಿಲಯಗಳು ಅನುದಾನ ಇಲ್ಲದೆ ದಿನೇ ದಿನೇ ಬಡವಾಗತೊಡಗಿವೆ. ಸಾಧ್ಯವಾದಷ್ಟು ಹಣ ಬಾಚಿದ್ದು, ವಿಶ್ವವಿದ್ಯಾನಿಲಯಗಳನ್ನು ಸಂಘ ಪರಿವಾರದ ಆಡಂಬೋಲು ಮಾಡಿದ್ದು ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಪ್ರಮುಖ ಸಾಧನೆಗಳು. ಬಿಜೆಪಿ ಶಾಸಕರ ವಿರೋಧದ ನಡುವೆಯೂ ಹತ್ತಾರು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ ದಯಪಾಲಿಸಿದ ಅಶ್ವತ್ಥ ನಾರಾಯಣ ರಿಪೇರಿ ಮಾಡಲಾಗದಷ್ಟು ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡಿ ಹೋಗಿದ್ದಾರೆ.
ಅಶ್ವತ್ಥ ನಾರಾಯಣ ಅವರ ಕೃಪೆಯಿಂದಾಗಿ ಕೊನೆ ಗಳಿಗೆಯಲ್ಲಿ ಅಸ್ತಿತ್ವಕ್ಕೆ ಬಂದ ಮಂಡ್ಯ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟ, ಬೀದರ್, ಚಾಮರಾಜನಗರ ಮತ್ತು ನೃಪತುಂಗ ವಿಶ್ವವಿದ್ಯಾನಿಲಯಗಳು ಸೊನ್ನೆ ಸಾಧನೆಗೆ ಹೆಸರಾಗಿವೆ. ಮಾತ್ರವಲ್ಲ ಉಳಿದ ಹಳೆಯ ವಿಶ್ವವಿದ್ಯಾನಿಲಯಗಳನ್ನು ತಮ್ಮ ಮಟ್ಟಕ್ಕೆ ಇಳಿಯುವಂತೆ ಮಾಡುತ್ತಿವೆ. ಒಂದು ಕಾಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಎಂಬ ಹೆಗ್ಗಳಿಕೆ ಪಡೆದಿದ್ದ ಮೈಸೂರು ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಗಳು ನೂತನ ವಿಶ್ವವಿದ್ಯಾನಿಲಯಗಳ ಆಗಮನದಿಂದಾಗಿ ಸಂಪೂರ್ಣ ಸೊರಗಿ ಹೋಗಿವೆ.
ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯವು ಮೈಸೂರು ಅರಸರ ದೂರದೃಷ್ಟಿಯ ಫಲವಾಗಿ ಸ್ಥಾಪಿತವಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯ ಹಲವು ದಿಗ್ಗಜರನ್ನು ಸೃಷ್ಟಿ ಮಾಡಿದ ಖ್ಯಾತಿ ಪಡೆದಿದೆ. ಅಲ್ಲಿ ಓದಿ ಪದವಿ ಸಂಪಾದಿಸುವುದು, ಆ ಪರಿಸರದಲ್ಲಿದ್ದು ಪಾಠ ಪ್ರವಚನ ಮಾಡುವುದು ಹೆಮ್ಮೆಯ ಸಂಗತಿಯಾಗಿತ್ತು. ಮಂಡ್ಯ, ಹಾಸನ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದ ಪರಿಣಾಮವಾಗಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಲಗ್ನ ಮಹಾವಿದ್ಯಾಲಯಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ವಿಶ್ವವಿದ್ಯಾನಿಲಯದ ಮುಖ್ಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಸಂಲಗ್ನತೆಯ ಶುಲ್ಕವೇ ವಿಶ್ವವಿದ್ಯಾನಿಲಯದ ಪ್ರಮುಖ ಆರ್ಥಿಕ ಸಂಪನ್ಮೂಲ. ಹಣದ ಮುಗ್ಗಟ್ಟು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ, ಈಗ ಹೊಸ ವಿಶ್ವವಿದ್ಯಾನಿಲಯಗಳಿಂದಾಗಿ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸಬೇಕಾಗಿದೆ. ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು, ಡಿ.ಸಿ. ಪಾವಟೆ ಮುಂತಾದವರ ಕನಸಿನ ಕರ್ನಾಟಕ ವಿಶ್ವವಿದ್ಯಾನಿಲಯ ಒಂದು ಕಾಲದಲ್ಲಿ ಅತ್ಯಂತ ಬೇಡಿಕೆಯ ಶಿಕ್ಷಣ ಸಂಸ್ಥೆಯಾಗಿತ್ತು. ದೇಶ ವಿದೇಶಗಳ ದಿಗ್ಗಜರು ಕರ್ನಾಟಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಬಾಗಲಕೋಟ, ಹಾವೇರಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಿಂದ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳ ಸಂಖ್ಯೆ ಕುಸಿದಿದೆ. ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗಿದೆ. ಕಲ್ಯಾಣ ಕರ್ನಾಟಕದ ಹಳೆಯ ವಿಶ್ವವಿದ್ಯಾನಿಲಯವಾದ ಗುಲ್ಬರ್ಗಾ ವಿಶ್ವವಿದ್ಯಾನಿಲಯವು ಕೊಪ್ಪಳ, ಬೀದರ್ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಸರಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಅತ್ಯುತ್ತಮ ಸುಸಜ್ಜಿತ ಗ್ರಂಥಾಲಯ, ಮೂಲಭೂತ ಸೌಕರ್ಯ ಇಲ್ಲದಿದ್ದರೂ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಿ ಸ್ನಾತಕ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಸಹಜವಾಗಿಯೇ ವಿಶ್ವವಿದ್ಯಾನಿಲಯಗಳ ಹಾಜರಾತಿ ಕುಸಿಯುತ್ತಿದೆ. ಅಶ್ವತ್ಥ ನಾರಾಯಣ ಕಾಲದ ಶೂನ್ಯ ಸಿಬ್ಬಂದಿ ವಿಶ್ವವಿದ್ಯಾನಿಲಯಗಳು ಸೇರಿ ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳು ಬೋಧಕ-ಬೋಧಕೇತರ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ಒಂದು ಅಂದಾಜಿನ ಪ್ರಕಾರ ಪ್ರತಿಶತ 64ರಷ್ಟು ಬೋಧಕ, ಪ್ರತಿಶತ 69ರಷ್ಟು ಬೋಧಕೇತರ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ಹಲವು ಬಾರಿ ಎಚ್ಚರಿಸಿದೆ. ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಿದ ಮೇಲೆ ಸರಕಾರಿ ವಿಶ್ವವಿದ್ಯಾನಿಲಯಗಳು ಬಡವರ ಮಕ್ಕಳ ಅಳಿದುಳಿದ ಆಶಾ ಕಿರಣವಾಗಿವೆ. ಮೂರ್ನಾಲ್ಕು ದಶಕಗಳ ಹಿಂದೆ ಬಡವ ಶ್ರೀಮಂತರೆಲ್ಲರಿಗೂ ಈ ವಿಶ್ವವಿದ್ಯಾನಿಲಯಗಳು ಅನಿವಾರ್ಯವಾಗಿದ್ದವು. ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ವಿಶಾಲವಾದ ಕ್ಯಾಂಪಸ್ ಇರುವುದು ಸರಕಾರಿ ವಿಶ್ವವಿದ್ಯಾನಿಲಯಗಳಿಗೆ.
ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳು ಪಾಠ ಪ್ರವಚನಕ್ಕೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸಿವೆ. ಖಾಯಂ ಶಿಕ್ಷಕರು ಇರದಿರುವುದರಿಂದ ಪಿಎಚ್.ಡಿ. ಅಧ್ಯಯನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾನಿಲಯ ಗಳಲ್ಲಿ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಮಾನದಂಡಗಳು ಭಿನ್ನಾವಾಗಿವೆ. ಖಾಸಗಿ ಅನುದಾನಿತ ಕಾಲೇಜುಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಯಾವುದೇ ಪ್ರವೇಶ ಪರೀಕ್ಷೆ ನಡೆಸದೆ, ಆಯ್ಕೆ ಸಮಿತಿಯ ಸಮ್ಮುಖದಲ್ಲಿ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳುತ್ತದೆ. ಸರಕಾರಿ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ರೂಪಿಸಿದ ನಿಯಮಾವಳಿ ಅನುಸರಿಸುತ್ತಾರೆ. ನೆಟ್, ಸೆಟ್ ಮತ್ತು ಪಿಎಚ್.ಡಿ. ಪೂರೈಸಿದ ಮೇಲೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಮತ್ತೆ ಪ್ರವೇಶ ಪರೀಕ್ಷೆ ನಡೆಸುವುದು ಅನಗತ್ಯ ಎನಿಸುತ್ತದೆ. ಪ್ರವೇಶ ಪರೀಕ್ಷೆಗಳಲ್ಲಿ ಬೋಧನಾ ಸಾಮರ್ಥ್ಯ ಅರಿಯಲು ಸಾಧ್ಯವಾಗುವುದಿಲ್ಲ. ಹಲವು ಪ್ರವೇಶ ಪರೀಕ್ಷೆಗಳು ಮತ್ತು ಪಿಎಚ್.ಡಿ. ಪದವಿ ಪಡೆದ ಅಭ್ಯರ್ಥಿಯ ಬೋಧನಾ ಕೌಶಲ್ಯ ಗುರುತಿಸುವುದು ಅಗತ್ಯ. ಅದು ನೇರ ಸಂದರ್ಶನದಲ್ಲಿ ಮಾತ್ರ ಕಂಡುಕೊಳ್ಳಬಹುದು.
ಖಾಸಗಿ ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣ ಮತ್ತು ಅತ್ಯುತ್ತಮ ಸಂಶೋಧನೆಗಿಂತಲೂ ಹಣ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿವೆ. ಶಿಕ್ಷಣವನ್ನು ಒಂದು ಗ್ರಾಹಕ ಸರಕಾಗಿ ಮಾರಾಟ ಮಾಡುತ್ತಿವೆ. ಹಾಗಾಗಿ ಅಲ್ಲಿಗೆ ಹಣ ಉಳ್ಳವರು ಮಾತ್ರ ಹೋಗುತ್ತಾರೆ. ಕಾಂಗ್ರೆಸ್ ಪಕ್ಷದ ಅಹಿಂದ ಮತದಾರರು ಹೆಚ್ಚು ಅವಲಂಬಿಸಿದ್ದು ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಮಾತ್ರ. ಬಡ ಮಧ್ಯಮ ವರ್ಗದ ಮಕ್ಕಳಿಗಾಗಿ ಇರುವ ವಿಶ್ವವಿದ್ಯಾನಿಲಯಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯ ಮಾದರಿಯಲ್ಲಿ ಮರು ರೂಪಿಸಬೇಕಿದೆ. ಹಾಗೆ ಮರು ರೂಪಿಸುವ ಸಾಮರ್ಥ್ಯ, ದೂರದೃಷ್ಟಿ ಮತ್ತು ಬದ್ಧತೆ ನೂತನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರಿಗೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ. ಎಂ.ಸಿ. ಸುಧಾಕರ್ ಅವರು ಕೇಂದ್ರ ಸರಕಾರ ರೂಪಿಸಿದ ಮತ್ತು ಬಿಜೆಪಿ ಸರಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿದರು. ಕರ್ನಾಟಕಕ್ಕೆ ಪ್ರತ್ಯೇಕವಾಗಿ ರಾಜ್ಯ ಶಿಕ್ಷಣ ನೀತಿ ಬೇಕೆಂದು ಆಯೋಗ ರಚಿಸಲಾಗಿತ್ತು. ಖ್ಯಾತ ಶಿಕ್ಷಣ ತಜ್ಞ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ಸಮಗ್ರ ವರದಿ ಸಲ್ಲಿಸಿದೆ. ಅದರ ಅನುಷ್ಠಾನ ಆಗಬೇಕಿದೆ. ಬಸವರಾಜ ರಾಯರೆಡ್ಡಿ ಯವರು ಒಳ್ಳೆಯ ನೀತಿ ನಿರೂಪಣೆಗೆ ಆದ್ಯತೆ ನೀಡಿ ಕೆಲಸ ಮಾಡಿದರೆ ಮುಂದಿನ ಸರಕಾರಗಳು ಅದನ್ನೇ ಅನುಸರಿಸಬೇಕಾಗುತ್ತದೆ. ತಪ್ಪು ನಿರ್ಧಾರ ಮಾಡಿದರೆ ಮುಂಬರುವ ಬಿಜೆಪಿ ಸರಕಾರ ಒಂದು ತಪ್ಪಿನ ತೀವ್ರತೆ ಹೆಚ್ಚಿಸಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಮುಂದಾಗುತ್ತದೆ. ಬಸವರಾಜ ರಾಯರೆಡ್ಡಿಯವರು ಉನ್ನತ ಶಿಕ್ಷಣ ಇಲಾಖೆಯ ಘನತೆ ಹೆಚ್ಚಿಸುವ ಕೆಲಸ ಮಾಡಲಿ. ಸರಕಾರಿ ವಿಶ್ವವಿದ್ಯಾನಿಲಯಗಳ ವೈಭವ ಮರುಕಳಿಸುವಂತೆ ಮರು ರೂಪಿಸಿದರೆ ಒಂದು ಪೀಳಿಗೆ ಸಚಿವರನ್ನು ಸ್ಮರಿಸುತ್ತದೆ.