ಸಹಗಮನ-ಪಾದವೂರದೆ ಇಟ್ಟ ಹೆಜ್ಜೆಯ ಕನಸು...

Update: 2015-12-24 11:34 GMT

ಸಾಹಿತ್ಯ, ವೈಚಾರಿಕ ಕ್ಷೇತ್ರಗಳಲ್ಲ್ಲಿ ಡಾ. ಎಚ್. ಎಸ್. ಅನುಪಮಾ ಅವರ ಹೆಸರು ಆಗಾಗ ಪ್ರಸ್ತಾಪವಾಗುತ್ತಿರುತ್ತದೆ. ವೃತ್ತಿಯಲ್ಲಿ ವೈದ್ಯರಾಗಿ ತಳಸ್ತರದ ಜನರೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವ ಅನುಪಮಾ ಅವರು, ಪ್ರಕಾಶಕರಾಗಿ, ಸಂಘಟಕರಾಗಿ, ವಿಮರ್ಶಕಿಯಾಗಿ, ಲೇಖಕಿಯಾಗಿ ಗುರುತಿಸಲ್ಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರೊಬ್ಬ್ಬ ಉತ್ತಮ ಕವಯಿತ್ರಿ ಕೂಡ ಹೌದು ಎನ್ನುವುದನ್ನು ಅವರ ‘ಸಹಗಮನ’ ಕೃತಿ ಹೇಳುತ್ತಿದೆ. ಬೆನ್ನುಡಿಯಲ್ಲಿ ವಿಷ್ಣು ನಾಯ್ಕ ಅವರು ಹೇಳುವಂತೆ, ಉಮ್ಮಳವಿಲ್ಲದ ಶಾಂತ ಕವಿಯಾಗಿದ್ದಾರೆ ಅನುಪಮಾ. ಕವಿತೆಯೆನ್ನುವುದು ಅವರಿಗೆ ಕೇವಲ ಭಾವುಕ ಕ್ಷಣಗಳಲ್ಲ, ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳಲು ಇರುವ ಮಾರ್ಗ.

‘‘ನಾವು ಹೀಗೇ...

ದಿನ ರಾತ್ರಿಗಳಲ್ಲಿ

ಉಕ್ಕುತ್ತಾ ಬರಿದಾಗುತ್ತ

ಬಿಸಿಯೇರುತ್ತ ತಂಪಾಗುತ್ತ

ಕೊನರುತ್ತ ಕಮರುತ್ತ

ದಿನ-ಋತು-ವರ್ಷಗಳ

ಬದುಕೆಂಬ ಹೊಸ ಕಾವ್ಯ

ನಿತ್ಯ ಕಟ್ಟುತ್ತಲೇ ಇದ್ದೇವೆ...’’

ಎನ್ನುವ ಸಾಲುಗಳೇ ಕವಯಿತ್ರಿಯ ಕವಿತೆಯ ಉದ್ದೇಶಗಳನ್ನು ಹೇಳುತ್ತದೆ. ಕವಿತೆ ಕಟ್ಟುವುದೆಂದರೆ ಅವರಿಗೆ ಬದುಕು ಕಟ್ಟುವುದೂ ಹೌದು. ‘‘ಕುದಿಗೆ ಕುಶಲದ ಮಾತು ಗೊತ್ತೇ ಅನು?’’ ಎಂದು ತನ್ನ ಎದೆಯನ್ನೇ ಮುಟ್ಟಿ ಕೇಳುವ ಕವಯಿತ್ರಿ, ‘‘ನಟಿಸುತ್ತಾ ಕಣ್ಣು ನೀರಾಡಿದರೂ ಕ್ಷಣದ ದುಃಖ ಸುಳ್ಳಾಗಿರುವುದಿಲ್ಲ...’’ ಎಂದು ಕೆನ್ನೆ ಮುಟ್ಟಿಕೊಳ್ಳುತ್ತಾರೆ. ‘‘ಚರಿತ್ರೆ ನಿನ್ನ ನ್ಯಾಯ ಸೂಕ್ಷ್ಮದ ಮನಸಿನಲ್ಲಿದೆ/ ನಿನ್ನೆಯ ಕಲ್ಪಿಸುವ ಇಂದಿನ ಕಣ್ಣಿನಲ್ಲಿದೆ/ ಅಕ್ಷರಗಳಲ್ಲ, ಆಡದೇ ಉಳಿದವರ ಧಮನಿಗಳಲ್ಲಿದೆ/ ನೊಂದವಗೆ ಮಿಡಿವ ಎದೆ ಬಡಿತದಲಿ ಅಡಗಿದೆ...’’ ಎಂಬ ಜಾಗೃತ ರಾಜಕೀಯ ಪ್ರಜ್ಞೆಯೂ ಅವರ ಕವಿತೆಗಳಲ್ಲಿವೆ. ‘‘ನಿಶ್ಶಬ್ದ ಕೋಶದಲಿ/ ಮಾತು ಬಂದಿಯಾಗುಳಿದು/ ಎಂದೋ ಹಾರಲಿ ಒಮ್ಮೆ ಭಾವಚಿಟ್ಟೆ/ ಫಕ್ಕನೊಮ್ಮೆ ನಕ್ಕು ಬಿಡು/ ಅದುವೆ ಸಾವಿರ ಮಾತು/ ಹರಳುಗಟ್ಟಲಿ ಒಳಗೆ ಸ್ನೇಹ ಬೆಸುಗೆ...’’ ಎಂಬ ನಿರೀಕ್ಷೆಗಳು ಈ ಸಂಕಲನದ ಪುಟ ಪುಟಗಳಲ್ಲೂ ಇವೆ.

48 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಭಾವ ಬೆಚ್ಚಗಿನ ಅನುಭವವನ್ನು ಕೊಡುವ ಶಕ್ತಿ ಇಲ್ಲಿನ ಎಲ್ಲ ಕವಿತೆಗಳಿಗೂ ಇವೆ. ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 94481 45370 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News