ಚರ್ಚುಗಳ ಮೇಲೆ ದಾಳಿ: ಸತ್ಯದ ಬೆನ್ನುಹತ್ತಿ....

Update: 2015-12-27 09:11 GMT

ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ಕೇಂದ್ರವಾಗಿಟ್ಟುಕೊಂಡು, ನಡೆಸಿದ ತನಿಖೆ ಮತ್ತು ಅದರ ವರದಿಯನ್ನು ಒಳಗೊಂಡ ಕೃತಿ ‘ಸರಕಾರದಿಂದ ಭಯೋತ್ಪಾದನೆ, ಪ್ರಜಾಪೀಡನೆ’. ಇತರ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ದಾಳಿಯನ್ನೂ ಈ ತನಿಖೆ ಒಳಗೊಂಡಿದೆ. ನ್ಯಾ. ಮೈಕಲ್ ಎಫ್ ಸಲ್ಡಾನ ಅವರ ನೇತೃತ್ವದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಮತ್ತು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಇವುಗಳ ವತಿಯಿಂದ ವಿಚಾರಣೆ ನಡೆದಿದ್ದು, ಅದರಿಂದ ಹೊರಬಿದ್ದಿರುವ ವರದಿಗಳನ್ನು ಈ ಕೃತಿಯಲ್ಲಿ ಬಹಿರಂಗಗೊಳಿಸಲಾಗಿದೆ. ಇದರ ಒಂದು ಲಕ್ಷ ಪ್ರತಿಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದು ಪ್ರಕಾಶಕರು ಹೇಳಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ದಾಳಿಗಳು ನಡೆದವು. ಮತ್ತು ಈ ದಾಳಿಯ ಹಿಂದೆ ಸಂಘಪರಿವಾರದ ದುಷ್ಕರ್ಮಿಗಳಲ್ಲದೆ ಸರಕಾರವೂ ಪರೋಕ್ಷವಾಗಿ ಭಾಗಿಯಾಗಿದೆ ಎನ್ನುವುದನ್ನು ಕೃತಿ ತೆರೆದಿಡುತ್ತದೆ. ದುಷ್ಕರ್ಮಿಗಳು ಸರಕಾರಿ ವ್ಯವಸ್ಥೆಯನ್ನು ಈ ದಾಳಿಗೆ ಬಳಸಿರುವುದು ವಿಚಾರಣೆಯ ಸಂದರ್ಭದಲ್ಲಿ ಬಹಿರಂಗವಾಗಿದೆ ಎನ್ನುವುದನ್ನು ನಿವೃತ್ತ ನ್ಯಾಯಮೂರ್ತಿ ಎಂ. ಎಫ್. ಸಲ್ಡಾನ ಹೇಳುತ್ತಾರೆ. ಈ ವಿಚಾರಣೆ ದೇಶದಲ್ಲೇ ಪ್ರಥಮ ಬಾರಿಯಾಗಿ ನಡೆದಿರುವ ಪ್ರಯೋಗ ಎಂದು ಅವರು ಅಭಿಪ್ರಾಯಪಡುತ್ತಾರೆ. ಮಂಗಳೂರಿನ ಎಡೊರೇಶನ್ ಮೊನಾಸ್ಟರಿ ಮೇಲೆ ನಡೆದ ದಾಳಿ, ಮಿಲಾಗ್ರಿಸ್ ಚರ್ಚ್ ದಾಳಿ, ಪೊಲೀಸರ ದೌರ್ಜನ್ಯ, ಕುಲಶೇಖರದ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಪೊಲೀಸರು ಎಸಗಿದ ದೌರ್ಜನ್ಯ, ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ನಡೆದ ಹತ್ಯಾಕಾಂಡ, ಬೆಂಗಳೂರಿನ ಸಂತ ಅಂತೋನಿ ಚರ್ಚ್‌ಗೆ ಬೆಂಕಿ, ವಾಮಂಜೂರು ಚರ್ಚ್‌ನ ಪರಿಸರದಲ್ಲಿ ನಡೆದ ದಾಳಿ, ಬಜ್ಪೆ ಚರ್ಚ್ ಮೇಲೆ ನಡೆದ ದಾಳಿ, ಪೆರ್ಮುದೆ ಚರ್ಚ್ ಮೇಲಣ ದಾಳಿ, ಮರಿಯನ ಪಾಳ್ಯಚರ್ಚ್ ಮೇಲಿನ ದಾಳಿ, ಬೊಂದೆಲ್ ಚರ್ಚ್ ಗುಡ್ಡಕ್ಕೆ ದಾಳಿ, ಮತಾಂತರ ಆರೋಪ, ದೌರ್ಜನ್ಯ, ಹೀಗೆ ಹಲವು ಪ್ರಕರಣಗಳನ್ನು ಅತ್ಯಂತ ಶಿಸ್ತಿನಿಂದ ವಿಚಾರಣೆ ನಡೆಸಿದ ಅದರ ವರದಿಯನ್ನು ಯಾವುದೇ ಪಕ್ಷಪಾತ, ಪೂರ್ವಾಗ್ರಹ, ಭಯವಿಲ್ಲದೆ ಈ ಕೃತಿ ತೆರೆದಿಟ್ಟಿದೆ. ಈ ವರದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಸಂಘಟನೆಗಳು, ಸರಕಾರಗಳು ಗಂಭೀರವಾಗಿ ತೆಗೆದುಕೊಂಡಿರುವುದು ವಿಶೇಷ. ಅಂತೆಯೇ ವರದಿಯ ಕೊನೆಯಲ್ಲಿ, ಈ ಘಟನೆಗಳು ಮುಂದೆಯೂ ಮರುಕಳಿಸಬಹುದೆಂಬ ಎಚ್ಚರಿಕೆಯನ್ನು ಕೃತಿ ನಮಗೆ ನೀಡುತ್ತದೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹೊರತಂದಿರುವ ಈ ಕೃತಿಯ ಮುಖಬೆಲೆ 125 ರೂ. ಆಸಕ್ತರು 90088 20186 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News