ವೃದ್ಧ, ಸನ್ನಡತೆಯ ಕೈದಿಗಳ ಬಿಡುಗಡೆಗೆ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2016-01-01 17:43 GMT

ಬೆಂಗಳೂರು, ಜ.1: ಜೀವಾವಧಿ ಶಿಕ್ಷೆಗೆ ಒಳಗಾಗಿ ಹಲವು ವರ್ಷಗಳಿಂದ ಕಾರಾಗೃಹದಲ್ಲಿರುವ ವಯೋವೃದ್ಧ ಹಾಗೂ ಸನ್ನಡತೆಯ ಕೈದಿಗಳನ್ನು 2016ರ ಜ.26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ನೂತನ ವರ್ಷದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳೊಂದಿಗೆ ಹೊಸ ವರ್ಷಾಚರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅರವತ್ತು ವರ್ಷ ಮೇಲ್ಪಟ್ಟ ಹಾಗೂ ಸನ್ನಡತೆಯುಳ್ಳ ಕೈದಿಗಳನ್ನು ಬಿಡುಗಡೆ ಮಾಡಲು ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದರು.
ಸನ್ನಡತೆ ಆಧಾರದ ಮೇಲೆ 2006ರಲ್ಲಿ 309 ಮಂದಿ ಕೈದಿಗಳ ಬಿಡುಗಡೆ ಬಳಿಕ ಹೈಕೋರ್ಟ್ ಆದೇಶ ಹಾಗೂ ರಾಜ್ಯಪಾಲರ ಮಧ್ಯೆ ಪ್ರವೇಶದ ಹಿನ್ನೆಲೆಯಲ್ಲಿ ಕೈದಿಗಳ ಬಿಡುಗಡೆಗೆ ಹಿನ್ನಡೆಯಾಗಿತ್ತು ಎಂದ ಅವರು, ವಯೋವೃದ್ಧ ಕೈದಿಗಳು ಮತ್ತು ಸನ್ನಡತೆ ಕೈದಿಗಳ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.
 ಕೈದಿಗಳಿಗೆ ಸಿಹಿ ಹಂಚಿಕೆ: ಕಾರಾಗೃಹದಲ್ಲಿನ ಎಲ್ಲ ಕೈದಿಗಳಿಗೂ ಸಿಹಿಯನ್ನು ಹಂಚಿ, ನೂತನ ವರ್ಷದ ಶುಭಾಶಯ ಕೋರಿದರು. ಆ ಬಳಿಕ ಕೈದಿಗಳ ಅಡುಗೆ ಕೋಣೆ, ಅಡುಗೆ ಪದಾರ್ಥ ಗಳನ್ನು ಪರಿಶೀಲಿಸಿದರು. ಗ್ರಂಥಾಲಯಕ್ಕೆ ಭೇಟಿ ನೀಡಿ ಮನಃಪರಿವರ್ತನೆಗೆ ಪೂರಕ ಆಗುವ ಪುಸ್ತಕಗಳನ್ನು ಇರಿಸಲು ಸೂಚಿಸಿದರು.

ಮಹಿಳಾ ಕೈದಿಗಳಿರುವ ಬ್ಯಾರಕ್‌ಗೆ ಖುದ್ದು ಭೇಟಿ ಮಾಡಿದ ಪರಮೇಶ್ವರ್, ಕಾರಾಗೃಹದಲ್ಲಿನ ವ್ಯವಸ್ಥೆ ಹಾಗೂ ಅಧಿಕಾರಿಗಳ ವರ್ತನೆಯ ಬಗ್ಗೆ ಮಾಹಿತಿ ಪಡೆದರು. ಆ ನಂತರ ಜೈಲಿನ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ಸುಧಾರಣೆಗೆ ಒತ್ತು:
ರಾಜ್ಯ ಸರಕಾರ ಕೈದಿಗಳ ಮನಃ ಪರಿವರ್ತನೆಗೆ ಆದ್ಯತೆ ನೀಡಿದ್ದು, ಕೈದಿಗಳಿಗೆ ತಾವು ಮಾಡಿದ ತಪ್ಪಿನ ಅರಿವಾಗುತ್ತಿದ್ದು, ಅವರಿಗೆ ಉತ್ತಮ ಜೀವನ ನಡೆಸಲು ಅನುಕೂಲವಾಗುವಂ ತಹ ವಾತಾವರಣವನ್ನು ಕಾರಾಗೃಹದಲ್ಲಿ ಕಲ್ಪಿಸಿಕೊಡಬೇಕು ಎಂದರು.
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಇನ್ನು ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಆದರೂ, ಇರುವ ವ್ಯವಸ್ಥೆಯನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದ ಅವರು, ಕಾರಾಗೃಹದಲ್ಲಿ ಎಲ್ಲ ಕೈದಿಗಳು ಒಂದೇ. ಆದರೆ, ಸುರಕ್ಷತೆ ದೃಷ್ಟಿಯಿಂದ ವಿಐಪಿ ಕೈದಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸ ಲಾಗುತ್ತದೆ ಎಂದರು.
ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂಥ್, ಕಾರಾಗೃಹ ಅಧೀಕ್ಷಕ ಕೃಷ್ಣಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News