ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ.ಹೆಚ್ಚಳ ಸಾಧ್ಯತೆ

Update: 2016-01-01 17:45 GMT

ಬೆಂಗಳೂರು, ಜ.1: ನಂದಿನಿ ಹಾಲಿನ ಬೆಲೆಯನ್ನು ಜ. 5ರಿಂದ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು, ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ.ಹೆಚ್ಚಳ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಜೊತೆ ಸಮಾಲೋಚನೆ ನಡೆಸಿ ಬೆಲೆ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆಎಂಎಫ್ ಬಹಳ ಹಿಂದೆಯೇ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ತೀರ್ಮಾನ ಮಾಡಲಾಗುವು ದೆಂದು ಮಂಜು ಸ್ಪಷ್ಟನೆ ನೀಡಿದ್ದರು. ಈ ಮಧ್ಯೆ ಸಚಿವ ಮಂಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೆಎಂಎಫ್‌ಪ್ರಸ್ತಾವನೆ ಯನ್ನು ತಿಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಂದಿನಿ ಹಾಲಿನ ಬೆಲೆ ಹೆಚ್ಚಳಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಹೊರ ರಾಜ್ಯಗಳ ಹಾಲಿನ ಬೆಲೆಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಅತ್ಯಂತ ಕಡಿಮೆಯಿದೆ. ರೈತರು, ಹೈನುಗಾರರನ್ನು ಪ್ರೋತ್ಸಾಹಿಸಲು ನಂದಿನಿ ಹಾಲಿನ ಬೆಲೆ ಏರಿಕೆ ಅನಿವಾರ್ಯವಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚಿಸಿ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತೀರ್ಮಾನಿಸುತ್ತೇವೆಂದು ಎ.ಮಂಜು ಇದೇ ವೇಳೆ ಹಾಲಿನ ಬೆಲೆ ಏರಿಕೆ ಮುನ್ಸೂಚನೆ ನೀಡಿದರು.

ವಿಮೆ ಕಡ್ಡಾಯ: ಬೆಲೆ ಬಾಳುವ ರಾಸುಗಳಿಗೆ ರೈತರು ವಿಮೆ ಮಾಡಿಸುವುದನ್ನು ಕಡ್ಡಾಯಗೊಳಿಸಿದ್ದು, ವಾರ್ಷಿಕ 300ರಿಂದ 400 ರೂ.ಪ್ರೀಮಿಯಂ ಪಾವತಿಸಿದರೆ ಭವಿಷ್ಯದ ದೃಷ್ಟಿಯಿಂದ ರೈತರಿಗೆ ಅನುಕೂಲವಾಗಲಿದೆ ಎಂದ ಅವರು, ಪಶು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News