ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ಹೆಚ್ಚಳ

Update: 2016-01-01 18:07 GMT

ಹೊಸದಿಲ್ಲಿ, ಜ.1: ಭಾರತೀಯ ತೈಲ ನಿಗಮವು ಸಬ್ಸಿಡಿ ರಹಿತ ಎಲ್ಪಿಜಿ ಅಥವಾ ಸಬ್ಸಿಡಿ ಕೋಟಾ ಮುಗಿದ ಬಳಿಕ ಬಳಕೆದಾರರು ಖರೀದಿಸುವ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಿದೆ. ಈ ಬೆಲೆ ಹೆಚ್ಚಳವು 2015ರ ಡಿ.31ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್‌ಗಳ(14.2 ಕಿ.ಗ್ರಾಂ) ಬೆಲೆ ಸುಮಾರು ರೂ. 50ರಷ್ಟು ಏರಿಕೆಯಾಗಿದೆ. ಇದು 2 ತಿಂಗಳಲ್ಲಿ ಎರಡನೆ ಬಾರಿಯ ಬೆಲೆಯೇರಿಕೆಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್‌ನ ಬೆಲೆಯನ್ನು ಸುಮಾರು ರೂ. 60ರಷ್ಟು ಏರಿಸಲಾಗಿತ್ತು.

 ಹೊಸದಿಲ್ಲಿಯಲ್ಲಿ ಈವರೆಗೆ ರೂ. 608 ಇದ್ದ ಎಲ್ಪಿಜಿ ಸಿಲಿಂಡರ್‌ನ ಬೆಲೆ ರೂ. 657.50 ಆಗಿದೆ. ಕೋಲ್ಕತಾದಲ್ಲಿ ಪರಿಷ್ಕೃತ ಬೆಲೆ ರೂ. 686.50 ಆಗಿದ್ದರೆ, ಮುಂಬೈಯಲ್ಲಿ ರೂ.671 ಹಾಗೂ ಚೆನ್ನೈಯಲ್ಲಿ ರೂ.671.50 ಆಗಿದೆ.
ಸಿರಿವಂತರಿಗೆ ಎಲ್ಪಿಜಿ ಸಬ್ಸಿಡಿ ಖೋತಾ

ಇದರೊಂದಿಗೆ, ಇಂದಿನಿಂದ ಜಾರಿಗೆ ಬರುವಂತೆ, ಆದಾಯ ತೆರಿಗೆ ಕಾಯ್ದೆಯ ಪ್ರಕಾರ ವಾರ್ಷಿಕ ರೂ. 10 ಲಕ್ಷಕ್ಕಿಂತ ಹೆಚ್ಚು ತೆರಿಗೆ ವಿಧಿಸಬಹುದಾದ ಆದಾಯ ಉಳ್ಳವರಿಗೆ ಎಲ್ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿಯ ಲಾಭ ದೊರೆಯುವುದಿಲ್ಲ.

2014-15ರ ವಿತ್ತ ವರ್ಷದಲ್ಲಿ ಬಳಕೆದಾರರು ಅಥವಾ ಅವರ ಗಂಡ/ಹೆಂಡತಿಯ ತೆರಿಗೆ ವಿಧಿಸಬಹುದಾದ ಆದಾಯ ರೂ. 10 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಅವರಿಗೆ ಇಂದಿನಿಂದ ಎಲ್ಪಿಜಿ ಸಬ್ಸಿಡಿಯ ಲಾಭ ಸಿಗುವುದಿಲ್ಲ.

ಅಂದಾಜಿನ ಪ್ರಕಾರ 2015ನೆ ವಿತ್ತ ವರ್ಷದಲ್ಲಿ 20 ಲಕ್ಷ ಮಂದಿ ತೆರಿಗೆ ವಿಧಿಸಬಹುದಾದ ಆದಾಯ ಅಥವಾ ರೂ. 10 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದವರು ಪತ್ತೆಯಾಗಿದ್ದಾರೆ.

ಪ್ರಾಥಮಿಕವಾಗಿ ಇದನ್ನು 2016ರ ಜನವರಿಯಿಂದ ಸಿಲಿಂಡರ್ ಬುಕ್ ಮಾಡುವಾಗ ಬಳಕೆದಾರರ ‘ಸ್ವಯಂ ಘೋಷಣೆಯ’ ಆಧಾರದಲ್ಲಿ ಅದನ್ನು ಮಾಡಲಾಗುವುದು.

ಈ ಕ್ರಮದಿಂದ ಸರಕಾರಕ್ಕೆ ವಾರ್ಷಿಕ ಸುಮಾರು ರೂ. 500 ಕೋಟಿ ಉಳಿತಾಯವಾಗಲಿದೆ. ಪ್ರಕೃತ ದಿಲ್ಲಿಯಲ್ಲಿ ಸಬ್ಸಿಡಿ ಅನಿಲ ಸಿಲಿಂಡರ್‌ನ ಬೆಲೆ ರೂ. 419 ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News