ಲಡಾಖ್ | ಐವರು ಮತದಾರರಿಗಾಗಿ ಮತಗಟ್ಟೆ !

Update: 2024-04-29 15:34 GMT

ಸಾಂದರ್ಭಿಕ ಚಿತ್ರ

ಶ್ರೀನಗರ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಶ್ರೀನಗರ ಲೇಹ್‌ನ ವಾಶಿಯ ಕುಗ್ರಾಮವೊಂದರ ಕುಟುಂಬದ ಐವರು ಸದಸ್ಯರಿಗಾಗಿ ಚುನಾವಣಾ ಅಧಿಕಾರಿಗಳು ಮತಗಟ್ಟೆಯೊಂದನ್ನು ಸ್ಥಾಪಿಸಿದ್ದಾರೆ.

‘‘ಚುನಾವಣಾ ಪ್ರಕ್ರಿಯೆಯಲ್ಲಿ ಶೇ. 100 ಜನರು ಪಾಲ್ಗೊಳ್ಳುವ ಖಾತರಿ ನೀಡುವ ಚುನಾವಣಾ ಆಯೋಗದ ಪ್ರಯತ್ನದ ಭಾಗವಾಗಿ ಲೇಹ್‌ನಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ನುಬ್ರಾದ ವಾಶಿಯ ಕುಗ್ರಾಮವೊಂದರಲ್ಲಿ ತಾತ್ಕಾಲಿಕ ಶಿಬಿರವೊಂದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ’’ ಎಂದು ಲಡಾಖ್‌ನ ಮುಖ್ಯ ಚುನಾವಣಾಧಿಕಾರಿ (ಸಿಇಒ) ಯತೀಂದ್ರ ಎಂ. ಮರಲ್ಕರ್ ತಿಳಿಸಿದ್ದಾರೆ.

5ನೇ ಹಂತದ ಚುನಾವಣೆಯಲ್ಲಿ ಲಡಾಖ್ ಲೋಕಸಭಾ ಕ್ಷೇತ್ರಕ್ಕೆ ಮೇ 20ರಂದು ಮತದಾನ ನಡೆಯಲಿದೆ. ವಿಧಿ 370 ಅನ್ನು ರದ್ದುಗೊಳಿಸಿದ ಹಾಗೂ ಜಮ್ಮು ಹಾಗೂ ಕಾಶ್ಮೀರ ರಾಜ್ಯವನ್ನು ಜಮ್ಮು ಹಾಗೂ ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ 2019 ಆಗಸ್ಟ್ 5ರಂದು ವಿಭಾಗಿಸಿದ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ.

‘‘ಈ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ತಾತ್ಕಾಲಿಕ ಶಿಬಿರದಲ್ಲಿರುವ ಮತಗಟ್ಟೆ ಅವರ ಮನೆಯ ಬಾಗಿಲಿನ ಮುಂದಿದೆ’’ ಎಂದು ಮರಾಲ್ಕರ್ ತಿಳಿಸಿದ್ದಾರೆ. ಈ ಕುಟುಂಬ 6 ಮಂದಿ ಸದಸ್ಯರನ್ನು ಒಳಗೊಂಡಿದ್ದು, ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಮತದಾನ ನಡೆಸಲು ಅರ್ಹರಾಗಿದ್ದಾರೆ. ಈ ಕುಟುಂಬದ ಮುಖ್ಯಸ್ಥ ರೈತ.

ಲಡಾಖ್ ಕೇಂದ್ರಾಡಳಿತ ಪ್ರದೇಶ ಎರಡು ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್ ಹಾಗೂ ಬೌದ್ಧರ ಪ್ರಾಬಲ್ಯದ ಲೇಹ್. 91,703 ಪುರುಷರು ಹಾಗೂ 90,868 ಮಹಿಳೆಯರು ಸೇರಿದಂತೆ ಇಲ್ಲಿ ಒಟ್ಟು 1,82,571 ಮತದಾರರಿದ್ದಾರೆ. ಚುನಾವಣಾ ಆಯೋಗ ನಗರ ಪ್ರದೇಶಗಳಲ್ಲಿ 33 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 544 ಸೇರಿದಂತೆ ಕೇಂದ್ರಾಡಳಿತ ಪ್ರದೇಶದಲ್ಲಿ 577 ಮತಗಟ್ಟೆಗಳನ್ನು ಸ್ಥಾಪಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News