ಹೊಸ ವರ್ಷಕ್ಕೆ ಸರಕಾರದ ಕೊಡುಗೆ: ಲೋಡ್ ಶೆಡ್ಡಿಂಗ್ ರದ್ದು

Update: 2016-01-01 18:13 GMT

ಬೆಂಗಳೂರು, ಜ.1: ರಾಜ್ಯಾದ್ಯಂತ ಎಲ್ಲ ನಗರ ಪ್ರದೇಶಗಳಲ್ಲಿ ಇಂದಿನಿಂದ ಲೋಡ್ ಶೆಡ್ಡಿಂಗ್ ರದ್ದುಪಡಿಸ ಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಹೂಡಿಯಲ್ಲಿರುವ ಕೆಪಿಟಿಸಿಎಲ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದೂವರೆ ತಿಂಗಳಿನಿಂದ ಲೋಡ್ ಶೆಡ್ಡಿಂಗ್ ಪ್ರಮಾಣ ಕಡಿಮೆ ಮಾಡುತ್ತಾ ಬಂದಿದ್ದೇವೆ. ಇಂದಿನಿಂದ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ರದ್ದುಪಡಿಸಲಾಗುತ್ತದೆ ಎಂದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 6 ರಿಂದ 7 ಗಂಟೆ ಥ್ರೀ ಫೇಸ್ ವಿದ್ಯುತ್ ಪೂರೈಸಲಾಗುವುದು. ಕುಡಿಯುವ ನೀರಿನ ಎಲ್ಲ ಯೋಜನೆಗಳು, ಘಟಕ ಗಳಿಗೆ ನಿರಂತರವಾಗಿ 24 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದ ಡಿಕೆಶಿ, ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಜಲಾಶಯಗಳು ಶೇ.40ರಿಂದ 45ರಷ್ಟು ಮಾತ್ರ ಭರ್ತಿಯಾಗಿವೆ. ಇಲಾ ಖೆಯು ನೀರಿನ ನಿರ್ವಹಣೆಯನ್ನು ಮಾಡಿದ್ದು, ಬೇಸಿಗೆಯನ್ನು ಸಮರ್ಥ ವಾಗಿ ಎದುರಿಸುತ್ತೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಜಲವಿದ್ಯುತ್ 1,800 ದಶಲಕ್ಷ ಯೂನಿಟ್ ಕೊರತೆ ಯುಂಟಾಗಿದೆ. ಆದ್ದರಿಂದ, 1 ಸಾವಿರ ಮೆಗಾವ್ಯಾಟ್ ಹೆಚ್ಚುವರಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದನ್ನು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಒದಗಿಸ ಲಾಗುವುದು ಎಂದರು.

ದಾಮೋದರ ಕಣಿವೆಯಿಂದ 450 ಮೆಗಾವ್ಯಾಟ್ ವಿದ್ಯುತ್ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಎಪ್ರಿಲ್ ವೇಳೆಗೆ ನಮಗೆ 300 ಮೆಗಾವ್ಯಾಟ್ ಲಭ್ಯವಾಗಲಿದೆ. ಇದಲ್ಲದೆ, ತಮಿಳುನಾಡಿನ ಕೂಡಂಕುಳಂ ಅಣುವಿದ್ಯುತ್ ಸ್ಥಾವರದಿಂದ ಜ.15ರಿಂದ ನಮಗೆ 221 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದು ಶಿವಕುಮಾರ್ ಹೇಳಿದರು.
ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರದ ಮೂರನೆ ಘಟಕದಿಂದ 700 ಮೆಗಾವ್ಯಾಟ್ ವಿದ್ಯುತ್ ಡಿ.25ರಿಂದ ಗ್ರಿಡ್‌ಗೆ ಸೇರ್ಪಡೆಯಾಗಿದೆ. ಯರಮರಸ್ ಉಷ್ಣವಿದ್ಯುತ್ ಸ್ಥಾವರದಿಂದ 700 ಮೆಗಾವ್ಯಾಟ್ ಗ್ರಿಡ್‌ಗೆ ಬರಲಿದೆ ಎಂದು ಅವರು ತಿಳಿಸಿದರು.

ಕುಡಿಯುವ ನೀರು, ಗಂಗಾ ಕಲ್ಯಾಣ, ಅಂಬೇಡ್ಕರ್ ಯೋಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಡಿಯಲ್ಲಿ ಅಳವಡಿಸಲಾಗಿರುವ ಪಂಪ್‌ಸೆಟ್‌ಗಳನ್ನು ವಿದ್ಯುತ್ ಉಳಿತಾಯ ಮಾಡುವ ಪಂಪ್‌ಸೆಟ್‌ಗಳನ್ನಾಗಿ ಬದಲಾಯಿಸಲು ಸರಕಾರ ಚಿಂತನೆ ನಡೆಸಿದೆ. ಇದರಿಂದ ಶೇ.40 ರಿಂದ 45ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ 22 ಲಕ್ಷ ಕೃಷಿ ಪಂಪ್‌ಸೆಟ್‌ಗಳು ಹಾಗೂ ಒಂದು ಲಕ್ಷ ಕುಡಿಯುವ ನೀರಿನ ಪಂಪ್‌ಸೆಟ್‌ಗಳಿವೆ. ಪಂಪ್‌ಸೆಟ್‌ಗಳನ್ನು ಉನ್ನತೀಕರಿಸುವ ಕುರಿತು ಮಳವಳ್ಳಿ, ದೊಡ್ಡಬಳ್ಳಾಪುರ ಹಾಗೂ ಹಾವೇರಿಯಲ್ಲಿ ಕೈಗೊಂಡ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

ಇದರಿಂದಾಗಿ 7 ರಿಂದ 8 ಸಾವಿರ ಕೋಟಿ ರೂ.ಉಳಿತಾಯವಾಗಲಿದೆ. ಹಣ ಹಾಗೂ ವಿದ್ಯುತ್ ಎರಡು ಉಳಿಯಬೇಕು ಎಂಬುದು ನಮ್ಮ ಉದ್ದೇಶ. ಈ ಯೋಜನೆಗೆ ಕೇಂದ್ರ ಸರಕಾರದ ಹಣಕಾಸು ಸಂಸ್ಥೆಗಳಿಂದ ನೆರವು ಪಡೆಯಲು ಚರ್ಚೆ ನಡೆಯುತ್ತಿದೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ 9,800 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದೆ. ಸದ್ಯಕ್ಕೆ 8,300 ರಿಂದ 8,400 ಮೆಗಾವ್ಯಾಟ್ ಲಭ್ಯವಿದ್ದು, 1,400 ಮೆಗಾವ್ಯಾಟ್ ಕೊರತೆಯಿದೆ. ಅದನ್ನು ಸರಿಪಡಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ತರಬೇತಿ ಶಿಬಿರಕ್ಕೆ ಚಾಲನೆ: ಇಂಧನ ಇಲಾಖೆಗೆ ನೂತನವಾಗಿ ನೇಮಕಗೊಂಡಿರುವ 413 ಸಹಾಯಕ ಎಂಜಿನಿಯರ್‌ಗಳು, 34 ಸಹಾಯಕ ಲೆಕ್ಕಾಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಆವರಣದಲ್ಲಿ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯವನ್ನು ಬೆಳಗುವ ಅವಕಾಶ ನಿಮಗೆ ಸಿಕ್ಕಿದೆ, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ವರ್ಗಾವಣೆಗೆ ಒತ್ತಡ ತಂದರೆ ಕೆಲಸ ಕಳೆದುಕೊಳ್ಳುತ್ತೀರಿ ಎಂಬ ಎಚ್ಚರಿಕೆಯನ್ನೂ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಖ್ತರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News