ಪ್ರಾಮಾಣಿಕ ರಾಜಕಾರಣಕ್ಕೆ ಇನ್ನೊಂದು ಹೆಸರು ಬರ್ಧನ್

Update: 2016-01-02 18:28 GMT

ಹೊಸದಿಲ್ಲಿ,ಜ.2: ರಾಜಕೀಯ ವಲಯದಲ್ಲಿ ಗುರುತಿಸಲ್ಪಟ್ಟಿದ್ದ ತನ್ನ ನಿಷ್ಠುರ ಮಾತು ಮತ್ತು ಪ್ರಾಮಾಣಿಕತೆಗಾಗಿ ಖ್ಯಾತರಾಗಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಎ.ಬಿ.ಬರ್ಧನ್ ಅವರು ಸ್ವಾತಂತ್ರ ಚಳವಳಿಯ ಕೊನೆಯ ಕೊಂಡಿಗಳಲ್ಲೊಬ್ಬರಾಗಿದ್ದರು. ಕಾರ್ಮಿಕ ಒಕ್ಕೂಟ ಚಳವಳಿಗಳು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಪರೂಪದ ರಾಜಕಾರಣಿಯಾಗಿದ್ದರು.
ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರ್ಧೇಂದು ಭೂಷಣ್ ಬರ್ಧನ್ ಎಡಪಂಥೀಯ ಚಳವಳಿಯ ಏಳುಬೀಳುಗಳಿಗೆ ಸಾಕ್ಷಿಯಾಗಿದ್ದರು.90ರ ದಶಕದಲ್ಲಿ ಮೈತ್ರಿಕೂಟ ರಾಜಕಾರಣ ಸಾಮಾನ್ಯವಾಗಿದ್ದ ಅವಧಿಯಲ್ಲಿ ಸಿಪಿಐ ಚುಕ್ಕಾಣಿಯ ಹೊಣೆಗಾರಿಕೆ ಅವರದಾಗಿತ್ತು.

1996ರಲ್ಲಿ ಕೇಂದ್ರದ ಸಮ್ಮಿಶ್ರ ಸರಕಾರದಲ್ಲಿ ತನ್ನ ಪಕ್ಷವು ಸೇರುವುದರಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಹಿರಿಯ ಸಿಪಿಐ ನಾಯಕ ಇಂದ್ರಜಿತ್ ಗುಪ್ತಾ ಅವರು ಈ ಸರಕಾರದಲ್ಲಿ ಗೃಹಸಚಿವರಾಗಿದ್ದರು.

16 ವರ್ಷಗಳ ಕಾಲ ಸತತ ನಾಲ್ಕು ಅವಧಿಗಳಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದ ಅವರು 2012,ಮಾರ್ಚ್‌ನಲ್ಲಿ ಹುದ್ದೆಯಿಂದ ಕೆಳಗಿಳಿದ ಬಳಿಕವೂ ತನ್ನ ಪಕ್ಷದ ಸದಸ್ಯರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿದ್ದರು. ‘ಒಮ್ಮೆ ಕಮ್ಯುನಿಸ್ಟ್ ಆದವನು ಸದಾ ಕಮ್ಯುನಿಸ್ಟ್ ಆಗಿರುತ್ತಾನೆ’ ಎಂಬ ಸೂಕ್ತಿಯಲ್ಲಿ ಅವರು ದೃಢವಾದ ನಂಬಿಕೆಯನ್ನು ಹೊಂದಿದ್ದರು.
ಒಂದು ಕಾಲದಲ್ಲಿ ಕಮ್ಯುನಿಸ್ಟ್‌ರ ಭದ್ರ ಕೋಟೆಯಾಗಿದ್ದ ಪಶ್ಚಿಮ ಬಂಗಾಲದಲ್ಲಿ 2011ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಎಡರಂಗಕ್ಕೆ ಸೋಲನ್ನುಣ್ಣಿಸಿದ ಬೆನ್ನಿಗೇ ಬರ್ಧನ್ ’ಒಂದೇ ಬದಲಾಗಿ ಇಲ್ಲವೇ ನೀವೇ ಇರುವುದಿಲ್ಲ’ ಎಂದು ಎಡರಂಗದ ನಾಯಕರಿಗೆ ಎಚ್ಚರಿಕೆ ನೀಡಿದ್ದರು.
1996ರಲ್ಲಿ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳದಿದ್ದುದು ಎಡರಂಗವು ಮಾಡಿದ ‘ಐತಿಹಾಸಿಕ ತಪ್ಪು’ ಆಗಿತ್ತು ಎಂಬ ದಿವಂಗತ ಸಿಪಿಎಂ ನಾಯಕ ಜ್ಯೋತಿ ಬಸು ಅವರ ಹೇಳಿಕೆಯನ್ನು ಬರ್ಧನ್ ಸಮರ್ಥಿಸಿದ್ದರು.
ಅದೊಂದು ಅವಕಾಶವಾಗಿತ್ತು. ಕಮ್ಯುನಿಸ್ಟ್ ರಾಜಕಾರಣ ವಿಭಿನ್ನವಾದುದು ಎಂದು ರಾಷ್ಟ್ರಕ್ಕೆ ತೋರಿಸಲು ಅದು ಒಳ್ಳೆಯ ಅವಕಾಶವಾಗಿತ್ತು. ಆದರೆ ನಾವು ಅದನ್ನು ಕಳೆದುಕೊಂಡೆವು ಎಂದು ಅವರು ಮುಂದೊಂದು ದಿನ ಹೇಳಿದ್ದರು. ಬಂಡವಾಳಶಾಹಿ ವ್ಯವಸ್ಥೆಯ ಪರಿಧಿಯೊಳಗೆ ಸಹ ನಾವು ಅದನ್ನು ಪ್ರಯತ್ನಿಸಬೇಕಾಗಿತ್ತು ಎಂದಿದ್ದರು.
 

 
1924, ಸೆ.24ರಂದು ಈಗ ಬಾಂಗ್ಲಾದೇಶ ದಲ್ಲಿರುವ ಸಿಲ್ಹೆಟ್‌ನಲ್ಲಿ ಜನಿಸಿದ್ದ ಬರ್ಧನ್ 1940ರ ದಶಕದಲ್ಲಿ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್‌ನ ನಾಯಕನಾಗಿ ತನ್ನ ರಾಜಕೀಯ ವೃತ್ತಿಜೀವನವನ್ನು ಆರಂಭಿಸಿದ್ದರು. ಆ ವೇಳೆ ಕಮ್ಯುನಿಸ್ಟ್ ವಾಹಿನಿಯತ್ತ ಸೆಳೆಯಲ್ಪಟ್ಟ ಅವರು ಸಿಪಿಐ ಗೆ ಸೇರ್ಪಡೆಗೊಂಡಿದ್ದರು. 20ಕ್ಕೂ ಅಧಿಕ ಬಾರಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಅವರು ನಾಲ್ಕು ವರ್ಷಗಳಿಗೂ ಅಧಿಕ ಕಾಲ ಜೈಲುಗಳಲ್ಲಿ ಕಳೆದಿದ್ದರು.ನಂತರ ಮಹಾರಾಷ್ಟ್ರದಲ್ಲಿ ಕಾರ್ಮಿಕ ಒಕ್ಕೂಟಗಳ ಉಸ್ತುವಾರಿಯನ್ನು ವಹಿಸಿಕೊಂಡ ಅವರು ಧೀಮಂತ ಟ್ರೇಡ್ ಯೂನಿಯನ್ ನಾಯಕನಾಗಿ ಗುರುತಿಸಿಕೊಂಡರು. ಬಳಿಕ ದೇಶದಲ್ಲೇ ಅತ್ಯಂತ ಹಳೆಯ ಕಾರ್ಮಿಕ ಒಕ್ಕೂಟವಾದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಏರಿದರು. 1990ರ ದಶಕದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ದಿಲ್ಲಿಗೆ ಬದಲಿಸಿದ ಬರ್ಧನ್ ಸಿಪಿಐ ಉಪ ಪ್ರಧಾನ ಕಾರ್ಯದರ್ಶಿಯಾದರು.ಬಳಿಕ 1996ರಲ್ಲಿ ಇಂದ್ರಜಿತ್ ಗುಪ್ತಾ ಅವರು ಕೇಂದ್ರದಲ್ಲಿ ಗೃಹಸಚಿವರಾದ ಬಳಿಕ ಅವರಿಂದ ತೆರವಾದ ಸ್ಥಾನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ರಾಷ್ಟ್ರ ರಾಜಕಾರಣದಲ್ಲಿ ಇನ್ನೋರ್ವ ಹಿರಿಯ ಮಾರ್ಕ್ಸ್‌ವಾದಿ ನಾಯಕ ಹರಿಕಿಶನ್ ಸಿಂಗ್ ಸುರ್ಜಿತ್ ಅವರೊಂದಿಗೆ ಸೇರಿಕೊಂಡು ತೃತೀಯ ರಂಗ ರಚನೆಗಾಗಿ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುವಲ್ಲಿ ಹಿರಿಯ ಮುತ್ಸದ್ದಿಯ ಪಾತ್ರವನ್ನು ವಹಿಸಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರಕಾರದ ರಚನೆಯಲ್ಲಿ ಬಾಹ್ಯ ಬೆಂಬಲ ನೀಡುವ ಮೂಲಕ ಈ ಇಬ್ಬರೂ ನಾಯಕರು ನಿರ್ಣಾಯಕ ಪಾತ್ರ ವಹಿಸಿದ್ದರು.ಬರ್ಧನ್ ಅಹ್ಮದಾಬಾದ್‌ನಲ್ಲಿರುವ ವೈದೆಯಾಗಿರುವ ಪುತ್ರಿ ಅಲ್ಕಾ ಮತ್ತು ಅಮೆರಿಕದ ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಪುತ್ರ ಅಶೋಕ್ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News